ವಿಜಯಪುರ: ಕರ್ನಾಟಕ ಮಾಧ್ಯಮ ಅಕಾಡೆಮಿ ಉತ್ತರ ಕರ್ನಾಟಕದ ಪತ್ರಕರ್ತರ ಬಗ್ಗೆ ಆರಂಭದಿಂದಲೂ ತಾರತಮ್ಯ ನೀತಿ ಅನುಸರಿಸುತ್ತಿದ್ದು, ಪ್ರಶಸ್ತಿ ಬಗ್ಗೆ ಸೂಕ್ತ ಮಾನದಂಡ ಇಲ್ಲದೇ ಕೆಲಸ ಮಾಡುತ್ತಿದೆ ಎಂದು ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ ವಿಷಾದ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದ ಪತ್ರಕರ್ತರು ಏರ್ಪಡಿಸಿದ್ದ “ಪ್ರಶಸ್ತಿಗಳ ಘನತೆ ಹೆಚ್ಚಿಸುವುದು ಹೇಗೆ? ತಾರತಮ್ಯ ಕೊನೆಯಾಗಲಿ” ವಿಷಯವಾಗಿ ಏರ್ಪಡಿಸಿದ್ದ ಆನ್‌ಲೈನ್ ವಿಚಾರ ಸಂಕಿರಣದಲ್ಲಿ ಮಾತನಾಡಿ, ಮಾಧ್ಯಮ ಅಕಾಡೆಮಿಯಾಗಲಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವಾಗಲಿ ಯಾರೇ ಆದರೂ ಕೂಡಾ ಛಾಲೆಂಜ ತೆಗೆದುಕೊಂಡು ಕೆಲಸ ನಿರ್ವಹಿಸುವ ಪತ್ರಕರ್ತರಿಗೆ ಬೆನ್ನೆಲುಬಾಗಿ ನಿಲ್ಲಬೇಕೆಂದರು. ಪತ್ರಕರ್ತರನ್ನು ಒಗ್ಗೂಡಿಸಿ ಬೆಳೆಸುವ ಕೆಲಸವಾಗಬೇಕು, ಆದರೆ ಇಲ್ಲಿ ಒಡೆದಾಳುವ ನೀತಿ ನಡೆಯುತ್ತಿದೆ. ಬೆಂಗಳೂರಿನಲ್ಲಿ ಕುಳಿತು, ಮೂಲೆಗುಂಪಾಗಿರುವ ಜಿಲ್ಲೆಗಳ ಕುರಿತು ಕೇವಲ ಮಾತನಾಡಿದರೇ ಸಾಲದು; ಕೇವಲ ಮಾಧ್ಯಮ ಅಕಾಡೆಮಿ, ಸಂಘ ಸಂಸ್ಥೆಗಳು ನೀಡುವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸರಕಾರದ ಮಾನದಂಡದ ಕುರಿತು ಓರ್ವ ಸಾಹಿತಿ ನ್ಯಾಯಾಲಯದ ಮೊರೆ ಹೋಗಿರುವ ವಿಷಯ ಸಹ ಪ್ರಸ್ತಾಪಿಸಿದರು.
