ರೇವಣಸಿದ್ದೇಶ್ವರ ಏತ ನೀರಾವರಿ ಹಂತ-1 ಹಾಗೂ ಇಂಡಿ ತಾಲೂಕಿನ 16 ಕೆರೆ ತುಂಬುವ ಕಾಮಗಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ

ವಿಜಯಪುರ: ಇಂಡಿ ತಾಲೂಕಿನ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಚಾಲನೆ ನೀಡುವ ಮೂಲಕ ನಾಗಠಾಣ ಮತ್ತು ಇಂಡಿ ತಾಲೂಕಿನ 70 ಸಾವಿರ ಎಕರೆ ರೈತರ ಜಮೀನುಗಳಿಗೆ ನೀರಾವರಿ ಒದಗಿಸುವ ಮೂಲಕ ರೈತರಿಗೆ ವಿಶ್ವಾಸ ಮೂಡಿಸುವ ಕಾರ್ಯ ಸರ್ಕಾರ ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಜಲಸಂಪನ್ಮೂಲ ಇಲಾಖೆ, ಕೃಷ್ಣಾಭಾಗ್ಯ ಜಲ ನಿಗಮ ನಿಯಮಿತದ ಸಹಯೋಗದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಹಂತ-1 ಹಾಗೂ ಇಂಡಿ ತಾಲೂಕಿನ 16 ಕೆರೆ ತುಂಬುವ ಕಾಮಗಾರಿಗಳಿಗೆ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಗ್ರಾಮದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿ ಮುಖಂಡ ಗೋಪಾಲ ಕಾರಜೋಳ ನೇತೃತ್ವದಲ್ಲಿ ಕಾರ್ಯಕರ್ತರು ಬೃಹತ್ ಹಾರ ಹಾಕಿ ಸನ್ಮಾನಿಸಿದರು

ಜಿಲ್ಲೆಯ ಅತಿ ಎತ್ತರದ ಪ್ರದೇಶದವಾದ ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ಪ್ರದೇಶದಲ್ಲಿ ಇಂಡಿ ಏತ ನೀರಾವರಿ ಯೋಜನೆಯಿಂದ ಈ ಭಾಗದ ಬಹುತೇಕ ಪ್ರದೇಶ ವಂಚಿತವಾಗಿದ್ದು, ಹೊರ್ತಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ನುಡಿದಂತೆ ಇಂದು ಅಡಿಗಲ್ಲು ಸಮಾರಂಭ ನೆರವೇರಿಸಲಾಗಿದೆ. ಈ ಯೋಜನೆಯ ಮೊದಲನೇ ಹಂತ ಮುಗಿಯುವುದರೊಳಗೆ ಅತ್ಯಂತ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ 2ನೇ ಹಂತದ ಕಾಮಗಾರಿ ನಾವೇ ಮಾಡುತ್ತೇವೆ ಎಂದು ತಮ್ಮ ಭರವಸೆ ವ್ಯಕ್ತಪಡಿಸಿದರು.

ಜನರ ಬದುಕು ಉನ್ನತಮಟ್ಟಕ್ಕೆ ಕೊಂಡೊಯ್ಯಲು ನನಗೆ ಸಿಕ್ಕ  ಅಧಿಕಾರಾವಧಿಯಲ್ಲಿ  ಉತ್ತಮ ನಿರ್ಣಯಗಳನ್ನು ಕೈಗೊಂಡು ಜನರ ಪ್ರೀತಿ ಗಳಿಸಿ ಜನರ ಭಯ ಮನದಲ್ಲಿಟ್ಟುಕೊಂಡು ಕಾರ್ಯ ಮಾಡುತ್ತಿದ್ದೇನೆ. ಈ ಭಾಗ ನೀರಾವರಿಯಾದರೆ ಕೇವಲ ಈ ಜಿಲ್ಲೆಗೆ ಮಾತ್ರ ಸೀಮಿತವಾಗದೇ ರಾಜ್ಯದ ಶೇ.3 ರಷ್ಟು ಆದಾಯ ಹೆಚ್ಚಾಗಲಿದೆ. ಕೃಷಿಯಲ್ಲಿ ಶೇ.1 ರಷ್ಟು ಬೆಳವಣಿಗೆಯಾದರೆ ಶೇ.10 ರಷ್ಟು ಸೇವಾ ಕ್ಷೇತ್ರದಲ್ಲಿ ಹೆಚ್ಚಾಗಲಿದ್ದು, ಈ ನೀರಾವರಿ ಯೋಜನೆಯಿಂದ ರಾಜ್ಯದ ಬೆಳವಣಿಗೆಗೆ ನಾಂದಿಯಾಗಲಿದೆ ಎಂದು ಹೇಳಿದರು.

