ವಿಜಯಪುರ: ಇತ್ತೀಚಿನ ದಿನಗಳಲ್ಲಿ ಕಳುವಾದ ಅಥವಾ ಕಾಣೆಯಾದ ಇಲ್ಲವೇ ಸುಲಿಗೆಯಾದ ಮೊಬೈಲ್ ಫೋನುಗಳನ್ನು ಸೈಬರ್ ಅಪರಾಧ ಅಥವಾ ನಾರ್ಕೋಟಿಕ್ಸ್ ಅಪರಾಧ ಸೇರಿದಂತೆ ನಾನಾ ಗಂಭೀರ ಅಪರಾಧಗಳಲ್ಲಿ ದುರ್ಬಳಕೆಯಾಗುತ್ತಿವೆ. ಇಂಥ ಮೊಬೈಲ್ ಫೋನ್ ಗಳ ದುರ್ಬಳಕೆ ತಪ್ಪಿಸಲು ಕೇಂದ್ರ ಸರಕಾರದ ದೂರಸಂಪರ್ಕ ಇಲಾಖೆ ಮೊಬೈಲ್ ಫೋನ್ ಬ್ಲಾಕ್ ಮಾಡಲು CEIR(Central Equipment Identity Register) ಪೋರ್ಟಲ್ ಸೇವೆ ಆರಂಭಿಸಿದೆ.
ರಾಜ್ಯ ಪೊಲೀಸ್ ಇಲಾಖೆ ಕೂಡ ಈ ನಿಟ್ಟಿನಲ್ಲಿ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಕ್ರಮ ಕೈಗೊಂಡಿದೆ ಎಂದು ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಇಂಥ ಮೊಬೈಲ್ ಫೋನುಗಳನ್ನು ಬ್ಲಾಕ್ ಮಾಡಲು ಸಾರ್ವಜನಿಕರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಮೊಬೈಲ್ ಕಳವು, ಕಾಣೆ ಅಥವಾ ಸುಲಿಗೆಯಾದರೆ ಮೊದಲು ಪ್ಲೆಸ್ಟೋರ್ ನಲ್ಲಿ ಲಭ್ಯವಿರುವ KSP app official ಮೊಬೈಲ್ ಅಪ್ಲಿಕೇಷನ್ ನ್ನು ಬಳಸಬಹುದು. ಪೊಲೀಸ್ ಠಾಣೆಗೆ ಹೋಗದೇ ಆ್ಯಪ್ ಮೂಲಕ ಇ-ಲಾಸ್ಟ್ ಆಪ್ಷನ್ ಗೆ ಹೋಗಿ ದೂರನ್ನು ನೀಡಿ ಈ ಬಗ್ಗೆ Digital e-Acknowledgement ಪಡೆಯಬಹುದಾಗಿದೆ. ಈ ಸೇವೆಯನ್ನು ಬಳಸಲು ಸಾಧ್ಯವಾಗದವರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಹೋಗಿ ಸ್ವೀಕೃತಿಯನ್ನು ಪಡೆಯಬಹುದಾಗಿದೆ.
ನಂತರ Acknowledgement ಸಹಾಯದಿಂದ ಡುಪ್ಲಿಕೇಟ್ ಸಿಮ್ ಪಡೆದುಕೊಳ್ಳಬೇಕು. ನಂತರ www.ceir.gov.in ವೆಬ್ ಸೈಟ್ ಗೆ ಹೋಗಿ ತಮ್ಮ ಮೊಬೈಲ್ ನ್ನು ಬ್ಲಾಕ್ ಮಾಡಿ ರಿಕ್ವೆಸ್ಟ್ ಐಡಿ ಪಡೆದುಕೊಳ್ಳಬೇಕು. ಇದಾದ 24 ಗಂಟೆಗಳಲ್ಲಿ ಮೊಬೈಲ್ ಬ್ಲಾಕ್ ಆಗುತ್ತದೆ. ನಂತರ ಅದು ಟ್ರ್ಯಾಕಿಂಗ್ ಕುರಿತು ನೇರವಾಗಿ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ರವಾನೆಯಾಗುತ್ತದೆ.
ನಂತರ ಮೊಬೈಲ್ ಟ್ರೇಸ್ ಅಂದರೆ ಸಿಕ್ಕ ತಕ್ಷಣ ಇ-ಲಾಸ್ಟ್ ನೀಡಿದ ಪೊಲೀಸ್ ಠಾಣೆಗೆ ಹೋಗಿ ಸಂಪರ್ಕಿಸಿ ಮೊಬೈಲ್ ಪಡೆಯಬಹುದಾಗಿದೆ. ಅಲ್ಲದೇ, www.ceir.gov.in ವೆಬ್ ಸೈಟ್ ಗೆ ಹೋಗಿ ಅನಬ್ಲಾಕ್ ಮಾಡಿ ಮತ್ತೆ ಮೊಬೈಲ್ ನ್ನು ಉಪಯೋಗಿಸಬಹುದಾಗಿದೆ ಎಂದು ಎಚ್. ಡಿ. ಆನಂದಕುಮಾರ ತಿಳಿಸಿದ್ದಾರೆ.