ಮಾಧ್ಯಮ ಅಕಾಡೆಮಿಯಿಂದ ನೀಡುವ ಪ್ರಶಸ್ತಿಗೆ ಯಾವುದೇ ಮಾನದಂಡ ಇಲ್ಲವಾಗಿದೆ. ಈ ಕುರಿತು ಅಕಾಡೆಮಿ ಸದಸ್ಯರಿದ್ದಾಗ, ನಿಯಮಾವಳಿ ತಿದ್ದುಪಡಿ ಮಾಡಲು ಹಲವು ಬಾರಿ ಪ್ರಯತ್ನಿಸಿದರೂ ಇದುವರೆಗೂ ಸಾದ್ಯವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇಡೀ ಪತ್ರಿಕೋಧ್ಯಮದ ಬೇರು ಇರುವುದು ಉತ್ತರ ಕರ್ನಾಟಕದಲ್ಲಿ ಅಂತಹ ಜಾಗವನ್ನು ನಿರ್ಲಕ್ಷ್ಯ ಮಾಡುವುದು ಖಂಡನೀಯ. ಯಾವುದನ್ನು ಮಾಡಿದರೂ ಸಹ ಅಖಂಡ ಕರ್ನಾಟಕ ಗಮನದಲ್ಲಿಟ್ಟುಕೊಂಡು ಮಾಡಬೇಕು. ಒಂದು ಬಾರಿ ನಂಜುಂಡಪ್ಪ ವರದಿ ಓದಿದಾಗ ಈ ಕುರಿತು ನಮಗೆ ಅರ್ಥವಾಗುತ್ತದೆ. ಉತ್ತರ ಕರ್ನಾಟಕದಲ್ಲಿ ತಾರತಮ್ಯವಾಗಿರುವುದು ಕಂಡು ಬರುತ್ತದೆ. ಪ್ರಶಸ್ತಿ ವಿವಾದ ಎದ್ದಿರುವುದು ನಿಮಿತ್ತ ಮಾತ್ರ, ಯಾವ ಮಾನದಂಡ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ಎಲ್ಲ ವಿವಾದಕ್ಕೂ ಮಾನದಂಡವೇ ಕಾರಣವಾಗಿದೆ. ಎಲ್ಲ ಅಕಾಡೆಮಿಗಳು ಬೆಂಗಳೂರಿಗೆ ಕೇಂದ್ರೀಕೃತವಾಗಿದ್ದು, ಅವೆಲ್ಲವೂ ಹುಬ್ಬಳ್ಳಿ, ಬೆಳಗಾವಿ, ಕಲಬುರಗಿಗೆ ಸ್ಥಳಾಂತರಗೊಳ್ಳಬೇಕು ಎಂದು ಹೇಳಿದರು.
ಕಲಬುರಗಿಯ ಹಿರಿಯ ಪತ್ರಕರ್ತ ಟಿ.ವಿ.ಶಿವಾನಂದನ್ ಮಾತನಾಡಿ, ಮಾಧ್ಯಮ ಅಕಾಡೆಮಿ ಮಾಡುತ್ತಿರುವ ಅನ್ಯಾಯದ ಕುರಿತು ಉತ್ತರ ಕರ್ನಾಟಕದ ಪತ್ರಕರ್ತರು ಎತ್ತಿರುವ ಪ್ರಶ್ನೆ ಉತ್ತಮವಾಗಿದ್ದು, ಈ ಕುರಿತು ಎಲ್ಲ ಜಿಲ್ಲೆಗಳಿಗೂ ಹಾಗೂ ಮಹಿಳಾ ಪತ್ರಕರ್ತರಿಗೆ ಸೂಕ್ತ ಮಾನ್ಯತೆ ನೀಡುವುದು ಅವಶ್ಯಕತೆ ಇದೆ ಎಂದರು. ಬಹಳಷ್ಟು ಜಿಲ್ಲೆಗಳಲ್ಲಿ ಹಲವು ಹಿರಿಯ ಪತ್ರಕರ್ತರಿದ್ದು, ಅವರೆಲ್ಲರನ್ನೂ ಕಡೆಗಣಿಸಲಾಗಿದೆ. ಕೂಡಲೇ ಮಾಧ್ಯಮ ಅಕಾಡೆಮಿ ನಿಯಮಾವಳಿ ತಿದ್ದುಪಡಿ ಆಗಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ಮಾಧ್ಯಮ ಅಕಾಡೆಮಿ ದಿಢೀರ ಆಗಿ ಹುಟ್ಟಿಕೊಂಡಿದ್ದಲ್ಲಾ, ನಮ್ಮ ಸಂಘದ ಹೋರಾಟದ ಫಲವಾಗಿ ಅಕಾಡೆಮಿ ಸ್ಥಾಪನೆಯಾಗಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಮಾಧ್ಯಮ ಅಕಾಡೆಮಿಯಲ್ಲಿ ಎಲ್ಲ ವಿಭಾಗದಿಂದ ಐದು ಐದು ಜನರು ಆಯ್ಕೆ ಮಾಡಿ ಹಲವು ಸಭೆಗಳನ್ನು ನಡೆಸಿ ನಂತರ ಅಳೆದು ಸೋಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ತಪ್ಪುಗಳಾಗಿರಬಹುದು, ಆದರೆ ಅದಕ್ಕೆಲ್ಲಾ ಬೀದಿರಂಪ ಮಾಡುವುದು ಸರಿಯಲ್ಲ. ಅದು ಅಲ್ಲದೇ ಈಗಾಗಲೇ ನೀವುಗಳು ಮುಖ್ಯಮಂತ್ರಿ ಬಳಿ ಹೋಗಿರುವುದರಿಂದ ಸುಪ್ರಿಂ ಕೋರ್ಟ್‍ಗೆ ಹೋಗಿ ಇದೀಗ ಮತ್ತೇ ಹೈಕೋರ್ಟಗೆ ಬಂದಂತಾಗಿದೆ ಎಂದು ಹೇಳಿದರು.
