ವಿಜಯಪುರ: ಯುಗಾದಿಯಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಬಹುದು. ಅಂದು ಬಹುಷಃ ನಾವು ಸಿಹಿ ಸುದ್ದಿ ಕೊಡುತ್ತೇವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮೊದಲ ಪಟ್ಟಿ ಯಾವಾಗ ಬಿಡುಗಡೆಯಾಗುಲಿದೆ ಎಂಬ ಪ್ರಶ್ನೆಗೆ ಯುಗಾದಿಯಂದು ಬಹುಷಃ ಸಿಹಿ ಸುದ್ದಿ ನೀಡುತ್ತೇವೆ ಎಂದು ಹೇಳುವ ಮೂಲಕ ಟಿಕೆಟ್ ಆಕಾಂಕ್ಷಿಗಳಲ್ಲಿ ಕುತೂಹಲ ಮತ್ತು ಆತಂಕ ಮೂಡಿಸಿದ್ದಾರೆ.
ಮಾ. 20 ರಂದು ಬೆಳಗಾವಿಗೆ ರಾಹುಲ್ ಗಾಂಧಿ ಭೇಟಿ ಯುವಕರಿಗಾಗಿ ಸ್ಕೀಂ ಘೋಷಣೆ
ದೇ ವೇಳೆ, ಮಾ. 20 ರಂದು ಎಐಸಿಸಿ ಮಾಜಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಾ. 20 ರಂದು ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಅಲ್ಲಿ, ಯುವಕರ ಬೃಹತ್ ಸಮಾವೇಶ ನಡೆಯಲಿದೆ. ಅದರಲ್ಲಿ ರಾಹುಲ್ ಗಾಂಧಿ ಪಾಲ್ಗೋಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಠಿ ಮಾಡುವುದಾಗಿ ಹೇಳಿದ್ದರು. ಎಂಟು ವರ್ಷ ಕಳೆದರೂ 16 ಕೋಟಿ ಉದ್ಯೋಗ ಸೃಷ್ಠಿಯಾಗಿಲ್ಲ. ನೋಟ್ ಬ್ಯಾನ್ ತಪ್ಪಿನಿಂದಾಗಿ ನರಸಿಂಹರಾಯರು ಮತ್ತು ಮನಮೋಹನ್ ಸಿಂಗರು ಕಟ್ಟಿದ್ದ ಸದೃಢ ಆರ್ಥಿಕತೆ ವ್ಯವಸ್ಥೆಯನ್ನು ಸರಿಯಾಗಿ ನಿಭಾಯಿಸದೇ ಕೋಟ್ಯಂತರ ಹಳೆಯ ಉದ್ಯೋಗಗಳು ನಷ್ಠವಾಗಿದೆ. ಯುವಕರು ನಿರುದ್ಯೋಗಿಗಳಾಗಿದ್ದಾರೆ. ಪಕೋಡಾ ಮಾರಿ ಎಂದು ಯುವಕರಿಗೆ ಹೇಳುತ್ತಿದ್ದಾರೆ. ಆದರೆ, ಆ ಪಕೋಟ ತಯಾರಿಸಲು ಅಗತ್ಯವಾಗಿರುವ ಎಣ್ಣೆ ಕೂಡ ತುಟ್ಟಿಯಾಗಿದೆ. ಯುವಕರಿಗೆ ರಾಜ್ಯದಲ್ಲಿ ಈಗ ಸುಮಾರು ಎರಡು ಲಕ್ಷ ಉದ್ಯೋಗಗಳು ಖಾಲಿ ಇವೆ. ದೇಶದಲ್ಲಿ ಕೋಟ್ಯಂತರ ಉದ್ಯೋಗಗಳು ಖಾಲಿ ಇವೆ. ಉದ್ಯೋಗ ಸೃಷ್ಠಿಗಾಗಿ ಜವಾಹರಲಾಲ್ ನೆಹರೂ ಅವರು ಆರಂಭಿಸಿದ್ದ ಬಿಎಚ್‌ಇಎಲ್, ಎಚ್ಎಎಲ್, ಬಿಇಎಲ್, ಎಚ್ಎಂಟಿ, ಎಲ್ ಐ ಸಿ ಸಾರ್ವಜನಿಕ ಉದ್ಯಮಗಳನ್ನು ಈಗ ಮಾರಾಟ ಮಾಡುವ ಪರಿಸ್ಥಿತಿಗೆ ತಂದಿದ್ದಾರೆ. ಆ ಎಲ್ಲ ವಿಚಾರಗಳನ್ನು ಇಟ್ಟುಕೊಂಡು ನಿರುದ್ಯೋಗ ಸಮಸ್ಯೆ, ಯುವಕರ ಸಮಸ್ಯೆ ಕುರಿತು ರಾಹುಲ ಗಾಂಧಿಯವರು ಬೆಳಗಾವಿಯ್ಲಲಿ ಜನರನ್ನು ಸಂಭೋದಿಸಿ ಅಲ್ಲಿ ಕಾಂಗ್ರೆಸ್ ನಾಲ್ಕನೇ ಗ್ಯಾರಂಟಿ ಸ್ಕೀಂ ನ್ನು ಘೋಷಣೆ ಮಾಡುತ್ತಾರೆ ಎಂದು ಅವರು ತಿಳಿಸಿದರು.
