ಸೇವಾಲಾಲ, ಹಾಮುಲಾರರ ಆಶೀರ್ವಾದನ ನನ್ನ ಮೇಲಿದೆ- ಬಂಜಾರಾ ಉಡುಪು,, ಕಲೆ ಜಗತ್ತಿಗೆ ಪರಿಚಯಿಸಲು ಕ್ರಮ- ಎಂ. ಬಿ. ಪಾಟೀಲ

ವಿಜಯಪುರ: ಸೇವಾಲಾಲ್ ಮತ್ತು ಹಾಮುಲಾಲ್ ರ ಆಶೀರ್ವಾದ ನನ್ನ ಮೇಲಿದೆ.  ಬಂಜಾರಾ ಸಮುದಾಯದ ಉಡುಪು ಮತ್ತು ಅದನ್ನು ತಯಾರಿಸುವ ಕಲೆಯನ್ನು ಜಗತ್ತಿಗೆ ಪರಿಚಯಿಸಲು ಯೋಜನೆ ರೂಪಿಸಲಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

ವಿಜಯಪುರ ನಗರದ ಸೋಲಾಪುರ ಬೈಪಾಸ್ ರಸ್ತೆಯಲ್ಲಿ ನಿರ್ಮಿಸಲಾಗಿರುವ ಶ್ರೀ ಹಾಮುಲಾಲ್ ನೂತನ ದೇವಸ್ಥಾನ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಉದ್ಘಾಟನೆ ಬಳಿಕ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಂಜಾರಾ ಸಮುದಾಯದ ಜನ ಶ್ರಮ ಜೀವಿಗಳು.  ಜೈವ ಭಕ್ತರು.  ಆಕರ್ಷಕವಾಗಿರುವ ಈ ಸಮುದಾಯದ ಉಡುಪನ್ನು ಜಗತ್ತಿಗೆ ಪರಿಚಯಿಸಲು ಯೋಜನೆ ರೂಪಿಸಲಾಗಿದೆ.  ದೊಡ್ಡ ಮಟ್ಟದಲ್ಲಿ ಗುಡಿ ಕೈಗಾರಿಕೆಗೆ ಪ್ರೋತ್ಸಾಹ ನೀಡಿ ಅವುಗಳ ಮಾರುಕಟ್ಟೆ ವ್ಯವಸ್ಥೆ ಒದಗಿಸಲಾಗುವುದು.  ಈ ಹೊಸ ಯೋಜನೆಯಿಂದ ಬಂಜಾರಾ ಸಮುದಾಯದ ಮಹಿಳೆಯರು ಆರ್ಥಿಕವಾಗಿ ಹೆಚ್ಚು ಸ್ವಾವಲಂಬಿಯಾಗಲಿದ್ದಾರೆ. ಅಲ್ಲದೇ, ಉದ್ಯೋಗ ಸೃಷ್ಠಿಗೂ ಇದು ನೆರವಾಗಲಿದೆ.  ಈ ಯೋಜನೆ ಅನುಷ್ಠಾನಕ್ಕೆ ಆಶಾ ಎಂ. ಪಾಟೀಲ ಅವರೂ ಕಾರ್ಯೋನ್ಮುಖರಾಗಿದ್ದಾರೆ.  ಈಗ ಆಗಿರುವ ನೀರಾವರಿಯಿಂದ ಗುಳೆ ಹೋಗುವುದು ತಪ್ಪಿದೆ.  ಇನ್ನು ಮುಂದೆ ಮಹಾರಾಷ್ಟ್ರದಿಂದ ಜನ ಇಲ್ಲಿಗೆ ಗುಳೆ ಬರಲಿದ್ದಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಎಂ. ಬಿ. ಪಾಟೀಲ ಮಾತನಾಡಿದರು