ಮಾಧ್ಯಮ ಅಕಾಡೆಮಿ ನಿಯಮಾವಳಿ ತಿದ್ದುಪಡಿಯಾಗಬೇಕು, ಒಂದು ಬಾರಿ ಪ್ರಶಸ್ತಿ ಪಟ್ಟಿ ಸಿದ್ದವಾದ ಮೇಲೆ ಮತ್ತೆ ಪರಿಷ್ಕರಣೆ ಸಾಧ್ಯವಿಲ್ಲ. ಹೆಸರು ಸೇರಿಸಬಹುದು ಎನ್ನುವುದು ಸರಿಯಲ್ಲ, ಎಲ್ಲ ಭಾಗದಿಂದ ಅಳೆದು ತೂಗಿ ಪ್ರಶಸ್ತಿಗೆ ಹೆಸರುಗಳನ್ನು ಆಯ್ಕೆ ಮಾಡಲಾಗಿದೆ. ಜೊತೆಗೆ ಹಿರಿಯರು, ಕಿರಿಯರು ಸೇರಿದಂತೆ ಎಲ್ಲರನ್ನು ಒಳಗೊಂಡು ಆಯ್ಕೆ ಮಾಡಲಾಗಿದೆ. ಮಹಿಳೆಯರಿಗೆ ಆದ್ಯತೆ ನೀಡಲಾಗಿದ್ದು, ಯಾರ ಕಣ್ಣಿಗೂ ಕಾಣದೇ ಎಲೆಮರೆ ಕಾಯಯಂತೆ ಸೇವೆ ಸಲ್ಲಿಸುತ್ತಿದ್ದು ಹಿರಿಯ ಪತಕರ್ತೆಯನ್ನು ಗುರುತಿಸಿ ಆಯ್ಕೆ ಮಾಡಿ ಗೌರವಿಸಲಾಗುತ್ತಿದೆ. ಈ ಪ್ರಸ್ತಿಯಲ್ಲೂ ಸಹ ಜಾತಿವಾರು ಹಂಚಿಕೆ ಮಾಡಲಾಗಿರುತ್ತದೆ. ಯಾವುದೇ ಪ್ರಶಸ್ತಿಗೆ ಮಾಡಿದಾಗ, ಸ್ವರ-ಅಪಸ್ವರ ಸಹಜವಾಗಿದೆ. ಆದ್ದರಿಂದ ಇದನ್ನು ಹೆಚ್ಚು ಮುಂದುವರಿಸದೇ ಮುಕ್ತಾಯಗೊಳಿಸವುದು ಸೂಕ್ತ ಎಂದರು. ಆದರೆ ಇಲ್ಲಿ ಬೀದಿರಂಪ ಮಾಡುತ್ತಿರುವುದು ಸರಿಯಲ್ಲ. ರಾಜ್ಯದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಜನ ಪತ್ರಕರ್ತರಿದ್ದಾರೆ, ಅವರೆಲ್ಲರಿಗೂ ಒಂದೇ ಬಾರಿ ಪ್ರಶಸ್ತಿ ನೀಡಲು ಸಾಧ್ಯವೇ, ಇದೆಲ್ಲವನ್ನು ಅರ್ಥ ಮಾಡಿಕೊಳ್ಳಬೇಕೆಂದರು. ಆದ್ದರಿಂದ ಇದನ್ನು ಇಷ್ಟಕ್ಕೆ ಮುಕ್ತಾಯಗೊಳಿಸಬೇಕು, ಇಲ್ಲವಾದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಮಸಿ ಬಳೆದಂತಾಗುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ ಅವರು