ಹೈಕೋರ್ಟ್ ನ್ಯಾಯಮೂರ್ತಿಗಳಿಂದ ವಿಜಯಪುರದಲ್ಲಿ ಗಾಂಧಿ ಭವನ ವೀಕ್ಷಣೆ

ವಿಜಯಪುರ:  ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಎಸ್.ಸುನಿಲ್ ದತ್ತ ಯಾದವ್ ಹಾಗೂ ನ್ಯಾಯಮೂರ್ತಿಗಳಾದ ಎಸ್.ರಾಚಯ್ಯ ಅವರು ಶನಿವಾರ ಬೆಳಗ್ಗೆ ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಗಾಂಧಿ ಭವನಕ್ಕೆ ಭೇಟಿ ನೀಡಿ,ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಎಸ್. ಸುನೀಲದತ್ತ ಯಾದವ ಮಾತನಾಡಿ, ಮಹಾತ್ಮಾ ಗಾಂಧೀಜಿಯವರ ತತ್ವ ಸಿದ್ಧಾಂತಗಳು ಅವರ ವಿಚಾರಧಾರೆಗಳಲ್ಲಿರುವ ಮಾಹಿತಿ ಉಪಯುಕ್ತ ಸಮಗ್ರ ಮಾಹಿತಿ ಈ ಭವನದ ಮೂಲಕ ನೀಡಿದವರ ಶ್ರಮ ಎದ್ದು ಕಾಣುತ್ತಿದೆ.ಮುಂಬರುವ ದಿನಗಳಲ್ಲಿ ಗಾಂಧಿ ಭವನವು ಗಾಂಧಿ ಚಿಂತನಾಶೀಲತೆ ನಿರಂತರವಾಗಿರಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.

ರಾಜ್ಯ ಹೈಕೊರ್ಟ್ ನ್ಯಾಯಮೂರ್ತಿಗಳು ವಿಜಯಪುರ ನಗರದಲ್ಲಿರುವ ಗಾಂಧಿ ಭವವಕ್ಕೆ ಭೇಟಿ ನೀಡಿದರು

ನ್ಯಾಯಮೂರ್ತಿ ಎಸ್. ರಾಚಯ್ಯ ಅವರು ಗಾಂಧಿ ಭವನದಿಂದ ಆಕರ್ಷಣೆಯೇ ಗಾಂಧೀಜಿಯವರ ಜೀವನ ಯಶೋಗಾಥೆಗಳ ಆಗರ ಈ ಭವನ. ಅದರಲ್ಲಿಯೂ ಗ್ರಂಥಾಲಯದಲ್ಲಿ ಅತಿ ಹೆಚ್ಚು ವಿದ್ಯಾರ್ಥಿ,ವಿದ್ಯಾರ್ಥಿನಿಯರು ಓದುತ್ತಿರುವುದು ಸಂತೋಷ. ಇಲ್ಲಿನ ಮಾಹಿತಿ ಕಣಜ ಅದ್ಭುತ. ಸ್ವಚ್ಛತೆಗೆ ಆದ್ಯತೆ ನೀಡಿದೆ. ಇದೇ ರೀತಿ ಮುಂದೆಯೂ ಗಾಂಧಿ ಭವನದ ಮೂಲಕ ಗಾಂಧಿಜಿಯವರ ಚಿಂತನೆ ಪಸರಿಸಿಲಿ ಎಂದು ಸಂದರ್ಶಕರ ಪುಸ್ತಕದಲ್ಲಿ ದಾಖಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಹೊಸಮನಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ನಿರ್ಮಿತಿ ಕೇಂದ್ರದ ಯೋಜನಾ ಅಭಿಯಂತರ ಎಸ್. ಎಂ. ದಾನಿ, ಗಾಂಧಿ ಭವನ ನಿರ್ವಹಣೆ ಸಮಿತಿ ಸದಸ್ಯ ನಿಲೇಶ ಬೇನಾಳ ಅವರು ಗಾಂಧಿ ಭವನದ ಕುರಿತಾಗಿ ಮಾಹಿತಿ ನೀಡಿದರು.

ಸಮಿತಿ ಸದಸ್ಯರಾದ ಪೀಟರ್ ಅಲೆಕ್ಸಾಂಡರ್, ಫಿರೋಜ್ ರೋಜಿಂದಾರ್, ಸುರೇಶ್ ಗೊಣಸಗಿ ಇತರರು ಉಪಸ್ಥಿತರಿದ್ದರು.

ಗಾಂಧಿ ಭವನ ನಿರ್ವಹಣಾ ಸಮಿತಿ ಸಭೆ :ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ‘ಗಾಂಧಿ ಭವನ’ದಲ್ಲಿ ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಗಾಂಧಿ ಭವನ ನಿರ್ವಹಣಾ ಸಮಿತಿ ಸಭೆ ನಡೆಯಿತು.

ಮಹಾತ್ಮಾ ಗಾಂಧೀಜಿಯವರ ಜೀವನದಾರ್ಶ ಹಾಗೂ ಮಾಹಿತಿ ಆಗರವನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ವಿಜಯಪುರ ನಗರದಲ್ಲಿರುವ ಗಾಂಧಿ ಭವನಕ್ಕೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಸೂಕ್ತ ಪ್ರಚಾರ ಕೈಗೊಳ್ಳಲು ಸಭೆಯಲ್ಲಿ ಚರ್ಚಿಸಿ, ಗಾಂಧಿ ಭವನಕ್ಕೆ ವಿವಿಧ ಜಿಲ್ಲೆ, ರಾಜ್ಯಗಳಿಂದ ಬರುವ ಪ್ರವಾಸಿಗರು ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗಾಂಧಿ ಭವನ ಕುರಿತು ಪ್ರಚಾರ ಪಡಿಸಿ, ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಚರ್ಚಿಸಲಾಯಿತು.

ಇಂದಿನ ಸಭೆಯಲ್ಲಿ ಚರ್ಚಿಸಿದ ಎಲ್ಲಾ ವಿಷಯಗಳನ್ನು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದು ಅನುಮತಿ ಕೋರಲಾಗುವುದೆಂದು ಸಭೆ ಆಧ್ಯಕ್ಷತೆ ವಹಿಸಿದ್ದ ಉಪ ವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ  ಸಭೆಗೆ ತಿಳಿಸಿದರು.

ಸಭೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ಗಾಂಧಿ ಭವನದ ಸದಸ್ಯ ಕಾರ್ಯದರ್ಶಿ ಅಮರೇಶ ದೊಡಮನಿ, ಸಮಿತಿ ಸದಸ್ಯರಾದ ಫಿರೋಜ್ ರೋಜಿಂದಾರ್,ಪೀಟರ್ ಅಲೆಕ್ಸಾಂಡರ್,ಸುರೇಶ ಗೊಣಸಗಿ ಹಾಗೂ ನೇತಾಜಿ ಗಾಂಧಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