ವಿಜಯಪುರ ನಗರದ ಪುರಾತನ ಸ್ವಯಂ ಶಿವಲಿಂಗ ದೇವಸ್ಥಾನಕ್ಕೆ ಯತ್ನಾಳ ಭೇಟಿ- ಉತ್ಖನನ ಮಾಡಿಸುವ ಭರವಸೆ

ವಿಜಯಪುರ: ನಗರದ ಹೋಟೆಲ್ ಆದಿಲ್‍ಶಾಹಿ ಹಿಂಭಾಗದಲ್ಲಿರುವ ಪುರಾತನ ಸ್ವಯಂ ಶಿವಲಿಂಗ ದೇವಸ್ಥಾನ ಕುರಿತು ಉತ್ಖನನ ಮಾಡಿಸಲಾಗುವುದು ಎಂದು ನಗರ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ ಹೇಳಿದರು.

ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಈ ಐತಿಹಾಸಿಕವಾದ ಸುಂದರ ದೇವಸ್ಥಾನದ ಪರಿಚಯ ಜನರಿಗೆ ಇರಲಿಲ್ಲ.  ಇನ್ನೂ ಮುಂದೆ ಇಲ್ಲಿ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.

ದೇವಸ್ಥಾನ ಕುರಿತಂತೆ ಮುಧೋಳದ ಸಂಶೋಧಕ ಡಾ. ಸಂಗಮೇಶ ಕಲ್ಯಾಣಿ ಅವರಿಂದ ಮಾಹಿತಿ ಪಡೆದ ಶಾಸಕರು, ನಂತರ ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ, ದೇವಸ್ಥಾನ ಅಭಿವೃದ್ಧಿ ಮತ್ತು ಉತ್ಖನನ ಮಾಡುವ ಕುರಿತಂತೆ ಚರ್ಚೆ ನಡೆಸಿದರು.  ಅಲ್ಲದೇ, ಸಂಬಂಧಿಸಿದ ಅಧಿಕಾರಿಗಳು ಹಾಗೂ ಸರಕಾರಕ್ಕೂ ಈ ಕುರಿತು ಪತ್ರ ಬರೆಯುವುದಾಗಿ ತಿಳಿಸಿದರು.

ಸಂಶೋಧಕರು ನೀಡಿದ ದಾಖಲೆಗಳನ್ನು ಬಸನಗೌಡ ಪಾಟೀಲ ಯತ್ನಾಳ ಪರಿಶೀಲನೆ ನಡೆಸಿದರು

ಇದೇ ವೇಳೆ ದೇವಸ್ಥಾನ ಪರಿಚಯಿಸುವ ಬೋರ್ಡ ಹಾಕಲು ಸ್ಥಳದಲ್ಲಿದ್ದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಸುಮಾರು 72 ಕಲಾಕೃತಿ ಕಂಬಗಳನ್ನು ಹೊಂದಿರುವ ಈ ಬೃಹತ್ ಹಾಗೂ ಸುಂದರವಾದ ದೇವಸ್ಥಾನದ ಕಂಬಗಳ ಮೇಲೆ, ದೇವಗಿರಿ ಯಾದವರ ಕಾಲದ ಸ್ವಯಂ ಶಿವಲಿಂಗ ದೇವಸ್ಥಾನ ಕುರಿತಂತೆ ಹಳಗನ್ನಡದಲ್ಲಿ ಬರೆದಿರುವ ದಾಖಲೆಯನ್ನು ಸಂಶೋಧಕರು ಓದಿ ಹೇಳಿದರು.  ದೇವಸ್ಥಾನ ರಕ್ಷಣೆ ಹಾಗೂ ಸಂಶೋಧನೆ ವೇಳೆ ದೊರಕಿರುವ ದೇವಗಿರಿ ಯಾದವರ ಕಾಲದ ಲಾಂಛನ ಸಾರ್ವಜನಿಕರಿಗೆ ಕಾಣುವ ಹಾಗೆ ಪ್ರತಿಷ್ಠಾಪಿಸುವಂತೆ ಸಂಶೋಧನಾ ವೇದಿಕೆ ಅಧ್ಯಕ್ಷ ಲಾಯಪ್ಪ ಇಂಗಳೆ ಶಾಸಕರಿಗೆ ಮನವಿ ಮಾಡಿದರು.

ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ ಅಧ್ಯಕ್ಷ ಎಂ. ಎಸ್. ರುದ್ರಗೌಡರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ, ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ ಕುರಿ, ಎಂ. ಎಸ್. ಕರಡಿ, ಜವಾಹರ ಗೋಸಾವಿ, ಪ್ರೇಮಾನಂದ ಬಿರಾದಾರ, ಸೇರಿದಂತೆ ನಾನಾ ಮುಖಂಡರು ಮತ್ತು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಮುದಾಯ ಭವನಗಳ ಉದ್ಘಾಟನೆ

ಸ್ವಯಂಲಿಂಗ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ವಾ.ನಂ.6ರ ದರ್ಗಾ ರಸ್ತೆಯ ಜೈ ಹನುಮಾನ ಕಾಲೊನಿ ಹತ್ತಿರ ನಿರ್ಮಿಸಲಾದ ಭಜಂತ್ರಿ ಸಮಾಜದ ಸಮುದಾಯ ಭವನ ಉದ್ಘಾಟಿಸಿದರು.  ಎಸ್ಪಿ ಕಚೇರಿ ಹಿಂಭಾಗದಲ್ಲಿ ವಾರ್ಡ ಸಂಖ್ಯೆ 3ರಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಿಸಲಾದ ಅಂಭಾಭವಾನಿ ದೇವಸ್ಥಾನವನ್ನು ಬಸನಗೌಡ ಪಾಟೀಲ ಯತ್ನಾಳ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಬಡಾವಣೆ ನಿವಾಸಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