ಫೋನ್ ಕಾಲ್ ಹಿಸ್ಟರಿ ಸಂಗ್ರಹ ವಿರುದ್ಧ ಪೋಲೀಸರಿಗೆ ದೂರು ವಿಚಾರ
ನನ್ನ ಮತ್ತು ನನ್ನ ಕುಟುಂಬಸ್ಥರ ಫೋನ್ ಕಾಲ್ ಹಿಸ್ಟರಿ(ಸಿಡಿಆರ್) ಸಂಗ್ರಹಿಸುವ ಚಾಳಿ ಬಹಳ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಡಿಜಿಯವರಿಗೆ ದೂರು ನೀಡಿದ್ದೇನೆ. ಅಲ್ಲದೇ, ಟೆಲಿಕಾಂ ಕಂಪನಿಗಳು ಮತ್ತು ಎಲ್ಲ ಜಿಲ್ಲೆಗಳ ಎಸ್ಪಿಗಳಿಗೆ ಕ್ರಮ ಕೈಗೊಳ್ಳಲು ಹೇಳಿದ್ದೇನೆ. ನಾನು ಮಾಜಿ ಗೃಹ ಸಚಿವ. ಓರ್ವ ಸಾಮಾನ್ಯ ಮನುಷ್ಯನ ಖಾಸಗಿ ಮಾಹಿತಿಯನ್ನು ಪಡೆದುಕೊಳ್ಳಲು ಯಾರಿಗೂ ಅಧಿಕಾರವಿಲ್ಲ. ಹಾಗೇನಾದರೂ ಆದರೆ, ಅಂಥವರ ವಿರುದ್ಧ ಮುಂದೆ ಕ್ರಮ ಕೈಗೊಳ್ಳುವುದು ಸರಕಾರದ ಜವಾಬ್ದಾರಿ ಎಂದು ಹೇಳಿದ್ದೇನೆ ಎಂದು ಅವರು ತಿಳಿಸಿದರು.
ನಿಮ್ಮ ವಿರೋಧಿಗಳು ಈ ರೀತಿ ನಿಮ್ಮ ಫೋನ್ ಕಾಲ್ ಹಿಸ್ಟರಿ ಸಂಗ್ರಹಿಸುತ್ತಿದ್ದಾರೆ ಎಂದು ಕೆಲವರು ಮಾಹಿತಿ ಕೊಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಯಾರ ಜೊತೆ ಮಾತನಾಡುತ್ತಿದ್ದಾರೆ ಎಂಬುದರ ಖಾಸಗಿ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನ ನಡೆಯುತ್ತಿದೆ ಎಂಬ ವಿಶ್ವಾಸಾರ್ಹ ಮಾಹಿತಿ ಬಂದಿದ್ದರಿಂದಲೇ ನಾನು ದೂರು ಕೊಟ್ಟಿದ್ದೇನೆ. ನಾನು ಗೃಹ ಸಚಿವನಾಗಿ ನೋಡಿದಂತೆ ಎಲ್ಲ ಅಧಿಕಾರಿಗಳು ಒಳ್ಳೆಯವರಿದ್ದಾರೆ. ಒಂದಿಬ್ಬ ಅಧಿಕಾರಿಗಳು ಯಾವುದೋ ಆಮೀಷಕ್ಕೆ ಸಿಡಿಆರ್ ತೆಗೆದು ಕೊಡವ ಕೆಲಸ ಮಾಡುತ್ತಿರುತ್ತಾರೆ. ನನ್ನದಷ್ಟೇ ಅಲ್ಲ, ಬೇರೆ ಯಾರದೂ ಈ ರೀತಿ ಆಗಬಾರದು. ಬಿಜೆಪಿಯವರದೂ ಆಗಬಾರದು. ಸಾಮಾನ್ಯ ವ್ಯಕ್ತಿಯದೂ ಆಗಬಾರದು ಎಂದು ಎಂ. ಬಿ. ಪಾಟೀಲ ಹೇಳಿದರು.
