ವಿಜಯಪುರ: ಮಹಿಳೆಯರು ಇಂದಿಗೂ ಸಹ ತಮ್ಮ ಹಕ್ಕುಗಳನ್ನು ಪಡೆಯಲಾಗದೆ ಹಲವಾರು ಕಾರಣಗಳಿಗೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇದು ನಮ್ಮಲ್ಲಿರುವ ಸಾಮಾಜಿಕ ಕ್ರೂರತೆಯನ್ನು ಬಿಂಬಿಸುತ್ತದೆ. ಈಗಲಾದರೂ ಸಮಾಜ ಬದಲಾಗಬೇಕಿದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ತಿಳಿಸಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಮಹಿಳಾ ಸಾಂಸ್ಕತಿಕ ಹಬ್ಬ ಉದ್ಘಾಟಸಿ ಅವರು ಮಾತನಾಡಿದರು.
ನಮ್ಮ ಸಮಾಜದಲ್ಲಿ ಮಹಿಳೆಯರು ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅದರಲ್ಲೂ ದಲಿತ ಮಹಿಳೆಯರು ದುಪ್ಪಟ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಅವರು ವಿಷಾದಿಸಿದರು.
ಮಹಿಳಾ ದಿನಾಚರಣೆಯನ್ನು ನಿಜವಾದ ಅರ್ಥದಲ್ಲಿ ಆಚರಣೆ ಮಾಡಬೇಕಿದೆ. ಈ ಸಮಾಜದಲ್ಲಿ ಮಹಿಳೆ, ಪುರುಷರಿಬ್ಬರೂ ಸಮಾನರು. ಆದರೂ ನಾವು ಮಹಿಳೆಯರನ್ನು ಗೌರವಿಸದಿದ್ದರೆ ಅದು ಅಪರಾಧವಾಗುತ್ತದೆ. ಏಕೆಂದರೆ ಜಗತ್ತು ಇಷ್ಟೊಂದು ಮುಂದುವರೆದಿದ್ದರೂ ಇಂದಿಗೂ ಸಹ ಒಬ್ಬ ಹುಡುಗಿ ತನ್ನ ಮದುವೆಯ ವಿಚಾರದಲ್ಲಿ ತನ್ನ ಪತಿಯನ್ನು ಆರಿಸಿಕೊಳ್ಳುವ ಅಥವಾ ತನಗೆ ಬೇಕಾದ ಶಿಕ್ಷಣ ಪಡೆಯುವ ಸ್ವಾತಂತ್ರ್ಯ ಲಭ್ಯವಿಲ್ಲ ಎಂಬುವುದು ವಿಷಾದದ ಸಂಗತಿ ಎಂದು ಅವರು ಹೇಳಿದರು.
ಮಹಿಳೆಯರಿಗಾಗಿ ಒಳ್ಳೆಯ ಯೋಜನೆಗಳನ್ನು ತರುವ ಮೂಲಕ ಮಾತ್ರ ಅಸಮಾನತೆಯನ್ನು ಹೋಗಲಾಡಿಸಬಹುದಾಗಿದೆ. ಇಂದಿನ ದಿನಮಾನದಲ್ಲಿ ಮಹಿಳೆಯರು ಉನ್ನತ ಶಿಕ್ಷಣ ಪಡೆಯುವುದು ಈಗಲೂ ಒಂದು ಸವಾಲಾಗಿದೆ. ಮಹಿಳೆಯರು ಎಲ್ಲ ಕೌಟುಂಬಿಕ ಕರ್ತವ್ಯಗಳನ್ನು ಮುಗಿಸಿ ಶಿಕ್ಷಣ ಪಡೆಯಬೇಕಾಗಿದೆ. ಅದರಲ್ಲೂ ಅದು ತನ್ನ ಇಚ್ಛೆಯಂತೆ ಅವಳು ಏನನ್ನು ಸಹ ಮಾಡಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿರುವುದು ಒಂದು ದುರಂತವೇ ಸರಿ ಎಂದು ಅವರು ಹೇಳಿದರು.
