ವಿಜಯಪುರ: ಮಾಡಾಳು ವಿರುಪಾಕ್ಷಪ್ಪ ಪಕ್ಕಾ ಬಿ. ಎಸ್. ಯಡಿಯೂರಪ್ಪನವರ ಮನುಷ್ಯ. ಯಡಿಯೂರಪ್ಪ ಅವರನ್ನು ಅಂಜಿಸಿ ದಬಾಯಿಸಲು ಈ ರೇಡ್ ಮಾಡಿರುವ ಸಾಧ್ಯತೆ ಇದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನೀವೇನಾದರೂ ಅಲುಗಾಡಿದರೆ ಇದು ಸ್ಯಾಂಪಲ್ ಎಂಬುದನ್ನು ತೋರಿಸಲು ಈ ರೀತಿ ಸಿಗ್ನಲ್ ಕೊಡುವ ಪ್ರಯತ್ನ ಇದಾಗಿರಬಹುದು. ಹಾಗೆ ನೋಡಿದರೆ ಬಹಳ ಜನರ ಮೇಲೆ ಲೋಕಾಯುಕ್ತ ಧಾಳಿ ನಡೆಸಬೇಕಿತ್ತು ಎಂದು ಹೇಳಿದರು.
ಭ್ರಷ್ಟಾಚಾರ ರಕ್ಷಣೆಗೆ ಕಾಂಗ್ರೆಸ್ ಎಸಿಬಿ ಜಾರಿಗೆ ತಂದಿತ್ತು ಎಂದು ಕೊಡಗು- ಮೈಸೂರು ಸಂಸದ ಪ್ರತಾಪ ಸಿಂಹ್ ಬೆಳಿಗ್ಗೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ನೀಡಿದ್ದ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಲೋಕಾಯುಕ್ತ ಅವಾಗಲೂ ಇತ್ತು. ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಅಂದು ಎಸಿಬಿ ರಚನೆಯಾಗಿತ್ತು. ಎಸಿಬಿ ಕೇವಲ ನಮ್ಮ ರಾಜ್ಯದಲ್ಲಿ ಮಾತ್ರ ಇಲ್ಲ. ಬೇರೆ ಕಡೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿಯೂ ಎಸಿಬಿ ರಚನೆಯಾಗಿದೆ. ಪ್ರತಾಪ ಸಿಂಹ್ ಅಂಥವರಿಗೆ ಏನಾದರೂ ಹೇಳಬೇಕು ಎಂಬ ಕಾರಣದಿಂದ ಹೀಗೆ ಹೇಳಿದ್ದಾರೆ. ಆದರೆ, ಪ್ರತಾಪ ಸಿಂಹ ಅವರು ಸ್ವಲ್ಪ ಸರಿಯಾಗಿ ಅಭ್ಯಾಸ ಮಾಡಿಕೊಂಡು ಹೇಳಿಕೆ ನೀಡಿಲಿ ಎಂದು ಸಲಹೆ ನೀಡುವುದಾಗಿ ಅವರು ತಿಳಿಸಿದರು.
ಪ್ರಮೋದ ಮುತಾಲಿಕ ಅವರು ನರೇಂದ್ರ ಮೋದಿ ಅವರ ಕುರಿತು ನೀಡಿರುವ ಹೇಳಿಕೆಯ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ಹೇಳಿದರು.