ಸಿದ್ಧರಾಮಯ್ಯ ವರುಣಾದಿಂದ ಸ್ಪರ್ಧೆ ವಿಚಾರ
ರಾಹುಲ್ ಗಾಂಧಿ ಅವರು ಸಿದ್ಧರಾಮಯ್ಯ ಅವರ ಜೊತೆ ಏನು ಚರ್ಚೆ ಮಾಡಿದ್ದಾರೆ ನನಗೆ ಗೊತ್ತಿಲ್ಲ. ಬಹುಷಃ ರಾಹುಲ್ ಗಾಂಧಿ ಅವರು ಸಿದ್ಧರಾಮಯ್ಯ ಅವರಿಗೆ ವರುಣಾದಿಂದ ಸ್ಪರ್ಧಿಸಿದರೆ ವ್ಯಾಪಕವಾಗಿ ಪ್ರಚಾರ ಮಾಡಲು ಸಾಧ್ಯವಾಗುತ್ತದೆ. ಕೋಲಾರದಲ್ಲಿ ಸ್ಪರ್ಧಿಸಿದರೆ ಹೊಸ ಕ್ಷೇತ್ರವಾದ್ದರಿಂದ ಜಾಸ್ತಿ ಸಮಯ ಪ್ರಚಾರ ಮಾಡಬೇಕಾಗುತ್ತದೆ. ನಾನು ಹೇಳಿದಂತೆ ಕೋಲಾರದಿಂದ ಸ್ಪರ್ಧಿಸಿದರೂ ಸಿದ್ಧರಾಮಯ್ಯ 40 ರಿಂದ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ. ಅದರಲ್ಲಿ ಎರಡು ಮಾತಿಲ್ಲ. ಬಾದಾಮಿಯಿಂದಲೂ ಗೆಲ್ತಾರೆ. ವಾರಣಾದಿಂದಲೂ ಗೆಲ್ಲುತ್ತಾರೆ. ಸಿದ್ಧರಾಮಯ್ಯ ಅವರ ಶಕ್ತಿಯಿಂದ ರಾಜ್ಯಾದ್ಯಂತ ಪ್ರಚಾರ ಮಾಡುವುದರಿಂದ ನೂರಾರು ಎಂಎಲ್‌ಎ ಗಳು ಆಯ್ಕೆಯಾಗುತ್ತಾರೆ. ಅವರು ಜನನಾಯಕರು. ನಮ್ಮ ಮತಕ್ಷೇತ್ರಕ್ಕೆ ಅವರು ಬಂದು ಪ್ರಚಾರ ಮಾಡಿದರೆ 10 ಸಾವಿರ ಹೆಚ್ಚು ಮತಗಳು ಬರುತ್ತವೆ. ಪ್ರತಿಯೊಂದು ಮತಕ್ಷೇತ್ರದಲ್ಲಿ ಅವರ ಶಕ್ತಿಯಿದೆ. ಅವರನ್ನು ಪ್ರಚಾರಕ್ಕೆ ಜಾಸ್ತಿ ಬಳಸಿಕೊಳ್ಳುವ ದೃಷ್ಠಿಯಿಂದ ರಾಹುಲ್ ಗಾಂಧಿ ಹೇಳಿರಬಹುದು. ಆ ಬಗ್ಗೆ ನನಗೆ ಸ್ಪಷ್ಟವಾಗಿ ಗೊತ್ತಿಲ್ಲ. ಈ ಕುರಿತು ಅವರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಅವರು ತಿಳಿಸಿದರು.
ಎಸ್. ಆರ್. ಪಾಟೀಲ ಅವರಿಗೆ ದೇವರ ಹಿಪ್ಪರಗಿಯಿಂದ ಟಿಕೆಟ್ ವಿರೋಧ ವಿಚಾರ
ಇದೇ ವೇಳೆ, ಮಾಜಿ ಸಚಿವ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಬಾಗಲಕೋಟೆ ಜಿಲ್ಲೆಯ ಎಸ್. ಆರ್. ಪಾಟೀಲ ಅವರಿಗೆ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿಯಿಂದ ಟಿಕೆಟ್ ನೀಡುವುದಕ್ಕೆ ಒಂಬತ್ತು ಜನ ಆಕಾಂಕ್ಷಿಗಳು ಸಾಮೂಹಿಕವಾಗಿ ವಿರೋಧಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಎಂ. ಬಿ. ಪಾಟೀಲ ಅವರು, ಈ ಬಗ್ಗೆ ನನಗೆ ಗೊತ್ತಿಲ್ಲ. ಈ ಕುರಿತು ಪಕ್ಷದ ವರಿಷ್ಠರು ಕ್ರಮ ಕೈಗೊಳ್ಳುತ್ತಾರೆ. ಇಂದು ಒಂದಿಬ್ಬರು ಆಕಾಂಕ್ಷಿಗಳು ನನ್ನನ್ನು ಭೇಟಿ ಮಾಡಿ ತಮ್ಮ ಭಾವನೆಗಳನ್ನು ಹೇಳಿಕೊಂಡಿದ್ದಾರೆ. ಆ ಭಾವನೆಗಳನ್ನು ಪಕ್ಷದ ವರಿಷ್ಠರಿಗೆ ತಿಳಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ, ಜಿ. ಪಂ. ಮಾಜಿ ಅಧ್ಯಕ್ಷ ಅರ್ಜುನ ಹೀರು ರಾಠೋಡ ಮುಂತಾದವರು ಉಪಸ್ಥಿತರಿದ್ದರು.