ವಿಜಯಪುರ: ಎಂ. ಬಿ. ಪಾಟೀಲ ಯಾರಿಗೂ ಅಂಜುವುದಿಲ್ಲ ಎಂದು ಕೆ ಪಿ ಸಿ ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಸಿಎಂ ಎದುರಿನಲ್ಲಿಯೇ ವಿರೋಧಿಗಳಿಗೆ ಚಾಟಿ ಬೀಸಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿ ಬಳಿಯ ಕೃಷ್ಣಾ ನಗರದ ಬಿ ಟಿ ಪಾಟೀಲ್ ಮೆಮೊರಿಯಲ್ ಸ್ಕೂಲ್ ಆವರಣದಲ್ಲಿ ಜಲಸಂಪನ್ಮೂಲ ಇಲಾಖೆಯ ಕೆ ಬಿ ಜೆ ಎನ್ ಎಲ್ 3ನೇ ಹಂತದಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಂ. ಬಿ. ಪಾಟೀಲರು ಭಾಷಣ ಆರಂಭಿಸುತ್ತಿದ್ದಂತೆ ಸಭೆಯಲ್ಲಿ ಪಾಲ್ಗೋಂಡಿದ್ದ ಕೆಲವು ಜನರು ಮೋದಿ ಮೋದಿ ಎಂದು ಘೋಷಣೆ ಹಾಕತೊಡಗಿದರು. ಆಗ ಥಟ್ಟನೆ ಪ್ರತಿಕ್ರಿಯೆ ನೀಡಿದ ಅವರು, ಎಂ ಬಿ ಪಾಟೀಲ ಯಾರಿಗೂ ಅಂಜೋದಿಲ್ಲ ಎಂದು ಚಾಟಿ ಬೀಸಿದರು.
ಸತ್ಯ ಹೇಳ್ತೆನೆ ಎಂದ ಎಂ ಬಿ ಪಿ
ತಮ್ಮ ಭಾಷಣ ಮುಂದುವರೆಸಿದ ಅವರು, ಸತ್ಯ ಹೇಳುತ್ತೇನೆ ಕೇಳಿ ಎಂದು ಹೇಳಿದರು. 1.33 ಲಕ್ಷ ಎಕರೆ ಭೂ ಸ್ವಾಧೀನ ಆಗಬೇಕಿದೆ. ನಾನು ಜಲಸಂಪನ್ಮೂಲ ಸಚಿವನಿದ್ದಾಗ ಗೈಡನ್ಸ್ ವ್ಯಾಲು ಕಡಿಮೆ ಇತ್ತು. ನಾನು ಮಂತ್ರಿ ಇದ್ದಾಗ ಮೂರು ಬಾರಿ ಮೀಟಿಂಗ್ ಮಾಡಿದ್ದೇನೆ. ನಾವು ಬೀಳಗಿಯ ಗೈಡನ್ಸ್ ವ್ಯಾಲು ಫಿಕ್ಸ್ ಮಾಡಿದ್ವಿ. ವಿಜಯಪುರ ತಾಲೂಕಿನಲ್ಲಿ ಸೇಲ್ಸ್ ಸ್ಟ್ಯಾಟಿಕ್ಸ್ ಇರದಿದ್ದಕ್ಕೆ ಬೆಲೆ ಸಿಗಲಿಲ್ಲ. ನಾವು ಮುಂದೆ ಗೈಡನ್ಸ್ ವ್ಯಾಲು ಫಿಕ್ಸ್ ಮಾಡಿದಿವಿ. ನಮ್ಮ ಅಂದಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅನುಮೋದನೆ ಕೊಟ್ಟಿದ್ದರು. ಆಗಿನ ಸಿಎಂ ಸಿದ್ರಾಮಯ್ಯ ಅವರೂ ಅನುಮೋದನೆ ಕೊಟ್ರು. ನಾನು ರಾಜಕೀಯ ಮಾಡೋದಿಲ್ಲ, ಆಗ ಅನುಮೋದನೆ ಸಿಕ್ಕ ಗೈಡನ್ಸ್ ವ್ಯಾಲು ಫೈಲ್ ಮುಂದುವರೆಸಿ ಎಂದು ಅವರು ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.
ನಾನು ನೀರಾವರಿ ಸಚಿವನಾಗಿದ್ದಾಗ ಸ್ಪೇಷಲ್ ಹೆಡ್ ಆಫ್ ಅಕೌಂಟ್ ಮಾಡಿದ್ದೇನ. ನಮ್ಮ ಭಾಗದ ಜನಕ್ಕೆ ಆಗಿರುವ ತಾರತಮ್ಯ ಸರಿಪಡಿಸಿ ಎಂದು ಮನವಿ ಮಾಡಿದ ಅವರು, ಪರಿಹಾರ ಪಡೆದ ಬಳಿಕ ಕೋರ್ಟ್ ಗೆ ಹೋಗುವ ಅವಕಾಶ ಕೊಡಿ ಎಂದೂ ಮನವಿ ಮಾಡಿದರು.
ತಾವು ಮಾಡದಿದ್ದರೆ ನಮ್ಮ ಸರಕಾರ ಮಾಡಲಿದೆ
ಇದೇ ವೇಳೆ, ತಾವು ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೇಳಿದ ಅವರು, ತಾವು ಮಾಡದಿದ್ದರೆ ಮುಂದೆ ನಮ್ಮ ಸರಕಾರ ಅಧಿಕಾರಕ್ಕೆ ಬರಲಿದೆ. ಆಗ ಮತ್ತೆ ನಾವು ಆ ಕೆಲಸವನ್ನು ಪೂರ್ಣ ಮಾಡುತ್ತೇವೆ ಎಂದು ಹೇಳಿದರು.
ಸಿಎಂ ಆಗಮನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಮೀಟಿಂಗ್ ಬಿಟ್ಟು ಬಂದಿದ್ದೇನೆ. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ರಾಜಕೀಯ ಬೆರೆಸೋದು ಬೇಡ. ಯಾವ ಪಕ್ಷದವರೇ ಇರಲಿ ಅಭಿವೃದ್ಧಿ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.