ಪ್ರಜಾಪ್ರಭುತ್ವ ದೇಶ ಬಲಿಷ್ಠಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ- ಜಿಲ್ಲಾಧಿಕಾರಿ ಡಾ. ದಾನಮ್ಮನವರ

ವಿಜಯಪುರ: ಪ್ರಜಾಪ್ರಭುತ್ವ ದೇಶವನ್ನು ಬಲಿಷ್ಟಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಚುನಾವಣಾ ಪೂರ್ವ ಹಂತದ ಹಾಗೂ ಚುನಾವಣೆ ದಿನದ ಮತದಾನವು ಪಾರದರ್ಶಕ, ನ್ಯಾಯಯುತ, ಮುಕ್ತ, ಹಾಗೂ ಶಾಂತಿಯುತವಾಗಿ ಜರುಗಿಸುವ ಸದುದ್ದೇಶದಿಂದ ಇಂದು ಒಂದು ಹಂತದ ತರಬೇತಿ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುಣಾವಣಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ವಿದ್ಯುನ್ಮಾನ ಮತಯಂತ್ರಗಳ ನಿರ್ವಹಣೆ, ಚುನಾವಣಾ ವಿಷಯ ಹಾಗೂ ಮಾದರಿ ನೀತಿ ಸಂಹಿತೆ ಕುರಿತು ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸೆಕ್ಟರ್ ಅಧಿಕಾರಿ, ಚುನಾವಣೆ ಅಧಿಕಾರಿ, ಸಹಾಯಕ ಚುನಾವಣಾ ಅಧಿಕಾರಿ, ಮತಗಟ್ಟೆ ಅಧಿಕಾರಿ, ವಿಚಕ್ಷಣಾ ದಳ ಅಧಿಕಾರಿ ಸೇರಿದಂತೆ 600 ರಿಂದ 700 ಜನರು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗುವುದು.  ಚುನಾವಣೆ ಸಂದರ್ಭದಲ್ಲಿ ಅಧಿಕಾರಿಗಳಿಗೆ ವಹಿಸಿದ ಜವಾಬ್ದಾರಿಯನ್ನು ನಿರ್ದಿಷ್ಟ ಸಮಯದಲ್ಲಿ ಪೂರ್ಣಗೊಳಿಬೇಕಾಗಿರುವುದರಿಂದ ಪೂರ್ವ ತಯಾರಿ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ನಿಯೋಜಿತ ಎಲ್ಲ ಅಧಿಕಾರಿ-ಸಿಬ್ಬಂದಿಗಳು ಮತದಾನದ ಸಂದರ್ಭದಲ್ಲಿ ನಿಯಮಗಳನ್ನು ಪಾಲಿಸುವುದು ಮುಖ್ಯವಾಗಿರುತ್ತದೆ. ಈ ನಿಯಮಗಳ ಕುರಿತು ಅರಿವು ಹಾಗೂ ತರಬೇತಿ ನೀಡುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಸೆಕ್ಟರ್ ಅಧಿಕಾರಿಗಳು ಮತಗಟ್ಟೆಗಳಿಗೆ ಪ್ರತಿದಿನ ಎರಡು ಬಾರಿ ಭೇಟಿ ನೀಡಬೇಕು.  ರೆವಿನ್ಯೂ ಸೆಕ್ಟರ್ ಆಫೀಸರ್ ಮತ್ತು ಪೋಲಿಸ್ ಸೆಕ್ಟರ್ ಆಫೀಸರ್ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಸೆಕ್ಟರ್ ಆಫಿಸರ್ ಮತದಾನ ಕೇಂದ್ರದ ಪೋಲಿಂಗ್ ಸ್ಟೇಶನ್ ಹೆಸರು, ಭೌಗೋಳಿಕ ಮಾಹಿತಿ ಹೊಂದಿರಬೇಕು. ಇವಿಎಂ ಕುರಿತು ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ತರಬೇತಿ ಕಾರ್ಯಕ್ರಮದಲ್ಲಿ ಡಿಸಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮಾತನಾಡಿದರು

 