ಈ ಭಾಗದ ಬಹುದಿನಗಳ ಬೇಡಿಕೆಯಂತೆ, ಈ ಯೋಜನೆಗೆ ಹಲವು ಹೋರಾಟಗಳು ನಡೆದಿವೆ. ಹೋರಾಟದಲ್ಲಿ ಕಂಡ ಕನಸನ್ನು ನನಸಾಗುವ ಈ ಘಳಿಗೆ. ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಆರಂಭದಿಂದ ಕೇವಲ ಈ ಭಾಗ ಮಾತ್ರವಲ್ಲದೇ,  ಮುಂದಿನ ದಿನಗಳಲ್ಲಿ ಅಖಂಡ ವಿಜಯಪುರ-ಬಾಗಲಕೋಟೆ ಜಿಲ್ಲೆಗಳ ನೀರಾವರಿ ಬೆಳವಣಿಗೆಗೆ ನಾಂದಿಯಾಗಲಿದೆ ಎಂದು ಹೇಳಿದರು.

ನಾನು ನೀರಾವರಿ ಸಚಿವನಾಗಿದ್ದಾಗ ಕೃμÁ್ಣ ಜಲಾನಯನ ಪ್ರದೇಶದಲ್ಲಿ ಎ ಮತ್ತು ಬಿ ಸ್ಕೀಂ ಗಳೆಂದು ನೆನೆಗುದಿಗೆ ಬಿದ್ದಿದ್ದ 9 ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದ್ದೇನೆ. ಮುಳವಾಡ, ಚಿಮ್ಮಲಗಿ, ಗುತ್ತಿಬಸವಣ್ಣ ಏತ ನೀರಾವರಿ,ಕೊಪ್ಪಳ ಏತ ನೀರಾವರಿ ಸೇರಿದಂತೆ ಹಲವು ಯೋಜನೆಗಳಿಗೆ ಅಡಿಗಲ್ಲು ಹಾಕಿ, ಪಂಪ್ ಹೌಸ್‍ಗಳು ನಿರ್ಮಾಣಗೊಳಿಸಿ, ರೈತರ ಹೊಲಗಳಿಗೆ ನೀರು ಬಂದಾಗ ನಮ್ಮ ಸಂಕಲ್ಪ ಪೂರ್ಣಗೊಳ್ಳುತ್ತದೆ. ಭೂಮಿ ಕಳೆದುಕೊಂಡ ರೈತರಿಗೆ ಕೇವಲ ಪರಿಹಾರ ಕೊಡುವುದಷ್ಟೇ ಅಲ್ಲದೇ ಪುನರ್‍ವಸತಿ ಪುನರ್‍ನಿರ್ಮಾಣದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು  ಎಂದರು.

