ಮಾ. 18ರಂದು ಜಿಲ್ಲಾ ಮಟ್ಟದ ಫಲಾನುಭವಿ ಆಧಾರಿತ ಸಮಾವೇಶ- ಕಾರ್ಯಕ್ರಮ ಯಶಸ್ವಿಗೆ ಸಕಲ ಸಿದ್ಧತೆ ಕೈಗೊಳ್ಳಲು ಡಿಸಿ ಡಾ. ದಾನಮ್ಮನವರ ಸೂಚನೆ

ವಿಜಯಪುರ: ಕೇಂದ್ರ ಹಾಗೂ ರಾಜ್ಯ ಸರಕಾರದ ನಾನಾ ಯೋಜನೆಗಳ ಫಲಾನುಭವಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಫಲಾನುಭವಿ ಆಧಾರಿತ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮಾ.18 ರಂದು ನಗರದ ಸೈನಿಕ ಶಾಲೆ ಮೈದಾನದಲ್ಲಿ ಜಿಲ್ಲಾ ಮಟ್ಟದ ಫಲಾನುಭವಿ ಆಧಾರಿತ ಸಮಾವೇಶ ಏರ್ಪಡಿಸಲು ಎಲ್ಲ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದ್ದಾರೆ. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಫಲಾನುಭವಿ ಆಧಾರಿತ ಸಮಾವೇಶ ಪೂರ್ವಸಿದ್ಧತೆ ಕುರಿತು ನಾನಾ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಾನಾ ಯೋಜನೆಗಳಡಿ ಲಾಭ ಪಡೆದುಕೊಂಡು  ಫಲಾನುಭವಿಗಳ ಜಿಲ್ಲಾ ಮಟ್ಟದ ಸಮಾವೇಶ ಹಮ್ಮಿಕೊಳ್ಳಲು ಅಗತ್ಯ ಸಿದ್ಧತೆ ಕೈಗೊಂಡು,  ಸಮಾವೇಶದಲ್ಲಿ ವಿವಿಧ ಇಲಾಖೆಯ ಅಂದಾಜು 40 ಸಾವಿರ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲ ಇಲಾಖೆ ಅಧಿಕಾರಿಗಳು ಕ್ರಮ ವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲ ಫಲಾನುಭವಿಗಳಿಗೆ ಬೆಳಿಗ್ಗೆ ಉಪಹಾರದ ವ್ಯವಸ್ಥೆ, ಸುಮಾರು 30ರಿಂದ40 ಸಾವಿರ ಜನ ಫಲಾನುಭವಿಗಳಿಗೆ ಸ್ಥಳಾವಕಾಶ ವ್ಯವಸ್ಥೆ, ನೀರು, ಹಾಗೂ ಪೆಂಡಲ್, ಸೇರಿದಂತೆ 400 ಸಾರಿಗೆ ಬಸ್‍ಗಳ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದ್ದು, ಗ್ರಾಮೀಣದಲ್ಲಿರುವ ಗ್ರಾಮ ಪಂಚಾಯ್ತಿವಾರು, ತಾಲೂಕಾವಾರು ಫಲಾನುಭವಿಗಳ ಹೆಸರು, ಮೊಬೈಲ್ ಸಂಖ್ಯೆಯೊಂದಿಗೆ ಪಟ್ಟಿ ತಯಾರಿಸಿ ಸಂಬಂಧಪಟ್ಟ ಎಲ್ಲ ಇಲಾಖೆ ಅಧಿಕಾರಿಗಳು ತಾವು ನಿಗದಿಪಡಿಸಿ ಒಟ್ಟು ಗುರಿ ಮಾಹಿತಿಯನ್ನು ತಹಶೀಲ್ದಾರಿಗೆ ನೀಡಬೇಕು. ಇದರ ಮೂಲಕ ಗ್ರಾಮ, ತಾಲೂಕುಗಳಿಗೆ ಬಸ್‍ಗಳ ವ್ಯವಸ್ಥೆಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಜಿಲ್ಲಾ ಮಟ್ಟದ ಸಮಾವೇಶದಲ್ಲಿ ವೇದಿಕೆ ನಿರ್ಮಾಣ, ಈ ಸಮಾವೇಶಕ್ಕೆ ಆಗಮಿಸುವ ಫಲಾನುಭವಿಗಳು ಸೇರಿದಂತೆ ಅಂದಾಜು 50 ಸಾವಿರ ಜನರಿಗೆ ಊಟೋಪಚಾರಕ್ಕಾಗಿ 200 ಫುಡ್ ಕೌಂಟರ್ ತೆರೆಯಬೇಕು. ಇಲಾಖಾವಾರು ಫಲಾನುಭವಿಗಳಿಗೆ ಜಾಗ ನಿಗದಿಗೊಳಿಸುವುದು, ಆಸನ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸೂಚನೆ ನೀಡಿದರು.

