ವಿಜಯಪುರ: ನಾನು ಬಬಲೇಶ್ವರದಿಂದ ಸ್ಪರ್ಧೆ ಬಯಸಿ ಅರ್ಜಿ ಸಲ್ಲಿಸಿರುವುದು ನಿಜ. ಆದರೆ, ವರಿಷ್ಠರು ಹೇಳಿದ ಕಡೆ ನಿಲ್ಲಬೇಕಾಗುತ್ತದೆ. ಅದು ಅನಿವಾರ್ಯ ಎಂದು ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧೆ ಬಯಸಿ ಅರ್ಜಿ ನೀಡಬಾರದು ಎಂದು ಕಾನೂನಿಲ್ಲ. ಬೇರೆಯವರು ಬಂದು ಬಸವನ ಬಾಗೇವಾಡಿಯಲ್ಲಿ ಸ್ಪರ್ಧೆ ಬಯಸಿದರೂ ನಾನು ಸ್ವಾಗತಿಸುತ್ತೇನೆ. ವಿಜಯಪುರ, ಬಬಲೇಶ್ವರ ಮತ್ತು ಬಸವನ ಬಾಗೇವಾಡಿಯಿಂದ ಸ್ಪರ್ಧೆ ಬಯಸಿ ಅರ್ಜಿ ಸಲ್ಲಿಸಿದ್ದೇನೆ. ಯಾರೋ ಹೇಳಿದಂತೆ ನಾನಾ ಬ್ಲ್ಯಾಕ್ ಮೇಲ್ ಮಾಡಲು ಅರ್ಜಿ ಸಲ್ಲಿಸಿಲ್ಲ. ನಾನು ಜೀವನದಲ್ಲಿ ಬ್ಲ್ಯಾಕಮೇಲ್ ಮಾಡಿಲ್ಲ. ಹೇಳಿಯೇ ನಿಲ್ಲುತ್ತೇನೆ. ನಾನು ಒಂದೇ ಅರ್ಜಿ ಕೊಟ್ಟಿದ್ದೇನೆ. ಬಬಲೇಶ್ವರ ನನಗೊಂದು ಕಾಲದಲ್ಲಿ ನನ್ನ ಕ್ಷೇತ್ರವಾಗಿತ್ತು. ಕಳೆದ ಬಾರಿ ಕಾರಣಾಂತರದಿಂದ ನಾನು ಬಿಟ್ಟು ಹೋಗಿರುವುದು ನಿಜ. ನನಗೆ ಅಲ್ಲಿನ ಜನರ ಮೇಲಿರುವ ಪ್ರೀತಿ ವಿಶ್ವಾಸ ಕಡಿಮೆಯಾಗಿಲ್ಲ. ಅವರಿಗೆ ನನ್ನ ಮೇಲಿನ ಪ್ರೀತಿ, ವಿಶ್ವಾಸ ಕಡಿಮೆಯಾಗಿಲ್ಲ. ಅವರಿಗೆ ಹೇಳದೆ ಬಿಟ್ಟು ಹೊಗಿರುವುದು ನಾನು ಮಾಡಿರುವ ತಪ್ಪು. ಅಂದು ಒಪ್ಪಿದ್ದೇನೆ. ಇಂದೂ ಒಪ್ಪುತ್ತೇನೆ ಎಂದು ತಿಳಿಸಿದರು.
ಬಬಲೇಶ್ವರ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಗೈರು ವಿಚಾರ
ನಾನು ಸಿದ್ಧರಾಮಯ್ಯ ಅವರಿಗೆ ಹೇಳಿಯೇ ಬಬಲೇಶ್ವರದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಗೈರಾಗಿದ್ದೇನೆ. ಅಂದು ದೇವರ ಹಿಪ್ಪರಗಿಯಲ್ಲಿದ್ದಾಗ ಒಬ್ಬರು ನಿಧನರಾದ ಹಿನ್ನೆಲೆಯಲ್ಲಿ ಬಬಲೇಶ್ವರ ಕಾರ್ಯಕ್ರಮಕ್ಕೆ ಗೈರಾಗಿದ್ದೆ. ಎಲ್ಲ ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ಆದರೆ, ಸಿದ್ಧರಾಮಯ್ಯ ಅವರಿಗೆ ಹೇಳಿಯೇ ಬಬಲೇಶ್ವರ ಕಾರ್ಯಕ್ರಮಕ್ಕೆ ಗೈರಾಗಿದ್ದೇನೆ. ನೀವು ಬೇರೆ ಏನನ್ನೂ ಸೃಷ್ಠಿ ಮಾಡಬೇಡಿ. ಬಸವನ ಬಾಗೇವಾಡಿಗೆ ಟಿಕೆಟ್ ಕೊಟ್ಟರೂ ಸ್ಪರ್ಧಿಸುತ್ತೇನೆ. ಬಬಲೇಶ್ವರಕ್ಕೆ ಟಿಕೆಟ್ ನೀಡಿದರೂ ಸ್ಪರ್ಧಿಸುತ್ತೇನೆ. ವಿಜಯಪುರಕ್ಕೆ ನೀಡಿದರೂ ಕಣಕ್ಕಿಳಿಯುತ್ತೇನೆ ಎಂದು ಹೈಕಮಾಂಡಿಗೂ ಸ್ಪಷ್ಟಪಡಿಸಿದ್ದೇನೆ. ನಿಮಗೂ ಸ್ಪಷ್ಟಪಡಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.