ಮಾತನಾಡಿ, ಸೂಕ್ತ ಸಮಯದಲ್ಲಿ ಧ್ವನಿ ಎತ್ತಿರುವುದು ಸರಿಯಾಗಿದೆ. ಪತ್ರಕರ್ತೆಯರು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದು, ಇಡೀ ರಾಜ್ಯದಲ್ಲಿ ಕೇವಲ ಮೂವರು ಪತ್ರಕರ್ತೆಯರಿಗೆ ಪ್ರಶಸ್ತಿ ನೀಡಿರುವುದು ಖಂಡನೀಯವಾಗಿದೆ. ಮಾಧ್ಯಮ ಅಕಾಡೆಮಿ, ಇಸಿ ಕಮೀಟಿಯಲ್ಲೂ ಸಹ ಪತ್ರಕರ್ತೆಯರಿಗೆ ಅನ್ಯಾಯವಾಗಿದ್ದು ಖಂಡನೀಯ ಎಂದರು. ಇದೊಂದು ಮುಕ್ತವಾದ ಚರ್ಚೆ, ಇದು ಹಾದಿ ಬೀದಿರಂಪವಲ್ಲ ಎಂದು ಸ್ಪಷ್ಟಪಡಿಸಿದರು.
ಮಾಲತಿ ಭಟ್ ಮಾತನಾಡಿ, ಮಾಧ್ಯಮ ಅಕಾಡೆಮಿಯಲ್ಲಿ ಪತ್ರಕರ್ತೆಯರಿಗೂ ಅವಕಾಶ ನೀಡಬೇಕೆಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಿಓ ಆಗಿದೆ, ಆದರೆ ಇದುವರೆಗೂ ಆದು ಕಾರ್ಯರೂಪಕ್ಕೆ ಬಂದಿಲ್ಲ, ರಾಜ್ಯದ 31 ಜಿಲ್ಲೆಗಳಿಗೂ ಪ್ರಾತಿನಿಧ್ಯ ನೀಡುವ ಕೆಲಸವಾಗಬೇಕು ಎಂದು ಹೇಳಿದರು.
ಹಿರಿಯ ಪತ್ರಕರ್ತ ಮೋಹನ ಹೆಗಡೆ ಮಾತನಾಡಿ, ಓರ್ವ ವ್ಯಕ್ತಿ 4 ಅವಧಿಗೆ ಹಾಗೂ ಇನ್ನೋರ್ವ ವ್ಯಕ್ತಿ ಎರಡು ಅವಧಿಗೆ ಅಕಾಡೆಮಿಗೆ ನಾಮಕರಣಗೊಳ್ಳುತ್ತಾರೆ ಎಂದರೆ ಏನು ಅರ್ಥ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬೇಕು, ಅವರು ತಮಗೆ ಬೇಕಾಗಿರುವವರಿಗೆ ಪ್ರಶಸ್ತಿ ನೀಡಿದ್ದಾರೆ ಎನ್ನುವ ಆರೋಪಗಳಿವೆ. ಮಾಧ್ಯಮ ಅಕಾಡೆಮಿ ಕೆಲಸ ಬಹಳಷ್ಟಿದೆ, ಆದರೆ ಕಳೆದ ನಾಲ್ಕು ವರ್ಷಗಳಿಂದ ಏಕೆ ಪ್ರಶಸ್ತಿ ನೀಡಿಲ್ಲ, ಅಕಾಡೆಮಿ ಅಧಿಕಾರಿಗಳು-ಸಿಬ್ಬಂದಿ ಈ ಅವಧಿಯಲ್ಲಿ ವೇತನ ಪಡೆದಿಲ್ಲವೇ, ಸಭೆ ನಡೆಸಿಲ್ಲವೇ, ಎಲ್ಲವೂ ಮಾಡಿದ್ದಾರೆ, ಆದರೆ ಪ್ರಶಸ್ತಿ ಮಾತ್ರ ನಾಲ್ಕು ವರ್ಷದ್ದೂ ಒಮ್ಮೆ ನೀಡುತ್ತಿರುವುದು ಸರಿಯಲ್ಲ. ಅಕಾಡೆಮಿಯಲ್ಲಿ ಅಧ್ಯಕ್ಷರು ಇಲ್ಲವಾಗಿದ್ದಲ್ಲಿ ಸರಕಾರವೇ ನೀಡಬಹುದಾಗಿತ್ತಲ್ಲ? ಅಕಾಡೆಮಿಗಳು ಹೇಗಿರಬೇಕು, ಅವುಗಳ ಕಾರ್ಯ ಏನೋ ಎನ್ನುವುದುನ್ನು ನಾವುಗಳ ನೆರೆ ರಾಜ್ಯಗಳಿಗೆ ಹೋಗಿ ಅಧ್ಯಯನ ಮಾಡಿಕೊಂಡು ಬರುವುದು ಅವಶ್ಯವಾಗಿದೆ. ಇದು ಯಾವುದೇ ಬೀದಿರಂಪವಲ್ಲ, ಬದಲಾಗಿ ಇದು ನ್ಯಾಯಯುತ ಬೇಡಿಕೆಯಾಗಿದೆ. ಇಂದಕ್ಕೊಂದು ತಾರ್ಕಿಕ ಅಂತ್ಯ ಹಾಡುವುದು ಅವಶ್ಯವಾಗಿದೆ. ಅರ್ಹತೆ ಇದ್ದವರಿಗೆ ಪ್ರಾತಿನಿಧ್ಯ, ಪ್ರಶಸ್ತಿ ಸಿಗುವಂತಾಗಬೇಕೆಂದರು. ಹಿರಿಯ ಪತ್ರಕರ್ತರೊಬ್ಬರು ನೂರಾರು ಜನರಿಗೆ ದಾರಿದೀಪವಾದರೂ, ಆದರೆ ಪ್ರಶಸ್ತಿ ಮಾತ್ರ ಬರಲಿಲ್ಲ, ಬದಲಾಗಿ ಅವರ ಶಿಷ್ಯನಿಗೆ ಬಂದಿರುವುದು ವಿಶೇಷ. ಅಕಾಡೆಮಿಗಳು ಬೆಂಗಳೂರಿಗೆ ಕ್ರೇಂದ್ರಿಕೃತವಾಗದೇ ಈ ಭಾಗಕ್ಕೆ ಸ್ಥಳಾಂತರವಾಗಬೇಕು, ಬೆಂಗಳೂರಿನವರೇ ಅಧ್ಯಕ್ಷರಾಗದೇ ಇನ್ನುಳಿದ ಭಾಗದವರು ಅಧ್ಯಕ್ಷರಾಗಬೇಕು ಎಂದು ಹೇಳಿದರು.
ಆರಂಭದಲ್ಲಿ ವಿಚಾರ ಮಂಡಿಸಿದ ಹಿರಿಯ ಪತ್ರಕರ್ತ ಸುಭಾಷ್ ಹೂಗಾರ ಅವರು ಹಲವು ವರ್ಷಗಳಿಂದ, ಎಲ್ಲ ಕ್ಷೇತ್ರಗಳಲ್ಲಿ ಇರುವಂತೆ ಉತ್ತರ ಕರ್ನಾಟಕ ಭಾಗದ ಪತ್ರಕರ್ತರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಅನ್ಯಾಯವಾಗುತ್ತಿದ್ದು, ಈ ಕುರಿತು ಧ್ವನಿ ಎತ್ತುವ ಅವಶ್ಯಕತೆ ಇದೆ ಎಂದು ಹೇಳಿದರು.