ಸಚಿವ ಗೋವಿಂದ ಕಾರಜೋಳ ವಿರುದ್ಧ ವಾಗ್ದಾಳಿ
ಮಾ. 9 ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಬಳಿ ರೇವಣ ಸಿದ್ಧೇಶ್ವರ ಏತ ನೀರಾವರಿ ಯೋಜನೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಎಂ. ಬಿ. ಪಾಟೀಲ ಅವರು, ರೇವಣ ಸಿದ್ಧೇಶ್ವರ ಏತ ನೀರಾವರಿಗಾಗಿ ಸಚಿವ ಗೋವಿಂದ ಕಾರಜೋಳ ಏನು ಮಾಡಿದ್ದಾರೆ? ಈಗ ಬಂದು ಭೂಮಿ ಪೂಜೆ ಮಾಡುತ್ತಿದ್ದಾರೆ. ಈ ಯೋಜನೆ ಕುರಿತು ಇನ್ನೂ ಬೋರ್ಡ್ ಮೀಟಿಂಗ್ ಆಗಿಲ್ಲ. ಏ. 1 ರಿಂದ ಚುನಾವಣೆ ನೀತಿ ಸಂಹಿತೆ ಬರಲಿದೆ. ಇನ್ನು ಕೇವಲ 20 ದಿನಗಳಲ್ಲಿ ಇವರು ಮ್ಯಾಜಿಕ್ ಮಾಡುತ್ತಾರಾ? ಎಂದು ಎಂ. ಬಿ. ಪಾಟೀಲ ಪ್ರಶ್ನಿಸಿದರು.
ಈ ಯೋಜನೆಯ ಕ್ರೆಡಿಟ್ ನಮ್ಮ ಸಮ್ಮಿಶ್ರ ಸರಕಾರಕ್ಕೆ ಹೋಗಬೇಕು. ಸಮ್ಮಿಶ್ರ ಸರಕಾರದಲ್ಲಿ ಅಂದಿನ ಸಿಎಂ ಎಚ್. ಡಿ. ಕುಮಾರಸ್ವಾಮಿ ಅವರು ರೂ. 250 ಕೋ. ಅನುದಾನ ಮೀಸಲಿಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೆ ಯಾಕೆ ಈ ಕೆಲಸ ಆಗಲಿಲ್ಲ. ನಾಲ್ಕು ವರ್ಷ ಆರಾಮಾಗಿ ನಿದ್ದೆ ಮಾಡಿ ಈಗ ಚುನಾವಣೆ ಹತ್ತಿರ ಬಂದಾಗ ರೇವಣ ಸಿದ್ಧೇಶ್ವರ ಏತ ನೀರಾವರಿ ಪ್ರಸ್ತಾಪಿಸಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಟಿಕೆಟ್ ಘೋಷಣೆ ವಿಚಾರ
ಮುಂಬರುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ವಿಷಯದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಗೆಲ್ಲುವ ದಾರಿಯಲ್ಲಿರುವುದರಿಂದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಬಿಜೆಪಿಯಲ್ಲಿ ಟೆಕೆಟ್ ಕೇಳುವವರೇ ಇಲ್ಲ. ಹೀಗಾಗಿ ಅವರು ಅರ್ಜಿ ಕರೆದಿಲ್ಲ. ಜನರ ಅಭಿಪ್ರಾಯ ಅವರಿಗೆ ಗೊತ್ತಾಗಿದೆ. ಎಲ್ಲರೂ ಗೆಲ್ಲುವ ಕುದುರೆ ಬೆನ್ನು ಹತ್ತುತ್ತಾರೆ. ಸೋಲುವ ಕುದುರೆಯನ್ನು ಯಾರು ಬೆಂಬಲಿಸುತ್ತಾರೆ ಎಂಬುದು ಬಿಜೆಪಿಗೆ ಗೊತ್ತಾಗಿದೆ. ಅರ್ಜಿ ಕರೆದರೆ ಯಾರೂ ಹಾಕುವುದಿಲ್ಲ ಎಂಬ ಕಾರಣದಿಂದ ಅವರು ಅರ್ಜಿ ಕರೆದಿಲ್ಲ. ನಮ್ಮ ವಿಜಯಪುರ ನಗರ ಮತಕ್ಷೇತ್ರದಿಂದ 27 ಜನ ಅರ್ಜಿಯನ್ನು ಸಲ್ಲಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದನ್ನು ತೋರಿಸುತ್ತದೆ ಎಂದು ಅವರು ತಿಳಿಸಿದರು.
