ವಿಜಯಪುರ: ಒಂದು ಎಲೆಕ್ಷನ್ ಗಿಂತ ಇನ್ನೊಂದು ಎಲೆಕ್ಷನ್ ಭಿನ್ನವಾಗಿರುವುದರಿಂದ ಎಲ್ಲರಿಗೂ ನೂರಕ್ಕೆ ನೂರು ಟಿಕೆಟ್ ಕೊಟ್ಟ ಉದಾಹರಣೆಗಳಿಲ್ಲ. ಸಮೀಕ್ಷೆ, ಶಾಸಕರ ಕಾರ್ಯ ವೈಖರಿ ಸೇರಿ ಎಲ್ಲಾ ಮಾನದಂಡಗಳನ್ನು ನೋಡಿಕೊಂಡು ಟಿಕೆಟ್ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸ್ಪಷ್ಟಪಡಿಸಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಲಿ ಶಾಸಕರಿಗೆ ಟಿಕೆಟ್ ತಪ್ಪಲಿದೆ ಎನ್ನುವ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಯಡಿಯೂರಪ್ಪನವರು ಸಂಸದೀಯ ಮಂಡಳಿ ಸದಸ್ಯರು, ಅವರಿಗೆ ಮಾಹಿತಿ ಇರಬಹುದು, 70 ವಯಸ್ಸು ದಾಟಿದವರಿಗೆ ಟೀಕೆಟ್ ನೀಡಬೇಕೇ, ಬೇಡವೇ ಎನ್ನುವ ವಿಚಾರ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರತಿಯೊಂದು ಕ್ಷೇತ್ರದ ಕುರಿತು ಸಂಸದೀಯ ಮಂಡಳಿಯಲ್ಲಿ ಚರ್ಚೆ ನಡೆಯುತ್ತಿದೆ. ಆದರೆ, ನೂರಕ್ಕೆ ನೂರರಷ್ಟು ಎಲ್ಲರಿಗೂ ಟಿಕೆಟ್ ಸಿಗುತ್ತದೆ ಅಂತ ಹೇಳಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದರು.
ಇದೇ ವೇಳೆ ಶಾಸಕ ಮಾಡಾಳ ವಿರೂಪಾಕ್ಷಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ ಕುರಿತಂತೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಈ ಪ್ರಕರಣದ ವಿಚಾರದಲ್ಲಿ ತನಿಖೆ ನಡೆಸಲು ಲೋಕಾಯುಕ್ತರು ಸರ್ವಸ್ವತಂತ್ರರು, ನ್ಯಾಯಾಲಯ ತೀರ್ಮಾನಕ್ಕೆ ನಾವೆಲ್ಲಾ ತಲೆ ಬಾಗಬೇಕಾಗುತ್ತದೆ, ಇದರ ನಂತರ ಲೋಕಾಯುಕ್ತರು ಮುಂದಿನ ತನಿಖೆ ನಡೆಸಿದ್ದಾರೆ. ಇದರಲ್ಲಿ ಯಾವುದನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಕಾಂಗ್ರೆಸ್ ಸುಖಾಸುಮ್ಮನೆ ನಮ್ಮ ವಿರುದ್ಧ ಮೇಲೆ ಆರೋಪ ಮಾಡುತ್ತಿದೆ. ಈ ಥರ ಆಪಾದನೆ ಮಾಡುವ ಮೂಲಕ ಅವರು ಮಾಡಿರುವ ಕರ್ಮ, ಪಾಪ, ಭ್ರಷ್ಟಾಚಾರ ತೊಳೆದು ಹೋಗುವುದಿಲ್ಲ, ಅದು ಮತ್ತೆ ಬಂದೆ ಬರುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ ಅವಧಿಯಲ್ಲಾದ ಭ್ರಷ್ಟಾಚಾರದ 59 ಪ್ರಕರಣಗಳನ್ನು ಎಸಿಬಿಗೆ ಕೊಟ್ಟದ್ದು, ಲೋಕಾಯುಕ್ತಕ್ಕೆ ಕೊಡುತ್ತೇವೆ. ಅಲ್ಲಿ ಕಾಂಗ್ರೆಸ್ ಬಣ್ಣ ಬಹಳಷ್ಟು ಬಯಲಾಗುತ್ತದೆ ಎಂದರು. ಇದೇವೇಳೆ ಮಾದಾಳ ವಿರೂಪಾಕ್ಷಪ್ಪ ಮೆರವಣಿಗೆಗೆ ಇದು ಸರಿಯಲ್ಲ ಎಂಬ ಸ್ಪಷ್ಟ ಸೂಚನೆ ಕೊಟ್ಟಿದ್ದಾಗಿ ಮುಖ್ಯಮಂತ್ರಿಗಳು ಹೇಳಿದರು.
ತಮ್ಮ ವಿರುದ್ಧ ಡಿ. ಕೆ. ಶಿವಕುಮಾರ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಬೊಮ್ಮಾಯಿ, ಆ ಪುಣ್ಯಾತ್ಮನಿಗೂ ಭ್ರಷ್ಟಾಚಾರಕ್ಕೂ ಬಿಡದ ನಂಟಿದೆ. ಅವರ ಬಾಯಲ್ಲಿ ಈ ರೀತಿ ಬರುವುದು ಸಹಜ ಎಂದು ಅವರು ಹೇಳಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ. ಟಿ. ರವಿಯವರನ್ನು ಹಿಂದೂ ಉಗ್ರ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ ಸಿಎಂ, ಕಾಂಗ್ರೆಸ್ ನವರಿಗೆ ದೇಶಭಕ್ತರು ಉಗ್ರರ ಹಾಗೆ ಕಾಣುತ್ತಾರೆ, ನಮಗೆ ದೇಶದ್ರೋಹಿಗಳು ಉಗ್ರರ ಹಾಗೇ ಕಾಣುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಸಚಿವ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಕರ್ನಾಟಕ ಸಾವಜವ ಬಿಜ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ, ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.