ವಿಜಯಪುರ: ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಫೋನ್ ಕರೆ ಹಿಸ್ಟರಿಯನ್ನು ಅಕ್ರಮವಾಗಿ ಸಂಗ್ರಹಿಸಲಾಗುತ್ತಿರುವ ಬಗ್ಗೆ ಮಾಹಿತಿ ಇದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ.
ಈ ಕುರಿತು ಎಂ. ಬಿ. ಪಾಟೀಲ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಪೊಲೀಸ್ ಮಹಾನಿರೀಕ್ಷಕರು (ಐ ಜಿ ಪಿ) ಅವರಿಗೆ ಬೆಂಗಳೂರಿನಲ್ಲಿ ನೀಡಿರುವ ದೂರಿನ ಪ್ರತಿ ವಿಜಯ ಕರ್ನಾಟಕ ವೆಬ್ ಗೆ ಲಭ್ಯವಾಗಿದೆ.
ಬಬಲೇಶ್ವರ ವಿಧಾನಸಭೆ ಮತಕ್ಷೇತ್ರದ ಶಾಸಕರು ಹಾಗೂ ಅವರ ಸಂಬಂಧಿಗಳ ಫೋನ್ ಕಾಲ್ ಹಿಸ್ಟರಿಗಳನ್ನು ತೆಗೆಯಿಸಿ ಅದನನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಈ ಕಾಲ್ ಹಿಸ್ಟರಿಗಳನ್ನು ಯಾರಿಗೂ ನೀಡದಂತೆ ಸಂಬಂಧಿಸಿದವರಿಗೆ ಸೂಚನೆ ನೀಡಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.
ಬಬಲೇಶ್ವರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ದುರುದ್ದೇಶದಿಂದ ನನ್ನ ಮತ್ತು ನನ್ನ ಧರ್ಮ ಪತ್ನಿ ಶ್ರೀಮತಿ ಆಶಾ ಎಂ. ಪಾಟೀಲ ಹಾಗೂ ನನ್ನ ಸಹೋದರ ವಿಧಾನ ಪರಿಷತ ಸದಸ್ಯ ಶ್ರೀ ಸುನೀಲಗೌಡ ಬಿ. ಪಾಟೀಲ, ಬಿ. ಎಲ್. ಡಿ. ಇ ಸಂಸ್ಥೆಯ ಪ್ರಚಾರಾಧಿಕಾರಿಗಳು ಶ್ರೀ ಮಹಾಂತೇಶ ಬಿರಾದಾರ ಹಾಗೂ ನನ್ನ ಪುತ್ರ ಬಸನಗೌಡ ಎಂ. ಪಾಟೀಲ ಅವರ ಮೊಬೈಲ್ ಕಾಲ್ ಹಿಸ್ಟರಿಗಳನ್ನು ಬೇರೆ ಬೆರೆ ಜಿಲ್ಲೆಗಳಿಂದ ತೆಗೆದುಕೊಳ್ಳಲಾಗುತ್ತಿದೆ. ವಿಜಯಪುರ ಜಿಲ್ಲೆಯಿಂದ ಕಾಲ್ ಹಿಸ್ಟರಿ ತೆಗೆಸಿದರೆ ಅದು ಶಾಸಕರಿಗೆ ಗೊತ್ತಾಗುತ್ತದೆ ಹಾಗೂ ಶಾಸಕರ ಆಪ್ತರಿಗೆ ತಿಳಿಯುತ್ತದೆ ಎಂಬ ಕಾರಣದಿಂದ ವಿಜಯಪುರ ಜಿಲ್ಲೆಯನ್ನು ಹೊರತು ಪಡಿಸಿ ಕಲಬುರಗಿ, ಬಾಗಲಕೋಟೆ, ಬೆಳಗಾವಿ ಮುಂತಾದ ಜಿಲ್ಲೆಗಳಿಂದ ತೆಗೆಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿರುತ್ತದೆ.
ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ವಿರೋಧಿಗಳು ಕೆಟ್ಟ ಚಾಳಿಯ ಕೆಲಸವನ್ನು ಮಾಡುತ್ತಿರುತ್ತಾರೆ. ಇದು ಯಾರಿಗೂ ಶೋಭೆ ತರುವಂಥದ್ದಲ್ಲ. ಅಲ್ಲದೇ, ಇದು ವೈಯಕ್ತಿಕ ಮಾಹಿತಿ ಕಸಿಯುವ ಯತ್ನವಾಗಿರುತ್ತದೆ. ನನ್ನ ಹಾಗೂ ನನ್ನ ಕುಟುಂಬ ಸದಸ್ಯರ ವೈಯಕ್ತಿಕ/ಸಾಮುದಾಯಿಕ ಸಂಭಾಷಣೆಯನ್ನು ಕಾಲ್ ಹಿಸ್ಟರಿ ಪಡೆದುಕೊಂಡು ಆಲಿಸುವುದು ಮಹಾ ಅಪರಾಧವಾಗಿದೆ.
ಕಾರಣ ತಾವು ಸದರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಈ ಕೆಳಗೆ ಕಾಣಿಸಿದ ಮೊಬೈಲ್ ನಂಬರುಗಳ ಕಾಲ್ ಹಿಸ್ಟರಿಗಳನ್ನು ಯಾರಿಗೂ ಕೊಡದಂತೆ ಸಂಬಂಧಿಸಿದ ಮೊಬೈಲ್ ಏಜೆನ್ಸಿಗಳಿಗೆ ಹಾಗೂ ಇಲಾಖೆಯವರಿಗೆ ಕಟ್ಟುನಿಟ್ಟಾಗಿ ನಿರ್ದೇಶನ ನೀಡಲು ಕೋರುತ್ತೇನೆ. ಒಂದು ವೇಳೆ ಏನಾದರೂ ಮಾಹಿತಿ ಸೋರಿಕೆ ಆಗಿದೆ ಅಂತಾದರೆ, ಅದಕ್ಕೆ ಏಜೆನ್ಸಿ ಮತ್ತು ಪೊಲೀಸ್ ಇಲಾಖೆಯವರೇ ಸಂಪೂರ್ಣ ಹೊಣೆಯಾಗಿರುತ್ತಾರೆ ಎಂದು ಎಂ. ಬಿ. ಪಾಟೀಲ ದೂರಿನಲ್ಲಿ ಎಚ್ಚರಿಕೆ ನೀಡಿದ್ದಾರೆ.