ವಿಜಯಪುರ: ಜಾಗತಿಕರಣದ ಮಧ್ಯೆಯೂ ಹಿಂದಿ ಭಾಷೆಯು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ವಿಶ್ವದ ಎರಡನೇ ಅತಿ ದೊಡ್ಡ ಭಾಷೆಯಾಗಿ ಇಂದು ಹೊರಹೊಮ್ಮಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಿ. ಎಸ್. ನಾವಿ ಹೇಳಿದ್ದಾರೆ.
ನಗರದ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯವು, ಎಸ್. ಬಿ. ಕಲಾ ಮತ್ತು ಕೆ. ಸಿ. ಪಿ ವಿಜ್ಞಾನ ಮಹಾವಿದ್ಯಾಲಯ ಹಾಗೂ ಮುಂಬೈ ಹಿಂದಿ ಅಕಾಡೆಮಿ ಇವುಗಳ ಸಹಯೋಗದಲ್ಲಿ ಆಯೋಜಿಸಲಾದ ಸಮಕಾಲಿನ ಹಿಂದಿ ಭಾಷಾ ಔರ್ ಸಾಹಿತ್ಯ- ವಿವಿಧ ಆಯಾಮ ಎಂಬ ವಿಷಯದ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದರು.
ಇಂಗ್ಲಿಷ್ ಪ್ರಭಾವ ಹೆಚ್ಚುತ್ತಿರುವ ಸಂದರ್ಭದಲ್ಲಿಯೂ ಹಿಂದಿ ಭಾಷೆಯು ಪ್ರಗತಿಯತ್ತ ಸಾಗಿದೆ. ಇದು ನಮ್ಮ ದೇಶದ ಹೆಮ್ಮೆ. ಹಿಂದಿಯನ್ನು ಇನ್ನೂ ಹೆಚ್ಚು ಹೆಚ್ಚು ಬಳಸಬೇಕಾದ ಮತ್ತು ಪ್ರಸಾರ ಮಾಡಬೇಕಾದ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ಕೋಲಾಪುರ ಶಿವಾಜಿ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ವಿಶ್ರಾಂತ ಅಧ್ಯಕ್ಷ ಡಾ. ಅರ್ಜುನ ಚವ್ಹಾಣ ಮಾತನಾಡಿ ಇಂದು ಹಿಂದಿ ಭಾಷೆಯ ಎಷ್ಟೋ ಪದಗಳು ಇಂಗ್ಲಿಷ್ ಭಾಷೆಯಲ್ಲಿ ಕೂಡಿಕೊಂಡಿವೆ. ದೇಶದ ಎಲ್ಲಾ ಭಾಷೆಗಳಲ್ಲಿ ಹಿಂದಿಯ ಪದಗಳನ್ನು ಮಿಶ್ರಣ ಮಾಡಿ ಬಳಸಲಾಗುತ್ತಿದೆ. ಸಾಹಿತ್ಯವು ಪ್ರವಾಹದಂತೆ ಹರಿಯುತ್ತದೆ. ಹಿಂದಿ ಸಾಹಿತ್ಯದ ನಾನ ಪ್ರಕಾರಗಳ ಅಧ್ಯಯನ ಮಾಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಸ್. ಜಿ. ರೂಡಗಿ ಮಾತನಾಡಿ, ಸಾಮಾನ್ಯವಾಗಿ ಬೇರೆ ಬೇರೆ ವಿಷಯಗಳ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ಆಯೋಜಿಸುವುದನ್ನು ಕಾಣುತ್ತೇವೆ. ಆದರೆ ಇಂದು ಹಿಂದಿ ಭಾಷೆಯ ಅಂತರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಿರುವುದು ನಮಗೆ ಹೆಮ್ಮೆ ತಂದಿದೆ. ಆಗಾಗ ಇಂಥ ವಿಚಾರ ಸಂಕಿರಣಗಳನ್ನು ನಡೆಸುವುದರಿಂದ ಸಾಹಿತ್ಯದ ಬೆಳವಣಿಗೆ, ಇತಿಹಾಸ ಹಾಗೂ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು.
