ವಿಜಯಪುರ: ಜಿಲ್ಲೆಯ ದೇವರ ಹಿಪ್ಪರಗಿ ಕಾಂಗ್ರೆಸ್ ಮುಖಂಡರು ಎಸ್. ಪಾಟೀಲ ವಿರುದ್ಧ ಸಿಡಿದೆದ್ದಿದ್ದಾರೆ. ಮಾಜಿ ಸಚಿವ ಎಸ್. ಆರ್. ಪಾಟೀಲ ಅವರಿಗೆ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಮತಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡುತ್ತಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದ್ದು, ಇದಕ್ಕೆ ದೇವರ ಹಿಪ್ಪರಗಿ ಮತಕ್ಷೇತ್ರದ 9 ಜನ ಕಾಂಗ್ರೆಸ್ ಆಕಾಂಕ್ಷಿಗಳು ಸಿಡಿದೆದ್ದಿದ್ದಾರೆ.
ಮಾಜಿ ಸಚಿವರು ಮತ್ತು ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷದ ಮಾಜಿ ನಾಯಕರೂ ಆಗಿರುವ ಬಾಗಲಕೋಟೆ ಜಿಲ್ಲೆಯ ಎಸ್. ಪಾಟೀಲ ಮತ್ತು ಜೆ. ಟಿ. ಪಾಟೀಲ ಮಧ್ಯೆ ಬೀಳಗಿಯಲ್ಲಿ ಟಿಕೆಟ್ ಗಾಗಿ ಭಾರಿ ಪೈಪೋಟಿ ನಡೆದಿದೆ. ಬೀಳಗಿಯಲ್ಲಿ ಜೆ. ಟಿ. ಪಾಟೀಲರಿಗೆ ಟಿಕೆಟ್ ನೀಡಿ ದೇವರ ಹಿಪ್ಪರಗಿಯಲ್ಲಿ ಎಸ್. ಆರ್. ಪಾಟೀಲ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ವದಂತಿಯೂ ಹರಡಿದೆ. ಅಲ್ಲದೇ, ಇದಕ್ಕೆ ಪೂರಕ ಎಂಬಂತೆ, ಎಸ್. ಆರ್. ಪಾಟೀಲರು ಹೈಕಮಾಂಡ್ ಭೇಟಿ ಮಾಡಿ ಟಿಕೆಟ್ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿಯೂ ಹರಡಿದೆ. ಈ ವಿಷಯ ಬಹಿರಂಗವಾಗುತ್ತಲೇ ಈಗಾಗಲೇ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿರುವ ದೇವರ ಹಿಪ್ಪರಗಿ ಮತಕ್ಷೇತ್ರದ ಒಂಬತ್ತು ಜನ ಆಕಾಂಕ್ಷಿಗಳು ಸಿಡಿದೆದ್ದಿದ್ದಾರೆ.
ಈ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಂಬತ್ತು ಜನ ಆಕಾಂಕ್ಷಿಗಳು ಬಾಗಲಕೋಟೆ ಜಿಲ್ಲೆಯವರಾದ ಎಸ್. ಆರ್. ಪಾಟೀಲ ಅವರಿಗೆ ಯಾವುದೇ ಕಾರಣಕ್ಕೂ ನಮ್ಮ ಜಿಲ್ಲೆಯಿಂದ ಅದರಲ್ಲೂ ದೇವರ ಹಿಪ್ಪರಗಿ ಮತಕ್ಷೇತ್ರದಿಂದ ಟಿಕೆಟ್ ನೀಡಬಾರದು ಎಂದು ಒಕ್ಕೋರಲ ಆಗ್ರಹ ಮಾಡಿದರು.
ಎಲ್ಲ ಒಂಬತ್ತು ಜನ ಟಿಕೆಟ್ ಆಕಾಂಕ್ಷಿಗಳು ತಮ್ಮ ಬಲ ಪ್ರದರ್ಶನ ಮಾಡಿದ್ದಾರೆ. ಎಸ್. ಆರ್. ಪಾಟೀಲ ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು. ಅರ್ಜಿ ಸಲ್ಲಿಸಿರುವ ನಮ್ಮ ಒಂಬತ್ತು ಜನರಲ್ಲಿ ಯಾರಿಗಾದರೂ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ನಮ್ಮ ಒಂಬತ್ತು ಜನರಲ್ಲಿ ಯಾರಿಗಾದರೂ ಟಿಕೆಟ್ ನೀಡಿದರೂ ಒಗ್ಗಟ್ಟಾಗಿ ಚುನಾವಣೆ ಮಾಡುತ್ತೇವೆ ಎಂದು ಘೋಷಿಸಿರುವ ಅವರು, ಯಾವುದೇ ಕಾರಣಕ್ಕೂ ಎಸ್ ಆರ್ ಪಾಟೀಲ್ ಅವರಿಗೆ ಟಿಕೆಟ್ ನೀಡಬಾರದು ಎಂದು ಪಟ್ಟು ಹಿಡಿದಿದ್ದಾರೆ.
