ವಿಜಯಪುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದಿ ಹಿನ್ನೆಲೆಯಲ್ಲಿ ಬಬಲೇಶ್ವರ ತಾಲೂಕಿನ ಹೊಕ್ಕುಂಡಿಯಲ್ಲಿ ರೈತರು ನಡೆಸುತ್ತಿದ್ದ ಧರಣಿ ಸತ್ಯಾಗ್ರಹವನ್ನು ಹಿಂಪಡೆದಿದ್ದಾರೆ.
ಹೊಕ್ಕುಂಡಿ ಮತ್ತು ತಿಗಣಿ ಬಿದರಿ ಭಾಗದಲ್ಲಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಅಲ್ಲಿನ ರೈತರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು. ಈ ವಿಷಯ ತಿಳಿದ ಎಂ. ಬಿ. ಪಾಟೀಲರು ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ರೈತರ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕೆಬಿಜೆಎನ್‌ಎಲ್ ಬಬಲೇಶ್ವರ ವಿಭಾಗದ ಎಕ್ಸಿಕ್ಯೂಟಿವ್ ಎಂಜಿನಿಯರ್ ಜಿ. ಎ. ನಾಗರಾಳ ಮತ್ತು ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂ. ಬಿ. ಪಾಟೀಲರು, ಬಬಲೇಶ್ವರ ಮುಖ್ಯ ಕಾಲುವೆ 1 ಮತ್ತು 2ರ ಡಿಸ್ಟ್ರಿಬ್ಯೂಟರಿ 15 ರಲ್ಲಿ ಈ ಯೋಜನೆ ಬರುತ್ತದೆ. ಇದರಿಂದ ಈ ಭಾಗದ 13000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ. ರೈತರು ಈಗ ಇಟ್ಟಿರುವ ಬೇಡಿಕೆಗಳು ಈಗಾಗಲೇ ಜಾರಿಯಲ್ಲಿರುವ ಯೋಜನೆಯಲ್ಲಿ ಸೇರಿವೆ. ಇದರ ಬಗ್ಗೆ ಯಾರೂ ಆತಂಕ ಪಡಬಾರದು ಎಂದು ರೈತರಿಗೆ ದಾಖಲೆ ಸಮೇತ ಮನವರಿಕೆ ಮಾಡಿಕೊಟ್ಟರು. ಅಲ್ಲದೇ, ಶೀಘ್ರದಲ್ಲಿ ಈ ಯೋಜನೆಯ ಬಾಕಿ ಕಾಮಗಾರಿಗಳೂ ಆರಂಭವಲಿದೆ ಎಂದು ತಿಳಿಸಿದರು. ಅಷ್ಟೇ ಅಲ್ಲ, ತಾವು ರೈತರ ಹಿತಕಾಪಾಡಲು ಸದಾ ಬದ್ಧರಾಗಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದರು. ಈ ಹಿನ್ನೆಲೆಯಲ್ಲಿ ರೈತರು ಧರಣಿ ಸತ್ಯಾಗ್ರಹ ಹಿಂಪಡೆಯುವಂತೆ ಮನವಿ ಮಾಡಿದರು. ಇದರಿಂದ ಸಂತೃಪ್ತರಾದ ರೈತರು ತಮ್ಮ ಧರಣಿಯ್ನು ಹಿಂಪಡೆದರು.
ಈ ಸಂದರ್ಭದಲ್ಲಿ ಕಾಜೇಸಾಬ ಸೋನಾರ, ದುಂಡಪ್ಪ ಜೈನಾಪುರ, ಲಕ್ಕಪ್ಪ ಮುತ್ತು, ಲಾಲಸಾಬ ಸೋನಾರ, ಟಿ. ಕೆ. ಮುತ್ತು, ಸಿದರಾಯ ಸಾಲಿಕೇರಿ, ದುಂಡಪ್ಪ ಬಸರಗಿ, ಮಲ್ಲಯ್ಯಸ್ವಾಮಿ ಹಿರೇಮಠ, ಮುದುಕನಗೌಡ ಪಾಟೀಲ, ನಾಗರಾಜ ಕುಲಕರ್ಣಿ, ರಫೀಕ್ ಸೋನಾರ, ಅರ್ಜುನ ಅಂಬಿಗೇರ, ಸಿದರಾಯ ಬಿರಾದಾರ, ಗುರಪ್ಪ ಜೈನಾಪುರ ಮುಂತಾದವರು ಉಪಸ್ಥಿತರಿದ್ದರು.