ಉತ್ತಮ ಜನಸ್ನೇಹಿ ಸೇವೆ ಒದಗಿಸಲು ಅಧಿಕಾರಿಗಳು ಮುಂದಾಗಬೇಕು- ಶಾಸಕ ರಮೇಶ ಭೂಸನೂರ

ವಿಜಯಪುರ: ಜನರೊಂದಿಗೆ ಪ್ರೀತಿ ವಿಶ್ವಾಸದಿಂದ ವರ್ತಿಸುವುದರ ಮೂಲಕ ಜನಸ್ನೇಹಿ ಆಡಳಿತ ನೀಡಲು ಸರಕಾರಿ ಅಧಿಕಾರಿ, ಸಿಬ್ಬಂದಿ ಮುಂದಾಗಬೇಕು ಎಂದು ಸಿಂದಗಿ ಶಾಸಕ ರಮೇಶ ಭೂಸನೂರ ಹೇಳಿದ್ದಾರೆ.

ನಗರದ ಪ್ರಾದೇಶಿಕ ಸಾರಿಗೆ ಇಲಾಖೆ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿರು.

ಈ ಕಟ್ಟಡ ಜನಸ್ನೇಹಿ ಕಟ್ಟಡವಾಗಿ ಹೊರಹೊಮ್ಮಲಿ.  ಕಚೇರಿಗೆ ಬರುವ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಂತಾಗಲಿ. ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಕಚೇರಿ ಬರುವ ಸಾರ್ವಜನಿಕರನ್ನು ಪ್ರೀತಿ ವಿಶ್ವಾಸದಿಂದ ಸೇವೆ ಒದಗಿಸಲು ಮುಂದಾಗಬೇಕು. ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವಂತಾಗಬಾರದು. ತ್ವರಿತಗತಿಯಲ್ಲಿ ಅವರಿಗೆ ಸೇವೆಗಳನ್ನು ಒದಗಿಸಿ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸರಕಾರಿ ಕಚೇರಿಗಳನ್ನು ಜನಸ್ನೇಹಿಯಾಗುವಂತೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ವಿಜಯಪುರದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೋಂಡ ಗಣ್ಯರು

ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಬಿ. ಪಾಟೀಲ ಮಾತನಾಡಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಇಲಾಖೆ ನೂತನ ಕಟ್ಟಡ ಜಿಲ್ಲೆಗೆ ಅತ್ಯವಶ್ಯಕವಾಗಿತ್ತು.  ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ.  ಈ ನೂತನ ಕಟ್ಟಡ ಹೈಟೆಕ್ ಹಾಗೂ ಸುಸಜ್ಜಿತದಿಂದ ಕೂಡಿದ್ದು, ಸಾರ್ವಜನಿಕರು ತಮ್ಮ ಸೇವೆಗಳನ್ನು ಪಡೆದುಕೊಳ್ಳಲು ಬಹಳ ಸುಲಭ ಹಾಗೂ ಸರಳವಾಗಲಿದೆ.  ಅಪಘಾತಗಳನ್ನು ತಡೆಗಟ್ಟುವುದು ಕೇವಲ ಇಲಾಖೆ ಅಧಿಕಾರಿಗಳಿಂದ ಮಾತ್ರವಲ್ಲದೇ ಸಾರ್ವಜನಿಕರ ಸಹಾಯ-ಸಹಕಾರವೂ ಅಗತ್ಯವಾಗಿದೆ.ಈ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಜನರಿಗೆ ಮನವರಿಕೆ ಮಾಡಿಕೊಡಬೇಕು. ಅತಿ ದೊಡ್ಡ ಜಿಲ್ಲೆಯಾಗಿರುವುದರಿಂದ ಇನ್ನೊಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಅವಶ್ಯಕತೆ ಕುರಿತು ಹೇಳಿದರು.

ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಚಂದ್ರಶೇಖರ ಕವಟಗಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಅಪಘಾತ ಸಂಖ್ಯೆ ಕಡಿಮೆಯಾಗಬೇಕಾದರೆ ಕಾನೂನು ಅರಿವು ಅಗತ್ಯ.ಅಧಿಕಾರಿಗಳ ಶ್ರಮ ಒಂದೇ ಸಾಲದು ಅವರೊಂದಿಗೆ ಸಾರ್ವಜನಿಕರ ಸಹಭಾಗಿತ್ವ ಕೂಡ ಬೇಕು.ನೂತನ ಕಟ್ಟಡದಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ಸಿಗುವಂತಾಗಲಿ ಎಂದು ಹೇಳಿದರು.

ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಎಸ್. ಪಾಟೀಲ ಮಾತನಾಡಿ, ಜಿಲ್ಲೆಯ ಅಪಘಾತಗಳನ್ನು ತಡೆಗಟ್ಟಲು ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಜವಾಬ್ದಾರಿಗಳನ್ನು ನಿಭಾಯಿಸಬೇಕು.  ಬಹು ಪ್ರಾಮುಖ್ಯ ಇರುವ ಇಲಾಖೆಯಾಗಿದೆ. ಶಾಲಾ ಮಕ್ಕಳ ಸುರಕ್ಷತೆಗೆ ಹಳೆಯ ಮ್ಯಾಕ್ಸಿ ಕ್ಯಾಬ್ ನಿಷ್ಕ್ರಿಯಗೊಳಿಸಿ, ಹೊಸ ವಾಹನ ಹೊಂದುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎಸ್.ಎನ್.ಸಿದ್ಧರಾಮಪ್ಪ ಮಾತನಾಡಿ, ಸುಮಾರು ರೂ. 7 ಕೋ. ವೆಚ್ಚದಲ್ಲಿ 8 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ನೂತನ ಕಟ್ಟಡ ನಿರ್ಮಾಣವಾಗಿದೆ.  ವಿನೂತನವಾದ ಸಾರಥಿ ತಂತ್ರಾಂಶವನ್ನು ಅಭಿವೃದ್ದಿ ಪಡಿಸಲಾಗಿದೆ ಎಂದು ಹೇಳಿದರು.

ಆನ್‍ಲೈನ್ ಮೂಲಕ 31 ಸೇವೆಗಳನ್ನು ಒದಗಿಸಲಾಗುತ್ತಿದೆ. ಮನೆಯಲ್ಲಿ ಕುಳಿತುಕೊಂಡು ಎಲ್‍ಎಲ್‍ಆರ್ ಹೊಸದಾಗಿ ನೋಂದಣಿ, ನವೀಕರಣ, ಹಾಗೂ ಸಾರಿಗೆ ಇಲಾಖೆಗೆ ಸಂಬಂಧಿಸಿದ ಇತರ ಸೇವೆಗಳು ಲಭ್ಯವಿದೆ. ಜಿಲ್ಲೆಯಲ್ಲಿ ಅಪಘಾತಗಳನ್ನು ಕಡಿಮೆ ಮಾಡಲು ರಸ್ತೆ ಸುರಕ್ಷಾ ನಿಯಮಗಳನ್ನು ಪಾಲನೆ ಮಾಡಬೇಕು. ಸಾರ್ವಜನಿಕರು ಸಾರಿಗೆ, ಪೆÇಲೀಸ್ ಹಾಗೂ ಇತರೆ ಇಲಾಖೆಗಳೊಂದಿಗೆ ಸಹಕರಿಸುವಂತೆ ಅವರು ಹೇಳಿದರು.

ಅಪರ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ, ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತೆ ಎಂ.ಶೋಭಾ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮುಖ್ಯ ಎಂಜಿನಿಯರ್ಅ ಮಹೆಬೂಬ ಎ. ದೇವೂರ, ವಿಜಯಪುರದ ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ಪಾರ್ಥನಹಳ್ಳಿ ಸೇರಿದಂತೆ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