ಬಸವನಾಡಿನಲ್ಲಿ ಲೋಕಾರ್ಪಣೆಗೆ ಸಿದ್ಧವಾದ ಹಾಮುಲಾಲ್ ನೂತನ ದೇವಸ್ಥಾನ

ವಿಜಯಪುರ: ನಗರದ ಸೋಲಾಪುರ ಬೈಪಾಸ್ ರಸ್ತೆಯಲ್ಲಿ ನಿರ್ಮಿಸಲಾಗಿರುವ ಬಂಜಾರಾ ಸಮುದಾಯದ ಆರಾಧ್ಯ ದೈವ ಶ್ರೀ ಹಾಮುಲಾಲ್ ನೂತನ ದೇವಸ್ಥಾನ ಭಕ್ತರ ದರ್ಶನಕ್ಕೆ ಸಿದ್ಧವಾಗಿದ್ದು, ಮಾರ್ಚ್ 19ರಂದು ರವಿವಾರ ಲೋಕಾರ್ಪಣೆಯಾಗಲಿದೆ.

ಈ ಕುರಿತು ಜಂಟಿ ಮಾಧ್ಯಮ ಪ್ರಕಟಣೆ ನೀಡಿರುದ ಬಂಜಾರಾ ಸಮಾಜದ ಮುಖಂಡರು ಮಾರ್ಚ್ 19 ರಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭ ಕೂಡ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10 ಗಂಟೆಗೆ ನಗರದ ಮುಗಳಖೋಡ ಮಠದಿಂದ ಹಾಮುಲಾಲ್ ದೇವಸ್ಥಾನದವರೆಗೆ ಕುಂಭ ಮೇಳ ಆಯೋಜಿಸಲಾಗಿದ್ದು, ಸುಮಾರು 10 ಸಾವಿರ ಮಹಿಳೆಯರು ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 12ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ದೇವಸ್ಥಾನವನ್ನು ಉದ್ಘಾಟನೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷದ ಸಚೇತಕ ಪ್ರಕಾಶ ರಾಠೋಡ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಬಂಜಾರಾ ಸೇವಾಲಾಲ ಶಕ್ತಿಪೀಠದ ಪೌರಾದೇವಿಯ ಶ್ರೀ ಬಾಬುಸಿಂಗ್ ಮಹಾರಾಜರು ಸಾನಿಧ್ಯ ವಹಿಸಲಿದ್ದಾರೆ. ಅಥಣಿಯ ಲಕ್ಷ್ಮಣ ಮಹಾರಾಜರು, ಸೋಮದೇವರಹಟ್ಟಿ ಎಲ್. ಟಿ- ೧ರ ದುರ್ಗಾದೇವಿ ಶಕ್ತಿಪೀಠದ ಜಗನು ಮಹಾರಾಜರು, ತೊರವಿಯ ಕೇಸರಾಳ ತಾಂಡಾದ ಧನಸಿಂಗ್ ಮಹಾರಾಜರು, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ರಾಠೋಡ ಮತ್ತು ಸುನೀಲಗೌಡ ಪಾಟೀಲ, ಜಿಲ್ಲೆಯ ಎಲ್ಲ ತಾಂಡಾಗಳ ದುರ್ಗಾದೇವಿ, ಸೇವಾಲಾಲ, ಹಾಮುಲಾಲ ದೇವಸ್ಥಾನದ ಪೂಜಾರಿಗಳು, ತಾಂಡಾಗಳ ಪ್ರಮುಖರಾಗಿರುವ ನಾಯಕ, ಢಾಚ, ಕಾರಬಾರಿ ಹಾಗೂ ಪ್ರಮುಖರು, ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು, ಯುವರು ಹಾಗೂ ಮಹಿಳೆಯರು ಸೇರಿದಂತೆ 50000ಕ್ಕೂ ಹೆಚ್ಚು ಜನ ಪಾಲ್ಹೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನೂತನ ದೇವಸ್ಥಾನದ ಹಿನ್ನೆಲೆ

