ವಿಜಯಪುರ: ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಮತ್ತು ಬಿಜೆಪಿಯಲ್ಲಿರುವ ತಮ್ಮ ವಿರೋಧಿಗಳ ಹೆಸರು ಹೇಳದೇ ಶಾಸಕ ಬಸನಗೌಡ ಪಾಟೀಲ ಯತ್ನಾಳ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರ ನಗರದಲ್ಲಿ ಶಿವಾಜಿ ಚೌಕಿನಲ್ಲಿ ಆಯೋಜಿಸಲಾಗಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಶಿವಾಜಿ ಧರಿಸುತ್ತಿದ್ದ ಪೇಟಾ ಮಾದರಿಯ ಪೇಟಾ ಧರಿಸಿ ಮಾತನಾಡಿದ ಅವರು ಹಿಂದುತ್ವ ಪ್ರತಿಪಾದಿಸುತ್ತಲೇ ತಮ್ಮ ಕಾಂಗ್ರೆಸ್ ಹಾಗೂ ತಮ್ಮ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಛತ್ರಪತಿ ಶಿವಾಜಿ ಮಹಾರಾಜರೂ ಯುದ್ಧ ಮಾಡಿದ್ದಾರೆ. ಅವರ ಸೈನ್ಯದಲ್ಲಿಯೂ ಮುಸ್ಲಿಂ ಸೈನಿಕರಿದ್ದರು. ಶಿವಾಜಿ ಮಹಾರಾಜರು ಯುದ್ಧಕ್ಕೆ ಹೋದಾಗ ಗೆದ್ದ ಮೇಲೆ ಯಾವುದೇ ಸಮಾಜದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಲಿಲ್ಲ. ಸೈನಿಕರು ಶೀಲಕ್ಕೆ ಕೈ ಹಾಕಿದರೆ ಅವರ ಕೈ ಕತ್ತರಿಸಿದ್ದಾರೆ. ಒಂದು ಮಸೀದಿ ಕೆಡವಲಿಲ್ಲ. ಮುಸ್ಲಿಂ ಮಹಿಳೆಯರ ಜೊತೆ ಗೌರವಯುತವಾಗಿ ನಡೆದುಕೊಂಡ ಭಾರತದ ಮಹಾನ್ ನಾಯಕ ಶಿವಾಜಿ ಮಹಾರಾಜರು ಎಂದು ಹೇಳಿದರು.
ಆದರೆ, ಇದೇ ರಾಜ್ಯದ ಟಿಪ್ಪು ಸುಲ್ತಾನ್ ಮೂರುವರೆ ಸಾವಿರ ಹಿಂದೂ ದೇವಾಲಯಗಳನ್ನು ಕೆಡವಿದ್ದಾನೆ. ಲಕ್ಷಾಂತರ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಮತಾಂತರ ಮಾಡಿದ್ದಾನೆ. ಹಿಂದೂಗಳ ಕಗ್ಗೊಲೆ ಮಾಡಿದ. ಕೊಡಗಿನವರ ವಿರುದ್ಧ ಗೆಲುವು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಕೊಡಗಿನ ಜನರನ್ನು ಒಪ್ಪಂದಕ್ಕೆ ಕರೆದು ಲಕ್ಷಾಂತರ ಕೊಡಗು ಜನರನ್ನು ತನ್ನ ಸೈನಿಕರ ಮೂಲಕ ಕೊಲೆ ಮಾಡಿಸಿದ. ಟಿಪ್ಪು ಸುಲ್ತಾನ ಮೆರವಣಿಗೆ ಮಾಡುವ ನಾಲಾಯಕ ಹಿಂದೂಗಳು ನಮ್ಮ ದೇಶದಲ್ಲಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ನಾನು ಹಿಂದೂ ಇದ್ದೇನೆ. ಆದರೆ, ಹಿಂದುತ್ವ ಒಪ್ಪುವುದಿಲ್ಲ. ನಾನು ಅಪ್ಪನಿಗೆ ಹುಟ್ಟಿದ್ದು ಖರೆ ಐತಿ. ಆದರೆ, ಗ್ಯಾರಂಟಿ ಇಲ್ಲ. ನಾನು ಕುಂಕುಮ ಹಚ್ಚಿಕೊಳ್ಳುವುದಿಲ್ಲ. ನಮಾಜ ಟೊಪ್ಪಗಿ ಹಾಕಿಕೊಳ್ಳಲು ತಯಾರಾಗುತ್ತೇನೆ. ನಮ್ಮ ರೇಶ್ಮೆ ಪೇಟ ಹಾಕಿಕೊಳ್ಳುವುದಿಲ್ಲ. ಆದರೆ, ಸಾಬರು ಹಾಕುವ ವಸ್ತುಗಳನ್ನು ಸ್ವೀಕರಿಸುತ್ತೇನೆ ಎಂಬ ಮನೋಭಾವ ಹೊಂದಿದ್ದಾರೆ. ಮುಸ್ಲಿಮರು ಓಟು ಹಾಕಿದರೆ ಮಾತ್ರ ನಾನು ಗೆಲ್ಲುತ್ತೇನೆ ಎಂದು ಅವರ ಭಾವನೆಯಾಗಿದೆ. ಆದರೆ, ಇಂದು ಕರ್ನಾಟಕದಲ್ಲಿ ಇದು ನಡೆಯುವುದಿಲ್ಲ ಎಂದು ಮಾಜಿ ಸಿಎಂ. ಎಸ್. ಸಿದ್ಧಾರಮಯ್ಯ ಅವರ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.