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ಹಾಮುಲಾಲ್ ದೇವಸ್ಥಾನವನ್ನು ತೆರವುಗೊಳಿಸಲಾಗಿತ್ತು.  ಈಗ ಹೊಸ ಮಂದಿರ ನಿರ್ಮಾಣವಾಗಿರುವುದು ನನಗೆ ಅತೀವ ಸಂತಸ ತಂದಿದೆ.  ಈ ದೇವಸ್ಥಾನ ನಿರ್ಮಾಣಕ್ಕೆ ಬಿ. ಎಲ್. ಡಿ. ಇ ಸಂಸ್ಥೆಗೆ ಸೇರಿದ ರೂ. 10 ಕೋ. ಮೌಲ್ಯದ ನಿವೇಶನ ನೀಡಿ ದೇವಸ್ಥಾನ ನಿರ್ಮಾಣಕ್ಕೆ ರೂ. 3.50 ಕೋ. ಅನುದಾನ ಕೊಟ್ಟಿದ್ದೇವೆ.  ಈ ಮೂಲಕ ಬಂಜಾರ ಸಮುದಾಯದ ಆರಾಧ್ಯದೈವ ಹಾಮುಲಾಲರಿಗೆ ಅಳಿಲು ಸೇವೆ ಸಲ್ಲಿಸಿದ್ದೇನೆ.  ಈ ಮುಂಚೆ ಇದೇ ರೀತಿ ಇದೇ ರೀತಿ ಅಥಣಿ ಬಳಿ ಹಾಮುಲಾಲರ ಮೂಲ ದೇವಸ್ಥಾನ ಹಾಗೂ ದಾವಣಗೆರೆ ಜಿಲ್ಲೆಯಲ್ಲಿರುವ ಸೇವಾಲಾಲರ ಜನ್ಮಸ್ಥಳ ಅಭಿವೃದ್ಧಿಗೂ ಅನುದಾನ ಜಲಸಂಪನ್ಮೂಲ ಸಚಿವನಾಗಿದ್ದಾಗ ಅನುದಾನ ನೀಡಿದ್ದೇನೆ.  ವಿಜಯಪುರ ನಗರದ ಆದರ್ಶ ನಗರದಲ್ಲಿ ರಾಮರಾವ ಮಹಾರಾಜರ ಹೆಸರಿನಲ್ಲಿ ರೂ. 3.50 ಕೋ. ಅನುದಾನದಲ್ಲಿ ಸಮುದಾಯ ಭವನ ನಿರ್ಮಸಲು ಸಹಾಯ ಮಾಡಿದ್ದೇನೆ.  ವಿಜಯಪುರ ಜಿಲ್ಲೆಯಲ್ಲಿ ಪ್ರತಿಯೊಂದು ತಾಂಡಾಗಳಲ್ಲಿ ಕನಿಷ್ಠ ರೂ. 25 ಸಾವಿರ ದಿಂದ ಒಂದು ಕೋಟಿ ರೂಪಾಯಿವರೆಗೆ ಅನುದಾನ ನೀಡಿ, ದುರ್ಗಾದೇವಿ ದೇವಸ್ಥಾನ, ಸೇವಾಲಾಲ, ಹಾಮುಲಾಲ ಸುಮುದಾಯ ಭವನ ನಿರ್ಮಾಣಕ್ಕೆ ಹಣಕಾಸಿನ ನೆರವು ನೀಡಿದ್ದೇನೆ ಎಂದು ಅವರು ತಿಳಿಸಿದರು.