ಅಧಿಕಾರಿ-ಸಿಬ್ಬಂದಿಗಳು ಹಿಂದೆ ಹಲವು ಚುನಾವಣಾ ಕಾರ್ಯ ನಿರ್ವಹಿಸಿದ್ದರೂ ಕೂಡ ಈ ಸಲ ನಡೆಯಲಿರುವ 2023ರ ವಿಧಾನಸಭೆ ಚುನಾವಣೆ ಪಾರದರ್ಶಕ ಹಾಗೂ ಶಾಂತಿಯುತವಾಗಿ ಜರುಗಿಸುವ ನಿಟ್ಟಿನಲ್ಲಿ ಸನ್ನದ್ಧಗೊಳ್ಳಬೇಕಾಗಿದೆ. ಚುನಾವಣೆ, ಮತದಾನದ ಕ್ರಮಗಳ ಸಂಪೂರ್ಣ ಮಾಹಿತಿ, ನೀತಿ ಸಂಹಿತೆಯ ಕಾಯ್ದೆ-ಕಾನೂನಿನ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ಅರ್ಥೈಸಿಕೊಳ್ಳಬೇಕು. ಚುನಾವಣೆ ಪೂರ್ವ ಹಂತದಿಂದ, ಮತದಾನ ಮುಕ್ತಾಯಗೊಳ್ಳುವವೆರೆಗೂ ಎಲ್ಲರ ಸಹಕಾರ, ಸಮ್ಮತಿ ಬಹುಮುಖ್ಯವಾಗಿದೆ ಎಂದು ಡಿಸಿ ಹೇಳಿದರು.

ಚುನಾವಣೆ ಸಂದರ್ಭದಲ್ಲಿರುವ ಹತ್ತು ಹಲವಾರು ಸಮಸ್ಯೆಗಳು ಎದುರಾದರೂ ಸಹ  ಯಾವುದೇ ಒತ್ತಡಕ್ಕೆ ಒಳಗಾಗದೇ ನಿಷ್ಠೆ, ನ್ಯಾಯಸಮ್ಮತವಾಗಿ ಕಾರ್ಯನಿರ್ವಹಿಸುವಂತೆ ಅವರು ಕರೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಮಾತನಾಡಿ, ಕಳೆದ ಚುನಾವಣೆಗಳಲ್ಲಿ ಅತಿ ಕಡಿಮೆ ಮತದಾನವಾದ ಪ್ರದೇಶಗಳನ್ನು ಗುರುತಿಸಿ, ಸ್ವೀಪ್ ಚಟುವಟಿಕೆಗಳನ್ನು ಆಯೋಜಿಸಿಬೇಕು.  ಮತದಾರರಲ್ಲಿ ಜಾಗೃತಿ ಮೂಡಿಸಿ, ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಬೇಕು.  ಚುನಾವಣೆ ಕಾರ್ಯಕ್ಕೆ ನಿಯೋಜಿತ ಅಧಿಕಾರಿ-ಸಿಬ್ಬಂದಿಗಳು ಜವಾಬ್ದಾರಿಯಿಂದ ಚುನಾವಣಾ ಆಯೋಗದ ನಿರ್ದೇಶಾನುಸಾರ ನಿಯಮಗಳನ್ನು ಪಾಲಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.

ಪ್ರಾಧ್ಯಾಪಕ ಹಾಗೂ ರಾಷ್ಟ್ರ ಮಟ್ಟದ ಮಾಸ್ಟ್‍ರ ಟ್ರೈನರ್ ಡಾ. ಶಶಿಶೇಖರ ರೆಡ್ಡಿ ವಿದ್ಯುನ್ಮಾನ ಮತಯಂತ್ರಗಳ ನಿರ್ವಹಣೆ, ಚುನಾವಣಾ ವಿಷಯ ಹಾಗೂ ಮಾದರಿ ನೀತಿ ಸಂಹಿತೆ ಕುರಿತು ತರಬೇತಿ ನೀಡಿ ಮಾತನಾಡಿದ ಅವರು, ಚುನಾವಣೆ ಹಂತದ ನೀತಿ-ನಿಯಮ, ಚುನಾವಣೆಯಲ್ಲಿ ರೂಪಿತವಾದ ಅನುಚ್ಛೇಧಗಳು, ಕಾಯ್ದೆ-ಕಾನೂನಿನ ವಿವರಣೆ, ನೀತಿ ಸಂಹಿತೆ, ವಿದ್ಯುನ್ಮಾನ ಮತಯಂತ್ರದಲ್ಲಿ ಬದಲಾವಣೆಗೊಂಡ ತಂತ್ರಜ್ಞಾನ ಬಳಕೆ, ಮತದಾನ ನಡೆಯುವ ವೇಳೆಯಲ್ಲಿ ಕಡ್ಡಾಯವಾಗಿ ಕ್ರಮ ಕೈಗೊಳ್ಳುವ ಕುರಿತು ಮಾಹಿತಿ ಸಮೇತ ತರಬೇತಿ ನೀಡಿದರು.

