ಶಿಕ್ಷಣ ಕ್ಷೇತ್ರಕ್ಕೆ ಎಂ. ಎಸ್. ಖೇಡ ಅವರ ಕೊಡುಗೆ ಅಪಾರ- ಶಾಸಕ ಯಶವಂತರಾಯಗೌಡ ವಿ. ಪಾಟೀಲ

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯ ಶಿಕ್ಷಣ ಕ್ಶೇತ್ರಕ್ಕೆ ದಿ. ಮಲ್ಲಿಕಾರ್ಜುನ ಖೇಡ ಅವರ ಕೊಡುಗೆ ಅಪಾರ ಎಂದು ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಹೇಳಿದ್ದಾರೆ.

ಇಂಡಿ ತಾಲೂಕಿನ ತಡವಲಗಾದಲ್ಲಿ ವಿನಾಯಕ ಪೂರ್ವ ಪ್ರಾಥಮಿಕ ಹಾಗೂ ಮಾತೋಶ್ರಿ ಶಾಂತಾಬಾಯಿ ಖೇಡ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು.

ಅಂಗವಿಕಲರಾಗಿದ್ದರೂ ಎಂ. ಎಸ್. ಖೇಡ ಅವರು ಈ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವ ಅದನ್ನು ಹೆಮ್ಮರವಾಗಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ.  ಅವರ ಶಿಕ್ಷಣ ಪ್ರೇಮ ಇತರರಿಗೂ ಮಾದರಿಯಾಗಿದೆ.  ಈಗ ಅವರಿಲ್ಲದಿದ್ದರೂ ಅವರು ಸ್ಥಾಪಿಸಿರುವ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲಾಗುತ್ತಿದೆ ಎಂದು ಯಶವಂತರಾಯಗೌಡ ವಿ. ಪಾಟೀಲ ಹೇಳಿದರು.

ತಡವಲಗಾದಲ್ಲಿ ವಿನಾಯಕ ಪೂರ್ವ ಪ್ರಾಥಮಿಕ ಹಾಗೂ ಮಾತೋಶ್ರಿ ಶಾಂತಾಬಾಯಿ ಖೇಡ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪಾಲ್ಗೊಂಡ ಗಣ್ಯರು

ಸಂಸ್ಥೆಯ ಕಾರ್ಯದರ್ಶಿ ಶ್ರೀಮಂತ ದುದ್ದಗಿ ಮಾತನಾಡಿ, ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆಯುತ್ತಿರುವುದು ಎಂ. ಎಸ್. ಖೇಡ ಅವರ ಉತ್ತಮ ಕೆಲಸಗಳಿಗೆ ಸಾಕ್ಷಿಯಾಗಿದೆ.  ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು.  ಪಾಶ್ಚತ್ಯ ಸಂಸ್ಕೃತಿಯ ಪ್ರಭಾವ ಬೀರದಂತೆ ಭಾರತೀಯ ಸಂಸ್ಕೃತಿ, ದೇಶಭಕ್ತರು, ಸ್ವಾತಂತ್ರ್ಯ ಹೋರಾಟಗಾರರ ಕುರಿತು ಬೋಧನೆ ಮಾಡಬೇಕು ಎಂದು ಹೇಳಿದರು.

ಸಂಸ್ಥೆಯ ಖಜಾಂಜಿ ವಿನೋದ ಖೇಡ ಮಾತನಾಡಿ, ತಮ್ಮ ತಂದೆ ದಿ. ಎಂ. ಎಸ್. ಖೇಡ ಅವರು ಕಟ್ಟಿರುವ ಶಿಕ್ಷಣ ಸಂಸ್ಥೆಯನ್ನು ಎಲ್ಲರೂ ಸೇರಿ ಇನ್ನಷ್ಟು ಹೆಮ್ಮರವಾಗಿ ಬೆಳೆಸಲು ನೆರವು ನೀಡಬೇಕು ಎಂದು ಹೇಳಿದರು.

ಶಿಕ್ಷಣ ಸಂಸ್ಥೆಯ ನಿರ್ದೇಶಕ ಪ್ರಭು ಹೊಸಮನಿ ಮಾತನಾಡಿದರು.  ತಳವಲಗಾ ಹಿರೇಮಠದ ಪೂಜ್ಯಶ್ರೀಗಳಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಅನಿಲ ಪ್ರಸಾದ, ಸಾಯಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಪೂಜಾರಿ, ತಡವಲಗಾ ಗ್ರಾ. ಪಂ. ಅಧ್ಯಕ್ಷ, ಸದಸ್ಯರು ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