ಕೃಷಿ ಪರಿಕರ ಮಾರಾಟಗಾರರು ರೈತರು ಮತ್ತು ಕೃಷಿ ವಿಜ್ಞಾನಿಗಳ ಮಧ್ಯೆ ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕು- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಕೃಷಿ ಪರಿಕರ ಮಾರಾಟಗಾರರು ವಿಜ್ಞಾನಿಗಳು ಮತ್ತು ರೈತರ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.

ವಿಜಯಪುರದಲ್ಲಿ ನಡೆದ ಕೃಷಿ ವಿಸ್ತರಣೆ ಸೇವೆಗಳ ಡಿಪ್ಲೋಮಾ(ದೇಸಿ) ಕೋರ್ಸಿನ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮತ್ತು ಹೊಸ ಕೋರ್ಸಿನ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಗ ತರಬೇತಿ ಪಡೆದಿರುವ ಶಿಬಿರಾರ್ಥಿಗಳು ತಾವು ಗಳಿಸಿರುವ ಕೃಷಿ ಜ್ಞಾನದಿಂದ ಕೃಷಿ ರಂಗದ ಅಭಿವೃದ್ಧಿಗೆ ನೆರವಾಗಬೇಕು.  ಕೃಷಿ ಪದ್ಧತಿಗಳು ಮತ್ತು ಅವುಗಳನ್ನು ಅಳವಡಿಸಿಕೊಳ್ಳುವಲ್ಲಿ ಎದುರಾಗುವ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಬಗೆಹರಿಸಲು ರೈತರು ಮತ್ತು ಕೃಷಿ ವಿಜ್ಞಾನಿಗಳ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.

ಇದೇ ವೇಳೆ ತರಬೇತಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಸಂಸದರ ಅನುದಾನದಲ್ಲಿ ಹಣಕಾಸಿನ ನೆರವು ನೀಡುವುದಾಗಿ ಸಂಸದ ರಮೇಶ ಜಿಗಜಿಣಗಿ ಭರವಸೆ ನೀಡಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಂಯೋಡಕ ಡಾ. ಎಂ. ಗೋಪಾಲ ಮಾತನಾಡಿ, ಇಂಥ ತರಬೇತಿ ಶಿಬಿರಗಳು ಈಗ ಅಗತ್ಯವಾಗಿದ್ದು, ಈವರೆಗೆ ರಾಜ್ಯದ ನಾನಾ ತರೇಬೇತಿ ಸಂಸ್ಥೆಗಳಿಂದ ತರಬೇತಿ ಪಡೆದಿರುವ 500 ಜನರು ಕೃಷಿ ಪರಿಕರಗಳ ಮಾರಾಟದ ಜೊತೆಗೆ ರೈತರಿಗೆ ಸೂಕ್ತ ಸಲಹೆಗಳನ್ನು ನೀಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ. ಅಶೋಕ ಎಸ್. ಸಜ್ಜನ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ. ರೂಪಾ, ಡಾ. ಕೆ. ಎಚ್. ಮುಂಬಾರಡ್ಡಿ ಮುಂತಾದವರು ಮಾತನಾಡಿದರು.

ಹೈದರಾಬಾದಿನ ಕೃಷಿ ತಂತ್ರಜ್ಞಾನ ಸಂಸ್ಥೆ, ಧಾರವಾಡ ಕೃಷಿ ಇಲಾಖೆ- ಆತ್ಮ ಯೋಜನೆ, ವಿಜಯಪುರ, ಕೃಷಿ ತಂತ್ರಜ್ಞರ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆದ ಈ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣೆ ಸೇವೆಗಳ ಡಿಪ್ಲೋಮಾ(ದೇಸಿ) ಕಾರ್ಯಕ್ರಮದಲ್ಲಿ 150 ಜನ ಭಾಗವಹಿಸಿದ್ದರು.

ಪ್ರಾದೇಶಿಕ ಕೃಷಿ ಸಂಶೋಧನೆ ಕೇಂದ್ರದ ಮಲ್ಲಿಕಾರ್ಜುನ ಗದ್ದನಕೇರಿ ನಿರೂಪಿಸಿ, ವಂದಿಸಿದರು.

Leave a Reply

ಹೊಸ ಪೋಸ್ಟ್‌