ಕಳೆದ ನಾಲ್ಕು ವರ್ಷಗಳಿಂದ ನೀಡದ ಪ್ರಸಸ್ತಿಗಳನ್ನು ಒಂದೇ ಬಾರಿ ಇದೀಗ ಘೋಷಣೆ ಮಾಡಿದ್ದು, ಇದರಲ್ಲಿ ಕೆಲವೇ ಕೆಲವು ಉತ್ತರ ಕರ್ನಾಟಕದ ಪತ್ರಕರ್ತರಿಗೆ ಹಾಗೂ ಕೇವಲ ಮೂವರು ಮಹಿಳಾ ಪತ್ರಕರ್ತರಿಗೆ ಪ್ರಶಸ್ತಿ ನೀಡಿರುವುದು ಖಂಡನೀಯವಾಗಿದೆ. ಈ ಕುರಿತು ಹುಬ್ಬಳ್ಳಿ ಪತ್ರಕರ್ತರು ಧ್ವನಿ ಎತ್ತಿದ್ದು ಸಂತಸದ ಸಂಗತಿಯಾಗಿದೆ. ಪ್ರಶಸ್ತಿ ಎಂದರೆ ಬಂದರೆ ಇದು ಕೇವಲ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಅಷ್ಟೇ ಅಲ್ಲದೇ ಪ್ರೆಸ್ ಕ್ಲಬ್, ಪತ್ರಕರ್ತರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ನೀಡುವ ಪ್ರಶಸ್ತಿಗಳೂ ಇದರ ಹೊರತಾಗಿಲ್ಲ. ಈ ಕುರಿತು ಹುಬ್ಬಳ್ಳಿ ಪತ್ರಕರ್ತರು, ಮಾಧ್ಯಮ ಅಕಾಡೆಮಿ ಹಾಗೂ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದು ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.
ಈ ಕುರಿತು 13ಕ್ಕೂ ಹೆಚ್ಚು ಜಿಲ್ಲೆಯ ಪತ್ರಕರ್ತರು ಧ್ವನಿ ಎತ್ತಿರುವುದು ಎಲ್ಲರಲ್ಲೂ ಒಗ್ಗೂಡಿಸುವ ಕೆಲಸವಾಗುತ್ತಿದೆ. ಈ ಪ್ರಶ್ನೆಗೆ ಸಂಬಂಧಿಸಿದವರು ಈವರೆಗೂ ಸ್ಪಂದನೆ ನೀಡದೇ ಇರುವುದು ಪ್ರಶ್ನೆಗೆ ಉತ್ತರಿಸದೇ ಇರುವುದು ಪ್ರಶ್ನಾರ್ಹವಾಗಿದೆ. ಸಂಬಂಧಿಸಿದವರು ಉತ್ತರ ನೀಡುವವರೆಗೂ ನಮ್ಮ ಪ್ರಶ್ನೆ ಎತ್ತುತ್ತಲೆ ಇರಬೇಕು. ಈ ಸಮಾನ ಮನಸ್ಕರರಲ್ಲಿ ಯಾರೂ ಕೂಡಾ ನಮಗೆ ಪ್ರಶಸ್ತಿ ಬೇಕು ಎಂದು ಬೇಡಿ ಬಂದವರಲ್ಲ, ಈಗಾಗಲೇ ಬಿಡುಗಡೆ ಮಾಡಿರುವ ಪ್ರಶಸ್ತಿ ಪುರಸ್ಕೃತರೆಲ್ಲರೂ ಅರ್ಹರಿದ್ದಾರೆ. ಇಲ್ಲಿರುವ ಪ್ರಶ್ನೆ ಒಂದೇ ಯಾವ ಮಾನದಂಡದ ಮೇಲೆ ಪ್ರಶಸ್ತಿ ನೀಡಲಾಗಿದೆ. ಯಾರೊಬ್ಬರಿಗೂ ತಾರತಮ್ಯವಾಗಬಾರದು, ಬಹುಸಂಖ್ಯಾತರು ಒಪ್ಪುವ ರೀತಿಯಲ್ಲಿ ಪ್ರಶಸ್ತಿ ನೀಡುವಂತಾಗಬೇಕು ಎಂದು ಅವರು ಹೇಳಿದರು.
