ಕೇಂದ್ರ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಸಂಚರಿಸುತ್ತಿದ್ದ ಕಾರು ಅಪಘಾತ- ಚಾಲಕನ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ ಎಂದ ಸಚಿವರು

ವಿಜಯಪುರ: ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ರಾಜ್ಯ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಕೇಂದ್ರ ಸಚಿವೆ ಪ್ರಯಾಣಿಸುತ್ತಿದ್ದ ಕಾರು ಅಪಘಾತ ಅಪಘಾತವಾಗಿದ್ದು, ಅವರು ಸಣ್ಮಪುಟ್ಟ ಗಾಯಗಳಾದ ಘಟನೆ ವಿಜಯಪುರ ಜಿಲ್ಲೆಯ ಜುಮನಾಳ ಕ್ರಾಸ್ ಬಳಿ ನಡೆದಿದೆ.

ವಿಜಯಪುರ‌- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50 ರಲ್ಲಿ ಈ ಘಟನೆ ನಡೆದಿದ್ದು, ಕೇಂದ್ರ ಸಚಿವೆ ಪ್ರಯಾಣ ಮಾಡುತ್ತಿದ್ದ ಕಾರು ಮತ್ತು ಕ್ಯಾಂಟರ್ ಮಧ್ಯೆ ಡಿಕ್ಕಿ ಸಂಭವಿಸಿದೆ.  ಈ ಘಟನೆಯಲ್ಲಿ ಸಚಿವರು ಹಾಗೂ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಘಾತದ ಬಳಿಕ ಕೇಂದ್ರ‌‌ ಸಚಿವೆ ಸಾದ್ವಿ ನಿರಂಜನಾ‌ ಜ್ಯೋತಿ ಮತ್ತು ಕಾರು ಚಾಲಕನನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.  ಈ ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  ಸಚಿವರ ಬಲಗಾಲಿನ ಕೆಳಭಾಗದಲ್ಲಿ ಪೆಟ್ಟು ತಗುಲಿದೆ.

ಕೇಂದ್ರ ಸಚಿವರು ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವುದು

ವಿಜಯಪುರ ನಗರದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಮಹಿಳಾ ಸಮಾವೇಶ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಕೇಂದ್ರ ಸಚಿವರು, ವಿಜಯಪುರದಲ್ಲಿ ನಡೆದ ಕಾರ್ಯಕ್ರಮಗಳ ಬಳಿಕ ಬಾಗಲಕೋಟೆಯತ್ತ ಪ್ರಯಾಣ ಮಾಡುತ್ತಿದ್ದರು.  ಈ ಅಪಘಾತದ ಪರಿಣಾಮ‌ ಎನ್ಎಚ್ 50 ಟ್ರಾಫಿಕ್ ಜಾಮ್ ಉಂಟಾಗಿತ್ತು.  ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಿ ವಾಹನ ಸಂಚಾರ ಸುಗಮಗೊಳಿಸಿದ್ದಾರೆ.  ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದ ಕೇಂದ್ರ ಸಚಿವೆ

ಘಟನೆಯ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ದೇವರ ಕೃಪೆ ಮತ್ತು ಕಾರು ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅಫಘಾತ ತಪ್ಪಿದೆ.  ಇಲ್ಲದಿದ್ದರೆ ಕಾರು ಲಾರಿಯ ಕೆಳಗಡೆ ನುಗ್ಗುತ್ತಿತ್ತು.  ಈಗ ನಾವೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದೇವೆ.  ಸಣ್ಣಪುಟ್ಟ ಒಳಪೆಟ್ಟಾಗಿದೆ.  ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಇದಕ್ಕೂ ಮುಂಚೆ ನಡೆದ ಮಹಿಳಾ ಸಮಾವೇಶಕ್ಕೂ ಮುಂಚೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ, ಎಐಸಿಸಿ ಮಾಜಿ ಅಧ್ಯಕ್ಷ  ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದರು.