ಈಗಾಗಲೇ ಎಂ. ಬಿ. ಪಾಟೀಲರು ಬಬಲೇಶ್ವರದಲ್ಲಿ ಚುನಾವಣೆ ಪ್ರಚಾರ ಆರಂಭಿಸಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅದರಲ್ಲಿ ತಪ್ಪೇನಿದೆ? ಅವರು ಕಾಂಗ್ರೆಸ್ ಪರವಾಗಿಯೇ ಪ್ರಚಾರ ಮಾಡುತ್ತಿದ್ದಾರೆ. ನಾನೂ ಕೂಡ ಕಾಂಗ್ರೆಸ್ ಪರವಾಗಿಯೆ ಪ್ರಚಾರ ಕೈಗೊಂಡಿದ್ದೇನೆ. ಬಸವನ ಬಾಗೇವಾಡಿಯಲ್ಲಿ ನಾನೂ ಪ್ರಚಾರ ಶುರುಮಾಡಿದ್ದೇನೆ. ಅವರು ಗೆಲ್ಲಿಸುತ್ತೇನೆ ಎಂದರೆ ನಾನು ಬೇಡ ಎನ್ನಲು ಬರುತ್ತಾ? ಅವರು ಪರೋಕ್ಷವಾಗಿಯೇ ಮಾಡಲಿ, ನೇರವಾಗಿಯಾದರೂ ಮಾಡಲಿ ಟಿಕೇಟ್ ಘೋಷಣೆ ಮಾಡಲಿ. ಆದರೆ, ಇನ್ನೂವರೆಗೂ ಟಿಕೆಟ್ ಘೋಷಣೆ ಮಾಡಿಲ್ಲ. ಟಿಕೇಟ್ ಘೋಷಣೆ ಮಾಡುವವರಿಗೆ ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಯಾರು ಎಲ್ಲಿ ಬೇಕಾದರೂ ನಿಲ್ಲಲಿ. ಬೇಡ ಎನ್ನಲು ಆಗುತ್ತಾ? ಎಂದು ಸ್ಪರ್ಧಿಸಿದರು.
ಈಗ ಸಿದ್ಧರಾಮಯ್ಯ ಅವರು ಬೇರೆ ಕ್ಷೇತ್ರಕ್ಕೆ ಹೋಗಿ ನಿಲ್ಲುತ್ತಿಲ್ಲವೇ? ನನ್ನ ಕ್ಷೇತ್ರಕ್ಕೆ ಯಾರಾದರೂ ಕಾಂಗ್ರೆಸ್ಸಿನಿಂದ ಅಭ್ಯರ್ಥಿಯಾಗಿ ಬಂದರೆ ನನ್ನದೇನೂ ತಕರಾರಿಲ್ಲ. ಎಂ. ಬಿ. ಪಾಟೀಲರು ಬಸವನ ಬಾಗೇವಾಡಿಯಿಂದ ಸ್ಪರ್ಧೆ ಬಯಸಿದರೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಅವರನ್ನು ಗೆಲ್ಲಿಸುವವರೆಗೆ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್ ಬಿಟ್ಟು ಹೋಗುವುದಾಗಿ ಎಂದು ಯಾವತ್ತೂ ಹೇಳಿಲ್ಲ. ಹೇಳುವ ಪ್ರಶ್ನೆಯೇ ಇಲ್ಲ. ನಾನು ಯಾವತ್ತೂ ಆ ರೀತಿ ಹೇಳಿಲ್ಲ. ನನ್ನ ಪಕ್ಷದ ವರಿಷ್ಠರ ಹತ್ತಿರ ಕೆಲವು ವಿಚಾರಗಳನ್ನು ಹೇಳಬಹುದೇ ಹೊರತು, ಬಹಿರಂಗವಾಗಿ ಏನೂ ಹೇಳಿಲ್ಲ ಎಂದು ಅವರು ಶಾಸಕರು ತಿಳಿಸಿದರು.
ಪುತ್ರಿಯಿಂದ ಟಿಕೆಟ್ ಬಯಸಿ ಅರ್ಜಿ ಸಲ್ಲಿಕೆ ವಿಚಾರ
ತಮ್ಮ ಪುತ್ರಿ ವಿಜಯಪುರದಿಂದ ಸ್ಪರ್ಧೆ ಬಯಸಿ ಅರ್ಜಿ ಸಲ್ಲಿಸಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಶಿವಾನಂದ ಪಾಟೀಲ, ನನ್ನ ಪುತ್ರಿ ಅಥವಾ ಪುತ್ರನಾಗಲಿ ಅರ್ಜಿ ಹಾಕಬೇಡಿ ಎಂದು ನಾನು ಮೊದಲೇ ಹೇಳಿದ್ದೇನೆ. ಆದರೆ ಯುವ ಜನತೆಯ ಚಿಂತನೆ ಬೇರೆ ಇರುತ್ತದೆ. ವರಿಷ್ಠರು ಟಿಕೇಟ್ ನೀಡಿದರೆ ಸ್ಪರ್ಧಿಸಲಿ ಎಂದು ಶಿವಾನಂದ ಪಾಟೀಲ ಹೇಳಿದರು.