ನಶಿಸಿ ಹೋಗುತ್ತಿರುವ ಹಲಿಗೆ ಬಾರಿಸುವ ಕಲೆ ಉಳಿಸುವುದು ಅಗತ್ಯವಾಗಿದೆ- ಉಮೇಶ ವಂದಾಲ

ವಿಜಯಪುರ: ನಶಿಸಿ ಹೋಗುತ್ತಿರುವ ಹಲಿಗೆ ಬಾರಿಸುವ ಕಲೆಯನ್ನು ಉಳಿಸುವುದು ಅಗತ್ಯವಾಗಿದೆ ಎಂದು ಶ್ರೀ ರಾಮನವಮಿ ಉತ್ಸವ ಸಮಿತಿ ಅಧ್ಯಕ್ಷ ಉಮೇಶ ವಂದಾಲ ಹೇಳಿದ್ದಾರೆ.

ನಗರದದಲ್ಲಿ ಶಿವಾಜಿ ಚೌಕಿನಲ್ಲಿ ಆಯೋಜಿಸಲಾಗಿದ್ದ ಹಲಿಗೆ ಬಾರಿಸುವ ಸ್ಪರ್ಧೆಯಾದ ಹಲಗೆ ಹಬ್ಬದ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಲಿಗೆ ಬಾರಿಸುವ ಜಾನಪದ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಸಲುವಾಗಿ ಮತ್ತು ಹಲಿಗ ಬಾರಿಸುವ ಕಲಾವಿದರಿಗೆ ಪ್ರೋತ್ಸಾಹ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ಉತ್ಸವ ಸಮಿತಿ ಸದಸ್ಯ ಶಿವಾನಂದ ಭುಯ್ಯಾರ ಮಾತನಾಡಿ, ಇಂದಿನ ಯುವ ಜನತೆ ಕೇವಲ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುತ್ತಾರೆ.  ಆದರೆ, ಜಾನಪದ ಕಲೆಯಾದ ಹಲಿಗೆ ಬಾರಿಸುವ ಕಲೆಯಲ್ಲಿ ತೊಡಗಿಸಿಕೊಂಡರೆ ಮನಸ್ಸಿಗೆ ಮುದ ನೀಡುವ ಮತ್ತು ನೋವುಗಳನ್ನು ಹೊಡೆದೋಡಿಸಿ ನಲಿವನ್ನು ತಂದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಯುವ ಪರಿಷತ್ತಿನ ಅಧ್ಯಕ್ಷ ಶರಣು ಸಬರದ ಮಾತನಾಡಿ, ಸನಾತನ ಸಂಸ್ಕೃತಿಯನ್ನು ಬೆಳೆಸಿದ ಹಾಗೂ ಎತ್ತಿ ಹಿಡಿಯುತ್ತಿರುವ ಕೀರ್ತಿ ನಮ್ಮ ಭಾರತಕ್ಕಿದೆ.  ಈ ನಿಟ್ಟಿನಲ್ಲಿ ಮುಖ್ಯವಾಗಿ ನಮ್ಮ ಕರ್ನಾಟಕದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಈ ಹಲಿಗೆ ಜಾನಪದ ವಾದ್ಯವು ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ.  ಈ ಹಲಿಗೆ ವಾದ್ಯವು ಎಲ್ಲ ಕಾರ್ಯಕ್ರಮಗಳ ಕೇಂದ್ರ ಬಿಂದು ಆಗಿದೆ.  ಅದರಲ್ಲಿ ವಿಶೇಷವಾಗಿ ಜಾತ್ರಾ ಕಾರ್ಯಕ್ರಮಗಳಲ್ಲಿ ಇನ್ನಿತರ ಶುಭ ಸಮಾರಂಭಗಳಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿದೆ. ಅದಕ್ಕಾಗಿ ಇಂತಹ ಕಲೆಯನ್ನು ನಶಿಸಿ ಹೋಗದಂತೆ ಕಾಪಾಡಿಕೊಂಡು ಹೋಗುವದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದು ಹೇಳಿದರು.

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ನಾನಾ ಹಲಿಗೆ ತಂಡಗಳು ಭಾಗವಹಿಸಿದ್ದವು.

ಈ ಸಂದರ್ಭದಲ್ಲಿ ಆರೂಢ ಆಶ್ರಮದ ಯೋಗೇಶ್ವರಿ ಮಾತಾಜಿ, ಮಹಾನಗರ ಪಾಲಿಕೆ ಸದಸ್ಯ ಅಶೋಕ ನ್ಯಾಮಗೊಂಡ, ಉದ್ದಿಮೆ ರಾಜು ಬಿಜ್ಜರಗಿ, ಗುರಲಿಂಗಪ್ಪ ಅಂಗಡಿ, ಅಂಭಾದಾಸ ಕುಲಕರ್ಣಿ, ರವಿ ಖಾನಾಪೂರ, ಆನಂದ ಬಂಡಿ, ರಾಜು ಗಚ್ಚಿನಮಠ, ರವಿ ಬಗಲಿ, ಸಮೀರ ಕುಲಕರ್ಣಿ, ಸಚೀನ ಸವನಳ್ಳಿ, ಅಪ್ಪು ಪೆಡ್ಡಿ, ಪ್ರಲ್ಹಾದ ಕಾಂಬಳೆ, ಸಂತೋಷ ಯಂಕಪ್ಪಗೋಳ, ಆನಂದ ಮುಚ್ಚಂಡಿ, ಈರಣ್ಣ ಹಡಪದ, ಜಗದೀಶ ಬೋಳಸೂರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