ಎಲ್ಲ ರಂಗಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ ಒತ್ತು ನೀಡಬೇಕು. ಜಿ. ಪಂ. ಸಿಇಓ ರಾಹುಲ್ ಶಿಂಧೆ

ವಿಜಯಪುರ: ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಕಳೆದ ವರ್ಷ ಮಹಿಳೆಯರಿಗೆ ಶೇ. 40ರಷ್ಟಿದ್ದ ಮೀಸಲಾತಿಯನ್ನು ಈ ವರ್ಷದಲ್ಲಿ ಶೇ. 52 ರಷ್ಟು ಒದಗಿಸುವ ಮೂಲಕ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿ, ಸಮಾನತೆಗೆ ಒತ್ತು ನೀಡಲಾಗಿದೆ ಎಂದು ಜಿ. ಪಂ. ಸಿಇಓ ರಾಹುಲ್ ಶಿಂಧೆ ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿ. ಪಂ. ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ನಗರ ಹಾಗೂ ಗ್ರಾಮೀಣ ಯೋಜನೆ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಅಂತಾರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಲಿಂಗ ಸಮಾನತೆ ನಾವೀನ್ಯತೆ ಮತ್ತು ತಂತ್ರಜ್ಞಾನ ವಿಷಯ ಕುರಿತು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಜಿ. ಪಂ. ಸಿಇಓ ರಾಹುಲ ಶಿಂಧೆ ಮಾತನಾಡಿದರು

 

ಪ್ರತಿ ಕ್ಷೇತ್ರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು. ಮಹಿಳೆಯರಿಗೆ ಕೂಲಿ ಕೆಲಸದಲ್ಲಿ ಪಾಲ್ಗೊಳ್ಳಲು ಅವಕಾಶ ಒದಗಿಸಲಾಗಿದೆ. ಯಶಸ್ವಿ ಕಾರ್ಯಗಳನ್ನು ಕೈಗೊಂಡು ಮಹಿಳೆಯರಿಗೆ ದೊರಕುವ ಸೌಲಭ್ಯಗಳನ್ನು ಒದಗಿಸುವ ಮೂಲಕ ಮಹಿಳಾ ಸಮಾನತೆಗೆ ಮುಂದಾಗಬೇಕು ಎಂದು ಅವರು ಹೇಳಿದರು.

ಮಹಿಳೆಯರಿಗೆ ಯಾವುದೇ ರೀತಿಯ ಅನ್ಯಾಯ, ದೌರ್ಜನ್ಯಗಳಾದಲ್ಲಿ ಮೇಲಾಧಿಕಾರಿಗಳಿಂದ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಬೇಕು.  ಅಧಿಕಾರಿಗಳಿಂದ ಸಮಸ್ಯೆಗೆ ಪರಿಹಾರ ದೊರೆಯದೇ ಹೋದರೆ ನೇರವಾಗಿ ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮಹಿಳೆಯರ ಸುರಕ್ಷತೆ, ರಕ್ಷಣೆಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಪರಿಹಾರ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಸಿಇಓ ಹೇಳಿದರು.

ಅಭಿವೃದ್ಧಿ ಹೊಂದಿದ ದೇಶಗಳಾದ ಅಮೇರಿಕಾ, ಯುರೋಪ್, ಇಂಗ್ಲೆಂಡ, ಫ್ರಾನ್ಸ್ ದೇಶಗಳಲ್ಲಿ ಮಹಿಳೆಯರು ವಿವಿಧ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವಂತೆ ನಮ್ಮ ದೇಶದ ಮಹಿಳೆಯರು ರಾಜಕೀಯ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಖಾಸಗಿಕಂಪನಿಗಳು, ಎಲ್ಲ ಕ್ಷೇತ್ರಗಳಲ್ಲಿ ನಮ್ಮ ದೇಶದ ಮಹಿಳೆಯರು ಪ್ರಗತಿ ಸಾಧಿಸಿದ್ದಾರೆ. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಮಟ್ಟದ ಉದ್ಯೋಗಗಳನ್ನು ಪಡೆದು ತಮ್ಮ ಬದುಕನ್ನು ಕಟ್ಟಿಕೊಂಡು ಸಾಧನೆ ಮಾಡಬೇಕು ಎಂದು ಜಿ. ಪಂ. ಸಿಇಓ ಹೇಳಿದರು.

ಸಮಾಜದಲ್ಲಿ ಮಹಿಳೆಯರು ಕೂಡ ತಮ್ಮ ಸ್ವಂತ ದುಡಿಮೆಯಲ್ಲಿ ಬದುಕಬೇಕು. ಎಲ್ಲ ಪಂಚಾಯಿತಿಗಳಲ್ಲಿ ವಿನೂತನವಾಗಿ ಕಸ ವಿಲೇವಾರಿ ಘಟಕಗಳಿಗೆ ವಾಹನ ಚಾಲನೆಯನ್ನು ನಿರ್ವಹಿಸಲು ಮಹಿಳೆಯರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ 120 ದಿನಗಳ  ವಾಹನ ಚಾಲನೆ ತರಬೇತಿಯನ್ನು ನೀಡಲಾಗಿದೆ. ಸ್ವ-ಸಹಾಯ ಸಂಘಗಳಿಗೆ ಬಂಡವಾಳ ನಿಧಿಯಲ್ಲಿ ಸುಮಾರು 22 ಕೋಟಿ ರೂ. ಅನುದಾನವನ್ನು ಸರ್ಕಾರ ಒದಗಿಸಿದೆ. ಸಾಮಾಜಿಕ ಸ್ತರದಲ್ಲಿ ಮಹಿಳೆ ಸ್ವಾವಲಂಬಿಯಾಗಿ ತನ್ನ ಕುಟುಂಬವನ್ನು ಸಮರ್ಥವಾಗಿ ನಿಭಾಯಿಸುವ ದೃಷ್ಟಿಯಿಂದ ಹಲವಾರು ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.

