ವಿಜಯಪುರ: ಜನಪ್ರತಿನಿಧಿಗಳು ಎಂ. ಬಿ. ಪಾಟೀಲ ಅವರ ಮಾದರಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದರೆ ಈ ನಾಡಿನಲ್ಲಿ ಬರ ಎಂಬುದು ಇರುವುದಿಲ್ಲ ಎಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಎರೆ ಹೊಸಹಳ್ಳಿ ಶ್ರೀಮಹಾಯೋಗಿ ವೇಮನ ಸಂಸ್ಥಾನಮಠದ ಶ್ರೀ ವೇಮನಾನಂದ ಮಹಾಸ್ವಾಮೀಜಿ ಹೇಳಿದ್ದಾರೆ.
ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್. ಎಚ್. ಗ್ರಾಮದಲ್ಲಿ ಆಧುನಿಕ ಭಗೀರಥ, ಜಲಕ್ರಾಂತಿ ಪುರುಷ, ಡಾ. ಎಂ. ಬಿ. ಪಾಟೀಲ ಅವರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾತ್ಮರ ದೃಷ್ಠಿಕೋನದ ರತ್ನಗಳು, ಜನಸಾಮಾನ್ಯರ ದೃಷ್ಠಿಕೋನದ ರತ್ನಗಳು ಬೇರೆ ಬೇರೆಯಾಗಿರುತ್ತವೆ. ಅನ್ನ, ನೀರು, ಒಳ್ಳೆಯ ಮಾತುಗಳು ಭೂಮಿಯ ಅಮೂಲ್ಯ ರತ್ನಗಳಾಗಿವೆ. ಈ ಎಲ್ಲದಕ್ಕೂ ಜಲ ಸಮೃದ್ಧಿ ಅಗತ್ಯ. ಈ ನಾಡಿಗೆ ನೀರು ಒದಗಿಸಿದ ಎಂ. ಬಿ. ಪಾಟೀಲರಿಗೆ ರೈತರು ಕೃತಜ್ಞತೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಮಾಡಿದ ಕೆಲಸಕ್ಕೆ ಫಲಾನುಭವಿಗಳು ಈ ರೀತಿ ಪ್ರೀತಿಯ ಗೌರವ ಸಲ್ಲಿಸಿದರೆ ಕೆಲಸ ಮಾಡುವವರಿಗೆ ಮತ್ತಷ್ಟು ಸ್ಪೂರ್ತಿ ನೀಡಿದಂತಾಗುತ್ತದೆ. ಎಂ. ಬಿ. ಪಾಟೀಲರಂತೆ ಎಲ್ಲ 224 ಕ್ಷೇತ್ರಗಳ ಶಾಸಕರು ಇಂಥ ಅಭಿವೃದ್ಧಿ ಮಾಡಿದರೆ, ನಾಡಿನಾದ್ಯಂತ ಸಮೃದ್ಧಿ ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಬರ ಎಂಬುದೇ ಇರುವುದಿಲ್ಲ. ಸರಕಾರಗಳು ಸಮಸ್ಯೆಗಳ ಪರಿಹಾರಕ್ಕೆ ತಾತ್ಕಾಲಿಕ ಪರಿಹಾರ ನೀಡುವ ಯೋಜನೆಗಳನ್ನು ರೂಪಿಸುವ ಬದಲು ಶಾಶ್ವತ ಪರಿಹಾರ ಒದಗಿಸುವ ಕೆಲಸಗಳನ್ನು ಮಾಡಬೇಕು ಎಂದು ಅವರು ಕರೆ ನೀಡಿದರು.
ಮಮದಾಪುರ ವಿರಕ್ತ ಮಠದ ಶ್ರೀ ಅಭಿನವ ಮುರುಘೇಂದ್ರ ಮಹಾಸ್ವಾಮಿಗಳು ಮಾತನಾಡಿ, 12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಸಂಕಷ್ಟದಲ್ಲಿರುವ ಎಲ್ಲ ವರ್ಗದ ಜನರನ್ನು ಕೈಹಿಡಿದು ಮೇಲೆತ್ತಿ ಕೆಲಸ ಮಾಡಿದ್ದಾರೆ. ಇಂದು ಎಂ. ಬಿ. ಪಾಟೀಲರು ಅದೇ ಸಮಾಜಮುಖಿ ಕೆಲಸವನ್ನು ಮಾಡುತ್ತಿದ್ದಾರೆ. ಬಬಲೇಶ್ವರವನ್ನು ಇಡೀ ರಾಜ್ಯಕ್ಕೆ ಮಾದರಿ ಮತಕ್ಷೇತ್ರವನ್ನಾಗಿ ಮಾಡಿದ್ದಾರೆ. ಈವರೆಗೆ ಜನರು ಎಂ. ಬಿ. ಪಾಟೀಲರ ಭಾವಚಿತ್ರಗಳನ್ನು ಮನೆಯಲ್ಲಿ ಹಾಕುತ್ತಿದ್ದರು. ಈಗ ಈ ಕಾರ್ಯಕ್ರಮದಿಂದ ಅವರು ಎಲ್ಲರ ಮನದಲ್ಲಿ ಶಾಶ್ವತವಾಗಿ ನೆಲೆಸುವಂತಾಗಿದೆ ಎಂದ ಹೇಳಿದರು.