ಸೇವಾಲಾಲರ ಆಶೀರ್ವಾದ ನನ್ನ ಮೇಲಿದೆ

ಸರಕಾರದ ವತಿಯಿಂದ ಸೇವಾಲಾಲರ ಜಯಂತಿ ಆಚರಣೆ ಮಾಡಲು ಕಾಂಗ್ರೆಸ್ ಸರಕಾರ ಕಾರಣ.  ಬಬಲೇಶ್ವರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾಜಿ ಸಿಎಂ. ಎಸ್. ಸಿದ್ಧರಾಮಯ್ಯ ಈ ಘೋಷಣೆ ಮಾಡಿದರು.  ನನ್ನಮೇಲೆ ಸೇವಾಲಾಲರ ಆಶೀರ್ವಾದವಿದೆ.  ಹಾಮುಲಾಲರ ಆಶೀರ್ವಾದವಿದೆ.  ತಮ್ಮೆಲ್ಲರ ಪ್ರೀತಿಯಿದೆ.  ಮುಂದೆಯೂ ಈ ಪ್ರೀತಿ ಮತ್ತು ಆಶೀರ್ವಾದ ಸದಾ ಮುಂದುವರೆಯಲಿ.  ಈಗ ನೀರಾವರಿ ಮಾಡಿದ್ದು, ಮುಂದೆ ಹಾಲು ಕ್ರಾಂತಿ, ಕುರಿ ಸಾಕಣೆ, ಕೋಳಿ ಸಾಕಣೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲು ತಾವೆಲ್ಲರೂ ನಮ್ಮ ಕೈ ಬಲಪಡಿಸಬೇಕು.  ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಲಂಬಾಣಿ ಸಮುದಾಯದ ಮೇಲೆ ವಿಶೇಷ ಪ್ರೀತಿ ಇದೆ.  ನಮ್ಮ ತಂದೆಯ ಕಾಲದಿಂದಲೂ ತಾವೆಲ್ಲರೂ ನಮ್ಮ ಜೊತೆಗಿದ್ದೀರಿ.  ಈ ಬಾಂಧವ್ಯ ಮುಂದೆಯೂ ಮತ್ತಷ್ಟು ಗಟ್ಟಿಯಾಲಿ ಎಂದು ಅವರು ಹೇಳಿದರು.

ಬಂಜಾರಾ ಅಭಿವೃದ್ಧಿ ಪ್ರಾಧಿಕಾರ ರಚನೆ ಭರವಸೆ

ಬಬಲೇಶ್ವರ ಮತಕ್ಷೇತ್ರದಲ್ಲಿ ಲಂಬಾಣಿ ತಾಂಡಾಗಳಲ್ಲಿ ನಾವು ಕೈಗೊಂಡ ಅಭಿವೃದ್ಧಿ ಯೋಜನೆಗಳಿಂದ ಸ್ಪೂರ್ತಿ ಪಡೆದು ಕಾಂಗ್ರೆಸ್ ಸರಕಾರದಲ್ಲಿ ತಾಂಡಾ ಅಭಿವೃದ್ಧಿ ನಿಗಮ ಸ್ಥಾಪಿಸಲಾಯಿತು.  ನಾವು ಈಗ ಪ್ರತಿಯೊಂದು ತಾಂಡಾಗಳಲ್ಲಿ ಸಿಸಿ ರಸ್ತೆಗಳು, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳಿವೆ.  ನಮ್ಮ ಸರಕಾರ ಮತ್ತೆ ಅಧಿಕಾರಕ್ಕೆ ಬರಲಿದ್ದು, ಆಗ ಸಮಾಜದ ಬೇಡಿಕೆಯಾದ ಬಂಜಾರಾ ಪ್ರಾಧಿಕಾರ ರಚಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಬಂಜಾರಾ ಸಮುದಾಯಕ್ಕೆ ಮೀಸಲಾತಿ ನೀಡಿದ್ದು ಕಾಂಗ್ರೆಸ್

ಬಂಜಾರಾ ಸಮುದಾಯ ಎಸ್. ಸಿ. ಕೆಟಗರಿಗೆ ಸೇರಲು ಇಂದಿರಾ ಗಾಂಧಿ, ದೇವರಾಜ ಅರಸ, ಕೆ. ಟಿ. ರಾಠೋಡ ಮತ್ತು ಎಲ್. ಆರ್. ನಾಯಕ ಅವರು ಕಾರಣ.  ಈಗ ಅದೇ ಮೀಸಲಾತಿ ಸೌಲಭ್ಯದಿಂದಾಗಿ ಬಂಜಾರಾ ಸಮುದಾಯ ಸಾಕಷ್ಟು ಅಭಿವೃದ್ಧಿಯಾಗಿದೆ.  ಇದನ್ನು ಯಾರೂ ಮರೆಯಬಾರದು.  ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರಿಗೆ ಲಂಬಾಣಿ ಸಮಾಜದ ಮೇಲೆ ವಿಶೇಷ ಪ್ರೀತಿ ಇತ್ತು.  ಸಮಾಜದ ಉಡುಪು ಧರಿಸಿದ್ದರು.  ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಕೈ ಬಲಪಡಿಸಬೇಕಿದೆ.  ನಾವು ಬೇರೆಯವರಂತೆ ಸುಳ್ಳು ಹೇಳುವುದಿಲ್ಲ.

ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ವಿಜಯಪುರ ಹಾಮುಲಾಲ ದೇವಸ್ಥಾನವನ್ನು ಅಥಣಿ ಮಂದಿರದ ಮಾದರಿಯಲ್ಲಿ ಧಾರ್ಮಿಕ ಸ್ಥಳವಾಗಿ ಅಭಿವೃದ್ಧಿ ಮಾಡಲಾಗುವುದು.  ಇದಕ್ಕಾಗಿ ಎಲ್ಲ ತಾಂಡಾಗಳ ಮಹಾರಾಜರು ಮತ್ತು ಪ್ರಮುಖರನ್ನೊಳಗೊಂಡ ಸಮಿತಿ ರಚಿಸಲಾಗುವುದು.  ಅಲ್ಲದೇ, ಪ್ರತಿ ವರ್ಷ ದೊಡ್ಡ ಜಾತ್ರೆ ಮಾಡಲು ದಿನಾಂಕ ನಿಗದಿ ಮಾಡಲಾಗವುದು.  ಸಮುದಾಯದ ಪ್ರೀತಿ, ವಿಶ್ವಾನ ನಮ್ಮ ಕುಟುಂಬದ ಮೇಲೆ ಹೀಗೆಯೇ ಮುಂದುವರೆಯಲಿ ಎಂದು ಹೇಳಿದರು.

ಜಿ. ಪಂ. ಮಾಜಿ ಅಧ್ಯಕ್ಷ ಅರ್ಜುನ ಹೀರು ರಾಠೋಡ ಮಾತನಾಡಿ, ಬಬಲೇಶ್ವರ ಮತಕ್ಷೇತ್ರದ ಲಂಬಾಣಿ ತಾಂಡಾಗಳು ರಾಜ್ಯದಲ್ಲಿಯೇ ಅತೀ ಹೆಚ್ಚು ಅಭಿವೃದ್ಧಿ ಹೊಂದಿದ್ದು, ಇತರರಿಗೆ ಮಾದರಿಯಾಗಿವೆ.  ಹಾಮುಲಾಲ ದೇವಸ್ಥಾನ ನಿರ್ಮಾಣಕ್ಕೆ ಎಂ. ಬಿ. ಪಾಟೀಲರು ರೂ. 10 ಕೋಟಿ ಮೌಲ್ಯದ ನಿವೇಶನ, ರೂ. 3.50 ಕೋ. ಅನುದಾನ ನೀಡಿದ್ದಾರೆ.  ಜಿಲ್ಲೆಯಲ್ಲಿ ಬಂಜಾರಾ ಸಮಾಜಕ್ಕೆ ಅತೀ ಹೆಚ್ಚು ಸೌಲಭ್ಯ ಒದಗಿಸಿ ನಮ್ಮೆಲ್ಲರ ಹಿತರಕ್ಷಕರಾಗಿದ್ದಾರೆ.  ಜಿಲ್ಲೆಯ ಪ್ರತಿಯೊಂದು ತಾಂಡಾದಲ್ಲಿ, ಸೇವಾಲಾಲ, ಹಾಮುಲಾಲ ದೇವಸ್ಥಾನ, ಸಮುದಾಯ ಭವನ ನಿರ್ಮಿಸಿದ್ದಾರೆ.  ಶುದ್ಧ ಕುಡಿಯುವ ನೀರು ಒದಗಿಸಿದ್ದಾರೆ. ಬಂಜಾರಾ ಸಮುದಾಯದ ಪ್ರತಿಯೊಬ್ಬರೂ ಅವರನ್ನು ಬೆಂಬಲಿಸಬೇಕು ಎಂದು ಸಮಾಜ ಬಾಂಧವರಿಗೆ ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ದಾವಣಗೆರೆಯ ರಾಘವೇಂದ್ರ ನಾಯಕ, ಸೋಮದೇವರಹಟ್ಟಿ ದುರ್ಗಾದೇವಿ ಶಕ್ತಿಪೀಠದ ಜಗನು ಮಹಾರಾಜರು ಮಾತನಾಡಿದರು.

