ವಿಜಯಪುರ: ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಯಾರ ಟಿಕೆಟ್ ತಪ್ಪಿಸ್ಲಲ. ನನ್ನ ಸ್ಪರ್ಧೆಯನ್ನು ಪಕ್ಷ ನಿರ್ಧರಿಸುತ್ತದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಜಾಲವಾದ ಗ್ರಾಮದಲ್ಲಿ ನಡೆದ ಬಿಜೆಪಿ ಓಬಿಸಿ ಮೋರ್ಚಾ ಸಮಾವೇಶದಲ್ಲಿ ಪಾಲ್ಗೊಳ್ಳುವ ಮುಂಚೆ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಚನ್ನಪಟ್ಟಣದಲ್ಲಿ ಸಿ. ಪಿ. ಯೋಗೇಶ್ವರ ಅವರಿಗೆ ಬಿ. ಎಸ್. ವೈ. ಈ ಬಾರಿ ಟಿಕೇಟ್ ತಪ್ಪಿಸಲಿದ್ದಾರೆ ಎಂಬ ವದಂತಿಗಳ ಕುರಿತು ಪ್ರತಿಕ್ರಿಯೆ ನೀಡದಿ ಅವರು, ಬಿ. ಎಸ್. ವೈ ಅವರು ಪಕ್ಷ ಕಟ್ಟಿದವರು. ಕಾರ್ಯಕರ್ತರನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ. ಅವರಿಗೆ ಕಾರ್ಯಕರ್ತರನ್ನು ಬೆಳೆಸುವುದು ಗೊತ್ತೆ ಹೊತು ಕಾಲೆಳೆಯುವ ರಾಜಕಾರಣವನ್ನು ಅವರು ಜೀವನದಲ್ಲಿ ಯಾವತ್ತೂ ಮಾಡಿಲ್ಲ. ಅದರ ಅವಶ್ಯಕತೆಯೂ ಅವರಿಗಿಲ್ಲ ಎಂದು ಹೇಳಿದರು.
ನಾನು ಎಲ್ಲಿಂದ ಸ್ಪರ್ಧಿಸಬೇಕು ಎಂಬುದನ್ನು ಪಕ್ಷ ನಿರ್ಧರಿಸುತ್ತೆ
ಇದೇ ವೇಳೆ, ತಾವು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೀರಿ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ರಾಜ್ಯದಲ್ಲಿ ಪಕ್ಷ ಸಂಘಟಿಸುವ ಜವಾಬ್ದಾರಿ ನೀಡಲಾಗಿದೆ. ಅದರಂತೆ ನೀಡಿರುವ ಜವಾಬ್ದಾರಿಯಂತೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಶಿಕಾರಿಪುರ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಓಡಾಡುತ್ತಿದ್ದೇನೆ. ನಾನು ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂಬುದನ್ನು ಅಂತಿಮವಾಗಿ ಪಕ್ಷ ನಿರ್ಧರಿಸುತ್ತದೆ ಎಂದು ಹೇಳಿದರು.
