ವಿಜಯಪುರ: ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಅದಕ್ಕಾಗಿಯೇ ದೇಶದಾದ್ಯಂತ ಬಿಜೆಪಿಗೆ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ ಎಂದು ನಗರ ಶಾಸಕ ಬಸನಗೌಡ ರಾ ಪಾಟೀಲ ಯತ್ನಾಳ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಇಡೀ ಜಗತ್ತಿಗೆ ಭಯ ಹುಟ್ಟಿಸಿದ್ದ ಕೊರಾನಾ ನಿರ್ವಹಣೆಯಲ್ಲಿ ಭಾರತ ಮಾದರಿ ಆಗಿದೆ. ಮುಂದುವರೆದ ಹಾಗೂ ಅತೀ ಕಡಿಮೆ ಜನಸಂಖ್ಯೆ ಹೊಂದಿರುವ ದೇಶ ಮಾಡಲಾಗದ ಸಾಧನೆಯನ್ನು ಭಾರತ ಮಾಡಿದ್ದು, ಕೋವಿಡ್ ಲಸಿಕೆ ನೀಡುವಲ್ಲಿ ಭಾರತ ವಿಶ್ವದಲ್ಲಿಯೇ ನಂಬರ್ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಪ್ರತಿ ಕುಟುಂಬ ಸ್ವಾವಲಂಬಿಯಾಗಿ ಬದುಕು ಸಾಗಿಸುವಂತೆ ಮಾಡುವುದೇ ನಿಜವಾದ ಅಭಿವೃದ್ಧಿ. ಆ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಲ್ಲ ರೀತಿಯಿಂದಲೂ ಶ್ರಮಿಸುತ್ತಿದೆ. ಸುರಕ್ಷತೆ ದೃಷ್ಟಿಯಿಂದಲೂ ದಿಟ್ಟತನದಿಂದ ನಿರ್ಧಾರ ತೆಗೆದುಕೊಳ್ಳುತ್ತಿದೆ. ಅದಕ್ಕಾಗಿಯೇ ದೇಶದಲ್ಲಿ ಬಾಂಬ ಸ್ಪೋಟ್ ಮತ್ತಿತರೆ ಅಹಿತಕರ ಘಟನೆಗಳಿಗೆ ವಿರಾಮ ಕೊಡಲಾಗಿದೆ. ಅದೇ ವ್ಯವಸ್ಥೆ ವಿಜಯಪುರ ನಗರದಲ್ಲೂ ಇಡಲಾಗಿದೆ. ಯಾರು ಕೂಡ ತುಟಿ ಪಿಟಕ್ ಅನ್ನಂಗಿಲ್ಲ ಎಂದು ಅವರ ಹೇಳಿದರು.
ನಗರದಲ್ಲಿ ಇತಿಹಾಸದಲ್ಲೇ ಆಗದ ಅಭಿವೃದ್ಧಿ ಕಾರ್ಯಗಳು ಕಳೆದ ಐದು ವರ್ಷಗಳಲ್ಲಿ ಆಗಿದೆ. 20 ವರ್ಷಗಳಾದರೂ ನಮ್ಮ ರಸ್ತೆಗಳು ಹಾಳಾಗುವುದಿಲ್ಲ. ಅಷ್ಟೊಂದು ಗುಣಮಟ್ಟದ ಕಾಮಗಾರಿಗಳು ಆಗಿವೆ. ಬೇರೆಯವರಂತೆ ಪರ್ಸೆಂಟೆಜ್ ಪಡೆದಿಲ್ಲ ಎಂದು ಹೇಳಿದರು.
ಮಾ. 10 ರಂದು ವಿಜಯಪುರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ
ಮಾ.10 ರಂದು ನಡೆಯುವ ವಿಜಯ ಸಂಕಲ್ಪ ಯಾತ್ರೆ ಇಡೀ ರಾಜ್ಯಕ್ಕೆ ಮಾದರಿ ಆಗುವಂತೆ ವಿಜಯಪುರದಲ್ಲಿ ನಡೆಯಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಮೂಲಕ ಯಶಸ್ವಿಗೊಳಿಸಬೇಕು. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಬಿಜೆಪಿಗೆ ಹೊಸ ಹುಮ್ಮಸ್ಸು ತಂದಿದೆ. ರಾಜ್ಯ, ರಾಷ್ಟ್ರ ನಾಯಕರು ಕರೆ ಮಾಡಿ ಶ್ಲಾಘಿಸಿದ್ದಾರೆ ಎಂದು ಯತ್ನಾಳ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಮಳುಗೌಡ ಬಿರಾದಾರ, ರಾಜ್ಯ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿರಾದಾರ, ಮಲ್ಲಿಕಾರ್ಜುನ ಜೋಗೂರ, ನಗರ ಮಂಡಳ ಪ್ರಧಾನ ಕಾರ್ಯದರ್ಶಿ ಭರತ ಕೋಳಿ, ಪಾಪುಸಿಂಗ್ ರಜಪೂತ, ಮಹಿಳಾ ಘಟಕದ ಅಧ್ಯಕ್ಷೆ ಛಾಯಾ ಮಸಿಯವರ ಮುಂತಾದವರು ಉಪಸ್ಥಿತರಿದ್ದರು.