ಶೈಕ್ಷಣಿಕ ಸಂಸ್ಥೆಗಳಿಂದ ಮಾತ್ರ ನಿಜವಾದ ಬದಲಾವಣೆ ತರಲು ಸಾಧ್ಯ. ಹೀಗಾಗಿ ಮೊದಲು ಶಾಲೆ-ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಬದಲಾವಣೆಯನ್ನು ತರಬೇಕು. ಹೊಸ-ಹೊಸ ಯೋಜನೆಗಳನ್ನು ತರಬೇಕು. ಮಹಿಳಾ ಸಮಾನತೆ ತರುವ ನಿಟ್ಟಿನಲ್ಲಿ ನಿಜವಾಗಿ ಶೈಕ್ಷಣಿಕ ಮಟ್ಟದಿಂದ ಪ್ರಯತ್ನ ಪಟ್ಟಾಗ ಮಾತ್ರ ಅದು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಇದೇ ಸಮಯದಲ್ಲಿ ವಿವಿಯ ಕುಲಸಚಿವ ಪ್ರೊ. ಬಿ. ಎಸ್. ನಾವಿ ಮಾತನಾಡಿ, ಕಳೆದ ಒಂದು ದಶಕದಿಂದ ಮಹಿಳೆಯರು ತಾಂತ್ರಿಕ ಕ್ಷೇತ್ರದಲ್ಲಿ ಯಾವ ರೀತಿ ಅಭಿವೃದ್ಧಿಯನ್ನು ಕಾಣುತ್ತಿದ್ದಾರೆ ಎಂಬುವುದನ್ನು ನಾವು ಕಂಡುಕೊಂಡಿದ್ದೇವೆ. ನಿಧಾನವಾದರೂ ಸಹ ಸಾಕಷ್ಟು ಬದಲಾವಣೆಗಳು ಮೂಡಿ ಬಂದಿದ್ದು ಖುಷಿಯ ವಿಚಾರ. ಸಮಾಜದಲ್ಲಿರುವ ಎಲ್ಲ ದಬ್ಬಾಳಿಕೆಗಳ ಜೊತೆ ಹೋರಾಡುವ ಮೂಲಕ ಅತ್ಯಂತ ಸುಂದರವಾದ ಬದುಕನ್ನು ಮಹಿಳೆಯರು ಕಟ್ಟಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ವಾಣಿಜ್ಯ ಲೋಕದಲ್ಲಿಯೂ ಸಹ ಮಹಿಳೆಯರು ಮುನ್ನುಗ್ಗುವ ಮೂಲಕ ತಮ್ಮದೇ ಆದ ಸಾಧನೆ ಮಾಡುತ್ತಿದ್ದಾರೆ. ನಾವು ಸಹ ಯಾರಿಗೂ ಕಮ್ಮಿ ಇಲ್ಲ ಎಂದು ತೋರಿಸಿಕೊಳ್ಳುತ್ತಿದ್ದಾರೆ ಉದಾಹರಣೆ ನೋಡುವುದಾದರೆ ಮೊಬಿ ಕ್ವಿಕ್ ಅನ್ನೋ ಒಂದು ಅತ್ಯುದ್ಭುತವಾದ ಒಂದು ಆ್ಯಪ್‍ನ್ನು ಸಿದ್ಧಪಡಿಸಿದ ಕೀರ್ತಿ ಉಪಾಷನಾ ತಾಕು ಅವರಿಗೆ ಸಲ್ಲುತ್ತದೆ ಈ ರೀತಿ ಪ್ರಸ್ತುತ ದಿನಗಳಲ್ಲಿ ಹೆಮ್ಮರವಾಗಿ ಬೆಳೆದು ನಿಂತಂತಹ ತಂತ್ರಜ್ಞಾನವನ್ನು ಬಳಸಿಕೊಂಡು ಮಹಿಳೆಯರು ತಮ್ಮದೇ ಆದ ಅಭಿವೃದ್ಧಿಯ ಮೈಲುಗಲ್ಲನ್ನು ತಲುಪುತ್ತಿದ್ದಾರೆ ಎಂದು ಹೇಳಿದರು.
