ವಿಜಯಪುರ: ಹೈನುಗಾರಿಕೆ ಮತ್ತು ತೋಟಗಾರಿಕೆ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರ ನಿವಾಸಕ್ಕೆ ಆಗಮಿಸಿದ ಯುವಕನೊಬ್ಬ ಹಾಲು ಸಮರ್ಪಿಸಿ ಕೃತಜ್ಞತೆ ಸಲ್ಲಿಸಿದ ಹೃದಯಸ್ಪರ್ಶಿ ಘಟನೆ ನಡೆಯಿತು.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸಿದ್ದಾಪುರ ಕೆ ಗ್ರಾಮದ ಯುವ ರೈತ ವೃಷಭನಾಥ ಯಶವಂತ ಘೋಸರವಾಡ ಬೆಳ್ಳಂಬೆಳಿಗ್ಗೆ ಬೃಹತ್ ಹಾಲಿನ ಕ್ಯಾನ್ ಗಳೊಂದಿಗೆ ಆಗಮಿಸಿ ಎಂ. ಬಿ. ಪಾಟೀಲ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲದೇ, ತಾನು ತಂದಿದ್ದ ಹಾಲನ್ನು ಕುಡಿಯಲು ನೀಡಿ ಸಂತೃಪ್ತಿ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾವು ಇಂದು ಸ್ವಾವಲಂಬಿ ಬದುಕು ಸಾಗಿಸಲು ಎಂ. ಬಿ. ಪಾಟೀಲರು ಈ ಭಾಗದಲ್ಲಿ ಮಾಡಿರುವ ನೀರಾವರಿ ಯೊಜನೆಗಳು ಪ್ರಮುಖ ಕಾರಣ. ನಾನು ಹಾಗೂ ನನ್ನ ತಮ್ಮ ಭೀಮು ಯಶವಂತ ಘೋಸರವಾಡ ಮೂರೂವರೆ ಎಕರೆ ಜಮೀನು ಹೊಂದಿದ್ದು, ಏಳು ಹಸುಗಳನ್ನು ಸಾಕಿದ್ದೇವೆ. ಅರ್ಧ ಎಕರೆಯಲ್ಲಿ ಜಾನುವಾರುಗಳಿಗೆ ಮೇವು ಬೆಳೆಯುತ್ತಿದ್ದೇವೆ. ಉಳಿದ ಎರಡೂವರೆ ಎಕರೆಯಲ್ಲಿ ದ್ರಾಕ್ಷಿ ಬೆಳೆದಿದ್ದೇವೆ. ಹಸುಗಳು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತಲಾ 50 ಲೀಟರ್ ನಂತೆ ಒಟ್ಟು 100 ಲೀಟರ್ ಹಾಲು ಕೊಡುತ್ತಿವೆ. ಇದರಿಂದ ಪ್ರತಿ ತಿಂಗಳು ಸುಮಾರು ರೂ. 1 ಲಕ್ಷ 10 ಸಾವಿರ ವರೆಗೆ ಆದಾಯ ಬರುತ್ತಿದೆ. ದ್ರಾಕ್ಷಿ ಬೆಳೆಯಿಂದ ವಾರ್ಷಿಕವಾಗಿ ಸುಮಾರು ರೂ. 12 ಲಕ್ಷ ವರೆಗೆ ಆದಾಯ ಬರುತ್ತಿದೆ. ನಾವು ಈ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ತಾವೇ ಕಾರಣ ಎಂದು ಹೇಳಿ ತಾವು ಅಕ್ಕರೆಯಿಂದ ತಂದಿದ್ದ ಹಾಲನ್ನು ಕುಡಿಯಲು ನೀಡಿದರು.
ಯುವಕರ ಸಾಧನೆಯನ್ನು ಮೆಚ್ಚಿದ ಎಂ. ಬಿ. ಪಾಟೀಲರು ಆಕಳ ಹಾಲನ್ನು ಪ್ರೀತಿಯಿಂದ ಸೇವಿಸಿದರು.
ಬಳಿಕ ಮಾತನಾಡಿದ ಎಂ. ಬಿ. ಪಾಟೀಲರು, ಸಿದ್ಧಾಪುರದ ಯುವ ಸಹೋದರರು ಹೈನುಗಾರಿಕೆ ಮೂಲಕ ಸ್ವಯಂ ಉದ್ಯೋಗ ಮಾಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಈಗ ಈ ಭಾಗದಲ್ಲಿ ಜಲಕ್ರಾಂತಿ ಮಾಡಿದ್ದು, ಮುಂಬರುವ ದಿನಗಳಲ್ಲಿ ಕ್ಷೀರ ಕ್ರಾಂತಿ ಮಾಡುತ್ತೇವೆ. ರೈತರ ಸಹಕಾರದೊಂದಿಗೆ ಸಾಮೂಹಿಕ ಒಡೆತನದಲ್ಲಿ ಡೈರಿ ಆರಂಭಿಸಲಾಗುವುದು. ಸಾಲ ಸೌಲಭ್ಯ ಮತ್ತು ಸಬ್ಸಿಡಿ ಯೋಜನೆಗಳಡಿ ಗುಡಿ ಕೈಗಾರಿಕೆಗೆ ಪ್ರೋತ್ಸಾಹ ನೀಡಲಾಗುವುದು. ಈ ಮೂಲಕ ಯುವಕರು ಮತ್ತು ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಸ್ಚಾವಲಂಬಿ ಬದುಕು ಸಾಗಿಸಲು ಪ್ರೋತ್ಸಾಹ ನೀಡಲಾಗುವುದು. ಅಷ್ಟೇ ಅಲ್ಲ, ರೈತರ ಉತ್ಪನ್ನಗಳಿಗೆ ಉತ್ತಮ ಆದಾಯ ಒದಗಿಸಲು ಆಹಾರ ಸಂಸ್ಕರಣೆ ಘಟಕ ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.