ವಿಜಯಪುರ: ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಗಡಿ ಭಾಗದ ವಿಜಯಪುರ ಜಿಲ್ಲೆಯಲ್ಲಿ ್ಲ ಅಂತಾರಾಜ್ಯ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಅಧಿಕಾರಿಗಳಿಗೆ ಅಧಿಕಾರವಿದ್ದು, ನೆರೆ ರಾಜ್ಯದ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಅಕ್ರಮ ತಡೆಗಟ್ಟುವಂತೆ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮುಂಬರುವ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಗಡಿ ಜಿಲ್ಲೆಗಳಾದ ಸಾಂಗಲಿ ಹಾಗೂ ಸೋಲಾಪೂರ ಜಿಲ್ಲೆಗಳ ಕಂದಾಯ, ಜಿ ಎಸ್ ಟಿ, ಅಬಕಾರಿ, ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಅಂತಾರಾಜ್ಯ ಸಮನ್ವಯ(ಕೋ-ಆಪರೇಶನ್) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚುನಾವಣೆ ಅಕ್ರಮ ಚಟುವಟಿಕೆ ತಡೆಗಟ್ಟಲು ಸಾಂಗಲಿ ಹಾಗೂ ಸೋಲಾಪೂರ ಜಿಲ್ಲೆಯ ಅಧಿಕಾರಿಗಳ ಸಹಕಾರ ಅಗತ್ಯವಿದೆ. ಜಿಲ್ಲೆಯ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಚುನಾವಣೆ ಅಕ್ರಮ ಚಟುವಟಿಕೆ ತಡೆಗಟ್ಟಲು ಸಹಕಾರ ಒದಗಿಸುವಂತೆ ತಿಳಿಸಿದರು.
ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಭಾಗದಲ್ಲಿ ಈಗಾಗಲೇ ಜಿಲ್ಲೆಯ ಯತ್ನಾಳ, ಕನಮಡಿ, ಅಲಗಿನಾಳ, ಸಿದ್ದಾಪುರ(ಎ), ಶಿರಾಡೋಣ, ಕೊಕಣಗಾಂವ, ಉಮರಜ, ಉಮರಾಣಿ, ಧೂಳಖೇಡ, ಭಗೀರಥ ಸರ್ಕಲ್ ಕನಕನಾಳ, ಹಿಂಗಣಿ ಹಳೆಯ ಗ್ರಾಮಗಳಲ್ಲಿ 11 ಚೆಕ್ ಪೋಸ್ಟಗಳನ್ನು ಸ್ಥಾಪಿಸಲಾಗಿದೆ. ಯಾವುದೇ ರೀತಿಯ ಅಕ್ರಮ ವಸ್ತುಗಳ ಸಾಗಾಣಿಕೆ ಕಂಡು ಬಂದಲ್ಲಿ ತಕ್ಷಣ ಜಪ್ತಿ ಮಾಡುವ ಜೊತೆಗೆ ಕಾನೂನಿನ ಅನ್ವಯ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಚೆಕಪೋಸ್ಟ್ ಗಳ ಮೂಲಕ ಒಳಬರುವ ಹಾಗೂ ಹೊರ ಹೋಗುವ ಪ್ರತಿ ವಾಹನದ ಮೇಲೆ ನಿಗಾ ವಹಿಸಬೇಕು. ಯಾವುದೇ ಅಕ್ರಮ ನಡೆದಲ್ಲಿ ವಶಕ್ಕೆ ಪಡೆಯಬೇಕು. ಚುನಾವಣೆ ಅಕ್ರಮಗಳನ್ನು ತಡೆಯಲು ನೀತಿ ಸಂಹಿತೆ ಪೂರ್ವ ಕಾರ್ಯ ನಿರ್ವಹಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಅಂತಾರಾಜ್ಯ ಗಡಿ ಜಿಲ್ಲೆಯ ತಮ್ಮ ಸಹಾಯ ಸಹಕಾರ ಅಗತ್ಯವಾಗಿರುವುದರಿಂದ ಯಾವುದೇ ಅಕ್ರಮ ಚಟುವಟಿಕೆಗೆ ಆಸ್ಪದ ನೀಡದೇ ನಮ್ಮ ಜಿಲ್ಲೆಯ ಪೊಲೀಸ್, ಕಂದಾಯ, ಜಿಎಸ್ ಟಿ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿಕೊಂಡು ಕಾರ್ಯ ನಿರ್ವಹಿಸುವ ಮೂಲಕ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಸಹಕರಿಸುವಂತೆ ನೆರೆ ರಾಜ್ಯದ ಅಧಿಕಾರಿಗಳಿಗೆ ಅವರು ತಿಳಿಸಿದರು.
