ವಿಜಯಪುರ: ಪಾರದರ್ಶಕ, ನಿರ್ಭಿತ, ನ್ಯಾಯ ಸಮ್ಮತ ಹಾಗೂ ಸುವ್ಯವಸ್ಥಿತ ಚುನಾವಣೆ ನಡೆಯುವಂತೆ ನೋಡಿಕೊಳ್ಳುವ ಮೂಲಕ ಚುನಾವಣೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ. ವಿಜಯ ಮಹಾಂತೇಶ ದಾನಮ್ಮನವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023ರ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಆಗಮಿಸಿದ್ದ ಭಾರತ ಚುನಾವಣಾ ಆಯೋಗವು ಚುನಾವಣಾ ಪ್ರಕ್ರಿಯೆ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದು, ಮುಖ್ಯವಾಗಿ ಚುನಾವಣಾ ನೀತಿ ಸಂಹಿತೆ ಪೂರ್ವ ಹಲವು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.
ಅಕ್ರಮ ಮದ್ಯ ಸಾಗಾಣಿಕೆ ಹಾಗೂ ಇತರೆ ಚುನಾವಣಾ ಸಂಬಂಧಿತ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಲು ಜಾಗೃತ ದಳ ರಚಿಸಲಾಗಿದೆ. ಜಿಲ್ಲೆಯಲ್ಲಿ 11 ಅಂತರರಾಜ್ಯ ಚೆಕ್ ಫೋಸ್ಟ್ ಸ್ಥಾಪಿಸಲು ಗುರುತಿಸಲಾಗಿದೆ. ಈ ಚೆಕ್ ಫೊಸ್ಟ್‍ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುವುದೂ ಸೇರಿದಂತೆ ಅಗತ್ಯ ಸಿಬ್ಬಂದಿ ನಿಯೋಜನೆ ಹಾಗೂ ಮೂಲ ಸೌಕರ್ಯ ಕಲ್ಪಿಸಲು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಿಗೆ ಅವರು ಸೂಚನೆ ನೀಡಿದರು.
ಚೆಕ್ ಪೋಸ್ಟ್‍ನಲ್ಲಿ ನಿಯೋಜಿತ ತಂಡವು ಪ್ರತಿ ವಾರ ವರದಿಯನ್ನು ತಪ್ಪದೇ ಸಲ್ಲಿಸುವುದು. ತುರ್ತು ಸಂದರ್ಭದಲ್ಲಿ ತಕ್ಷಣ ವರದಿ ನೀಡುವುದು. ಪೊಲೀಸ್ ಇಲಾಖೆ, ಅಬಕಾರಿ, ವಾಣಿಜ್ಯ ತೆರಿಗೆ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲು ಸೂಚನೆ ನೀಡಿದರು. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಿಯಮಾನುಸಾರ ವರದಿ ನೀಡುವುದು. ಬ್ಯಾಂಕಗಳಲ್ಲಿ ಹಣ ಚಲಾವಣೆಯ ಮೇಲೆ ನಿಗಾವಹಿಸಬೇಕು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಡಿಸಿ ಸೂಚನೆ ನೀಡಿದರು.
ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ (ಎಂಸಿಎಂಸಿ) ಬೇಗ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದ ಅವರು. ಚುನಾವಣಾ ಕಾರ್ಯಕ್ಕೆ ನಿಯೋಜಿತ ತಂಡಗಳು ಸಮನ್ವಯತೆಯಿಂದ ಖುದ್ದಾಗಿ ಪರಿಶೀಲಿಸಿ, ವರದಿ ನೀಡುವಂತೆಯೂ, ಚುನಾವಣಾ ವಿಷಯಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ಕರ್ತವ್ಯ ಲೋಪವಾಗದಂತೆ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಚುನಾವಣೆಗೆ ನೇಮಿಸಿದ ಚುನಾವಣಾಧಿಕಾರಿಗಳು ಕ್ರೀಯಾಶೀಲತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಮಾದರಿ ನೀತಿ ಸಂಹಿತೆ, ಚುನಾವಣಾ ವೆಚ್ಚದ ಮೇಲ್ವಿಚಾರಣೆ ಮತಗಟ್ಟೆಗಳಿಗೆ ಮೂಲ ಸೌಕರ್ಯ ಒದಗಿಸುವುದೂ ಸೇರಿದಂತೆ ವಿವಿಧ ಚುನಾವಣಾ ಕಾರ್ಯದ ಮೇಲುಸ್ತುವಾರಿಗಾಗಿ ಯೋಜನೆ ಮಾಡಲಾಗಿರುವ ನೋಡಲ್ ಅಧಿಕಾರಿಗಳು ತಮ್ಮ ತಮ್ಮ ಕಾರ್ಯ ಕ್ಷೇತ್ರಕ್ಕನುಗುಣವಾಗಿ ಸಿದ್ಧತೆ ಕೈಗೊಳ್ಳಬೇಕು. ವಲ್ನೇರೆಬಲ್ ಮ್ಯಾಪಿಂಗ್ ಸಿದ್ಧಪಡಿಸಿಕೊಳ್ಳುವ ಕುರಿತು ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸಭೆಯಲ್ಲಿ ಅಗತ್ಯ ಸಲಹೆ ಸೂಚನೆ ನೀಡಿದರು.