ಈ ಕಾರ್ಯಾಗಾರ ರೂಪದಲ್ಲಿ, ವಿಶೇಷ ಉಪನ್ಯಾಸ ರೂಪದಲ್ಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೂ ಸೇರಿದಂತೆ ನಮ್ಮ ವಿಶ್ವವಿದ್ಯಾನಿಲಯದಲ್ಲಿ ಅತ್ಯಂತ ಸಂಭ್ರಮದಿಂದ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಈ ಮೂಲಕ ನಾವು ಎಲ್ಲ ಮಹಿಳೆಯರಿಗೆ ಗೌರವ ಸಲ್ಲಿಸುವಂತಹ ಕಾರ್ಯವನ್ನು ವಿಶ್ವವಿದ್ಯಾನಿಲಯ ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಮಾತನಾಡಿ, ಬೇರೆ ಬೇರೆ ಕಾಲಘಟ್ಟಗಳಲ್ಲಿ ಪ್ರಯತ್ನ ಮಾಡುತ್ತಲೇ ಇದ್ದರೂ ಸಹ ಮಹಿಳಾ ಮತ್ತು ಪರುಷರ ನಡುವೆ ಅಂತರ ಬೆಳೆಯುತ್ತಲೇ ಇದೆ. ಈ ಅಸಮಾನತೆಯನ್ನು ಹೋಗಲಾಡಿಸಲು ನಾವು ಇನ್ನೂ ಹೆಚ್ಚಿನ ಪ್ರಯತ್ನ ಮಾಡಬೇಕಿದೆ ಎಂದರು.
ಈ ಡಿಜಿಟಲೀಕರಣ ಮತ್ತು ಈ ಕುರಿತಾದಂತಹ ಕಾರ್ಯಗಳಲ್ಲಿ ಮತ್ತು ಅವುಗಳ ಪ್ರಕ್ರಿಯೆಗಳಲ್ಲಿ ಮಹಿಳೆಯರ ಪಾತ್ರವೇನು ಎಂಬುವುದನ್ನು ನಾವು ಅರಿತುಕೊಳ್ಳಬೇಕು. ಇಲ್ಲಿ ನಾವು ಇದಕ್ಕೆ ಸಂಬಂಧಪಟ್ಟಂತೆ ಮಹಿಳೆಯರನ್ನು ನಾವು ಎಷ್ಟರಮಟ್ಟಿಗೆ ಸಿದ್ಧಪಡಿಸಿದ್ದೇವೆ ಎಂಬುವುದನ್ನು ನಾವು ಗಮನಿಸಬೇಕಾಗಿದೆ. ಇಂತಹ ಕಾರ್ಯಗಳಲ್ಲಿ ಮಹಿಳೆಯರನ್ನು ನಾವು ಎಷ್ಟರಮಟ್ಟಿಗೆ ಒಳಗೊಂಡು ಕೆಲಸ ಮಾಡಲಾಗುತ್ತದೆ ಎಂಬುವುದನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಮಹಿಳಾ ಅಭಿವೃದ್ಧಿಗಾಗಿ ಈ ದೃಷ್ಟಿಯಿಂದ ನಮ್ಮ ವಿಶ್ವವಿದ್ಯಾನಿಲಯದಿಂದಲೂ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ಅವುಗಳನ್ನು ಮುಂಬರುವ ದಿನಗಳಲ್ಲಿ ಮಾಡುವಂತಹ ಪ್ರಯತ್ನವನ್ನು ನಾವೆಲ್ಲರೂ ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು,