ದೇಶದಲ್ಲಿ ಪ್ರಜಾಪ್ರಭುತ್ವ ಕುಸಿದಿದೆ.  ಸಾಂವಿಧಾನಕ ಸಂಸ್ಥೆಗಳನ್ನು ಮುಚ್ಚಲಾಗುತ್ತಿದೆ  ಎಂದು ಲಂಡನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ಮನೆಯ ಮಾತುಗಳನ್ನು ಮನೆಯಲ್ಲಿಯೇ ಹೇಳಬೇಕು.  ಸಂಸತ್ತಿನಲ್ಲಿ ಪ್ರಸ್ತಾಪಿಸಬೇಕು.  ಯಾವುದಾದರೂ ವಿಷಯಗಳಿದ್ದರೆ ಚರ್ಚಿಸಬೇಕು.  ಆದರೆ, ವಿದೇಶಗಳಿಗೆ ಹೋಗಿ ರಾಹುಲ್ ಗಾಂಧಿ ಅವರು ಪ್ರಜಾಪ್ರಭುತ್ವ ಆತಂಕದಲ್ಲಿದೆ ಎಂದು ಅವಹೇಳನ ಮಾಡಿರುವುದು ಸರಿಯಲ್ಲ.  ದೇಶದಲ್ಲಿ ನಿಮ್ಮ ಅಜ್ಜಿ ತುರ್ತು ಪರಿಸ್ಥಿತಿ ಹೇರಿದ್ದಾಗ ಯಾವ ಪರಿಸ್ಥಿತಿ ಇತ್ತು? ಅಂದು ಪ್ರಜಾಪ್ರಭುತ್ವ ಮುಗಿದಿರಲಿಲ್ಲವಾ? ಗೋವುಗಳ ರಕ್ಷಣೆಗಾಗಿ ಸಾಧು, ಸಂತರು ಸಂಸತ್ತಿಗೆ ಹೋದಾಗ ರಾಹುಲ್ ಗಾಂಧಿ ಅವರ ಅಜ್ಜಿ ಗೋಲಿಬಾರ್ ಮಾಡಿಸಿದಾಗ ಅಂದು ಪ್ರಜಾಪ್ರಭುತ್ತವ ಎಲ್ಲಿ ಹೋಗಿತ್ತು? 1984ರಲ್ಲಿ ಸಿಖ್ಖರ ನರಮೇದ ನಡೆದಾಗ ಪ್ರಜಾಪ್ರಭುತ್ವಕ್ಕೆ ತೊಂದರೆ ಆಗಿರಲಿಲ್ಲವೇ? ಈ ವಿಚಾರಗಳನ್ನು ಅವರು ಹೇಳಬೇಕಿತ್ತು. ಆದರೆ, ವಿದೇಶಗಳಲ್ಲಿ ಹೋಗಿ ಭಾರತ ಮತ್ತು ಭಾರತದ ಪ್ರಜಾಪ್ರಭುತ್ವದ ಅಪಮಾನ ಮಾಡುವುದು ತಪ್ಪು.  ರಾಹುಲ್ ಗಾಂಧಿ ಕ್ಷಮೆ ಕೇಳಲೇಬೇಕು.  ಕಾಂಗ್ರೆಸ್ಸಿಗೆ ಮೋದಿ ಮತ್ತು ಅವರ ತಾಯಿಯ ಕುರಿತು ಟೀಕಿಸುವುದು ಕಾಂಗ್ರೆಸ್ಸಿಗೆ ಚಾಳಿಯಾಗಿದೆ.  ಕಾಂಗ್ರೆಸ್ ಅವನತಿಯತ್ತ ಸಾಗಿದೆ.  ಉತ್ತರ ಪ್ರದೇಶದಲ್ಲಿ ಒಬ್ಬರೂ ಕಾಂಗ್ರೆಸ್ಸಿನಿಂದ ಲೋಕಸಭೆ ಚುನಾವಣೆಯಲ್ಲಿ ಗೆದ್ದಿಲ್ಲ.  423 ಸ್ಥಾನಗಳಲ್ಲಿ ಕೇವಲ ಎರಡರಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ.  ಕಾಂಗ್ರೆಸ್ ಎಷ್ಟು ಸಾಧ್ಯವೂ ಅಷ್ಟು ಕೀಳುಮಟ್ಟಕ್ಕೆ ಇಳಿಯುತ್ತಿದೆ ಎಂದು ಅವರು ಆರೋಪಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಗೋಪಾಲ ಕಾರಜೋಳ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