ನೀರು ಕೊಟ್ಟವರ ಉಪಕಾರ ಸ್ಮರಿಸದಿದ್ದರೆ ಅಮೋಘಸಿದ್ಧ ದೇವರು ಮೆಚ್ಚಲ್ಲ- ಎಂ. ಬಿ. ಪಾಟೀಲ

ವಿಜಯಪುರ: ನೀರು ಕೊಟ್ಟವರ ಉಪಕಾರ ಸ್ಮರಿಸದಿದ್ದರೆ ಅಮೋಘಸಿದ್ಧ ದೇವರು ಮೆಚ್ಚಲಾರ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ.

ತಿಕೋಟಾ ತಾಲೂಕಿನ ಅರಕೇರಿ ಗ್ರಾಮದಲ್ಲಿ ನಡೆದ ಬೂತ ಮಟ್ಟದಲ್ಲಿ ಮತದಾರರಿಗೆ ಬಿಜೆಪಿ ವೈಪಲ್ಯಗಳು, ಕಾಂಗ್ರೆಸ್ ಸಾಧನೆಗಳು ಮತ್ತು ಭರವಸೆಗಳ ಕುರಿತು ಅರಿವು ಹಾಗೂ ಕಾಂಗ್ರೆಸ್ ಗ್ಯಾರಂಟಿ ಸ್ಕೀಮ್ ಗ್ಯಾರಂಟಿ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇವರ ಆಶೀರ್ವಾದದಿಂದ ಏತನೀರಾವರಿ ಯೋಜನೆ ರೂಪಿಸಿ ಅಮೋಘಸಿದ್ಧನ ಪಾದಗಳಿಗೆ ನೀರು ಸ್ಪರ್ಷಿಸುವಂತೆ ಮಾಡಿದ್ದೇನೆ.  ಎಲ್ಲ ಭಾರವನ್ನೂ ಅಮೋಘಸಿದ್ಧನ ಮೇಲೆ ಹಾಕಿದ್ದೇನೆ.  ಇದರಿಂದ ಈ ಭಾಗದಲ್ಲಿ ಸಮೃದ್ಧಿ ಯುಗ ಆರಂಭವಾಗಿದೆ.  ನೀರು ಕೊಟ್ಟವರನ್ನು ಸ್ಮರಿಸದಿದ್ದರೆ ಅಮೋಘಸಿದ್ಧ ಮೆಚ್ಚುವುದಿಲ್ಲ ಎಂದು ಹೇಳಿದರು.

ಅರಕೇರಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ. ಬಿ. ಪಾಟೀಲ ಮಹಿಳೆಯರಿಗೆ ಕಾಂಗ್ರೆಸ್ ಸ್ಕೀಂ ಗ್ಯಾರಂಟಿ ಕಾರ್ಡ್ ವಿತರಿಸಿದರು

ಬಿಜೆಪಿಯವರು ಮದ್ಯ ಮಾರುವವರನ್ನು ಬಿಟ್ಟು ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲಿ

ಇದೇ ವೇಳೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನನ್ನ ವಿರುದ್ಧ ಬಿಜೆಪಿ ಮದ್ಯ ಹಂಚುವವರನ್ನು ಬಿಟ್ಟು ಸಚ್ಚಾರಿತ್ರ್ಯವಂತ ಮತ್ತು ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲಿ.  ಇದರಿಂದ ಚುನಾವಣೆಯಲ್ಲಿ ಗೆಲ್ಲುವ ನಮಗೂ ಗೌರವ ಇರುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

ವಿರೋಧಿಗಳು ಕೊರೊನಾ ಸಂದರ್ಭದಲ್ಲಿ ಹೆಚ್ಚಿನ ಬೆಲೆಗೆ ಹೋಂ ಡೆಲಿವರಿ ರೂಪದಲ್ಲಿ ಮದ್ಯ ಮಾರಾಟ ಮಾಡಿದ್ದಾರೆ.  ಆದರೆ, ನಾನು ರೈತರ ಹೊಲಗಳಿಗೆ ಕಾಲುವೆಗಳ ಮೂಲಕ ಹೋಂ ಡೆಲಿವರಿಯಂತೆ ನೀರು ಪೂರೈಸಿದ್ದೇನೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸೋಮನಿಂಗ ಕಟಾವಿ, ಎನ್. ಎಸ್. ಬೆಳ್ಳುಬ್ಬಿ, ಚನ್ನಪ್ಪ ದಳವಾಯಿ ಮಾತನಾಡಿದರು.  ಮುಖಂಡರಾದ ಅಶೋಕ ದಳವಾಯಿ, ಪೀರ ಪಟೇಲ ಪಾಟೀಲ, ಸುರೇಶ ಭಂಡಾರಿ, ಅರ್ಜುನ ರಾಠೋಡ, ಡಿ. ಎಲ್. ಚವ್ಹಾಣ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