ನಮ್ಮ ಅಳಲನ್ನು ಕೆ ಪಿ ಸಿ ಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಮತ್ತು ವಿಧಾನ ಸಭೆ ಪ್ರತಿಪಕ್ಷದ ನಾಯಕ ಮತ್ತು ಮಾಜಿ ಸಿಎಂ ಎಸ್. ಸಿದ್ದರಾಮಯ್ಯ ಹಾಗೂ ಇತರ ನಾಯಕರು ಆಲಿಸಬೇಕು. ನಮ್ಮ ಬೇಡಿಕೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿಗೋಷ್ಠಿಯಲ್ಲಿ ಖ್ಯಾತ ನೇತೃ ತಜ್ಞ ಡಾ. ಪ್ರಭುಗೌಡ ಪಾಟೀಲ, ಉದ್ಯಮಿ ಆನಂದ ದೊಡಮನಿ, ಜಿ. ಪಂ. ಮಾಜಿ ಸದಸ್ಯೆ ಗೌರಮ್ಮ ಮುತ್ತತ್ತಿ, ಜಿ. ಪಂ. ಮಾಜಿ ಅಧ್ಯಕ್ಷೆ ಸುಜಾತಾ ಸೋಮನಾಥ ಕಳ್ಳಿಮನಿ, 2018ರ ಕಾಂಗ್ರೆಸ್ ಅಭ್ಯರ್ಥಿ ಬಿ. ಎಸ್. ಪಾಟೀಲ ಯಾಳಗಿ, ಮಾಜಿ ಶಾಸಕ ಶರಣಪ್ಪ ಸುಣಗಾರ, ಬಾಪುಗೌಡ ಪಾಟೀಲ, ಡಾ. ನಂದಕುಮಾರ ಭೈರಿ ಮತ್ತು ಮಲ್ಲನಗೌಡ ಪಾಟೀಲ ಈ ಆಗ್ರಹ ಮಾಡಿದ್ದಾರೆ.
ಕಳೆದ ಒಂದು ವರ್ಷದಲ್ಲಿ ದೇವರ ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಕಾರ್ಯಗಳನ್ನು ಮಾಡಿದ್ದೇವೆ. ಪ್ರಚಾರ ನಡೆಸಿದ್ದೇವೆ. ನಮ್ಮ ಒಂಬ್ತತು ಜನರಲ್ಲಿ ಯಾರಿಗಾದರೂ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸುವ ಕೆಲಸ ಮಾಡುತ್ತೇವೆ. ಈಗ ಏಕಾಏಕಿ 10 ನೇ ಅಭ್ಯರ್ಥಿ ಹೆಸರು ಕೇಳಿ ಬರುತ್ತಿದೆ ಇದು ಸರಿಯಲ್ಲ. 2018 ರಲ್ಲಿ ಇದೇ ರೀತಿಯಾಗಿ ನಾವು ಕ್ಷೇತ್ರದಲ್ಲಿ ಸೋಲು ಕಂಡಿದ್ದೇವೆ. ಈ ಬಾರಿಯೂ ಹಾಗಾಗಬಾರದು. ಕೇಂದ್ರದ ನಾಯಕರು ಹಾಗೂ ರಾಜ್ಯ ನಾಯಕರು ಇತ್ತ ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.
2018 ರ ಚುನಾವಣೆಯಲ್ಲಿ ಬಿಜೆಪಿಯ ಸೋಮನಗೌಡ ಪಾಟೀಲ ಸಾಸನೂರು ಗೆಲುವು ಕಂಡಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನ ಪಡೆದಿತ್ತು. ಆದ್ದರಿಂದ ಅಂಥ ಪರಸ್ಥಿತಿ ಈ ಬಾರಿಯೂ ನಮಗೆ ಆಗಬಾರದು. ಪಕ್ಷದ ನಿಯಮಗಳ ಪ್ರಕಾರ ಟಿಕೆಟ್ ಗಾಗಿ ನಾವೆಲ್ಲಾ ಅರ್ಜಿ ಸಲ್ಲಿಸಿದ್ದೇವೆ. ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಒಂಬತ್ತು ಜನರ ಪೈಕಿ ಯಾರಿಗೆ ಒಬ್ಬರಿಗೆ ಟಿಕೆಟ್ ನೀಡಿದರೂ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕೆಂಬ ನಿಯಮ ಹಾಕಿದ್ದಕ್ಕೂ ನಾವೆಲ್ಲಾ ಒಪ್ಪಿ ನಡೆದಿದ್ದೇವೆ. ಆದರೆ, ಟಿಕೆಟ್ ಘೋಷಣೆಯ ಕೊನೆಯ ಹೊತ್ತಿನಲ್ಲಿ ನಮ್ಮನ್ನು ಹೊರ ತುಪಡಿಸಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ಆರ್. ಪಾಟೀಲ ಅವರ ಹೆಸರು ಮುಂಚೂಣಿಗೆ ಬಂದಿದೆ. ಇದಕ್ಕೆ ನಮ್ಮ ತೀವ್ರ ವಿರೋಧವಿದೆ. ಕಾರಣ ಈಗಾಗಲೇ ಎಸ್ ಆರ್ ಪಾಟೀಲರಿಗೆ 75 ವರ್ಷ ವಯಸ್ಸಾಗಿದೆ. ಎಸ್. ಆರ್. ಪಾಟೀಲರು ಈಗಾಗಲೇ ಸಾಕಷ್ಟು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ಸಚಿವರಾಗಿ ಆಧಿಕಾರ ಅನುಭವಿಸಿದ್ದಾರೆ. ಅವರು ಬಾಗಲಕೋಟೆಯ ಬೀಳಗಿ ಪಟ್ಟಣದಲ್ಲಿರುತ್ತಾರೆ, ಅವರ ಹೊರತು ಪಡಿಸಿ ಸ್ಥಳಿಯರಿಗೆ ಆಧ್ಯತೆ ನೀಡಬೇಕಿದೆ. ನಾವೆಲ್ಲಾ ಯುವಕರಿದ್ದೇವೆ ನಮಗೂ ಅವಕಾಶ ಸಿಗಬೇಕಿದೆ. ಎಸ್ ಆರ್ ಪಾಟೀಲರಿಗೆ ಟಿಕೆಟ್ ನೀಡಬಾರದು. ಒಂದು ವೇಳೆ ಬೇರೆಯವರಿಗೆ ಟಿಕೆಟ್ ಘೋಷಣೆಯಾದರೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.