ವಿಜಯಪುರ: ಬಡ, ದಿನ, ದಲಿತ, ಶೋಷಿತ, ವಂಚಿತರಿಗಾಗಿ ಯೋಚಿಸಿ, ಯೋಜನೆ ರೂಪಿಸಿ ಜಾರಿಗೊಳಿಸಿದ ನಮ್ಮ ಸರಕಾರ ಜನರಿಗೆ ಸಮರ್ಪಿತವಾದ ಸರಕಾರವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಹಲವು ಯೋಜನೆಗಳನ್ನು ಅನುಷ್ಠಾನ ಮಾಡಿ ಜನರ ಬದುಕು ಕಟ್ಟಿಕೊಡಲು ಪ್ರಯತ್ನಿಸಲಾಗಿದೆ ಎಂದು ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ನಗರದ ಸೈನಿಕ ಶಾಲೆ ಆವರಣದಲ್ಲಿ ನಡೆದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆಗಳ ಫಲಾನುಭವಿಗಳ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಮಾಜದ ಪ್ರತಿಯೊಂದು ವರ್ಗದ ಕಟ್ಟಕಡೆಯ ವ್ಯಕ್ತಿಯ ಬದುಕು ಸುಧಾರಣೆಗೆ ಹಲವು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿದ್ದರೂ ಸಹ ದೇಶದ ಪ್ರತಿ ಹಳ್ಳಿ ಹಳ್ಳಿಗಳ ಜನರ ಬಗ್ಗೆ ಚಿಂತಿಸುವ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಮಗೆ ದೊರೆತಿದ್ದು ಸೌಭಾಗ್ಯವಾಗಿದೆ ಎಂದು ಅವರು ಹೇಳಿದರು.
ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಹಲವು ಅಭಿವೃದ್ದಿ ಯೋಜನೆಗಳನ್ನು ಜಾರಿಗೊಳಿಸಿ ಜನರ ಕಷ್ಟ, ಸುಖಗಳನ್ನು ನಿವಾರಿಸಲು ಪ್ರಯತ್ನಿಸಲಾಗಿದೆ. ಜಲಜೀವನ ಮಿಷನ್, ಜಲಧಾರೆ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ 11.45 ಕೋಟಿ ಮನೆಗಳಿಗೆ ಕುಡಿಯುವ ನೀರು ಪೂರೈಸುವ ನಳಗಳ ಸಂಪರ್ಕ ಕಲ್ಪಿಸಲಾಗಿದೆ. 2026ನೇ ಇಸವಿಯೊಳಗಾಗಿ ದೇಶದದಲ್ಲಿರುವ ಪ್ರತಿ ಮನೆಗಳಿಗೆ ನಳಗಳಿಂದ ನೀರು ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ಕೇಂದ್ರ ಸಚಿವರು ತಿಳಿಿಸಿದರು.
ಪ್ರಧಾನ ಮಂತ್ರಿ ಜಲಜೀವನ ಯೋಜನೆಯಡಿ ಜಿಲ್ಲೆಯ ಪ್ರತಿ ಮನೆಗೆ ನೀರು ಒದಗಿಸಲಾಗುತ್ತಿದೆ. ವಿಜಯಪುರ ಜಿಲ್ಲೆಗೆ ರೂ. 1000 ಕೋ. ಪ್ರಧಾನ ಮಂತ್ರಿ ಜಲಜೀವನ ಯೋಜನೆಯಡಿ ಹಾಗೂ ಜಲಧಾರೆ ಯೋಜನೆಯಡಿ ರೂ. 3000 ಕೋ. ಸೇರಿದಂತೆ ರೂ. 4000 ಕೋ. ಹಣ ಒದಗಿಸಲಾಗಿದೆ. 42 ಕೋಟಿ ಪ್ರಧಾನ ಮಂತ್ರಿ ಜನಧನ ಹೊಸ ಖಾತೆಗಳನ್ನು ತೆರೆಯಲಾಗಿದೆ. ಈ ಖಾತೆಗಳಿಗೆ ಆಧಾರ ಹಾಗೂ ಮೋಬೈಲ್ ಸಂಖ್ಯೆಗೆ ಜೋಡಣೆ ಮಾಡುವ ಮೂಲಕ ಈ ಹಿಂದೆ ಯೋಜನೆಗಳ ಲಾಭ ಫಲಾನುಭವಿಗಳಿಗೆ ದೊರೆಯದೇ ಮಧ್ಯವರ್ತಿಗಳ ಪಾಲಾಗುತ್ತಿರುವುದನ್ನು ತಪ್ಪಿಸಲಾಗಿದೆ. ಸರಕಾರ ಡಿಬಿಟಿ ಮೂಲ ನೇರ ನಗದು ವರ್ಗಾವಣೆಯನ್ವಯ ಸರಕಾರದ ಯೋಜನೆಯ ಹಣ ಪ್ರತಿ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡುವ ಯೋಜನೆ ಜಾರಿಗೊಳಿಸಿದ್ದು, ಡಿಬಿಟಿ ಮೂಲಕ ರೂ. 25 ಲಕ್ಷ ಕೋ. ಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ ಎಂದು ಹೇಳಿದರು.