ಕೇಂದ್ರ ಚುನಾವಣೆ ಸಮಿತಿಯೊಂದಿಗೆ ಚರ್ಚಿಸಿದ ಬಳಿಕ ಒಂದು ಅಥವಾ ಎರಡು ಹಂತಗಳಲ್ಲಿ ಟಿಕೆಟ್ ಘೋಷಣೆಯಾಗಲಿದೆ. ಆಕಾಂಕ್ಷಿಗಳ ಸಂಖ್ಯೆ ಕಡಿಮೆಯಿರುವ ಮತ್ತು ಒಬ್ಬರು ಮಾತ್ರ ಅರ್ಜಿ ಸಲ್ಲಿಸಿರುವ ಮತಕ್ಷೇತ್ರಗಳ ಟಿಕೆಟ್ ಘೋಷಣೆ ಬೇಗ ನಡೆಯಲಿದೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.
ಇಂದಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ 130 ರಿಂದ 140 ಸೀಟುಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಮಾಡಾಳು ವಿರುಪಾಕ್ಷ ಅವರಂಥ ಪ್ರಕರಣಗಳು ಮುಂದುವರೆದರೆ ಕಾಂಗ್ರೆಸ್ 150 ರಿಂದ 160 ಅಥವಾ ವೀರೇಂದ್ರ ಪಾಟೀಲ ಅವರ ಕಾಲದಲ್ಲಿ ಗೆದ್ದಂತೆ 176 ಸೀಟುಗಳನ್ನು ಗೆಲ್ಲಬಹುದು ಎಂದು ಹೇಳಿದರು.
ಇದಕ್ಕೂ ಮೊದಲು, ಲೋಕಾಯುಕ್ತ ಧಾಳಿಯ ಹಿನ್ನೆಲೆಯಲ್ಲಿ ಮಾಡಾಳು ವಿರುಪಾಕ್ಷಪ್ಪ ಬಂಧನ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೋಂಡು ಅವರು ಮಾತನಾಡಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರನ್ನು ಬಂಧಿಸಬೇಕು. ಕೈಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿ ಈ ನಿಗಮ ಬರುವುದರಿಂದ ಸಚಿವ ಮುರುಗೇಶ ನಿರಾಣಿ ಅವರೂ ರಾಜೀನಾಮೆ ನೀಡಬೇಕು. ಅಲ್ಲದೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜೀನಾಮೆ ನೀಡಬೇಕು. ಸರಕಾರವನ್ನು ಕೂಡಲೇ ವಜಾ ಮಾಡಬೇಕು ಎಂದು ಎಂ. ಬಿ. ಪಾಟೀಲ ಆಗ್ರಹಿಸಿದರು.
ಅಲ್ಲದೇ, ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಶಂಕರಣ್ಣ ವಣಕ್ಯಾಳ ಅವರಿಗೆ ಕಾಂಗ್ರೆಸ್ ಮುಖಂಡರು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ಮುಖಂಡರಾದ ಮಾಜಿ ಶಾಸಕ ವಿಠ್ಠಲ ಧೋಂಡಿಬಾ ಕಟಕದೊಂಡ, ಕಾಂತಾ ನಾಯಕ, ವಿದ್ಯಾರಾಣಿ ತುಂಗಳ, ಸುರೇಶ ಘೋಣಸಗಿ, ಅಶೋಕ ಮನಗೂಳಿ, ವಸಂತ ಹೊನಮೋಡೆ, ಡಿ. ಎಲ್. ಚವ್ಹಾಣ, ವಿದ್ಯಾರಾಣಿ ತುಂಗಳ, ರಾಕೇಶ ಕಲ್ಲೂರ ಮುಂತಾದವರು ಉಪಸ್ಥಿತರಿದ್ದರು.