ಮಾ. 9 ರಿಂದ 29ರ ವರೆಗೆ ದ್ವಿತೀಯ ಪಿಯು ಪರೀಕ್ಷೆ: ಜಿಲ್ಲೆಯಲ್ಲಿ ವ್ಯವಸ್ಥಿತ, ಪಾರದರ್ಶಕವಾಗಿ ನಡೆಸಲು ಡಾ. ದಾನಮ್ಮನವರ ಸೂಚನೆ

ವಿಜಯಪುರ: ಜಿಲ್ಲಾದ್ಯಂತ ಮಾ. 9 ರಿಂದ 29ರ ವರೆಗೆ ದ್ವೀತಿಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿದ್ದು, ವ್ಯವಸ್ಥಿತ ಮತ್ತು ಪಾರದರ್ಶಕವಾಗಿ ಪರೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲಾದ್ಯಂತ 56 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಒಟ್ಟು 32268 ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 30178 ಅಭ್ಯರ್ಥಿಗಳು ಈ ವರ್ಷಕ್ಕೆ ಮತ್ತು 1140 ಅಭ್ಯರ್ಥಿಗಳು ಪುನರಾವರ್ತಿತ ಅಭ್ಯರ್ಥಿಗಳಿದ್ದಾರೆ. ಜಿಲ್ಲೆಯಲ್ಲಿ 6 ಸರಕಾರಿ, 32 ಖಾಸಗಿ ಅನುದಾನಿತ ಹಾಗೂ 18 ಖಾಸಗಿ ಅನುದಾನ ರಹಿತ ಪರೀಕ್ಷೆ ಕೇಂದ್ರಗಳು ಸೇರಿದಂತೆ ಒಟ್ಟು 56 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಗರ ಪ್ರದೇಶಗಳಲ್ಲಿ 34 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 22 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 3ಲಮೂರಯ ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ಡಿಸಿ ಡಾ. ದಾನಮ್ಮನವರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

 

ತಾಲೂಕುವಾರು ಪರೀಕ್ಷಾ ಕೇಂದ್ರಗಳ ಮಾಹಿತಿ

ಆಲಮೇಲ ತಾಲೂಕಿನಲ್ಲಿ-2, ಬಬಲೇಶ್ವರ-1, ಬಸವನ ಬಾಗೇವಾಡಿ-4, ಚಡಚಣ-2, ದೇವರ ಹಿಪ್ಪರಗಿ-2, ಇಂಡಿ-7, ಕೊಲ್ಹಾರ-1, ಮುದ್ದೇಬಿಹಾಳ-5, ನಿಡಗುಂದಿ-2, ಸಿಂದಗಿ-5, ತಾಳಿಕೋಟೆ-5, ತಿಕೋಟಾ-2, ವಿಜಯಪುರ ನಗರ-15 ಹಾಗೂ ವಿಜಯಪುರ ಗ್ರಾಮೀಣ-3 ಪರೀಕ್ಷೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ಅನುಕೂಲಕ್ಕಾಗಿ ಕುಡಿಯುವ ನೀರು, ವಿದ್ಯುತ್ ಸೌಕರ್ಯ, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳ ಕುರಿತು ಮುಂಚಿತವಾಗಿ ಪರಿಶೀಲನೆ ಮಾಡಬೇಕು. ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.

