ವಿಜಯಪುರ: ಮೀನುಗಾರಿಕೆ ಅಕ್ವೇರಿಯಂ ಹಾಗೂ ತೊರವಿ ಗ್ರಾಮದಲ್ಲಿನ ವೈನ್ ಪಾರ್ಕಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದ ಹತ್ತಿರವಿರುವ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ, ಮೀನುಗಾರಿಕೆ ಇಲಾಖೆಯ ಮುದ್ದು ಮೀನು ಸಂಗ್ರಾಲಯದ ಉನ್ನತೀಕರಣ ಕಾಮಗಾರಿಯನ್ನು ಪರಿಶೀಲಿಸಿದ ಅವರು, ಪೆಟ್ ಬಾಂಡಿಂಗ್ ಏಜೆನ್ಸಿ ಬೆಂಗಳೂರು ಅವರಿಂದ ಬಾಕಿ ಉಳಿದ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ಸುಸಜ್ಜಿತವಾದ ಮೀನು ಮಾರುಕಟ್ಟೆ ಸಂಕೀರ್ಣವನ್ನು ಸರ್ವೇ ನಂ.39ರಲ್ಲಿ ನಿರ್ಮಾಣ ಮಾಡುವ ಕುರಿತು ತುರ್ತಾಗಿ ಅಂದಾಜು ಪತ್ರಿಕೆಯನ್ನು ತಯಾರಿಸಲು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಸಹಾಯಕ ಅಭಿಯಂತರ ಹಾಗೂ ಮೀನುಗಾರಿಕೆ ಉಪ ನಿರ್ದೇಶಕರು ಪ್ರಸ್ತಾವನೆಯನ್ನು ಕೇಂದ್ರ ಕಛೇರಿಗೆ ಸಲ್ಲಿಸಲು ಸೂಚನೆ ನೀಡಿದರು.
ತೊರವಿ ಗ್ರಾಮದ ವೈನ್ ಪಾರ್ಕಿಗೆ ಭೇಟಿ ನೀಡಿ ಪ್ರಸ್ತುತ ಸ್ಥಿತಿ-ಗತಿ ಬಗ್ಗೆ ವೀಕ್ಷಣೆ ಮಾಡಿದ ಅವರು, ಈ ಮೊದಲು ಕರ್ನಾಟಕ ದ್ರಾಕ್ಷಿ ರಸ ಮಂಡಳಿ ಬೆಂಗಳೂರು ಅಂತಾ ಹೆಸರಿದ್ದು, ಆದರೆ ರಾಜ್ಯದ ದ್ರಾಕ್ಷಿ ಬೆಳೆಗಾರರ ಹಿತದೃಷ್ಠಿಯಿಂದ ಆಗಿನ ಸಂದರ್ಭದಲ್ಲಿದ್ದ ಸನ್ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ದ್ರಾಕ್ಷಿ ರಸ ಮಂಡಳಿ (ಕರ್ನಾಟಕ ವೈನ್ ಬೋರ್ಡ) ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ (ಕರ್ನಾಟಕ ಗ್ರೇಪ್ಸ್ & ವೈನ್ ಬೋರ್ಡ್) ಎಂದು ಮರುನಾಮಕರಣ ಮಾಡಿದ್ದರು.