ಅರಕೇರಿ ಎಲ್. ಟಿ.- 3 ರಲ್ಲಿ ನಡೆದ ಕಾರ್ಯಕ್ರದಮಲ್ಲಿ ಎಂ. ಬಿ. ಪಾಟೀಲ ಮಾತನಾಡಿದರು

ಮಕ್ಕಳ, ಮೊಮ್ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಯೋಜನೆ ರೂಪಿಸಿಸಲಾಗಿದೆ

ಇದಕ್ಕೂ ಮುಂಚೆ ಅರಕೇರಿ ಎಲ್. ಟಿ. 3ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಎಂ. ಬಿ. ಪಾಟೀಲರು, ಬಬಲೇಶ್ವರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಈಗಾಗಲೇ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.  ಇನ್ನುಳಿದ ಯೋಜನೆಗಳೂ ಶೀಘ್ರದಲ್ಲಿ ಪೂರ್ಣವಾಗಲಿವೆ.  ಈ ಭಾಗದಲ್ಲಿ ಮಹಿಳೆಯರು ಮತ್ತು ಯುವಕರು ಹೆಚ್ಚು ಸ್ವಾವಲಂಬಿಯಾಗಲು ಯೋಜನೆ ರೂಪಿಸಿದ್ದೇವೆ ಎಂದು ತಿಳಿಸಿದರು.

ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಳ ಮೋದಿಯವರ ಅಚ್ಛೆದಿನ್ ಕೊಡುಗೆಗಳಾಗಿವೆ.  ಆದರೆ, ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳಿಂದಾಗಿ ಈ ಭಾಗದಲ್ಲಿ ಗುಳೆ ಹೋಗುತ್ತಿರುವವರ ಪ್ರಮಾಣ ಶೇ. 50ಕ್ಕೂ ಕಡಿಮೆಯಾಗಿದೆ.  ಮುಂದಿನ ಒಂದು ವರ್ಷದಲ್ಲಿ ಈ ಪ್ರಮಾಶ ಶೇ. 90ರಷ್ಟು ಕಡಿಮೆಯಾಗಲಿದೆ.  ಈ ಮೂಲಕ ಮೋದಿ ಮಾಡದ ಕೆಲಸವನ್ನು ನಾವು ಮಾಡಿದ್ದೇವೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಬಂಜಾರಾ ಸಮಾಜದ ಅಭಿವೃದ್ಧಿಗೆ ಬದ್ಧನಾಗಿದ್ದೇನೆ

ಲಂಬಾಣಿ ತಾಂಡಾಗಳ ಅಭಿವೃದ್ಧಿಯ ಮೂಲಕ ಈ ಸುಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧನಾಗಿದ್ದೇನೆ.  ಈಗಾಗಲೇ ಈ ತಾಂಡಾಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದೇನೆ.  ಇನ್ನುಳಿದ ಬಾಕಿ ಕಾಮಗಾರಿಗಳಿಗೂ ಚಾಲನೆ ನೀಡಿ ಪೂರ್ಣಗೊಳಿಸುತ್ತೇನೆ.  ವಿಜಯಪುರ ನಗರದಲ್ಲಿ ಹಾಮುಲಾಲ ದೇವಸ್ಥಾನಕ್ಕಾಗಿ ಬಿ. ಎಲ್. ಡಿ. ಇ ಸಂಸ್ಥೆಗೆ ಸೇರಿದ ರೂ. 10 ಕೋ. ವೆಚ್ಚದ ನಿವೇಶನ ನೀಡಿ, ಮಂದಿರ ನಿರ್ಮಾಣಕ್ಕೆ ರೂ. 3.50 ಕೋ. ವೈಯಕ್ತಿಕ ನೆರವು ನೀಡಿದ್ದೇನೆ.  ಮಾ. 19ರಂದು ಈ ದೇವಸ್ಥಾನ ಲೋಕಾರ್ಪಣೆಯಾಗಲಿದೆ ಎಂದು ಅವರು ತಿಳಿಸಿದರು.