ಪರೀಕ್ಷೆಗಳು ಅತೀ ಸೂಕ್ಷ್ಮವಾದ ಪ್ರಕ್ರಿಯೆಯಾಗಿದ್ದು, ಈ ನಿಟ್ಟಿನಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷೆ ಕೇಂದ್ರಗಳಿಗೆ ನಿಗದಿತ ಅವಧಿಯೊಳಗೆ ತಲುಪಿಸಬೇಕು. ಪ್ರಶ್ನೆ ಪತ್ರಿಕೆಗಳನ್ನು ತೆಗೆದುಕೊಂಡು ಹೋಗುವ ವಾಹನಗಳಿಗೆ ಜಿಪಿಎಸ್ ಅಳವಡಿಕೆ, ನಿಗದಿತ ಮಾರ್ಗದಲ್ಲಿ ಚಲಿಸಿ, ನಿಖರ ಸಮಯಕ್ಕೆ ತಲುಪಿಸಬೇಕು. ಪರೀಕ್ಷೆ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಗುರುತಿನ ಚೀಟಿ ನೀಡಬೇಕು. ಒಂದು ಕೊಠಡಿಯಲ್ಲಿ ಕನಿಷ್ಠ 24 ಗರಿಷ್ಠ 30 ವಿದ್ಯಾರ್ಥಿಗಳಂತೆ ಆಸನ ವ್ಯವಸ್ಥೆ ಕಲ್ಪಿಸಬೇಕು. ಪರೀಕ್ಷೆಗೆ ನಿಯೋಜಿತ ಅಧಿಕಾರಿ, ಸಿಬ್ಬಂದಿಗಳು ಪರೀಕ್ಷೆಯ ನಿಗದಿತ ಸಮಯಕ್ಕೆ ಮುಂಚಿತವಾಗಿ ಹಾಜರಿರಬೇಕು. ಪ್ರಶ್ನೆ ಪತ್ರಿಕೆ ಸ್ವೀಕರಿಸುವ ತೆರೆಯುವ ಮತ್ತು ವಿತರಿಸುವ ಎಲ್ಲ ಪ್ರಕ್ರಿಯೆಗಳು ಸಿಸಿಟಿವಿ ಕಣ್ಗಾವಲಿನಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.

ಪ್ರಶ್ನೆ ಪತ್ರಿಕೆ ಸೆಂಟರ್ ಕೋಡ್, ದಿನಾಂಕ, ಸೀಲ್ ಪ್ಯಾಕಿಂಗ್ ಪರಿಶೀಲಿಸಿ ಖಚಿತ ಪಡಿಸಿಕೊಳ್ಳಬೇಕು. ಎಲ್ಲಾ ಕೊಠಡಿಗಳಿಗೆ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ನಿಯೋಜಿತ ಸಿಬ್ಬಂದಿ ಹೊರತುಪಡಿಸಿ, ಬೇರೆಯವರಿಗೆ ಪ್ರವೇಶ ನಿಷೇಧಿಸಲಾಗಿದೆ. ಪ್ರಶ್ನೆ ಪತ್ರಿಕೆ ಪ್ರಮಾಣ ಸರಿಯಾಗಿ ಪರಿಶೀಲಿಸಿ ಖಚಿತ ಪಡಿಸಿಕೊಂಡ ನಂತರ ವಿತರಿಸಬೇಕು. ವ್ಯತ್ಯಾಸ ಕಂಡುಬಂದಲ್ಲಿ ಕೂಡಲೇ ಮುಖ್ಯ ಅಧೀಕ್ಷಕರಿಗೆ ಮಾಹಿತಿ ಒದಗಿಸುವಂತೆ ತಿಳಿಸಿದ ಅವರು, ಕೊಠಡಿ ಮೇಲ್ವಿಚಾರಕರು ಅತ್ಯಂತ ಎಚ್ಚರಿಕೆಯಿಂದ, ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಪರೀಕ್ಷೆಗಳು ಅತ್ಯಂತ ಪಾರದರ್ಶಕವಾಗಿ ನಡೆಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಭೆಯಲ್ಲಿ ಜಿಲ್ಲಾ ಖಜಾನೆ ಇಲಾಖೆ ಉಪನಿರ್ದೇಶಕ ರಾಜಗೋಪಾಲ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.‌ ಎನ್. ಬಗಲಿ, ಡಿವೈಎಸ್‍ಪಿ ಸಿದ್ದೇಶ್ವರ, ಜಿಲ್ಲೆಯ ಎಲ್ಲ ತಹಸೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ಪ್ರಶ್ನೆ ಪತ್ರಿಕೆ ವಿತರಣೆ ತಂಡದ ಪ್ರಾಚಾರ್ಯರು ಹಾಗೂ ಉಪನ್ಯಾಸಕರು, ಪರೀಕ್ಷಾ ಉಪ ಮುಖ್ಯ ಅಧೀಕ್ಷಕರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