ಆಲಗೂರ- ಜಮಖಂಡಿ ಲಿಂಗಾಯಿತ ಪಂಚಮಸಾಲಿ ಜಗದ್ಗುರು ಪೀಠದ ಡಾ. ಮಹಾದೇವ ಶಿವಾಚಾರ್ಯರು ಮಾತನಾಡಿ, ಎಂ. ಬಿ. ಪಾಟೀಲರು ಅಭಿವೃದ್ಧಿಯ ಹರಿಕಾರರು. ನಾವು ಕೇಳಿದ ಎಲ್ಲವಿಜಯಪುರ ಬೇಡಿಕೆಗಳನ್ನು ಈಡೇರಿಸಿದ್ದಾರೆ. ಎಲ್ಲ ಯೋಜನೆಗಳಗಿ ಅನುದಾನ ಕೊಡುತ್ತಿದ್ದಾರೆ. ದೈವೇಚ್ಛೆಯಂತೆ ಅವರಿಂದಾಗಿ ಈ ಭಾಗದಲ್ಲಿ ಅಪಾರ ಕೆಲಸಗಳು ಆಗಿವೆ. ಸಿಕ್ಕ ಅಧಿಕಾರವನ್ನು ಬಳಸಿಕೊಂಡು ಈ ಭಾಗದಲ್ಲಿ ಸಮೃದ್ಧಿ ಮಾಡಿದ್ದಾರೆ ಎಂದು ಪ್ರಶಂಸಿಸಿದರು.
ಸಂಗಾಪುರ ಎಸ್. ಎಚ್. ನಯಾನಗರದ ಶ್ರೀ ಅಭಿನವ ಸಿದ್ಜಲಿಂಗ ಮಹಾಸ್ವಾಮಿಗಳು ಮಾತನಾಡಿ,
ಈ ಹಿಂದೆ ಯಾವ ರಾಜಕಾರಣಿಗಳೂ ಮಾಡದ ಮತ್ತು ಹತ್ತಾರು ವರ್ಷಗಳಲ್ಲಿ ಸಾಧ್ಯವಾಗದ ಕೆಲಸವನ್ನು ಎಂ. ಬಿ. ಪಾಟೀಲರು ಮಾಡಿದ್ದಾರೆ. ಸಿಕ್ಕ ಅಧಿಕಾರವನ್ನು ಸದುಪಯೋಗ ಪಡಿಸಿಕೊಂಡು ಈ ಭಾಗದಲ್ಲಿ ಹಣ ಮತ್ತು ಹಸಿರು ಕಾಣಲು ಕಾರಣರಾಗಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ಗ್ರಾಮದ ಎಲ್ಲರೂ ಪಕ್ಷಾತೀತವಾಗಿ ವೈಯಕ್ತಿಕವಾಗಿ ವಂತಿಗೆ ಸಂಗ್ರಹಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಗ್ರಾಮಸ್ಥರು ನಮ್ಮ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿಗೆ ಸಾಕ್ಷಿಯಾಗಿದೆ. ನಾವು ರೂಪಿಸಿದ ಯೋಜನೆಗಳು ಇಲ್ಲಿನ ಜನರಿಗೆ ತಲುಪಿರುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ನಮ್ಮ ಕೊನೆಯ ಉಸಿರು ಇರುವವರೆಗೆ ನಿಮ್ಮ ಸೇವೆ ಮಾಡುತ್ತೇವೆ. ನಿಮ್ಮ ಅಭಿಮಾನ ಪ್ರೀತಿ ನಮ್ಮ ಕುಟುಂಬದ ಮೇಲೆ ಸದಾ ಇರಲಿ ಎಂದು ಹೇಳಿದರು.
