ವಿಜಯಪುರ: ನಮ್ಮ ದೇಶದಲ್ಲಿ ಮಹಿಳೆಯರಿಗೆ ಅತ್ಯಂತ ಮಹತ್ವಪೂರ್ಣ ಗೌರವ ನೀಡಲಾಗುತ್ತಿದೆ. ಮಹಿಳೆ ತಾನು ಕುಟುಂಬಕ್ಕೆ ಮಾತ್ರ ಸಿಮೀತವಾಗದೇ, ಸಾಂಸ್ಕೃತಿಕವಾಗಿ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕೆಂದು ಎಂದು ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಸಿ.ಬಿ. ದೇವರಮನಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಗರದ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡಾ ಸಾಧನೆಯ ಮೆರೆಯುವ ಮಹಿಳೆಯರನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಮುಂಚೂಣಿಯಲ್ಲಿ ಇರಬೇಕೆಂಬ ಉದ್ಧೇಶದೊಂದಿಗೆ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಇಂಥ ಕ್ರೀಡಾಕೂಟಗಳ ಸದುಪಯೋಗವನ್ನು ಪಡೆದುಕೊಂಡು ಹುಮ್ಮಸ್ಸು ಹಾಗೂ ಉತ್ಸಾಹದಿಂದ ಕ್ರೀಡೆಗಳಲ್ಲಿ ಭಾಗವಹಿಸಿ, ವಿಜೇತರಾಗಿ ಹೊರಹೊಮ್ಮಬೇಕು. ಇಂದು ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿಯೂ ಭಾಗವಹಿಸಿ, ಪ್ರಾವಿಣ್ಯತೆ ಹೊಂದಿ ತಮ್ಮ ಕಾರ್ಯಸಾಧನೆ ಮೆರೆದು ಅನೇಕರು ದೇಶಕ್ಕೆ ಕೀರ್ತಿ ತಂದಿದ್ದಾರೆ. ಅಂಥ ಸಾಧಕ ಮಹಿಳೆಯರು ನಮಗೆ ಆದರ್ಶವಾಗಬೇಕು. ಪ್ರತಿ ಪುರುಷನ ಸಾಧನೆಯ ಹಿಂದಿನ ಶಕ್ತಿ ಮಹಿಳೆಯೇ ಆಗಿರುತ್ತಾಳೆ. ಮಹಿಳೆಯರು ತಮ್ಮ ಒತ್ತಡದ ಬದುಕಿನಲಿ ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ಪ್ರತಿಜ್ಞಾ ವಿಧಿ ಬೋಧನೆ
ಇದೇ ಸಂದರ್ಭದಲ್ಲಿ ಜಿ. ಪಂ., ತಾ. ಪಂ., ತಾಲೂಕು ಯೋಜನಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ವತಿಯಿಂದ ಮತದಾನದ ಕುರಿತು ಪ್ರತಿಜ್ಞಾವಿಧಿ ಬೋಧಿಸಿ ಮತದಾನದ ಜಾಗೃತಿ ಮೂಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜಿ. ಪಂ. ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಮತಿ ಅನುಸೂಯ ಚಲವಾದಿ, ಜಿಲ್ಲಾ ಪಂಚಾಯತ್ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಶ್ರಿಮತಿ ಮುಜಾರ, ಎಸ್.ಎಸ್. ಅಳ್ಳಗಿ ಸೇರಿದಂತೆ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಕ್ರೀಡಾಪಟುಗಳು ಉಪಸ್ಥಿತರಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಹಾಯಕ ನಿರ್ದೇಶಕ ಎಸ್. ಜಿ. ಲೋಣಿ ಸ್ವಾಗತಿಸಿ, ವಂದಿಸಿದರು.