ಇದೀಗ ಬಿಡುಗಡೆ ಮಾಡಿರುವ ಆಯ್ಕೆ ಪಟ್ಟಿ ದೋಷಪೂರಿತವಾಗಿದೆ, ಅದನ್ನು ಒಪ್ಪಿಕೊಳ್ಳುತ್ತಿಲ್ಲ ಏಕೆ..? ಅದನ್ನು ಚರ್ಚಿಸಿ ಸರಿಪಡಿಸಲು ಸಾದ್ಯ, ಆದರೆ ಇದುವರೆಗೂ ಅಂತಹ ಯಾವುದೇ ಕೆಲಸವಾಗಿಲ್ಲ. ಈ ವೇದಿಕೆ ಎತ್ತಿರುವ ಪ್ರಶ್ನೆಗೆ ಹಲವರು ದಿಕ್ಕುತಪ್ಪಿಸುವ ಕೆಲಸ ಮಾಡಲು ಮುಂದಾಗಿದ್ದರೆ, ಇದನ್ನು ಮಾಡುತ್ತಿರುವುದು ಪ್ರಶಸ್ತಿಗಾಗಿ ಎಂದು ಬಿಂಬಿಸಿದ್ದಾರೆ. ಪ್ರಶಸ್ತಿ ಪಡೆದ ಅರ್ಹರಿಗೆ ಇಂತಹ ಗೊಂದಲದಿಂದ ಮುಜಗುರು ಉಂಟಾಗುವತೆ ಅಕಾಡೆಮಿ ಮಾಡುತ್ತಿರುವುದು ಖಂಡನೀಯ. ಈ ಹಿಂದಿನಿಂದ ನಡೆದುಕೊಂಡು ಬಂದ ಪರಂಪರೆ ಎಂದು ಸುಮ್ಮನಾಗದೇ, ಅದನ್ನು ಸರಿಪಡಿಸುವ ಕೆಲಸವಾಗಬೇಕು, ಮಾಧ್ಯಮ ಅಕಾಡೆಮಿಯ ನಿಯಮಾವಳಿಗಳ ತಿದ್ದುಪಡಿಯಾಗಬೇಕು ಎಂದು ಅವರು ಹೇಳಿದರು.
ಮತ್ತೊಬ್ಬ ಪತ್ರಕರ್ತ ಬಂಡು ಕುಲಕರ್ಣಿಯವರು ಸಮಾರೋಪ ನುಡಿಗಳನ್ನಾಡುತ್ತ, ಉತ್ತರ ಕರ್ನಾಟಕ ಪತ್ರಕರ್ತರ ಈ ಒಗ್ಗೂಡುವಿಕೆ ಇಷ್ಟಕ್ಕೆ ನಿಲ್ಲುವುದು ಬೇಡ; ಇದರಿಂದ ಇಡೀ ಉತ್ತರ ಕರ್ನಾಟಕ ಭಾಗಕ್ಕೆ ತಕ್ಕಮಟ್ಟಿಗಾದರೂ ನ್ಯಾಯ ಸಿಗುತ್ತದೆ ಎಂಬ ಆಶಯ ವ್ಯಕ್ತಪಡಿಸಿದರು.