ಜಿಲ್ಲೆಯ ಅಂತಾರಾಜ್ಯ ಹಾಗೂ ಅಂತರ್ ಜಿಲ್ಲಾ ಗಡಿ ಚೆಕ್ ಪೋಸ್ಟಗಳು ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಬೇಕು. ಸಂಬಂಧಪಟ್ಟ ತಂಡಗಳು ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡುವ ಜೊತೆಗೆ ಗಡಿ ಭಾಗದಲ್ಲಿ ಸ್ಥಾಪಿಸಲಾಗಿರುವ ಚೆಕ್‍ಪೋಸ್ಟ್‍ಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಕರ್ತವ್ಯದಲ್ಲಿ ಯಾವುದೇ ನಿರ್ಲಕ್ಷ ವಹಿಸಬಾರದರು. ಅಧಿಕಾರಿಗಳ ಕಾರ್ಯವೈಖರಿ ಮೇಲೆ ನಿಗಾ ಇಡಲಾಗುತ್ತಿದ್ದು, ಯಾವುದೇ ಲೋಪಕ್ಕೆ ಆಸ್ಪದ ನೀಡದೇ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಅವರು ಸೂಚನೆ ನೀಡಿದರು.
ಗಡಿ ಜಿಲ್ಲೆಯ ಎರಡು ರಾಜ್ಯಗಳ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಏನಾದರೂ ಸಮಸ್ಯೆ ಉದ್ಭವಿಸಿದರೆ ತಮ್ಮ ಗಮನಕ್ಕೆ ತರುವಂತೆ ತಿಳಿಸಿದ ಅವರು, ವಿಶೇಷವಾಗಿ ಚುನಾವಣಾ ಸಮಯದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಿ ಅಗತ್ಯ ವಿವರ ಒದಗಿಸಬೇಕು. ದಿನನಿತ್ಯ ತಮ್ಮ ಚಟುವಟಿಕೆಗಳ ಬಗ್ಗೆ ವರದಿ ಸಲ್ಲಿಸಬೇಕು. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಯಾವುದೇ ಗೊಂದಲಕ್ಕೊಳಗಾಗಬಾರದು ಪರಸ್ಪರ ಸಮನ್ವಯತೆ, ದೂರವಾಣಿ ಸಂಖ್ಯೆಗಳ ಮಾಹಿತಿ ವಿನಮಯ ಮಾಡುವಂತೆ ಸಾಂಗಲಿ ಹಾಗೂ ಸೋಲಾಪೂರದ ಅಧಿಕಾರಿಗಳಿಗೆ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದರು.
ಎಸ್ಪಿ ಎಚ್. ಡಿ. ಆನಂದಕುಮಾರ ಮಾತನಾಡಿ, ಗಡಿ ಭಾಗದಲ್ಲಿ ನಾನಾ ಪ್ರಕರಣಗಳಲ್ಲಿ ಭಾಗಿಯಾಗಿರುವವರ ಮೇಲೆ ಸೂಕ್ತ ನಿಗಾ ಇಡಲಾಗುವುದು. ಗಡಿ ಜಿಲ್ಲೆಯಾಗಿರುವುದರಿಂದ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದವರು, ಗಡಿ ಭಾಗ ಸೇರಿದಂತೆ ನೆರೆ ರಾಜ್ಯದಲ್ಲಿರುವ ಇಂತಹವರ ಸೂಕ್ತ ನಿಗಾ ಇಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಮಹಾರಾಷ್ಟ್ರದ ಗಡಿ ಜಿಲ್ಲೆಗಳ ಹಾಗೂ ಕರ್ನಾಟಕ ಗಡಿ ಮೂಲಕ ಅಕ್ರಮವಾಗಿ ವಸ್ತುಗಳ ಸಾಗಾಣಿಕೆ ಮೇಲೆ ತೀವ್ರ ನಿಗಾ ವಹಿಸಬೇಕು. ಹಂಚುವ ವಸ್ತುಗಳ ಮೇಲೆ ನಿಗಾ ವಹಿಸಿ ಕ್ರಮ ವಹಿಸುವಂತೆ ಕೋರಿದ ಹಿನ್ನಲೆಯಲ್ಲಿ, ನೆರೆ ರಾಜ್ಯದ ಅಧಿಕಾರಿಗಳು ಚುನಾವಣಾ ಅಕ್ರಮ ತಡೆಗಟ್ಟಲು ಜಿಲ್ಲೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿಕೊಂಡು ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ವಹಿಸಿ, ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಅವರು ಹೇಳಿದರು.
ಈ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ, ಎಎಸ್ಪಿ ಶಂಕರ ಮಾರಿಹಾಳ, ಡಿವೈಎಸ್ಪಿ ಸಿದ್ದೇಶ್ವರ, ಆರ್ ಟಿ ಒ ಆನಂದ ಪಾರ್ತನಳ್ಳಿ, ಅಬಕಾರಿ ಇಲಾಖೆ ಎಸ್ಪಿ ಜಗದೀಶ ಇನಾಂದಾರ, ಶಿವಲಿಂಗಪ್ಪ ಬನಹಳ್ಳಿ, ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ರಾಜಕುಮಾರ ಬಿ ಜಿರೋಳಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.