ಚುನಾವಣೆಯನ್ನು ಸುಗಮವಾಗಿ ನಡೆಯಲು ಮೊದಲೇ ಸಿದ್ಧತೆ ಮಾಡಿಕೊಳ್ಳಬೇಕು. ಸಾಮಾಜಿಕ ಜಾಲ ತಾಣಗಳ ಮೇಲೆ ನಿಗಾ ವಹಿಸಬೇಕು. ಸಂಶಯಾಸ್ಪದ ಎನಿಸಿದ ವಿಷಯಗಳ ಕುರಿತು ತಮ್ಮ ಗಮನಕ್ಕೆ ತರಬೇಕು ಎಂದು ಎಸ್ಪಿ ಎಚ್. ಡಿ. ಆನಂದಕುಮಾರ ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ಚುನಾವಣಾಧಿಕಾರಿ(ಆರ್ಓ) ಸೆಕ್ಟರ್ ಅಧಿಕಾರಿಗಳು, ಪ್ಲೈಯಿಂಗ್ ಸ್ಕ್ವಾಡ್, ಸ್ಟ್ಯಾಟಿಕ್ ಸರ್ವೇಲೆನ್ಸ್ ತಂಡಗಳ ಅಧಿಕಾರಿಗಳು ಚುನಾವಣಾಯನ್ನು ಸುಗಮವಾಗಿ ನಡೆಸಲು ಕೈಗೊಳ್ಳಬೇಕಾದ ಮುಂಜಾಗ್ರತೆ, ಅವಶ್ಯಕ ವಿವರಗಳನ್ನು ಕಾಲಕಾಲಕ್ಕೆ ನಿಗದಿತ ನಮೂನೆಗಳಲ್ಲಿ ಸಂಗ್ರಹಿಸಿ ಒದಗಿಸಬೇಕು ಎಂದು ಸೂಚನೆ ನೀಡಿದರು.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಮಹಾದೇವ ಮುರಗಿ, ವಿಜಯಪುರ ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ, ಮಹಾನಗರ ಪಾಲಿಕೆಯ ಆಯುಕ್ತ ವಿಜಯಕುಮಾರ ಮೆಕ್ಕಳಿಕಿ, ಜಿ. ಪಂ. ಉಪಕಾರ್ಯದರ್ಶಿ ಭೀಮಪ್ಪ ಲಾಳೆ, ಡಿವೈಎಸ್‍ಪಿ ಸಿದ್ಧೇಶ್ವರ, ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ರಾಜಕುಮಾರ ಬಿ ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಆಹಾರ ಇಲಾಖೆ ಉಪ ನಿರ್ದೇಶಕ ಸಿದ್ರಾಮ ಮಾರಿಹಾಳ, ಲೀಡ್ ಬ್ಯಾಂಕಿನ ವ್ಯವಸ್ಥಾಪಕ ನರೇಂದ್ರಬಾಬು ಸೇರಿದಂತೆ ಜಿಲ್ಲೆಯ ಎಲ್ಲಾ ಚುನಾವಣಾಧಿಕಾರಿಗಳು, ಅಬಕಾರಿ ಇಲಾಖೆಯ ಅಧಿಕಾರಿಗಳು, ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.