ಆಶಾ ಎಂ. ಪಾಟೀಲ ಮಾತನಾಡಿ, ಮತಕ್ಷೇತ್ರದ ಜನರ ಪ್ರೀತಿ ಮತ್ತು ವಿಶ್ವಾಸದಿಂದಾಗಿ ಎಂ. ಬಿ. ಪಾಟೀಲರು ಅಭಿವೃದ್ಧಿ ಮಾಡಲು ಸಾಧ್ಯವಾಗಿದೆ. ಸಚಿವರಾಗಿದ್ದಾಗ ಅವರ ನಾನು, ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರಿಗಿಂತಲೂ ಅತೀ ಹೆಚ್ಚು ಸಮಯವನ್ನು ಈ ಭಾಗದ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ. ಈಗ ಟೀಕಿಸುತ್ತಿರುವವರಿಗೆ ಜನರೇ ಈ ಬಾರಿಯೂ ಸೂಕ್ತ ಉತ್ತರ ನೀಡಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಬಸನಗೌಡ ಎಂ. ಪಾಟೀಲ ಮಾತನಾಡಿ, ತಮ್ಮ ತಂದೆಯವರು ಈ ಭಾಗದಲ್ಲಿ ನೀರಾವರಿ ಮಾಡಿದ್ದರಿಂದ ಇಲ್ಲಿ ರೈತರು ಆರೂವರೆ ಅಡಿ ಎತ್ತರದ ಕಂಚಿನ ಪ್ರತಿಮೆ ಮಾಡಿದ್ದಾರೆ. ಮುಂದೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಕಾರ್ಯಗಳಿಗೆ ನಮಗೆ ನೆರವಾದ ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಅವರ 12 ಅಡಿ ಎತ್ತರದ ಪ್ರತಿಮೆಯನ್ನು ಜಿಲ್ಲೆಯಲ್ಲಿ ಅನಾವರಣ ಮಾಡಲಾಗುವುದು ಎಂದು ತಿಳಿಸಿದರು.
ಗ್ರಾಮದ ಮುಖಂಡ ರಮೇಶ ಬಡ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಂ. ಬಿ. ಪಾಟೀಲ ಅವರ ವಿರೋಧಿಯಾಗಿದ್ದ ನಾನು ಅಭಿವೃದ್ಧಿ ಕಾರ್ಯಗಳನ್ನು ಮಚ್ಚಿ ಬಿಜೆಪಿ ಬಿಟ್ಟು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದೇವೆ. ಅವರ ಕಾರ್ಯವೈಖರಿಗೆ ಮನಸೋತು ಈಗ ಗ್ರಾಮಸ್ಥರೆಲ್ಲರೂ ಸೇರಿ ಕಂಚಿನ ಪ್ರತಿಮೆ ಮಾಡಿದ್ದೇವೆ. ರೈತ ಶೇಖಪ್ಪ ಚಿಕ್ಕಗಲಗಲಿ ಇದಕ್ಕಾಗಿ ಸ್ವಂತ ಜಮೀನು ನೀಡಿದ್ದಾರೆ. ಇದು ರೈತರು ಎಂ. ಬಿ. ಪಾಟೀಲರ ಬಗ್ಗೆ ಹೊಂದಿರುವ ಅಭಿಮಾನಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲಾವಿದರಾದ ಸುರೇಶ ಬಿರಾದಾರ ಮತ್ತು ವೀರೇಶ ಮನಗೂಳಿ, ವರ್ಧಮಾನ ಅವರು ರಚಿಸಿ ಹಾಡಿರುವ ಧ್ವನಿ ಸುರುಳಿಗಳ ಬಿಡುಗಡೆ ಮಾಡಲಾಯಿತು. ಸಂಗಾಪುರ ಎಸ್. ಎಚ್. ಗ್ರಾಮಸ್ಥರು ಎಂ. ಬಿ. ಪಾಟೀಲ ಅವರ ಕುಟುಂಬ ಸದಸ್ಯರನ್ನು ಸನ್ಮಾನಿಸಿ ಗೌರವಿಸಿದರು.
ಮೂರ್ತಿ ತಯಾರಕ ರಾಜಸ್ಥಾನದ ರಾಜಕುಮಾರ ಪಂಡಿತ ಅವರನ್ನೂ ಗೌರವಿಸಲಾಯಿತು.
ಭೂದಾನಿ ಶೇಖಪ್ಪ ಚಿಕ್ಕಗಲಗಲಿ, ದುಂಡಪ್ಪ ಬಡ್ರಿ, ರಮೇಶ ಬರಗಿ, ಸಂಗಪ್ಪ ಗಿರಗಾಂವಿ, ಅಶೋಕ ತಳೆವಾಡ, ಈರಪ್ಪ ಚೀರಲದಿನ್ನಿ, ರಾಜು ನೇಟಕತ್ತಿ, ರಾಜು ಬಡ್ರಿ, ಬಸವರಾಜ ಬಡ್ರಿ, ಸಿದ್ದು ಗೌಡನವರ, ಈರಗೊಂಡ ಬಿರಾದಾರ, ಎಚ್. ಎಸ್. ಕೋರಡ್ಡಿ, ಕುಮಾರ ದೇಸಾಯಿ, ವಿ. ಎಸ್. ಪಾಟೀಲ, ಸಂಗಮೇಶ ಬಬಲೇಶ್ವರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಲ್ಲು ದಳವಾಯಿ ಸ್ವಾಗತಿಸಿದರು. ಪ್ರಶಾಂತ ಝಂಡೆ ನಿರೂಪಿಸಿದರು.