ಸ್ವಪ್ನಾ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಗೆ ಶಿವಾನಂದ ತಗಡೂರ ಭೇಟಿ- ಸರಕಾರದಿಂದ ನೆರವು ಕೊಡಿಸುವ ಭರವಸೆ

ವಿಜಯಪುರ: ಕಿವುಡ ಮತ್ತು ಮೂಕ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ನಗರದ ಸ್ವಪ್ನಾ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಗೆ ಸರಕಾರದಿಂದ ನೆರವು ಕೊಡಿಸಲು ಪ್ರಯತ್ನಿಸುವುದಾಗಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಹೇಳಿದ್ದಾರೆ.

ಶಾಲೆಗೆ ಭೇಟಿ ನೀಡಿ ಮಾತನಾಡಿದ ಅವರು, ಇಲ್ಲಿರುವ ಮಕ್ಕಳನ್ನು ನೋಡಿದರೆ ತಮ್ಮಲ್ಲಿರುವ ಅತೀಂದ್ರೀಯ ಶಕ್ತಿಗಳಿಂದ ಇವರು ಸಮಾಜದಲ್ಲಿ ನಡೆಯುವ ಪ್ರತಿಯೊಂದು ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ.  ಅಲ್ಲದೇ, ತಮ್ಮದೇ ಆದ ಶೈಲಿಯಲ್ಲಿ ಸಂವಹನ ನಡೆಸುವ ಮೂಲಕ ಪ್ರೀತಿ ತೋರಿಸುತ್ತಾರೆ.  ಇಂಥ ವಿಶೇಷ ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸುಜಾತಾ ಮತ್ತು ಶಿವಾನಂದ ರೇಶ್ಮಿ ದಂಪತಿಯ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ.  ಈ ಶಾಲೆಗೆ ಅಗತ್ಯವಾಗಿರುವ ತುರ್ತು ಆರ್ಥಿಕ ನೆರವು ಒದಗಿಸಲು ಸಂಬಂಧಿಸಿದ ಸಚಿವರು ಸೇರಿದಂತೆ ಮುಖ್ಯಮಂತ್ರಿಗಳ ಗಮನ ಸೆಳೆದು ಶತಪ್ರಯತ್ನ ಮಾಡುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಈ ವಿಶೇಷ ಮಕ್ಕಳೊಂದಿಗೆ ಆಂಗಿಕ ಭಾಷೆಯಲ್ಲಿಯೇ ಸಂವಹನ ನಡೆಸಿದ ಅವರು, ಅವರು ತೋರಿದ ಪ್ರೀತಿಯಿಂದ ಭಾವುಕರಾದರು.  ಮಕ್ಕಳೂ ಕೂಡ ಥ್ಯಾಂಕ್ಯೂ ಸರ್ ಎಂದು ಹೇಳಿದ್ದು ಮುಗ್ದ ಮಕ್ಕಳ ಆತ್ಮೀಯತೆಗೆ ಸಾಕ್ಷಿಯಾಗಿತ್ತು.

ಸ್ವಪ್ನಾ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯ ಮಕ್ಕಳೊಂದಿಗೆ ಶಿವಾನಂದ ತಗಡೂರ, ಪತ್ರಕರ್ತರು