ಗ್ರಾಮ ಪಂಚಾಯತ್, ತಾಲೂಕುಗಳಲ್ಲಿ ಸೇರಿ ಒಟ್ಟು 400 ಬಸ್ ವ್ಯವಸ್ಥೆ ಕಲ್ಪಿಸಲು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಸಾಂಸ್ಕøತಿಕ ಚಟುವಟಿಕೆಗಳು, ಜಾನಪದ ಕಲೆಗಳ ನೃತ್ಯ ಪ್ರದರ್ಶನಗಳು ಜರುಗಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಫಲಾನುಭವಿಗಳಿಗೆ ಅನುದಾನದ ಚೆಕ್ಸ್, ಲ್ಯಾಪ್ ಟಾಪ್, ಹಕ್ಕು ಪತ್ರ, ಪಡಿತರ ಚೀಟಿ, ಆಧಾರ ಕಾಡ್ರ್ವನ್ನು ಸಾಂಕೇತಿಕವಾಗಿ ವಿತರಿಸಲಾಗುವುದು. ಅದರಂತೆ ಪ್ರತಿ ಇಲಾಖೆ ಫಲಾನುಭವಿಗಳಿಗೆ ಸಂಬಂಧಿಸಿದಂತೆ 5 ಜನರನ್ನು ಮಾತ್ರ ವೇದಿಕೆಯಲ್ಲಿ ಕರೆ ತರಲು ಕ್ರಮ ಕೈಗೊಳ್ಳಬೇಕು. ಇಲಾಖೆಗಳಲ್ಲಿ ಲಭ್ಯವಿರುವ ಸ್ವಸಹಾಯ ಸಂಘಗಳಿಗೆ ಸ್ಟಾಲ್‍ಗಳನ್ನು, ಕಲಾಕೃತಿಗಳನ್ನು ಸೇರಿದಂತೆ ನಾನಾ ರೀತಿಯ ಪ್ರದರ್ಶನಗಳನ್ನು ಏರ್ಪಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸಮಾವೇಶದಲ್ಲಿ ನಾನಾ ಯೋಜನೆಗಳಡಿ ಫಲಾನುಭವಿಗಳಿಗೆ ವಿತರಿಸುವ ಪರಿಕರ, ಯೋಜನಾ ಆದೇಶ ಪತ್ರ, ಪಡಿತರ ಚೀಟಿ ಸೇರಿದಂತೆ ನಾನಾ ಸೌವಲತ್ತುಗಳನ್ನು ವಿತರಿಸಲಾಗುತ್ತಿರುವುದರಿಂದ ಇಲಾಖಾವಾರು ಫಲಾನುಭವಿಗಳನ್ನು ಸಂಬಂಧಿಸಿದ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ, ಹೆಚ್ಚಿನ ಸಂಖ್ಯೆಯಲ್ಲಿ  ಸಮಾವೇಶದಲ್ಲಿ ಫಲಾನುಭವಿಗಳು ಭಾಗವಹಿಸಲು ಕ್ರಮ ವಹಿಸಬೇಕು. ಅಧಿಕಾರಿಗಳು ಈ ಕಾರ್ಯದಲ್ಲಿ ಬೇಜವಾಬ್ದಾರಿಯನ್ನು ವಹಿಸದೇ ಚುರುಕಾಗಿ ಕಾರ್ಯನಿರ್ವಹಿಸಿ, ಸಮಾವೇಶವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳ ನಾನಾ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳಿಗೆ ಸಮಾವೇಶದಲ್ಲಿ ಸೌಲಭ್ಯಗಳನ್ನು ವಿತರಿಸಲಾಗುತ್ತಿದ್ದು, ಸಮಾವೇಶದಲ್ಲಿ ಬಸವ ವಸತಿ ಯೋಜನೆ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ, ಪ್ರಧಾನಮಂತ್ರಿ ಆವಾಸ ಯೋಜನೆ, ಮಹಾತ್ಮಗಾಂಧಿ ಆವಾಸ್ ಯೋಜನೆ, ಮಹಾತ್ಮ ಗಾಂಧಿ ನರೇಗಾ ಯೋಜನೆ, ಸ್ವಚ್ಛ ಭಾರತ  ಮಿಷನ್ ಯೋಜನೆ, ಅನುಸೂಚಿತ ಜಾತಿಗಳು ಉಪಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ, ಕೃಷಿ ಪರಿಕರಗಳು ಗುಣಮಟ್ಟ ನಿಯಂತ್ರಣ, ಬೀಜ ವಿತರಣೆ, ಕೃಷಿ ಯಾಂತ್ರೀಕರಣ, ಕೃಷಿ ಸಂಸ್ಕರಣೆ, ಸಸ್ಯ ಸಂರಕ್ಷಣೆ, ಸಾವಯವ ಕೃಷಿ, ಮುಖ್ಯಮಂತ್ರಿ  ರೈತ ವಿದ್ಯಾನಿಧಿ, ಪಿ.ಎಂ.ಕಿಸಾನ ಯೋಜನೆ, ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆ, ಕೃಷಿ ಯಾಂತ್ರೀಕರಣ ಉಪ ಅಭಿಯಾನ, ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಯೋಜನೆ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳನ್ನು ಸಮಾವೇಶದಲ್ಲಿ ಕರೆ ತರಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕ್ರಮ ವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸೂಚನೆ ನೀಡಿದರು.

ಈ ಸಭೆಯಲ್ಲಿ ಜಿ. ಪಂ. ಸಿಇಓ ರಾಹುಲ್ ಶಿಂಧೆ, ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ, ಇಂಡಿ ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ, ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