ವಿಜಯಪುರ: ಕೃಷ್ಣಾಭಾಗ್ಯ ಜಲ ನಿಗಮ ಹಾಗೂ ಕೆ ಆರ್ ಐ ಡಿ ಎಲ್ ವತಿಯಿಂದ ನಗರದ ವಾರ್ಡ ನಂ. 2 ಆಶ್ರಯ ಕಾಲನಿಯ ಖಾಜಾ ಅಮೀನ ದರ್ಗಾ ಹತ್ತಿರ ನಿರ್ಮಿಸಲಾಗಿರುವ ಶ್ರೀ ಶಿವಶರಣ ಮಾದಾರ ಚೆನ್ನಯ್ಯ ಸಮುದಾಯ ಭವನವನ್ನು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೊಳ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಎಸ್ ಸಿ ಪಿ- ಟಿ ಎಸ್ಪಿ ಯೋಜನೆಯಡಿ ರೂ. 3.55 ಕೋ, ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಿರುವ ಶ್ರೀ ಶಿವಶರಣ ಮಾದಾರ ಚನ್ನಯ್ಯ ಭವನವನ್ನು ಅತ್ಯುತ್ತಮವಾಗಿ ನಿರ್ವಹಿಸಿಕೊಂಡು ಹೋಗಬೇಕು. ಎಲ್ಲ ಸಮಾಜದ ಉಪಯೋಗ ಕಲ್ಪಿಸುವ ದೃಷ್ಟಿಯಿಂದ ಭವನ ನಿರ್ಮಿಸಲಾಗಿದ್ದು, ಈ ಭವನದದಲ್ಲಿ ಎಲ್ಲ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಭವನದಲ್ಲಿ ಮುಖ್ಯವಾಗಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಈ ಭವನ ಸ್ವಚ್ಛ ಸುಂದರವಾಗಿಡಬೇಕು. ಈ ಭವನದ ಸದುಪಯೋಗ ಪಡೆದುಕೊಳ್ಳುವ ಜವಾಬ್ದಾರಿ ಎಲ್ಲ ಸಮಾಜದ ಮೇಲಿದ್ದು, ಒಗ್ಗಟ್ಟಾಗಿ ಭವನ ನಿರ್ವಹಣೆ ಮಾಡುವಂತೆ ಸಲಹೆ ನೀಡಿದ ಅವರು, ಎಲ್ಲ ಸಮುದಾಯದ ಜನರು ಭವನದ ಸದ್ಭಳಕೆ ಮಾಡಿಕೊಳ್ಳುವಂತೆ ಅವರು ಕರೆ ನೀಡಿದರು.
ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಶ್ರೀ ಶಿವಶರಣ ಮಾದಾರ ಚನ್ನಯ್ಯ ಸಮುದಾಯ ಭವನ ನಿರ್ಮಾಣ ಮಾಡುವುದರ ಮೂಲಕ ಸರ್ಕಾರ ಸಮುದಾಯಕ್ಕೆ ನೀಡಿದ ಕೊಡುಗೆಯಾಗಿದೆ. ಈ ಭವನ ನಿರ್ಮಾಣದಿಂದ ಎಲ್ಲ ಸಮುದಾಯದವರ ಕಾರ್ಯಕ್ರಮಕ್ಕೆ ಅನುಕೂಲ ಕಲ್ಪಿಸಲಾಗಿದೆ. ಎಲ್ಲ ಸಮಾಜದವರು ಒಗ್ಗಟ್ಟಾಗಿ ನಿರ್ವಹಿಸಿಕೊಂಡು ಹೋಗಬೇಕು ಎಂದು ಹೇಳಿದರು.
ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಎಸ್‍ಸಿಪಿ ಟಿಎಸ್‍ಪಿ ಅನುದಾನ ಸದ್ಭಳಕೆಯಾಗಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸ್ವಾವಲಂಬನೆ ಜೀವನ ನಿರ್ವಹಿಸಲು ಅವರ ಆರ್ಥಿಕತೆ ಹೆಚ್ಚಿಸುವ ನಿಟ್ಟಿನಲ್ಲಿ ಗೂಡ್ಸ ವಾಹನ್ ನೀಡುವ ಯೋಜನೆ ಜಾರಿಗೆ ತರಲಾಗಿದೆ. ನಗರದಲ್ಲಿ ಎಲ್ಲಾ ಸಮುದಾಯಗಳ ಭವನ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ರಸ್ತೆ ಸುಧಾರಣೆ ಪೂರ್ಣಗೊಳ್ಳುತ್ತಿವೆ. ಪ್ರತಿಯೊಂದು ರಸ್ತೆಗಳಿಗೆ ದೇಶಭಕ್ತರ ಹೆಸರುಗಳು ಇಡಲಾಗಿದೆ. ನಗರದಲ್ಲಿ ಸುಮಾರು 11 ಮಹನೀಯರ ಮೂರ್ತಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿದರು. ಮಹಾನಗರ ಪಾಲಿಕೆ ಸದಸ್ಯ ಅಲ್ತಾಫ್ ಇಟಗಿ, ಎಎಸ್ಪಿ ಶಂಕರ ಮಾರಿಹಾಳ, ಡಿವೈಎಸ್ಪಿ ಸಿದ್ದೇಶ್ವರ, ಕೆ ಆರ್ ಐ ಡಿ ಎಲ್ ಎಕ್ಸಿಕ್ಯೂಟಿವ್ ಎಂಜಿನಿಯರ್ ತಿಮ್ಮರಾಜಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮಗನೌಡ ಕನ್ನೊಳ್ಳಿ, ವಿಜಯಪುರ ತಹಸೀಲ್ದಾರ ಸುರೇಶ ಮುಂಜೆ ಮುಂತಾದವರು ಉಪಸ್ಥಿತರಿದ್ದರು.