ಇಲ್ಲಿನ ಫಲವತ್ತಾದ ಮಣ್ಣನ್ನು ದೇವರು ಮತ್ತು ನಿಸರ್ಗ ಕೊಟ್ಟ ವರವಾಗಿವೆ ಆದ್ದರಿಂದ, ಇಲ್ಲಿರುವ ಮಣ್ಣು, ನೀರು ಶ್ರೇಷ್ಟವಾಗಿದೆ. ಇಂತಹ ಪುಣ್ಯ ಭೂಮಿಯಲ್ಲಿ ಬೆಳೆದ ಬೆಳೆ ಅತ್ಯಂತ ಗುಣಮಟ್ಟದ್ದಾಗಿರುತ್ತದೆ. ಈ ಭಾಗದಲ್ಲಿ ಕಬ್ಬು ಬೆಳೆಯು ಅತ್ಯಂತ ಗುಣಮಟ್ಟದ್ದಾಗಿದೆ. ಇಲ್ಲಿ ಬೆಳೆಯುವ ಕಬ್ಬು ಅತ್ಯಂತ ಸಿಹಿಯಾದ ಮತ್ತು ಅತೀ ಹೆಚ್ಚು ಇಳುವರಿ ಹೊಂದಿರುವುದಕ್ಕೆ ಕಾರಣ ಇಲ್ಲಿನ ಫಲವತ್ತಾದ  ಮಣ್ಣು, ನೀರು ಎಂದು ಹೇಳಬಹುದು. ಜನರ ಜನಾಂಗದ ವಿಷಯ ಬಂದಾಗ ಸವಾಲುಗಳುನ್ನು ಎದುರಿಸಿ ಪರಿಹಾರ ಕೊಡಿಸುವ ಕೆಲಸ ನಾನು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಹಂತ-2 ಕಾಮಗಾರಿಯೂ ನಮ್ಮಿಂದಲೇ ಆಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಜಿಲ್ಲೆಯ ವಿಜಯಪುರ, ಇಂಡಿ  ಮತ್ತು ನಾಗಠಾಣ ಕ್ಷೇತ್ರದ 28 ಸಾವಿರ ಹೆಕ್ಟೇರ್ ನೀರಾವರಿ ವಂಚಿತ ಕ್ಷೇತ್ರಕ್ಕೆ ನೀರಾವರಿ ಒದಗಿಸುವ ಹೊರ್ತಿ-ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ 2638 ಕೋಟಿ ರೂ. ಅಂದಾಜು ಮೊತ್ತದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಮೊದಲನೇ ಹಂತದಲ್ಲಿ ಮುಖ್ಯ ಸ್ಥಾವರದ ಕಾಮಗಾರಿ ಹಾಗೂ ರೈಸಿಂಗ್ ಮೇನ್ ಕಾಮಗಾರಿಯನ್ನು 812 ಕೋಟಿ ರೂ. ಮೊತ್ತದ ಟೆಂಡರ್ ಅನುಮೋದನೆ ನೀಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರು ಮಾತನಾಡಿ, ಅನೇಕ ವರ್ಷಗಳ ಹೋರಾಟದ ಫಲವಾಗಿ ಹೋರ್ತಿ-ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಸಾಕಾರಗೊಂಡಿದೆ. ಮುಖ್ಯಮಂತ್ರಿಗಳು ನೀರಾವರಿ ತಜ್ಞರಿದ್ದಾರೆ. ಜಲಸಂಪನ್ಮೂಲ ಸಚಿವರಿದ್ದ ಸಂದರ್ಭದಲ್ಲಿ  ಜಿಲ್ಲೆಯ 9 ಏತ ನೀರಾವರಿ ಯೋಜನೆಗಳು ಪೂರ್ಣಗೊಳಿಸಿದ್ದಾರೆ. ಚುನಾವಣೆ ನೋಡಿ ಕೆಲಸ ಮಾಡುತ್ತಾರೆ ಎಂಬ ಮಾತಿದೆ, ಆದರೆ ನಾನು ಯಾವುದೇ ಚುನಾವಣೆಯನ್ನು ಲೆಕ್ಕಿಸದೇ, ನನ್ನಲಿರುವ ಜನರ ಕಾಳಜಿಗಾಗಿ ಹಗಲಿರುಳು ಈ ಯೋಜನೆ ಅನುಷ್ಠಾನಕ್ಕೆ ಶ್ರಮಿಸಿದ್ದೇನೆ ಎಂದು ಹೇಳಿದರು.

ಕಳೆದ ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಹಲವು ಯೋಜನೆಗಳಿಗೆ ಮುಖ್ಯಮಂತ್ರಿಗಳು ಸಾಕಷ್ಟು  ಅನುದಾನ ಒದಗಿಸಿದ್ದಾರೆ. ಇದರ ಸದುಪಯೋಗವಾಗಬೇಕು. ಈ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಜನರ ಸಹಕಾರವೂ ಅಷ್ಟೇ ಮುಖ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಶವಂತರಾಯಗೌಡ ಪಾಟೀಲ, ಸಂಸದ ರಮೇಶ ಜಿಗಜಿಣಗಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮಾತನಾಡಿದರು.

 

ಈ ಸಂದರ್ಭದಲ್ಲಿ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಸಿಂದಗಿ ಶಾಸಕ ರಮೇಶ ಭೂಸನೂರ, ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ರಾಜ್ಯ ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ದ್ರಾಕ್ಷಿ ಮತ್ತು ವೈನ್ ಬೋರ್ಡ್ ನೂತನ ಅಧ್ಯಕ್ಷ ಎಂ. ಎಸ್. ರುದ್ರಗೌಡರ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಸೇರಿದಂತೆ ನಾನಾ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ಹೊರ್ತಿ ರೇವಣಸಿದ್ಧೇಶ್ವರ ದೇವಸ್ಥಾನಕ್ಕೆ ಭೇಟಿ

ಕಾರ್ಯಕ್ರಮಕ್ಕೂ ಮೊದಲು ಹೊರ್ತಿಯಲ್ಲಿರುವ ಐತಿಹಾಸಿಕ ಶ್ರೀ ರೇವಣಸಿದ್ಧೇಶ್ವರ ದೇವಸ್ಥಾನಕ್ಕೆ ತೆರಳಿದ ಸಿಎಂ ಶಿವಲಿಂಗ ಮೂರ್ತಿಗೆ ಜಲಾಭಿಷೇಕ ಮತ್ತು ಪುಷ್ಪಾರ್ಚನೆ ಮಾಡಿದರು.  ಈ ಸಂದರ್ಭದಲ್ಲಿ ಅರ್ಚಕರು ಸಿಎಂ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಬಿಜೆಪಿ ಮುಖಂಡ ಅಣ್ಣಪ್ಪ ಖೈನೂರ ಮುಂತಾದವರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