ಈ ಸಂದರ್ಭದಲ್ಲಿ ಆಶಾ ಎಂ. ಪಾಟೀಲ, ರೇಣುಕಾ ಎಸ್. ಪಾಟೀಲ, ಕಲ್ಪನಾ ಪಾಟೀಲ, ಬಂಜಾರಾ ಸಮುದಾಯದ ಲಕ್ಷ್ಮಣ ಮಹಾರಾಜರು, ಧನಸಿಂಗ್ ಮಹಾರಾಜರು, ಅಮರಸಿಂಗ್ ಮಹಾರಾಜರು, ಮುಖಂಡರಾದ ಡಿ. ಎಲ್. ಚವ್ವಾಣ, ರಾಜಪಾಲ ಚವ್ಹಾಣ, ಬಿ. ಬಿ. ಲಮಾಣಿ, ವಾಮನ ಚವ್ಹಾಣ, ರಾಜು ಜಾಧವ, ರಾಜು ಪವಾರ, ಚಂದ್ರಶೇಖರ ರಾಠೋಡ, ರಾಜು ಚವ್ಹಾಣ, ದೇವರಾಜ ರಾಠೋಡ, ವಿದ್ಯಾರಾಣಿ ತುಂಗಳ, ಎಲ್ಲ ತಾಂಡಾಗಳ ಪೂಜಾರಿಗಳು, ನಾಯಕರು, ಡಾವಗಳು, ಕಾರಬಾರಿ, ನಾನಾ ತಾಂಡಾಗಳ ಸಹಸ್ರಾರು ಜನರು ಉಪಸ್ಥಿತರಿದ್ದರು.

ಸೋಮಶೇಖರ ರಾಠೋಡ ಪ್ರಾರ್ಥಿಸಿದರು.  ಸುರೇಶ ಬಿಜಾಪುರ ಮತ್ತು ಬಿ. ಡಿ. ಚವ್ಹಾಣ ನಿರೂಪಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ವಿಧಾನ ಪರಿಷತ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ ಅವರ ತಾಯಿ ಆಶಾದೇವಿ ರಾಠೋಡ ನಿಧನರಾದ ಹಿನ್ನೆಲೆಯಲ್ಲಿ ಒಂದು ನಿಮಿಷ ಮೌನ ಆಚರಿಸಲಾಯಿತು.

ಈ ಕಾರ್ಯಕ್ರಮಕ್ಕೂ ಮುನ್ನ ನಗರದ ಮುಗಳಖೋಡ ಮಠದಿಂದ ಆರಂಭವಾದ ಭವ್ಯ ಕುಂಭಮೇಳಕ್ಕೆ ಜಗನು ಮಹಾರಾಜರು ಮತ್ತು ಧನಸಿಂಗ್ ಮಹಾರಾಜರು ಚಾಲನೆ ನೀಡಿದರು.  ಈ ಸಂದರ್ಭದಲ್ಲಿ ಸಾವಿರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಹಾಮುಲಾಲ ನೂತನ ದೇವಸ್ಥಾನದವರೆಗೆ ಮರೆವಣಿಗೆಯಲ್ಲಿ ಪಾಲ್ಗೋಂಡರು.

Leave a Reply

ಹೊಸ ಪೋಸ್ಟ್‌