ಜಿಲ್ಲೆಯಲ್ಲಿ ಒಟ್ಟು 1.25 ಲಕ್ಷ ಟನ್ ದಷ್ಟು ಒಣದ್ರಾಕ್ಷಿ ಉತ್ಪಾದನೆಯಾಗುತ್ತಿದ್ದು, ಒಣದ್ರಾಕ್ಷಿಯನ್ನು ಸಂಗ್ರಹಣೆ ಮಾಡಲು ಜಿಲ್ಲೆಯಲ್ಲಿ 40 ಸಾವಿರ್ ಟನ್ ಶೇಖರಣಾ ಸಾಮರ್ಥ್ಯ ಹೊಂದಿರುವ ಒಟ್ಟು 31 ಶೀತಲಗೃಹಗಳಿದ್ದು, ರೈತರು ಸುಮಾರು 85,000 ಟನ್ ನಷ್ಟು ಒಣದ್ರಾಕ್ಷಿಯನ್ನು ಪಕ್ಕದ ರಾಜ್ಯ ಮಹಾರಾಷ್ಟ್ರದ ಶೀತಲಗೃಹಗಳಲ್ಲಿ ಸಂಗ್ರಹಣೆ ಮಾಡುತ್ತಾರೆ. ರಾಜ್ಯ ಸರ್ಕಾರ ಇದನ್ನು ಮನಗಂಡು ದ್ರಾಕ್ಷಿ ಬೆಳೆಗಾರರ ಅನುಕೂಲವಾಗುವ ನಿಟ್ಟಿನಲ್ಲಿ 10,000 ಟನ್ ಸಾಮರ್ಥ್ಯದ ಹೈಟೆಕ್ ಶೀತಲ ಗೃಹ ನಬಾರ್ಡ್ ವತಿಯಿಂದ ಅನುದಾನ ಪಡೆದು ಶೀಥಲಗೃಹ ನಿರ್ಮಾಣದ ವಿಸ್ತೃತ ಯೋಜನಾ ವರದಿಗೆ ಅನುಮೋದನೆ ನೀಡಲಾಗಿದೆ. ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದು ಟೆಂಡರ್ ಅನ್ನು ವ್ಯವಸ್ಥಾಪಕ ನಿರ್ದೇಶಕರು, ವೈನ್ ಬೋರ್ಡ, ಬೆಂಗಳೂರು ಇವರಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಶೀಘ್ರವೇ ಹೈಟೆಕ್ ಕೋಲ್ಡ್ ಸ್ಟೋರೆಜ್ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕ ಸಿದ್ಧರಾಮಯ್ಯ ಬರಗಿಮಠ ಅವರಿಗೆ ಸಿಇಓ ಸೂಚನೆ ನೀಡಿದರು.
ತೊರವಿಯಲ್ಲಿರುವ ಸರ್ವೇ ನಂ. 20, 37, 38, 46 ಹಾಗೂ 7 ರಲ್ಲಿ ಒಟ್ಟು 141 ಎಕರೆ ಇಲ್ಲಿಯವರೆಗೆ ಅಭಿವೃದ್ಧಿಪಡಿಸಿದ ಉದ್ಯಾನವನದ ಬಗ್ಗೆ ಖುದ್ದಾಗಿ ಭೇಟಿ ನೀಡಿ, ಉದ್ಯಾನವನದಲ್ಲಿ ಹದ್ದುಬಸ್ತನ್ನು ಮಾಡಿ ತಂತಿ ಬೇಲಿಯನ್ನು ಹಾಕಲಾಗಿದೆ. ಸುಮಾರು 9 ಬೋರವೆಲ್‍ಗಳಿದ್ದು, ನೀರು ಸಂಗ್ರಹಣಾ ಕೆರೆ ನಿರ್ಮಾಣ, ವಿದ್ಯುತ್ ಸಂಪರ್ಕ ಅಳವಡಿಸಿ ಸುಮಾರು 9ಕಿ.ಮೀ.ಗಳ ಒಳರಸ್ತೆ ಮಾಡಿ, ರಸ್ತೆಯ ಬದಿಗಳಲ್ಲಿ ನೆಡಲಾದ ಅರಣ್ಯ ಗಿಡಗಳ ಪರಿಶೀಲನೆ ನಡೆಸಿದ ಅವರು, ವಿಜಯಪುರ ನಗರದಿಂದ ಅಥಣಿಗೆ ಹೋಗುವ ಮುಖ್ಯ ರಸ್ತೆಯಿಂದ ಹೈಟೆಕ್ ಶೀತಲ ಗೃಹಕ್ಕೆ ತಲುಪುವಂತೆ ರಸ್ತೆ ಅಭಿವೃದ್ದಿಗೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ರಾಹುಲ ಶಿಂಧೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಎಸ್. ಎಲ್. ಸುರಗಿಹಳ್ಳಿ, ಮೀನುಗಾರಿಕೆ ಸಹಾಯಕ ನಿರ್ದೇಶಕ ಮಂಜುನಾಥಗೌಡ, ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ರಾಘವೇಂದ್ರ ಬಗಲಿ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಮತ್ತಿಗಟ್ಟಿ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಸಹಾಯಕ ಅಭಿಯಂತರ ಕುಮಾರಿ ಕಾವ್ಯ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.