ಬೇರೆ ಶಾಸಕರು ನನ್ನನ್ನು ಪ್ರಶ್ನಿಸುತ್ತಾರೆ. ಗೌಡ್ರೆ, ನಿಮ್ಮ ಮತಕ್ಷೇತ್ರದಲ್ಲಿ ಒಂದು ಲಕ್ಷ ಟಿಪ್ಪು ಸುಲ್ತಾನ್ ಮತದಾರರಿದ್ದಾರೆ. ಆದರೆ, ನೀವು ಹೇಗೆ ಶಿವಾಜಿ ವಂಶಜರು ಆಯ್ಕೆಯಾಗಿದ್ದೀರಿ ಎಂದು ಪ್ರಶ್ನಿಸುತ್ತಾರೆ. ವಿಜಯಪುರದಲ್ಲಿ ಇನ್ನು ಮುಂದೆ ಯಾರೂ ಟಿಪ್ಪು ಸುಲ್ತಾನರು ಆರಿಸಿ ಬರುವುದಿಲ್ಲ. ಇಲ್ಲಿ ಆರಿಸಿ ಬರುವವರು ಶಿವಾಜಿ ಮಹಾರಾಜರ ಭಗವಾ ಧ್ವಜ. ಹೌದಲ್ವಾ ಎಂದಾಗ ನೆರೆದ ಜನತೆ ಹೌದು ಎಂದು ಉಚ್ಚರಿಸಿ ಬೆಂಬಲಿಸಿದರು.
ಇನ್ನು ಮುಂದೆ ತಪ್ಪಿಯೂ ನೀವೂ ಸಾಬರಿಗೆ ಓಟು ಹಾಕಬಾರದು. ನನ್ನನ್ನು ಸೋಲಿಸಲು ವಿಜಯಪುರಕ್ಕೆ ರೊಕ್ಕ(ಹಣ) ಬಹಳ ಬರಲಿದೆ. ಅಲ್ಲೋಬ್ಬ ಮಗ ಕುಳಿತಿದ್ದಾನೆ. ಬೆಂಗಳೂರಿನಲ್ಲೊಬ್ಬ ಇಲ್ಲಿ ಪಕ್ಕದ ಜಿಲ್ಲೆಯಲ್ಲೊಬ್ಬ ಕುಳಿತಿದ್ದಾನೆ. ಬಸನಗೌಡನನ್ನು ಕೆಡವಲು ರೂ. 50 ಕೋ. ಖರ್ಚಾಗಲಿ ಎಂದು ಹೇಳಿದ್ದಾನೆ. ರೂ. 50 ಕೋ. ಬರಲಿ. ಎಲ್ಲರೂ ಧಾಬಾಗಳಲ್ಲಿ ಊಟ ಮಾಡಿ. ಛಲೋ ಬಟ್ಟೆ ಖರೀದಿಸಿ. 15 ದಿನ ಮಜಾ ಮಾಡಿ. ಓಟು ನನಗೆ ಹಾಕಿ. ಅಷ್ಟು ಮಾಡಿ ಎಂದು ಯತ್ನಾಳ ಹೇಳಿದರು.
ಶಿವಾಜಿ ಮಹಾರಾಜರ ಆ ಒಂದು ಕನಸು, ಸಂಕಲ್ಪವನ್ನು ದೇಶದಲ್ಲಿ ನಿಜ ಮಾಡಬೇಕಿದೆ. ಈ ದೇಶಕ್ಕೊಬ್ಬ ಉತ್ತಮ ಪ್ರಧಾನಿ ಸಿಕ್ಕಿರುವುದು ನಮ್ಮ ದೈವ. ಶಿವಾಜಿ ಮಹಾರಾಜರು, ಡಾ. ಬಿ. ಆರ್. ಅಂಬೇಡ್ಕರ್ ಅವರು, ಸಂತ ಸೇವಾಲಾಲರಂಥವರು ನಮ್ಮ ದೇಶದಲ್ಲಿ ಜನಿಸಿದ್ದು ಅವರು ನಮಗೆ ಆದರ್ಶವಾಗಿರಬೇಕು ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.