ಕೋವಿಡ್ ನಂಥ ಕ್ಲೀಷ್ಟಕರ್ ಪರಿಸ್ಥಿತಿಯನ್ನು ನಮ್ಮ ಸರಕಾರಗಳು ಸಮರ್ಥವಾಗಿ ನಿಭಾಯಿಸಿದೆ. ಆ ಸಂದರ್ಭದಲ್ಲಿ ದೇಶದಲ್ಲಿ ಲಕ್ಷಾಂತರ ಜನರು ಕೋವಿಡ್‍ದಿಂದ ಸಾವನ್ನಪ್ಪುತ್ತಾರೆ ಎಂದು ಅಭಿಪ್ರಾಯಿಸಿದ್ದರು. ಈ ಪರಿಸ್ಥಿಯಲ್ಲಿ ಅವಲೋಕಿಸಿದ ನಮ್ಮ ಸರಕಾರ, ಪ್ರಧಾನಮಂತ್ರಿಯವರ ದೂರದೃಷ್ಟಿಯುಳ್ಳ ಯೋಚನೆಯಿಂದ ಲಕ್ಷಾಂತರ ರೂ. ವ್ಯಯಿಸಿ ಬೇರೆ ದೇಶದಿಂದ ಕೋವಿಡ್ ವ್ಯಾಕ್ಸೀನ್ ಖರೀದಿಸುವ ಬದಲು, ನಮ್ಮ ದೇಶದಲ್ಲಿಯೇ ತಯಾರು ಮಾಡಿ, ಲಸಿಕೆ ನೀಡುವುದರಿಂದಲೇ ಇಂದು ಎಲ್ಲರೂ ಸುರಕ್ಷಿತವಾಗಿ, ಮಾಸ್ಕ ಇಲ್ಲದೇ ಬದುಕುವಂತಾಗಿದೆ. ಈ ಕ್ಲೀಷ್ಟಕರ್ ಪರಿಸ್ಥಿತಿಯಲ್ಲಿಯೂ ಸಹ ನಮ್ಮ ಸರ್ಕಾರಗಳು ಉಚಿತವಾಗಿ ವ್ಯಾಕ್ಸಿನೇಶನ್ ಸೇರಿದಂತೆ ಸಹಾಯಧನ, 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ಒದಗಿಸುವ ಮೂಲಕ ಜನರ ಕಷ್ಟಗಳಿಗೆ ಸ್ಪಂದಿಸಿದೆ. ಆಯುಷ್ಮಾನ ಭಾರತ ಆರೋಗ್ಯ ಯೋಜನೆಯಡಿ 39 ಲಕ್ಷ ಜನರಿಗೆ ಉಚಿತ ಚಿಕಿತ್ಸೆ ಒದಗಿಸಲಾಗಿದೆ ಎಂದು ಹೇಳಿದರು.
ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ವಿಜಯಪುರ ಅಭಿವೃದ್ದಿಗಾಗಿ ಸಾವಿರಾರು ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ. ನಾನಾ ರಸ್ತೆಗಳನ್ನು ಅಭಿವೃದ್ದಿಗೊಳಿಸಲಾಗಿದೆ. ವಿಜಯಪುರದಲ್ಲಿ ಟೆಕ್ಸ್ಸಟೈಲ್ ಪಾರ್ಕ್ ಅತ್ಯಾಧುನಿಕ ಕೋಲ್ಡ್ ಸ್ಟೋರೇಜ್ ನಿರ್ಮಿಸಲಾಗುತ್ತಿದೆ. ಇದರಿಂದ ಇಲ್ಲಿಯ ಸಾವಿರಾರು ಜನರಿಗೆ ಉದ್ಯೋಗ ದೊರೆಯಲಿದೆ. ತೊರವಿಯಲ್ಲಿ ವಿಶ್ವ ಮಾರುಕಟ್ಟೆ ಸ್ಥಾಪನೆಯಾಗಿ ವಿಜಯಪುರದಲ್ಲಿ ಬೆಳೆಯುವ ಬೆಳೆಗಳಿಗೆ ಅಂತಾರಾಷ್ಟ್ರೀಯ ದರ ದೊರೆತು ಇಲ್ಲಿನ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಪ್ರಾಮಾಣಿಕವಾಗಿ ಪ್ರಯತ್ನಿಸಿ, ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಒದಗಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಜಿಲ್ಲೆಯ ಪ್ರತಿ ಮನೆಗೆ ಸರ್ಕಾರಗಳ ಯೋಜನೆಗಳ ಲಾಭ ತಲುಪಿಸಲು ಪ್ರಯತ್ನಿಸಲಾಗಿದೆ. ಸಮಾವೇಶದಲ್ಲಿ ಪಾಲ್ಗೊಂಡಿರುವ ಫಲಾನುಭವಿಗಳೇ ಸಾಕ್ಷಿ. ಪ್ರತಿ ಮನೆಗೆ ನೀರೊದಗಿಸುವ ಪ್ರಧಾನಮಂತ್ರಿಗಳ ಕನಸಿನಂತೆ ಜಿಲ್ಲೆಯಾದ್ಯಂತ ಜಲಜೀವನ ಮಿಷನ್ ಯೋಜನೆ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜಾರಿಗೊಳಿಸಿರುವ ಪ್ರಧಾನಮಂತ್ರಿ ಸ್ವಚ್ಛ ಭಾರತ ಮೀಷನ್ ಯೋಜನೆ, ವಸತಿ ಯೋಜನೆ, ಮಹಾತ್ಮ ಗಾಂಧಿ ರಾಷ್ಟೀಯ ಉದ್ಯೋಗ ಖಾತ್ರಿ ಯೋಜನೆ, ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ ಹಾಗೂ ಆರೋಗ್ಯ ಕರ್ನಾಟಕ ಅನ್ನಭಾಗ್ಯ ಯೋಜನೆಗಳು, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ(ಸಮಗ್ರ ಪ್ಯಾಕ್ ಹೌಸ್), ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ(ಹನಿ ನೀರಾವರಿ), ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ(ಶೀತಲ ಗೃಹ), ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ, ಗೃಹ ಲಕ್ಷ್ಮಿ ಸುಕನ್ಯ ಸಮೃದ್ಧಿ ಖಾತೆ ಯೋಜನೆಗಳ ಮಾಹಿತಿ ನೀಡಿ, ಬಿಪಿಎಲ್ ಕುಟುಂಬಕ್ಕೆ ರೂ. 5 ಲಕ್ಷ ವರೆಗೆ ಉಚಿತ ಚಿಕಿತ್ಸೆ, ಗರ್ಭೀಣಿ ಮಹಿಳೆಗೆ ಮಾತೃವಂದನಾ ಯೋಜನೆಯಡಿ ರೂ. 5000, ಅಶಕ್ತ ನಿರ್ಗತಿಕರಿಗೆ, ಹಿರಿಯರಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಯೋಜನೆ, ಕಲಾವಿದರಿಗೆ ರೂ. 