ಇದಕ್ಕೂ ಮೊದಲು ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ವಿ. ಶಟಗಾರ, ಸುಜಾತಾ ಮತ್ತು ಶಿವಾನಂದ ರೇಶ್ಮಿ ದಂಪತಿಯ ಮೂರನೇ ಮಗು ಸ್ವಪ್ನಾ ಜನ್ಮದಿಂದಲೇ ಕಿವುಡ ಮತ್ತು ಮೂಕಳಾಗಿದ್ದಳು.  ತನ್ನ ಮಗಳಿಗಾಗಿ ತಾಯಿ ಸುಜಾತಾ ಮೈಸೂರಿಗೆ ತೆರಳಿ ಸ್ಪೀಚ್ ಥೆರಪಿ ಕಲಿತು ಬಂದರು.  ಅಲ್ಲದೇ, ತನ್ನ ಮಗಳಿಗಾಗಿ ತಾವು ಪಡುವ ಕಷ್ಟ ಇಂಥ ಮಕ್ಕಳನ್ನು ಹೊಂದಿರುವ ಪೋಷಕರು ಅನುಭವಿಸಬಾರದು ಎಂಬ ಸದುದ್ದೇಶದಿಂದ ಕಿವುಡ ಮತ್ತು ಮೂಕ ಮಕ್ಕಳಿಗಾಗಿಯೇ ವಸತಿ ಶಾಲೆ ಆರಂಭಿಸಿದ್ದಾರೆ.  ಅಲ್ಲದೇ, ಈ ಶಾಲೆ ನಿರ್ವಹಣೆಗಾಗಿ ತಮ್ಮ ತನು, ಮನ, ಧನವನ್ನು ಸಮರ್ಪಿಸಿದ್ದಾರೆ.  ಅಷ್ಟೇ ಅಲ್ಲ, ಈ ಮಕ್ಕಳಿಗೆ ಉಚಿತವಾಗಿಯೂ ಶಿಕ್ಷಣ ನೀಡುತ್ತಿದ್ದಾರೆ.  ಒಂದು ಮನೆಯಲ್ಲಿ ಯಾವುದೇ ಒಂದು ಮಗು ಕಿವುಡ ಮತ್ತು ಮೂಕನಾಗಿದ್ದರೆ, ಆ ಮಗುವಿನ ಲಾಲನೆ ಪೋಷಣೆ ಪೋಷಕರಷ್ಟೇ ಅಲ್ಲ, ಸಂಬಂಧಿಕರಿಗೂ ಚಿಂತೆ ಉಂಟು ಮಾಡಿರುತ್ತದೆ.  ಇಂಥ ಸಂದರ್ಭದಲ್ಲಿ ಹಲವಾರು ಮಕ್ಕಳಿಗೆ ಆಂಗಿಕ ಭಾಷೆ ಕಲಿಸಿ ತುಟಿಯ ಚಲನೆಯ ಮೇಲೆ ಎದುರಿನವರು ಮಾತನಾಡುವುದರ ಅರ್ಥ ಕಲಿಸಿ, ಸಂಜ್ಞೆಗಳ ಮೂಲಕ ಹೇಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಬೇಕು ಎಂದು ಹೇಳುವ ಶಿಕ್ಷಣ ನೀಡುತ್ತಿರುವುದು ಸಮಾಜಮುಖಿ ಕಾರ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯಸ್ಥೆ ಸುಜಾತಾ ಶಿವಾನಂದ ರೇಶ್ಮಿ, ತಮ್ಮ ಶಾಲೆಯನ್ನು ಮುಂದುವರೆಸಿಕೊಂಡು ಬರಲು ಎದುರಿಸಿದ ಸವಾಲುಗಳನ್ನು ವಿವರಿಸಿದರು.  ಅಲ್ಲದೇ, ಸರಕಾರದಿಂದ ಅನುದಾನ ನೀಡುವಂತೆ ತಾವು ಸಾಕಷ್ಟು ಬಾರಿ ಮನವಿ ಮಾಡಿದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಸಚಿವರು ಮತ್ತು ಮುಖ್ಯಮಂತ್ರಿಗಳು ಬದಲಾದರೂ ಈವರೆಗೆ ಪೂರ್ಣ ಪ್ರಮಾಣದಲ್ಲಿ ನೆರವು ಸಿಕ್ಕಿಲ್ಲ ಎಂದು ತಿಳಿಸಿದರು.

ಈ ವೇಳೆ ಶಿವಾನಂದ ರೇಶ್ಮಿ ಅವರು ಶಿವಾನಂದ ತಗಡೂರ ಅವರನ್ನು ಸನ್ಮಾನಿಸಿ ಗೌರವಿಸಿದರು.

ಈ ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ, ಕಾನಿಪ ರಾಜ್ಯ ಉಪಾಧ್ಯಕ್ಷ ಪುಂಡಲಿಕ ಬಾಳೋಜಿ, ಕಾರ್ಯದರ್ಶಿ ನಿಂಗಪ್ಪ ಚಾವಡಿ, ರಾಜ್ಯ ಕಾರ್ಯಕಾರಿಣಿ ನಾಮನಿರ್ದೇಶಿತ ಸದಸ್ಯ ಕೆ. ಕೆ. ಕುಲಕರ್ಣಿ, ಪತ್ರಕರ್ತರಾದ ಟಿ. ಕೆ. ಮಲಗೊಂಡ, ಅವಿನಾಶ ಬಿದರಿ, ವಿನೋದ ಸಾರವಾಡ, ಸಮೀರ ಇನಾಮದಾರ, ಸ್ವಪ್ನಾ ರೇಶ್ಮಿ, ಸ್ವಪ್ನಾ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯ ಶಿಕ್ಷಕರು ಮತ್ತು ಶಿಕ್ಷಕರ ಹೊರತಾದ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