ಸೂಕ್ಷ್ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳ ವ್ಯಾಪ್ತಿಯ ಮತದಾರರನ್ನು ಗುರುತಿಸಿ ಮತದಾರರಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಬೇಕು. ಆರ್‍ಒ ಅವರು ನೀಡುವ ಸೂಕ್ತ ಮಾಹಿತಿ ವರದಿಯನ್ನು ಸೆಕ್ಟರ್ ಆಫಿಸರ್ಸ್ ಹಾಗೂ ಎಎಲ್‍ಎಮ್‍ಟಿ ಅಧಿಕಾರಿಗಳು ಗಮನದಲ್ಲಿಟ್ಟುಕೊಳ್ಳಬೇಕು. ಚುನಾವಣೆ ಜರುಗುವ ಪ್ರದೇಶಗಳಲ್ಲಿ ನಿರಂತವಾಗಿ ಸಂಚರಿಸಿ ಅಲ್ಲಿನ ನಿಗದಿತ ನಮೂನೆ ವಿವರಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು. ಎಲ್ಲ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿಕೊಂಡು  ಚುನಾವಣೆ ನಡೆಯುವ ದಿನದಂದು ಸಾರ್ವಜನಿಕರಿಗೆ ಅವಶ್ಯಕತೆ ಇರುವ ಶುದ್ಧ ನೀರು, ತಂಪು ಪಾನೀಯ, ನೆರಳಿನ ವ್ಯವಸ್ಥೆ ಕಲ್ಪಿಸಬೇಕು. ಉತಮವಾಗಿ ಕಾರ್ಯನಿರ್ವಹಿಸಿ, ಸೆಕ್ಟರ್ ಅಧಿಕಾರಿಗಳಿಗೆ ನೀಡಿದ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ತಿಳಿಸಿದರು.

ಮಾದರಿ ನೀತಿ ಸಂಹಿತೆ ಜಾರಿ ಅಧಿಕಾರಿಯ ಕರ್ತವ್ಯ, ಸ್ವೀಪ್ ನೋಡಲ್ ಅಧಿಕಾರಿಗಳ ಕರ್ತವ್ಯ, ಕಾನೂನು ಸುವ್ಯವಸ್ಥೆ ಕಾಪಾಡುವ ನೋಡಲ್ ಅಧಿಕಾರಿ ಕರ್ತವ್ಯ, ವಿಕಲಚೇತನ ಮತದಾರರನ್ನು ಗುರುತಿಸುವ ನೋಡಲ್ ಅಧಿಕಾರಿ ಕರ್ತವ್ಯ, ಮಾನವ ಸಂಪನ್ಮೂಲ ನಿರ್ವಹಣಾ ನೋಡಲ್ ಅಧಿಕಾರಿ, ಕಿರು ಸಂದೇಶ ನಿಗಾವಣೆ ಮತ್ತು ಸಂಪರ್ಕ, ಸಾರಿಗೆ ನಿರ್ವಹಣೆ ನೋಡಲ್ ಅಧಿಕಾರಿ, ತರಬೇತಿ ನೋಡಲ್ ಅಧಿಕಾರಿ, ಚುನಾವಣಾ ಸಾಮಗ್ರಿ ಪೂರೈಸುವ ನೊಡಲ್ ಅಧಿಕಾರಿ, ಚುನಾವಣಾ ವೆಚ್ಚ ನಿರ್ವಹಿಸುವ ನೊಡಲ್ ಅಧಿಕಾರಿ, ವೀಕ್ಷಕರು ಮತ್ತು ಶಿಷ್ಠಾಚಾರ ನೋಡಲ್ ಅಧಿಕಾರಿ, ಸಹಾಯವಾಣಿ ಮತ್ತು ದೂರು ನಿವಾರಣಾ ನೋಡಲ್ ಅಧಿಕಾರಿ, ಭದ್ರತಾ ಕೊಠಡಿ ಮತ್ತು ಮತ ಏಣಿಕೆ ನೋಡಲ್ ಅಧಿಕಾರಿ, ಮೈಕ್ರೋ ಅಬ್ಜರ್ವರ್ ನೊಡಲ್ ಅಧಿಕಾರಿಗಳ ಕರ್ತವ್ಯ, ಚುನಾವಣಾ ಸಂಬಂಧಿತ ನಕಾಶೆ ನೋಡಲ್ ಅಧಿಕಾರಿ, ವಲಸೆ ಮತದಾರರ ನಿಗಾ ವಹಿಸುವ ನೊಡಲ್ ಅಧಿಕಾರಿಗಳ ಚುನಾವಣಾ ಕರ್ತವ್ಯ ಹಾಗೂ ನಿರ್ವಹಣೆ ಕುರಿತು ತರಬೇತಿ ಅವರು ನೀಡಿದರು.

ಈ ತರಬೇತಿ ಕಾರ್ಯಕ್ರಮದಲ್ಲಿ  ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಇಂಡಿ ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ, ಎಲ್ಲ ಮತ ಕ್ಷೇತ್ರಗಳ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು, ಜಿಲ್ಲಾ ಮತ್ತು ವಿಧಾನಸಭಾ ಮತಕ್ಷೇತ್ರಗಳ ಮಾಸ್ಟರ್ ಟ್ರೇನರ್‍ಗಳು, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