ಬೆಂಗಳೂರು- ಮೈಸೂರು ಹೆದ್ದಾರಿ ಕುರಿತು ಸಿದ್ಧರಾಮಯ್ಯ ಹೇಳಿಕೆ ವಿಚಾರ
ಇದೇ ವೇಳೆ ಬೆಂಗಳೂರು- ಮೈಸೂರ ಹೆದ್ದಾರಿ ನಮ್ಮ ಕಾಲದಲ್ಲಿ ಆಗಿದೆ. ಅದನ್ನು ಮಾ. 9 ರಂದು ಪರಿಶೀಲನೆ ಮಾಡಲಾಗುವುದು ಎಂದು ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ನೀಡಿರುವ ಹೇಳಿಕೆಯ ಕುರಿತು ಪ್ರತಿಕ್ರಿಯ ನೀಡಿದ ಬಿ. ವೈ. ವಿಜಯೇಂದ್ರ, ಅವರ ಬಾಯಿಯಲ್ಲಿ ಇಂಥ ವಿಚಾರಗಳು ಬರುವುದು ಹೊಸ ವಿಚಾರವೇನಲ್ಲ. ಈ ಹಿಂದೆ ನರೇಂದ್ರ ಮೋದಿ ಅವರು ನೀಡಿರುವ ಅಕ್ಕಿಗೆ ತಮ್ಮ ಫೋಟೋ ಹಾಕಿಕೊಂಡು ನಾವೇ ನೀಡಿದ್ದು ಎಂದು ರಾಜ್ಯಾದ್ಯಂತ ಪ್ರಚಾರ ಮಾಡುವ ಪ್ರಯತ್ನ ಮಾಡಿದರು. ಆದರೆ, ಪ್ರಜ್ಞಾವಂತ ಮತದಾರರು ಮತ್ತೆ ಕಾಂಗ್ರೆಸ್ ಪಕ್ಷವನ್ನು ಧಿಕ್ಕರಿಸಿ ಮತ್ತೆ ಬಿಜೆಪಿಯನ್ನು ಅತೀ ಹೆಚ್ಚು ಅಂತರದಿಂದ ಗೆಲ್ಲಿಸಿಕೊಟ್ಟಿದ್ದಾರೆ. ಹೀಗಾಗಿ ಇದೇನು ಹೊಸ ವಿಚಾರವಲ್ಲ. ನಮ್ಮ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕೊಟ್ಟಿರುವ ಕಾರ್ಯಕ್ರಮಗಳನ್ನು ನಾವೇ ಮಾಡಿದ್ದು ಎಂದು ಹೇಳುವುದು ಸರಿಯಲ್ಲ ಎಂದು ಹೇಳಿದರು.
ದೇವರ ಹಿಪ್ಪರಗಿಯಲ್ಲಿ ಬಿಜೆಪಿ ಓಬಿಸಿ ಸಮಾವೇಶ
ನಂತರ ದೇವರ ಹಿಪ್ಪರಗಿಯಲ್ಲಿ ನಡೆದ ಬಿಜೆಪಿ ಓಬಿಸಿ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯನ್ನು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರುವ ಮೂಲಕ ಮತ್ತೋಮ್ಮೆ ಅಭಿವೃದ್ಧಿ ಪರ್ವ ಶುರು ಮಾಡುವ ಮಾತನ್ನು ಯಡಿಯೂರಪ್ಪ ಹೇಳಿದ್ದಾರೆ. ಕಾಂಗ್ರೆಸ್ಸಿನವರು ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮನೆಯಲ್ಲಿ ಕೂಡಬಹುದು ಎಂದುಕೊಂಡಿದ್ದರು. ಆದರೆ, ಬಿ. ಎಸ್. ವೈ ಅವರು ಪಕ್ಷ ಸಂಘಟನೆಯಲ್ಲಿ ತೊಡಗುವ ಮೂಲಕ ಕಾಂಗ್ರೆಸ್ಸಿನವರಿಗೆ ಭ್ರಮನಿರಸನ ಮಾಡಿದ್ದಾರೆ ಎಂದು ಹೇಳಿದರು.
ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ ನೀರಾವರಿ ಯೋಜನೆಗೆ ರೂ. 800 ಕೋ. ಅನುದಾನ ನೀಡಿದ್ದಾರೆ. ಕೆರೆಗಳಿಗೆ ನೀರು ತುಂಬಿಸಿದ್ದಾರೆ. ವಿಜಯಪುರ ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿಯ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮತ್ತು ಈ ಮುಂಚೆ ಜಗದೀಶ ಶೆಟ್ಟರ ಅವರ ಅಧಿಕಾರಾವಧಿಯಲ್ಲಿ ಯ ರೂ. 15000 ಕೋ. ಅನುದಾನ ನೀಡಿದ್ದು, ಸ್ವಾತಂತ್ರ್ಯ ಬಂದ ನಂತರ ನೀಡಿದ ಅತೀ ಹೆಚ್ಚಿನ ಆರ್ಥಿಕ ನೆರವಾಗಿದೆ. ಬಿ. ಎಸ್. ವೈ. ವಿಜಯಪುರ ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ನಾಲ್ಕು ದಶಕಳಿಂದ ನಿರಂತರವಾಗಿ ರೈತರು, ದೀನ ದಲಿತರು, ಪರಿಶಿಷ್ಠ ಪಂಗಡ, ಹಿಂದುಳಿದವರ ಪರವಾಗಿ ಯಡಿಯೂರಪ್ಪ ಹೋರಾಟ ಮಾಡುತ್ತ ಬಂದಿದ್ದಾರೆ. ರಾಜ್ಯದಲ್ಲಿ ಕಾರ್ಯಕರ್ತರ ಶ್ರಮದಿಂದ ಅಧಿಕಾರಕ್ಕೆ ಬಂದ ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಇಡೀ ದೇಶದಲ್ಲಿಯೇ ರೈತರ ಹೆಸರಿಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಸಿಎಂ ಆಗಿದ್ದಾರೆ. ರೈತರಿಗೆ ಪ್ರತ್ಯೇಕ ಬಜೆಟ್ ಮಂಡನೆ ಮಾಡಿ, ರೈತರ ಪಂಪಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಿ, ರೈತರ ಸಾಲ ಮಾಡಿದ ಏಕೈಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಎಂದು ಅವರು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸ ಅವರನ್ನು ಕಾಂಗ್ರೆಸ್ ಹೇಗೆ ನಡೆಸಿಕೊಂಡಿದೆ ಎಂಬುದನ್ನು ಹಿಂದುಳಿದ ವರ್ಗದ ಜನತೆ ಅರ್ಥಮಾಡಿಕೊಳ್ಳಬೇಕು. ದೇವರಾಜ ಅರಸ ಅವರ ಬಳಿಗೆ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಕೆಲಸವನ್ನು ಬಿಜೆಪಿ ಮತ್ತು ಯಡಿಯೂರಪ್ಪ ಮಾಡಿದ್ದಾರೆ. ಕಿಸಾನ್ ಸಮ್ಮಾನ ಯೋಜನೆಯ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರಿಗೆ ಹಣ ನೀಡುತ್ತಿವೆ. ಮತ್ತೋಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಾಗಿ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ಅವರು ತಿಳಿಸಿದರು.
ದೇವರ ಹಿಪ್ಪರಗಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶ ಆಯೋಜನೆಯಾಗಿದೆ. ಇಡೀ ರಾಜ್ಯದಲ್ಲಿ ಎಲ್ಲ 224 ವಿಧಾನ ಸಭೆ ಕ್ಷೇತ್ರಗಳ್ಲಲಿ ನಾನಾ ಮೋರ್ಚಾಗಳ ಸಮಾವೇಶ ನಡೆಯುತ್ತಿದೆ. ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಟ್ಟಿರುವ ಕಾರ್ಯಕ್ರಮಗಳನ್ನು ಮನೆಮನೆಗೆ ತಲುಪಿಸುವ ಮೂಲಕ ರಾಜ್ಯದಲ್ಲಿ ಮತ್ತೋಮ್ಮೆ ಬಿಜೆಪಿ ಅಧಿಕಾರಕ್ಕೆ ತರಲು ಎಲ್ಲರೂ ಪ್ರವಾಸ ಮಾಡುತ್ತಿದ್ದೇವೆ. ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಗೆಲುವು ಸಾಧಿಸಲಿದೆ. ಈ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ ಎಂದು ಅವರು ಬಿ. ವೈ. ವಿಜಯೇಂದ್ರ ತಿಳಿಸಿದರು.
ಜಾಲವಾದ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ನೆ. ಲ. ನರೇಂದ್ರ ಬಾಬು, ಸ್ಥಳಿಯ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಶಾಸಕ ರಮೇಶ ಭೂಸನೂರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.