2000 ಮಾಶಾಸನ, ಮುಖ್ಯಮಂತ್ರಿ ರೈತ ವಿದ್ಯಾನಿಧಿಯಡಿ ರೂ. 2000 ದಿಂದ ರೂ. 11000 ವರೆಗೆ ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ, ಬಡ ಮತ್ತು ಮಧ್ಯಮ ಕುಟುಂಬಕ್ಕೆ ಬೆಳಕು ಯೋಜನೆಯಡಿ ಉಚಿತ ವಿದ್ಯುತ್ ಪೂರೈಕೆ, ಡೇನಲ್ಮ ಯೋಜನೆಯಡಿ 10 ಸಾವಿರ ರೂ. ಸಾಲ ಸೇರಿದಂತೆ ಹಲವು ಯೋಜನೆಗಳು ಜಾರಿಯಲ್ಲಿದ್ದು, ಈ ಎಲ್ಲ ಯೋಜನೆಗಳ ಫಲಾನುಭವಿಗಳನ್ನು ಒಂದೇ ವೇದಿಕೆಯಲ್ಲಿ ನಾನಾ ಯೋಜನೆಗಳ ಕಾರ್ಯಾದೇಶ, ಪರಿಕರ ವಿತರಿಸುವ ಫಲಾನಾಭುವಿಗಳ ಸಮ್ಮೇಳನ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಾನಾ ಯೋಜನೆಗಳ ಫಲಾನುಭವಿಗಳಿಗೆ ಒಳನಾಡು ಮೀನುಗಾರರಿಗೆ ಮೀನು ಸಲಕರಣೆ ಕಿಟ್ಟು ವಿತರಣೆ ಯೋಜನೆ, ನೀಲಿ ಕಾಂತ್ರಿ ಯೋಜನೆಯಡಿ ಇನ್ಸುಲೇಟೆಡ್ ಟ್ರಕ್ ಖರೀದಿಗೆ ಸಹಾಯಧನ, ಹೊಸ ಕಂದಾಯ ಗ್ರಾಮಗಳ ಹಕ್ಕು ಪತ್ರ ವಿತರಣೆ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆ, ಡೇ-ನಲ್ಮ್ ಯೋಜನೆ, ದ್ವಿ-ಚಕ್ರ ವಾಹನ ಯೋಜನೆ, ಕಾರ್ಮಿಕರ ಮಕ್ಕಳಿಗೆ ಟ್ಯಾಬ್ ವಿತರಣೆ, ಸಾಹಿತಿ,ಕಲಾವಿದರಿಗೆ ಮಾಸಾಶಾಸನ ಯೋಜನೆ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ (ಪಿ ಎಂ ಕೆ ಎಸ್ ವೈ) ಮೈಕ್ರೋ ಇರಿಗೇಶನ್, ಸಬ್ ಮಿಷನ್ ಆನ್ ಅಗ್ರಿಕಲಚರ್ ಮೆಕನೈಜೇಶನ್(ಎಸ್ ಎಂ ಎ ಎಂ) ಯೋಜನೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆ, ಮುಖ್ಯ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆ, ಮುಖ್ಯ ಮಂತ್ರಿ ರೈತ ವಿದ್ಯಾನಿಧಿ ಯೋಜನೆ, ಜಲ ಜೀವನ ಮಿಷನ್ ಯೋಜನೆ, ವಿಕಲಚೇತನರಿಗೆ ಸಾಧನ ಸಲಕರಣೆ, ಶ್ರವಣ ಸಾಧನೆ ಯಂತ್ರ, ಟಾಕಿಂಗ್ ಲ್ಯಾಪ್ ಟಾಪ್ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಾಗಠಾಣ ಶಾಸಕ ಡಾ. ದೇವಾನಂದ ಚವ್ಹಾಣ, ಸಿಂದಗಿ ಶಾಸಕ ರಮೇಶ ಭೂಸನೂರ, ರಾಜ್ಯ ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ದ್ರಾಕ್ಷಿ-ವೈನ್ ಬೋರ್ಡ್ ಅಧ್ಯಕ್ಷ ಎಂ. ಎಸ್. ರುದ್ರಗೌಡರ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪರಶುರಾಮ ರಜಪೂತ, ಜಿಲ್ಲಾ ಪಂಚಾಯಿತಿ ಸಿಇಓ ರಾಹುಲ ಶಿಂಧೆ, ಎಸ್ಪಿ ಎಚ್. ಡಿ. ಆನಂದಕುಮಾರ ಉಪಸ್ಥಿತರಿದ್ದರು.