ವಿಜಯಪುರ: ಮಹಿಳೆಯರಿಗೆ ಸರಿಯಾದ ಮತ್ತು ಉನ್ನತ ಶಿಕ್ಷಣ ಸಿಕ್ಕಾಗ ಮಾತ್ರ ಮಹಿಳೆ ಮುಖ್ಯ ವಾಹಿನಿಗೆ ಬರಲು ಸಾಧ್ಯ ಎಂದು ವಿವಿಯ ಕುಲಪತಿ ಪ್ರೊ. ಬಿ.ಕೆ ತುಳಸಿಮಾಲ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಮಹಿಳಾ ಸಾಂಸ್ಕೃತಿಕ ಹಬ್ಬದ ಎರಡನೆ ದಿನದಂದು ಮಹಿಳಾ ಸಮುದಾಯ ಸಬಲೀಕರಣಕ್ಕೆ ಡಾ. ಬಿ. ಆರ್. ಅಂಬೇಡ್ಕರ್ ಅವರ ಕೊಡುಗೆ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರತಿಯೊಬ್ಬರಿಗೂ ಸಿಗಬೇಕಾದ ಹಕ್ಕುಗಳನ್ನು ತಂದು ಕೊಡಲು ಮಾಡಿದಂತಹ ಕೆಲಸ ಅಪಾರ ಮಹಿಳಾ ಸಬಲೀಕರಣಕ್ಕೆ ಅವರು ಬರೆದ ಸಂವಿಧಾನ ಇಂದು ಹೆಣ್ಣು ತಲೆ ಎತ್ತಿ ಬದುಕುವಂತೆ ಮಾಡಿದೆ ಎಂದು ಹೇಳಿದರು.
ಅಂಬೇಡ್ಕರ್ ಅವರ ಚಿಂತನ ಇವತ್ತಿನ ಕಾಲಘಟ್ಟದಲ್ಲಿ ಅತ್ಯಂತ ಪ್ರಸ್ತುತವಾದದ್ದು. ಅವರು ಮಹಿಳೆಯರು ಯಾವಾಗಲು ಸಂಘಟಿತರಾಗಬೇಕು. ಅಂದಾಗ ಮಾತ್ರ ಸಿಗಬೇಕಾದ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದು ಹೇಳುತ್ತಿದ್ದರು. ಮಹಿಳಾ ಅಭಿವೃದ್ಧಿಗೆ ಮತ್ತು ಅಭಿವೃದ್ಧಿಯಲ್ಲಿ ಮಹಿಳೆಯರು ಪಾಲ್ಗೊಳ್ಳಬೇಕು ಮತ್ತು ಮಹಿಳೆಯರ ಶಿಕ್ಷಣಕ್ಕಾಗಿ ಕನಸು ಕಂಡಂತವರು ಎಂದು ಹೇಳೀದರು.
ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಡಾ. ಹಾಸಿಂಪೀರ ವಾಲಿಕಾರ ಅವರು, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ನೆನೆಯುವುದೇ ಒಂದು ಆನಂದ ಮತ್ತು ಹೆಮ್ಮೆ. ಮಹಿಳಾ ಸಬಲೀಕರಣಕ್ಕಾಗಿ ಅವರು ನೀಡಿದ ಕೊಡುಗೆ ಅನನ್ಯ ಎಂದು ಹೇಳಿದರು.
ಅವಮಾನ, ಅಪಮಾನಗಳನ್ನು ನುಂಗಿ ಬೆಳೆದಂತಹವರು ಡಾ.ಬಾಬಾಸಾಹೇಬರು. ಅಂತಹವರು ಸಂವಿಧಾನ ರಚಿಸುವ ಮೂಲಕ ಮಹಿಳೆಯರು ಮುನ್ನೆಲೆಗೆ ಬರುವಂತೆ ಮಾಡಿದ ಮಹಾನ್ ವ್ಯಕ್ತಿ. ಸಂವಿಧಾನದಲ್ಲಿ ಅವರು ಮಹಿಳೆಯರಿಗೆ ಅವರ ಹಕ್ಕುಗಳನ್ನು ಕೊಟ್ಟಿದ್ದರು. ಈಗಲೂ ಸಹ ಪುರುಷಪ್ರಧಾನ ಸಮಾಜದಿಂದಾಗಿ ಮಹಿಳೆಯರು ಸಮಾನ ಬದುಕುವ ಹಕ್ಕುಗಳನ್ನು ಪಡೆಯದೇ ಇರುವುದು ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.
ಇನ್ನು ಅಣ್ಣ ಬಸವಣ್ಣನವರು ವಚನಗಳ ಮೂಲಕ ಮಹಿಳಾ ಹಕ್ಕುಗಳನ್ನು ತರಲು, ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಹಾಗೆಯೇ ಡಾ.ಅಂಬೇಡ್ಕರ್ ಅವರು ಲಿಖಿತ ರೂಪದಲ್ಲಿ ಅದನ್ನು ಸಂವಿಧಾನ ಮೂಲಕ ತರುವ ಮೂಲಕ ಮಹಿಳೆಯರಿಗೆ ನ್ಯಾಯ ಕೊಡಿಸುವ ಒಂದು ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ಆದರೆ ಅವರ ಆಶಯಗಳು ಇನ್ನೂ ಪರಿಪೂರ್ಣವಾಗಿ ಆಚರಣೆಗೆ ಬಂದಿಲ್ಲ ಎನ್ನುವುದೇ ನೋವಿನ ಸಂಗತಿ ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿವಿಯ ಕುಲಸಚಿವ ಪ್ರೊ. ಬಿ. ಎಸ್. ನಾವಿ, ಮೌಲ್ಯಮಾಪನ ಕುಲಸಚಿವ ಪ್ರೊ. ರಮೇಶ ಕೆ, ಮಹಿಳಾ ಸಾಂಸ್ಕೃತಿಕ ಹಬ್ಬ ಸಮಿತಿಯ ಅಧ್ಯಕ್ಷೆ ಪ್ರೊ,ಹೇಮಲತಾ ಎಚ್,ಎಮ್ ಮತ್ತು ಮಹಿಳಾ ವಿವಿಯ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕೋತ್ತರ ವಿದ್ಯಾರ್ಥಿನಿಯರು, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿನಿಯರು ಹೊರ ತಂದ ಮಹಿಳಾ ಧ್ವನಿ ವಿಶೇಷ ಸಂಚಿಕೆಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ವಿವಿಯ ಪ್ರದರ್ಶಕ ಕಲೆಗಳ ವಿಭಾಗ ವಿದ್ಯಾರ್ಥಿನಿಯರು ಮಹಿಳಾ ಗೀತೆ ಹಾಡಿದರು. ಕಾರ್ಯಕ್ರಮದ ಸಂಯೋಜಕಿ ಪ್ರೊ.ಲಕ್ಷ್ಮಿದೇವಿ ವೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕಿ ಭಾಗ್ಯಶ್ರಿ ದೊಡ್ಡಮನಿ ನಿರೂಪಿಸಿದರು. ಮತ್ತು ಡಾ.ರಜಿಯಾ ಬೇಗಂ ನದಾಫ್ ವಂದಿಸಿದರು.