ಮಹಿಳೆಯರು ಮುಂಚೂಣಿಯಲ್ಲಿರಬೇಕು. ಮಹಿಳೆಯರ ಅಭ್ಯುದಯಕ್ಕಾಗಿ ಜಿಲ್ಲೆಯಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಿ ಆ ಮೂಲಕ ಕಾರ್ಯ ನಿರ್ವಹಿಸಲಾಗುತ್ತಿದೆ. ಈ ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಾಹುಲ ಶಿಂಧೆ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಬಿ. ಹೊಸಮನಿ ಮಾತನಾಡಿ, ಮಹಿಳೆ ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲೀಕರಣ ಹೊಂದಬೇಕು. ಸಮಾಜದಲ್ಲಿನ ಸಮಸ್ಯೆಗಳನ್ನು ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು. ಶಿಕ್ಷಣ ಪಡೆದು, ಮಹಿಳೆಯರು ಎಲ್ಲ ರಂಗಗಳಲ್ಲಿ ಮುಂದೆ ಬರಬೇಕು. ಮಹಿಳೆ ಶಿಕ್ಷಣ ಪಡೆದರೆ ಸಮಾಜ ಸುಧಾರಣೆಯಾಗುತ್ತದೆ. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಸಮಾಜಕ್ಕೆ ಮಾದರಿಯಾದ ಮಹಿಳೆ ಸಾವಿತ್ರಿಬಾಯಿ ಫುಲೆಯವರನ್ನು ಸ್ಮರಿಸುತ್ತೇವೆ. ಅವರು ದೇಶದ ಮಹಿಳೆಯರಿಗೆ ಶಿಕ್ಷಣವನ್ನು ಒದಗಿಸಿಕೊಡುವಲ್ಲಿ ಅಪ್ರತಿಮ ಸಾಧನೆಯನ್ನು ಮೆರೆದಿದ್ದಾರೆ ಎಂದು ಹೇಳಿದರು.

ಅಂಜುಮನ್ ಕಾನೂನು ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕಿ ಉಜ್ವಲಾ ಸರನಾಡಗೌಡ ಅವರು ಅಥಿತಿ ಉಪನ್ಯಾಸ ನೀಡಿ ಮಾತನಾಡಿ, ಮಹಿಳೆಯರು ಸಾಧಕಿಯರಾಗಿ ಹೊರಹೊಮ್ಮಿದ ಘಳಿಗೆಯನ್ನು ಆಚರಿಸಬೇಕು ಎಂಬ ಸದುದ್ದೇಶದ ಹೊಂದಲಾಗಿದೆ. ಮಹಿಳೆಯರಿಗೆ ಮೀಸಲಿರುವ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳದೇ, ಅವುಗಳನ್ನು ಅನುಸರಿಸಿಕೊಂಡು ಸಮಾಜದಲ್ಲಿ  ಬದುಕಬೇಕು. ಸಮಾಜದಲ್ಲಿರುವ ದೌರ್ಜನ್ಯ, ಅಡೆತಡೆ, ಅನ್ಯಾಯಗಳನ್ನು ಮೆಟ್ಟಿ ನಿಂತು ಶಕ್ತಿ-ಯುಕ್ತಿಯಿಂದ ಬದುಕಿ ಬಾಳಬೇಕು. ಲಿಂಗ ಸಮಾನತೆ, ಹೊಸ ತಂತ್ರಜ್ಞಾನ ಹೊರ ತರುವುದರ ಮೂಲಕ ಮಹಿಳೆಯರಿಗೆ ಪ್ರೋತ್ಸಾಹ ಒದಗಿಸಲಾಗುತ್ತಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಧಿಕಾರಿ ಸಿ. ಬಿ. ಕುಂಬಾರ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಸಿ. ಬಿ. ದೇವರಮನಿ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಮತಿ ಅನುಸೂಯಾ ಚಲವಾದಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಕೆ. ಕೆ. ಚವ್ಹಾಣ, ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್.ಸಿ. ಮ್ಯಾಗೇರಿ, ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ದೀಪಾಕ್ಷಿ ಜಾನಕಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಸ್. ಜಿ. ಲೋಣಿ, ಜಿಲ್ಲಾ ವಿಕಲಚೇತನರ ಹಾಗೂ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ರಾಜಶೇಖರ ದೈವಾಡಿ, ಲೀಡ ಬ್ಯಾಂಕ್ ಮ್ಯಾನೇಜರ್ ನರೇಂದ್ರ ಬಾಬು, ಶ್ರೀಧರ ಕುಲಕರ್ಣಿ, ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಸನ್ಮಾನಿಸಲಾಯಿತು. ವಿಜಯಪುರದ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ಮಾಮೀಜಿಯವರ ಕುರಿತ ನೃತ್ಯ ಪ್ರದರ್ಶನ ಮತ್ತು ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು.

Leave a Reply

ಹೊಸ ಪೋಸ್ಟ್‌