ವಿಜಯಪುರ: 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಪಂಚಮಸಾಲಿ ಸಮುದಾಯದವರು ನಡೆಸುತ್ತಿರುವ ಹೋರಾಟ 50 ದಿನ ಪೂರೈಸಿದ್ದು, ರಾಜ್ಯದ ನಾನಾ ಕಡೆ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಲಾಗಿದೆ.
ಬೆಂಗಳೂರಿನಲ್ಲಿ ಹೆದ್ದಾರಿ ತಡೆ
ಬೆಂಗಳೂರಿನಲ್ಲಿ ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಬೆಂಗಳೂರು- ನೆಲಮಂಗಲ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಯಿತು. ಸಮಾಜದ ಮುಖಂಡರೊಂದಿಗೆ ರಸ್ತೆಯಲ್ಲಿಯೇ ಕುಳಿತ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೇಡಿಕೆ ಈಡೇರಿಸುವಂತ ಆಗ್ರಹಿಸಿದರು.
ವಿಜಯಪುರದಲ್ಲಿಯೂ ಪ್ರತಿಭಟನೆ
ಇತ್ತ ಬಸವನಾಡು ವಿಜಯಪುರ ಜಿಲ್ಲೆಯಲ್ಲಿಯೂ ಪ್ರತಿಭಟನೆ ನಡೆಸಲಾಯಿತು. ತಿಡಗುಂದಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 52 ರಲ್ಲಿ ರಸ್ತೆಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಲಾಯಿತು. ವಿಜಯಪುರ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಪ್ರೇಮಾನಂದ ಬಿರಾದಾರ ನೇತ್ರತ್ವದಲ್ಲಿ ನೂರಾರು ಪಂಚಮಸಾಲಿ ಮುಖಂಡರು ಈ ಪ್ರತಿಭಟನೆ ನಡೆಸಿದರು.
ನಿಡಗುಂದಿ ಪಟ್ಟಣದಲ್ಲಿ ಪಂಚಮಸಾಲಿ ಮುಖಂಡ ಶಂಕರಗೌಡ ಬಿರಾದಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ನೂರಾರು ವಾಹನಗಳು ರಸ್ತೆಯಲ್ಲಿಯೇ ನಿಂತಿದ್ದವು.
ದೇವರ ಹಿಪ್ಪರಗಿಯಲ್ಲೂ ರಸ್ತೆತಡೆ ನಡೆಸಲಾಯಿತು. ದೇವರ ಹಿಪ್ಪರಗಿ ಪಟ್ಟಣದಲ್ಲಿ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ತಡೆ ನಡೆಸಲಾಯಿತು.
ತಾಳಿಕೋಟೆಯಲ್ಲೂ ಪ್ರತಿಭಟನೆ ನಡೆಯಿತು. ತಾಳಿಕೋಟಿ ಪಟ್ಟಣದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದ ದೇವರ ಹಿಪ್ಪರಗಿ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಪ್ರತುಭಟನೆಯಲ್ಲಿ ಪಾಲ್ಗೊಂಡರು.