ವಿಜಯಪುರ ನಗರದ ಸೋಲಾಪುರ ರಸ್ತೆಯಲ್ಲಿದ್ದ ಸುಮಾರು ಒಂದು ಶತಮಾನಕ್ಕಿಂತಲೂ ಹೆಚ್ಚು ಹಳೆಯದಾಗ ಹಾಮುಲಾಲ್ ದೇವಸ್ಥಾನವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ರಸ್ತೆ ಅಗಲೀಗಕರಣ ಸಂದರ್ಭದಲ್ಲಿ ತೆರವು ಮಾಡಿತ್ತು. ಈ ವಿಷಯ ತಿಳಿದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಬಬಲೇಶ್ವರ ಶಾಸಕರಾದ ಎಂ. ಬಿ. ಪಾಟೀಲ ಅವರು, ತಮ್ಮ ಬಿ. ಎಲ್. ಡಿ. ಇ ಸಂಸ್ಥೆಗೆ ಸೇರಿದ ಸುಮಾರು 10 ಗುಂಟೆ ಜಾಗವನ್ನು ಭೂ-ದಾನ ಮಾಡಿದರು. ಅಲ್ಲದೇ, ಶಾಸಕರ ಅನುದಾನದಲ್ಲಿ ಸುಮಾರು ರೂ. 2.50 ಕೋ. ನೀಡಿ ನೂತನ ಭವ್ಯ ಮಂದಿರ ಹಾಗೂ ಸಮುದಾಯ ಭವನ ನಿರ್ಮಿಸಲು ನೆರವಾಗಿದ್ದಾರೆ.
ನೂತನ ದೇವಸ್ಥಾನದ ಹೊಸ ಮೂರ್ತಿಯನ್ನು ವಿಜಯಪುರದಲ್ಲಿ ತಯಾರಿಸಲಾಗಿದ್ದು, ಎರಡು ಕಳಸಗಳನ್ನು ತಮಿಳುನಾಡಿನಿಂದ ತರಿಸಲಾಗಿದೆ.
ಬಂಜಾರಾ ಸಮಾಜದ ಹಿತೈಷಿಗಳಾಗಿರುವ ಶಾಸಕರು, 2021 ರಲ್ಲಿ ವಿಜಯಪುರ ನಗರದ ಆದರ್ಶ ನಗರದಲ್ಲಿರುವ ಶ್ರೀ ಸಂತ ಸೇವಾಲಾಲ್ ಹಾಗೂ ದುರ್ಗಾದೇವಿ ದೇವಸ್ಥಾನ ಆವರಣದಲ್ಲಿ ಸುಮಾರು ರೂ. 3 ಕೋ. ಅನುದಾನ ನೀಡಿದ್ದರು. ಅಲ್ಲದೇ, ವೈಯಕ್ತಿಕವಾಗಿ ರೂ. 60 ಲಕ್ಷ ವೆಚ್ಚದ ರೂಪಾಯಿಗಳ ನಿವೇಶನವನ್ನು ಭೂದಾನ ಮಾಡಿದ್ದಾರೆ. ಅಲ್ಲಿ ಪೂಜ್ಯ ಶ್ರೀ ರಾಮರಾವ್ ಮಹಾರಾಜರ ಭವ್ಯ ಸಮುದಾಯ ಭವನವು ನಿರ್ಮಾಣ ಮಾಡಲಾಗಿದೆ. ಅಲ್ಲದೇ, ಈಗ ಅನೇಕ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತಿವೆ.

ರಸಮಂಜರಿ ಕಾರ್ಯಕ್ರಮ

ಈ ಸಂದರ್ಭದಲ್ಲಿ ಬಂಜಾರಾ ಸಮಾಜದ ಕಿರುತೆರೆ ಖ್ಯಾತ ಕಲಾವಿದ ಹನಮಂತ ಲಮಾಣಿ ಇವರಿಂದ ಹಾಗೂ ನಾನಾ ಕಲಾವಿಧರಿಂದ ರಸಮಂಜರಿ ಕಾರ್ಯಕ್ರಮ ಇದೇ ನಡೆಯಲಿದೆ ಎಂದು ಅರ್ಜುನ ಹೀರು ರಾಠೋಡ, ಡಿ.ಎಲ್.ಚವ್ಹಾಣ, ವಾಮನ ಚವ್ಹಾಣ, ಪದ್ದು ಚವ್ಹಾಣ ಮತ್ತು ಬಾಳು ರಾಠೋಡ, ಚಂದ್ರಶೇಖರ ರಾಠೋಡ  ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