ರಾಜಕೀಯ, ಸಾಮಾಜಿಕ ಹೀಗೆ ಎಲ್ಲ ರಂಗಗಳಲ್ಲಿಯೂ ಬದಲಾವಣೆಗಳಾಗಬೇಕಿದೆ. ಅಂಕಿ ಅಂಶಗಳನ್ನು ಗಮನಿಸಿದಾಗ ಅವಳ ಹಿನ್ನೆಡೆಗೆ ಈ ಎಲ್ಲ ಕ್ಷೇತ್ರಗಳಲ್ಲಿ ಅವಳನ್ನು ಹೊರಗಿಡುವುದೇ ಒಂದು ದೊಡ್ಡ ಸಮಸ್ಯೆಯನ್ನು ಹುಟ್ಟು ಹಾಕುತ್ತಿದೆ. ಅವಳಿಗೆ ಅವಳ ಹಕ್ಕುಗಳನ್ನು ನೀಡುವ ಜೊತೆಗೆ ಅವಳಿಗೆ ಅವಕಾಶಗಳನ್ನು ನೀಡಿದಾಗ ಮಾತ್ರ ಅವಳು ಪರುಷ ಸಮಾನಳಾಗಿ ಬೆಳೆಯಲು ಸಾಧ್ಯ ಎಂದು ಕುಲಪತಿ ಪ್ರೊ.ತುಳಸಿಮಾಲ ವಿವರಿಸಿದರು.
ಇದೇ ಸಂದರ್ಭದಲ್ಲಿ ಪ್ರೊ.ಹರೀಶ್ ರಾಮಸ್ವಾಮಿ ಅವರನ್ನು ವಿಶ್ವವಿದ್ಯಾನಿಲಯದ ಪರವಾಗಿ ವಿವಿಯ ಕುಲಪತಿ ಪ್ರೊ. ಬಿ.ಕೆ ತುಳಸಿಮಾಲ ಅವರು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ವಿವಿಯ ಕುಲಸಚಿವ ವಿವಿಯ ಆರ್ಥಿಕ ಅಧಿಕಾರಿ ರಾಮಣ್ಣ ಅಥಣಿ, ಮಹಿಳಾ ಸಾಂಸ್ಕøತಿಕ ಹಬ್ಬ ಸಮಿತಿಯ ಅಧ್ಯಕ್ಷೆ ಪ್ರೊ.ಹೇಮಲತಾ ಎಚ್.ಎಮ್ ಮತ್ತು ಮಹಿಳಾ ವಿವಿಯ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕೋತ್ತರ ವಿದ್ಯಾರ್ಥಿನಿಯರು, ಪದವಿ ವಿದ್ಯಾರ್ಥಿನಿಯರು ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿನಿಯರು ಹೊರ ತಂದ ಮಹಿಳಾ ಧ್ವನಿ ವಿಶೇಷ ಸಂಚಿಕೆಯನ್ನು ಮತ್ತು ಮಹಿಳಾ ಧ್ವನಿ ಇ- ಪೊರ್ಟ್‍ಲ್‍ನ್ನು ಅತಿಥಿಗಳು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ವಿವಿಯ ಪ್ರದರ್ಶಕ ಕಲೆಗಳ ವಿಭಾಗ ವಿದ್ಯಾರ್ಥಿನಿಯರು ಪ್ರಾರ್ಥನೆ ಮತ್ತು ಮಹಿಳಾ ಗೀತೆ ಹಾಡಿದರು. ಕಾರ್ಯಕ್ರಮದ ಸಂಯೋಜಕಿ ಪ್ರೊ.ಲಕ್ಷ್ಮಿದೇವಿ ವೈ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಶ್ವೇತಾ ಅತಿಥಿಗಳನ್ನು ಪರಿಚಯಿಸಿದರು. ಡಾ.ಜ್ಯೋತಿ ಉಪಾಧ್ಯ ನಿರೂಪಿಸಿದರು. ಮತ್ತು ಪ್ರೊ. ಅನಿತಾ ನಾಟೆಕರ್ ವಂದಿಸಿದರು.