ರಿಷಿಕೇಶ ಬಹದ್ದೂರ ದೇಸಾಯಿ ಅವರು ನಿರ್ಣಯ ಮಂಡಿಸಿದರು. ಮಾಧ್ಯಮ ಅಕಾಡೆಮಿ ಬಿಡುಗಡೆ ಮಾಡಿರುವ ಪ್ರಶಸ್ತಿ ಪಟ್ಟಿ ದೋಷಪೂರಿತವಾಗಿದ್ದು, ಪಾರದರ್ಶಕವಾಗಿಲ್ಲರುವುದು ಖಂಡನೀಯ. ಪ್ರಶಸ್ತಿಗೆ ಇರುವ ಮಾನದಂಡ ಸ್ಪಷ್ಟಪಡಿಸಬೇಕು, ಪ್ರಶಸ್ತಿ ಆಯ್ಕೆಯಲ್ಲಿ ಉಕ ಪತ್ರಕರ್ತರಿಗೆ ಹಾಗೂ ಮಹಿಳೆಯರಿಗೆ ಅನ್ಯಾಯವಾಗಿರುವುದು ಖಂಡನೀಯ. ಮುಂದೆ ಈ ರೀತಿ ಆಗಬಾರದು, ಕೇಂದ್ರ ಕಚೇರಿಗಳು ವಿಕೇಂದ್ರಿಕರಣವಾಗಬೇಕು. ಮಾಧ್ಯಮ ಅಕಾಡೆಮಿ ನಿಯಮಾವಳಿ ತಿದ್ದುಪಡಿ ಆಗಬೇಕು ಎಂಬ ನಿರ್ಣಯಗಳನ್ನು ಈ ಆನಲೈನ್ ಸಭೆಯಲ್ಲಿ ಕೈಗೊಳ್ಳಲಾಯಿತು.
ಈ ವಿಚಾರ ಸಂಕಿರಣದಲ್ಲಿ ಹಿರಿಯ ಪತ್ರಕರ್ತರಾದ ರಾಮಕೃಷ್ಣ ಬಡಸೇಷಿ, ಬಾಬುರಾವ್ ಯಡ್ರಾಮಿ, ಮಹೇಶ ವಿ. ಶೆಟಗಾರ, ಬಾಲಚಂದ್ರ ರೂಗಿ, ಬಿ.ಕೆ. ಸುಮತಿ, ಎಸ್ ರಶ್ಮಿ, ಮಾಲತಿ ಭಟ, ಶೋಭಾ ಹೆಚ್.ಜಿ., ಚೀ. ಜ. ರಾಜೀವ, ಡಾ. ಓಂಕಾರ ಕಾಕಡೆ, ಗುರುರಾಜ ಜಮಖಂಡಿ, ಸಂಗಮೇಶ ಮೆಣಸಿನಕಾಯಿ, ಚಂದ್ರಕಾಂತ ವಡ್ಡು, ಎಸ್ ರಶ್ಮಿ, ಓದೇಶ್, ಮಲ್ಲಪ್ಪ ಸಂಕೀನ್, ವಿಜಯ ಹೂಗಾರ, ಬಸವರಾಜ ಕಟ್ಟಿಮನಿ, ಅಬ್ಬಾಸ್ ಮುಲ್ಲಾ, ಬಸವರಾಜ್ ಮರಳಿಹಳ್ಳಿ, ಗಿರೀಶ್ ಪಟ್ಟಣಶೆಟ್ಟಿ, ದೇವರಾಜು ಕಪ್ಪಸೊಗೆ, ಅನಿಲ್ ಗೆಜ್ಜಿ, ರಾಮಕೃಷ್ಣ ಬಡಸೇಷಿ, ಮನೋಜ್‌ಕುಮಾರ ಗುದ್ದಿ, ಬಾಲಚಂದ್ರ ರೂಗಿ, ಬಾಬುರಾವ್ ಹುದ್ದಾರ, ಜಗನ್ನಾಥ ದೇಸಾಯಿ, ಚಂದ್ರಕಾಂತ ಮಸಾನಿ, ಮಹೇಶ ಶೆಟಗಾರ, ದುರ್ಯೋಧನ ಹೂಗಾರ, ಶಿವಕುಮಾರ ಕುಂಬಾರ, ಗುರುರಾಜ ಜಮಖಂಡಿ, ಬಸವರಾಜ ಮರಳಿಹಳ್ಳಿ, ದೇವರಾಜ, ವಿಜಯ ಹೂಗಾರ, ಅಬ್ಬಾಸ ಮುಲ್ಲಾ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.
ಮಲ್ಲಪ್ಪ ಸಂಕೀನ ಸ್ವಾಗತಿಸಿದರು. ಸಂಗಮೇಶ ಮೆಣಸಿನಕಾಯಿ ನಿರೂಪಿಸಿದರು. ಮನೋಜಕುಮಾರ ಗುದ್ದಿ ವಂದಿಸಿದರು.