ಮಾಧ್ಯಮ ಅಕಾಡೆಮಿ ನಿಯಮಾವಳಿ ತಿದ್ದುಪಡಿಗೆ ಇಂದು ಕ್ರಮ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲ ಭಾಗಗಳಿಗೆ ಪ್ರಾತಿನಿಧ್ಯ ಒದಗಿಸಲು ಅಕಾಡೆಮಿಯ ನಿಯಮಾವಳಿಗಳಿಗೆ ತಿದ್ದುಪಡಿಗೆ ಸಮಿತಿ ರಚಿಸಲು ಕೂಡಲೇ ಆದೇಶ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅಕಾಡೆಮಿಯಿಂದ ಆಗುತ್ತಿರುವ ತಾರತಮ್ಯದ ವಿರುದ್ಧ ದನಿ ಎತ್ತಿರುವ ಉತ್ತರ ಕರ್ನಾಟಕದ ಪತ್ರಕರ್ತರ ನಿಯೋಗವು ಇಂದು ಬೊಮ್ಮಾಯಿಯವರನ್ನು ಭೇಟಿ ಮಾಡಿದ ವೇಳೆ ಮನವಿ ಸ್ವೀಕರಿದ ಅವರು, ಉತ್ತರ ಕರ್ನಾಟಕಕ್ಕೆ ಮಾಧ್ಯಮ ಅಕಾಡೆಮಿಯಿಂದ ಮೊದಲಿನಿಂದಲೂ ಅನ್ಯಾಯವಾಗುತ್ತಿದೆ.  ಇಲ್ಲಿನ ಪತ್ರಕರ್ತರು ಈಗಲಾದರೂ ಎಚ್ಚೆತ್ತಿರುವುದು ಸ್ವಾಗತಾರ್ಹ.  ಅಕಾಡೆಮಿಯ ನಿಯಮಾವಳಿ ತಿದ್ದುಪಡಿ ಪ್ರಕ್ರಿಯೆಯನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲಾಗುವುದು. ಈ ದಿಸೆಯಲ್ಲಿ ಎಲ್ಲ ಭಾಗಗಳ ಪತ್ರಕರ್ತರ ಸಹಕಾರ ಅವಶ್ಯ ಎಂದು ಹೇಳಿದರು.

ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ ಪತ್ರಕರ್ತರ ನಿಯೋಗ

ಇದಕ್ಕೂ ಮುನ್ನ ಸಿಎಂ ಗೆ ನೀಡಿದ‌ ಮನವಿಯಲ್ಲಿ ಮಾಧ್ಯಮ ಅಕಾಡೆಮಿಯ ಸದಸ್ಯರಲ್ಲಿ ಶೇ. 50 ರಷ್ಟು ಸದಸ್ಯತ್ವ ಉತ್ತರ ಕರ್ನಾಟಕ ಭಾಗಕ್ಕೆ ನೀಡಬೇಕು. ಪ್ರಶಸ್ತಿ ಆಯ್ಕೆಯ ಮಾನದಂಡಗಳು ಬದಲಾವಣೆ ಆಗಬೇಕು ಹಾಗೂ ಮಹಿಳೆಯರಿಗೂ ಆದ್ಯತೆ ಸಿಗಬೇಕು ಎಂದು ಒತ್ತಾಯಿಸಲಾಯಿತು.

ಪ್ರತಿಭಟನೆಯ ಎಚ್ಚರಿಕೆ

ಮಾರ್ಚ್ ೧೩ರಂದು ಮಾಧ್ಯಮ ಅಕಾಡೆಮಿಯು ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ನಿರ್ಧರಿಸಿದ್ದು, ಸಮಾರಂಭಕ್ಕೂ ಮೊದಲು ಈಗ ಘೋಷಿಸಲಾಗಿರುವ ನಾಲ್ಕು ವರ್ಷಗಳ ಪ್ರಶಸ್ತಿ ಪಟ್ಟಿಯನ್ನು ಆಯಾ ಪುರಸ್ಕೃತರು ಕೆಲಸ ಮಾಡುತ್ತಿರುವ ಜಿಲ್ಲೆಗಳ ಹೆಸರಿನ ಜೊತೆಗೆ ಮರುಪ್ರಕಟಿಸಬೇಕು; ೧೪೫ ಜನರಲ್ಲಿ ಮೂವರು ಮಹಿಳೆಯರಿದ್ದಾರೆ; ಉತ್ತರ ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವ ಒಬ್ಬ ಗ್ರಾಫಿಕ್ ಡಿಸೈನರ್ಸ್, ವ್ಯಂಗ್ಯ ಚಿತ್ರಕಾರರಿಗೂ ಪ್ರಶಸ್ತಿ ಸಿಕ್ಕಿಲ್ಲ.  ಈ ಅನ್ಯಾಯಗಳನ್ನು ಸರಿಪಡಿಸಬೇಕು; ಸರಿಪಡಿಸದೇ ಕಾರ್ಯಕ್ರಮ ಆಯೋಜಿಸಿದರೆ ಅಕಾಡೆಮಿಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಹೊಂದಿರುವ ರಾಜ್ಯದ ಎಲ್ಲ ಜಿಲ್ಲೆಗಳ ಪತ್ರಕರ್ತರು ಪ್ರತಿಭಟನೆ ನಡೆಸಲಿದ್ದೇವೆ ಎಂದೂ ನಿಯೋಗ ಎಚ್ಚರಿಕೆ ನೀಡಿತು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಮೋಹನ ಹೆಗಡೆ, ಬಂಡು ಕುಲಕರ್ಣಿ, ವೆಂಕಟೇಶ ಪ್ರಭು, ರಶ್ಮಿ ಎಸ್., ರಹಮತ್ ಕಂಚಗಾರ, ಬಸವರಾಜ ಕಟ್ಟಿಮನಿ, ಗಿರೀಶ ಪಟ್ಟಣಶೆಟ್ಟಿ, ಲೋಚನೇಶ ಹೂಗಾರ, ವಿಜಯ ಹೂಗಾರ, ಪ್ರಮೋದ ವೈದ್ಯ, ಸಂಗಮೇಶ ಮೆಣಸಿನಕಾಯಿ, ಗುರುರಾಜ ಹೂಗಾರ, ಅಬ್ಬಾಸ್ ಮುಲ್ಲಾ, ಶಿವಾನಂದ ಗೊಂಬಿ, ಓದೇಶ ಸಕಲೇಶಪುರ, ಬಸವರಾಜ ಹೂಗಾರ, ವಾಮನ ಭಾಂಡಗೆ ಮುಂತಾದವರು ಉಪಸ್ಥಿತರಿದ್ದರು.

Eom/sangamesh

Leave a Reply

ಹೊಸ ಪೋಸ್ಟ್‌