ಈ ವಿಚಾರ ಸಂಕಿರಣದಲ್ಲಿ ಸಮಕಾಲಿನ ಹಿಂದಿ ಸಾಹಿತ್ಯ- ವಿವಿಧ ವಿಮರ್ಶೆ ಎಂಬ ಸಂಶೋಧನ ಗ್ರಂಥ ಹಾಗೂ ಅಕ್ಷಯವಟ: ಸಭ್ಯತಾಕಿ ವಿಸಂಗತಿಯಾಂ ಎಂಬ ಎರಡು ಕೃತಿಗಳನ್ನು ಬಿ. ಎಲ್. ಡಿ. ಇ ಸಂಸ್ಥೆಯ ಮುಖ್ಯ ಆಡತಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಅಮೇರಿಕಾದ ಪತ್ರಕರ್ತೆ ಹಾಗೂ ಅನುವಾದಕಿ ಡಾ. ಅನಿತಾ ಕಪೂರ ಹಾಗೂ ಲಂಡನ್‍ನ ಹಿಂದಿ ಕಥಾ ಲೇಖಕಿ ಅರುಣಾ ಸಬ್ಬರವಾಲ ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡಿದರು. ಮುಂಬೈ ಹಿಂದಿ ಅಕಾಡೆಮಿಯ ರಾಷ್ಟ್ರೀಯ ಅಧ್ಯಕ್ಷ ಪವನ ತಿವಾರಿ, ಎಸ್. ಬಿ. ಕಲಾ ಮತ್ತು ಕೆ. ಸಿ, ಪಿ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಸಿ. ಎನ್. ಚೌಗಲೆ, ಹಿಂದಿನ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರೊ. ಎಸ್. ಜಿ. ತಾಳಿಕೋಟಿ, ಪ್ರೊ. ಎಂ. ಎಸ್. ಝಳಕಿ, ಪ್ರೊ. ವಿ. ಎಸ್. ಬಗಲಿ, ಡಾ. ಆರ್. ಎಂ. ಮಿರ್ಧೆ, ಪ್ರೊ. ಐ. ಬಿ. ಚಿಪ್ಪಲಕಟ್ಟಿ, ಪ್ರೊ. ಪಿ. ಎಸ್. ತೋಳನೂರ, ಡಾ. ಭಕ್ತಿ ಮಹಿಂದ್ರಕರ, ಡಾ. ಭಾರತಿ ಮಠ, ಪ್ರೊ. ಎಸ್. ಎ. ಪಾಟೀಲ, ಪ್ರೊ. ವಿಜಯಕುಮಾರ, ಪ್ರೊ. ಪ್ರದೀಪ, ಪ್ರೊ. ವಿನಯ ಚಿಕ್ಕರೆಡ್ಡಿ, ಪ್ರೊ. ಮಲ್ಲಿಕಾರ್ಜುನ, ಪ್ರೊ. ವಿಣಾ ಮೋರೆ, ಡಾ. ರಾಜಶೇಖರ ಜಾಧವ, ಡಾ. ಗಂಗಾಧರ ಗೇಂಡ, ಡಾ. ಅಶೋಕ ಸೂರ್ಯವಂಶಿ, ಕಛೇರಿ ಅಧೀಕ್ಷಕ ಎಸ್. ಪಿ. ಕನ್ನೂರ ಹಾಗೂ ನಾನಾ ರಾಜ್ಯಗಳಿಂದ ಸಂಶೋಧನ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಬೋಧಕ, ಬೋಧಕರ ಹೊರತಾದ ಸಿಬ್ಬಂದಿ ಉಪಸ್ಥಿತರಿದ್ದರು.
ಡಾ. ಸಂಜಯ ರಾಠೋಡ ಸ್ವಾಗತಿಸಿದರು. ವಿಚಾರ ಸಂಕಿರಣದ ಸಂಯೋಜಕಿ ಡಾ. ಮಹಾನಂದ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಯೋಜಕಿ ಡಾ. ಮಿನಾಕ್ಷಿ ಪಾಟೀಲ, ಡಾ. ಕೆ. ಎ. ಪಾಟೀಲ ನಿರೂಪಿಸಿದರು. ಡಾ. ಸಿದ್ದಿಕಿ ವಂದಿಸಿದರು.