ಸಾಯಿಕುಮಾರ ಬಿಸನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಮಮದಾಪುರ ಹಾಗೂ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ರಾಜಶೇಖರ ಧೈವಾಡಿ ನಿರೂಪಿಸಿದರು.
ಸಮುದಾಯ ಭವನ: ಶ್ರೀ ಶಿವಶರಣ ಮಾದಾರ ಚನ್ನಯ್ಯ ಭವನವನ್ನು ಅಂದಾಜು ರೂ. 3.55 ಕೋ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಕೆಬಿಜೆಎನ್‍ಎಲ್ ವತಿಯಿಂದ ರೂ. 2.60 ಕೋ. ಅನುದಾನ ಬಿಡುಗಡೆಯಗಿದೆ. ಕೆ. ಆರ್. ಐ. ಡಿ. ಎಲ್. ವತಿಯಿಂದ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಭವನದಲ್ಲಿ ನೆಲಮಹಡಿ 7045.71ಚ. ಅಡಿ, ಮೊದಲನೇ ಮಹಡಿ 7045.71 ಚ. ಅಡಿ ಸೇರಿದಂತೆ ಒಟ್ಟು 14091 ಚ. ಅಡಿ ವಿಸ್ತ್ರೀರ್ಣ ಹೊಂದಿದೆ. ಸಮುದಾಯ ಭವನದಲ್ಲಿ ನೆಲಮಹಡಿಯಲ್ಲಿ ಊಟದ ಕೋಣೆ, ಅಡುಗೆ ಕೋಣೆ, ಉಗ್ರಾಣ, ಮ್ಯಾರೇಜ್ ಹಾಲ್, ಸ್ಟೇಜ್, ವಧುವರರ ಕೊಠಡಿಗಳು, ಪುರುಷ ಹಾಗೂ ಮಹಿಳಾ ಶೌಚಾಲಯ ಹಾಗೂ ಆರು ಕೊಠಡಿಗಳನ್ನು ನಿರ್ಮಿಸಲಾಗಿದೆ.
9ರಂದು ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿಗೆ ಚಾಲನೆ
ಈ ಕಾರ್ಯಕ್ರಮದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಕಾರಜೋಳ, ಇದೇ ಮಾ. 9 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಜಯಪುರ ಜಿಲ್ಲೆಗೆ ಆಗಮಿಸಿ, ರೂ. 3000 ಕೋ. ವೆಚ್ಚದ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಕೃಷ್ಣಾ ನದಿಯ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗುತ್ತಿರುವ 20 ಗ್ರಾಮಗಳಿಗೆ ಪರಿಹಾರ ಒದಗಿಸುವ ಯೋಜನೆಗೆ ಸಾಂಕೇತಿಕವಾಗಿ 1 ಲಕ್ಷ 34 ಸಾವಿರ ಎಕರೆ ಭೂಸ್ವಾಧೀನ ಮಾಡಿ ಪರಿಷ್ಕøತ ಪರಿಹಾರವನ್ನು ಒದಗಿಸಲಾಗುವುದು. ಅಖಂಡ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಈವರೆಗೆ ಸುಮಾರು ರೂ. 10 ಸಾವಿರ ಕೋ. ಯೋಜನೆಗಳನ್ನು ಮಂಜೂರು ಮಾಡಲಾಗಿದೆ. ಅಲ್ಲದೇ, ಈ ಬಾರಿ ಬಜೆಟ್ ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಸುಮಾರು ರೂ. 5000 ಕೋ. ಅನುದಾನ ನಿಗದಿಗೊಳಿಸಿದ್ದು, ಒಟ್ಟಾಗಿ ಒಂದು ವರ್ಷದಲ್ಲಿ ಸುಮಾರು ರೂ. 10000 ಕೋ. ಹಣವನ್ನು ಈ ಕೃಷ್ಣಾ ಮೇಲ್ದಂಡೆ ಯೋಜನೆಗೆ ನೀಡಲಾಗಿದೆ. ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ರೈತ ಬಾಂಧವರು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಚಿವರು ಮನವಿ ಮಾಡಿದರು.
ವಿಮಾನ ನಿಲ್ದಾಣ ಕಾಮಗಾರಿ
ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮೊದಲು ಪೂರ್ಣಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ಗೋವಿಂದ ಕಾರಜೋಳ ಇದೇ ಸಂದರ್ಭದಲ್ಲಿ ತಿಳಿಸಿದರು.