ನಾಲ್ಕು ವರ್ಷ ಬಿಜೆಪಿ ಬರಗಾಲ ಇತ್ತು ಇನ್ನು ಕಾಂಗ್ರೆಸ್ಸಿನಿಂದ ರಾಜಯೋಗ ಆರಂಭವಾಗಲಿದೆ

ಬಿಜೆಪಿಯ ನಾಲ್ಕು ಅಭಿವೃದ್ಧಿಯಲ್ಲಿ ಬರಗಾಲದ ಅವಧಿ ಈಗ ಮುಗಿದಿದೆ.  ಮುಂದೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು, ಅಭಿವೃದ್ಧಿಯ ರಾಜಯೋಗ ಆರಂಭವಾಗಲಿದೆ.  ಬಡವರು, ಕೂಲಿ ಕಾರ್ಮಿಕರು ಸದಾ ಖುಷಿಯಾಗಿರಬೇಕು ಎಂಬುದು ಕಾಂಗ್ರೆಸ್ ಉದ್ದೇಶವಾಗಿದೆ.  ಈಗ ನಾನು ಕೆಲಸ ಮಾಡಿದ್ದೇನೆ.  ಓಟುಗಳ ರೂಪದಲ್ಲಿ ಮತ ಕೇಳುತ್ತಿದ್ದೇನೆ ಎಂದು ಹೇಳಿದ ಅವರು, ಅಕ್ರಮ ಮದ್ಯ ಮಾರಾಟ ತಡೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು.  ಈ ಮೂಲಕ ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ಭವಿಷ್ಯವನ್ನು ಉಜ್ವಲ ಮಾಡೋಣ ಎಂದು ತಿಳಿಸಿದರು.

ಜಿ. ಪಂ. ಮಾಜಿ ಅಧ್ಯಕ್ಷ ಅರ್ಜುನ ಹೀರು ರಾಠೋಡ ಮಾತನಾಡಿ, ನಮ್ಮೂರಿಗೆ ನೀರು ತಂದು ಗುಳೆ ತಪ್ಪಿಸಿರುವ ಎಂ. ಬಿ. ಪಾಟೀಲರಿಗೆ ಶೇ. 99 ರಷ್ಟು ಮತದಾರರ ಬೆಂಬಲವಿದೆ.  ಅವರು ಈ ಭಾಗದಲ್ಲಿ ರಸ್ತೆ, ವಿದ್ಯುತ್, ನೀರು, ಶಾಲೆ, ಕುಡಿಯಲು ನೀರು ಸೇರಿದಂತೆ ಸಕಲ  ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದಾರೆ.  ಇಡೀ ದೇಶದಲ್ಲಿಯೇ ಬಬಲೇಶ್ವರ ಮತಕ್ಷೇತ್ರದ ಲಂಬಾಣಿ ತಾಂಡಾಗಳು ಇಂದು ಅತೀ ಹೆಚ್ಚು ಸಮೃದ್ಧವಾಗಿವೆ.  ಇದಕ್ಕೆಲ್ಲ ಎಂ. ಬಿ. ಪಾಟೀಲ ಅವರೇ ಕಾರಣ.  ಸಾಮಾಜಿಕ ನ್ಯಾಯದಡಿ ಎಲ್ಲ ಸಮುದಾಯದವರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ನೀಡುವ ಮೂಲಕ ಸರ್ವಜನರ ಹಿತ ಕಾಪಾಡಿದ್ದಾರೆ.  ಬಂಜಾರಾ ಸಮುದಾಯದ ಹಾಮುಲಾಲ ದೇವಸ್ಥಾನಕ್ಜಾಗಿ ನಿವೇಶನ ನೀಡಿದ್ದಾರೆ.  ಮಂದಿರ ನಿರ್ಮಿಸಿದ್ದಾರೆ.  ಕಳಸ ಕೊಡಿಸಿದ್ದಾರೆ.  ಎಂ. ಬಿ. ಪಾಟೀಲರು ಹಮ್ಮುಲಾಲ ಮತ್ತು ಸೇವಾಲಾಲರ ಅಪ್ಪಟ ಭಕ್ತರಾಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶಂಕರ ಲಾಲೂ ಪೂಜಾರಿ, ಜಗನು ಪೂಜಾರಿ, ಅನಸೂಬಾಯಿ ರಾಠೋಡ, ಮನೋಹರ ಪೂಜಾರಿ, ಹುಸೇನಸಾಬ ಮನಗೂಳಿ, ಸಂತೋಷ ನಾಯಕ ಪ್ರಕಾಶ ಜಾಧವ ಮುಂತಾದವರು ಉಪಸ್ಥಿತರಿದ್ದರು.

ನಂತರ ಎಂ. ಬಿ. ಪಾಟೀಲರು ಅರಕೇರಿ ಎಲ್. ಟಿ.- 1,ಬರಟಗಿ ಎಲ್. ಟಿ.- 2, ಬರಟಗಿ ಗ್ರಾಮ, ಹಂಚಿನಾಳ ಪಿ. ಎಚ್. ಎಲ್. ಟಿ-2 ಮತ್ತು ಹಂಚಿನಾಳ ಪಿ. ಎಚ್. ಗ್ರಾಮಗಳಲ್ಲಿ ನಡೆದ ಕಾರ್ಯಕ್ರಮಗಲ್ಲಿ ಪಾಲ್ಗೋಂಡರು.

Leave a Reply

ಹೊಸ ಪೋಸ್ಟ್‌