ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ 4.64 ಲಕ್ಷ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಗುರಿಯಿದ್ದು, ಈಗಾಗಲೇ 2.87 ಸಾವಿರ ಮನೆಗಳಿಗೆ ನೀರು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಜಿಲ್ಲಾಡಳಿತ ವಿಜಯಪುರ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಮುದ್ದೇಬಿಹಾಳದ ನಾಲತಾವಾಡ ಪಟ್ಟಣದಲ್ಲಿ ಆಯೋಜಿಸಿರುವ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ವಿವಿಧ ಅಭಿವೃದ್ಧಿ ಕಾಮಕಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾರ್ಯವನ್ನು ಹಾಗೂ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ನೆರವೇರಿಸಿ ಅವರು ಮಾತನಾಡಿದರು .
ಜಲ್ ಜೀವನ್ ಮಿಷನ್ ಅಡಿಯಲ್ಲಿ ದೇಶದಲ್ಲಿ 12 ಕೋಟಿ ಮನೆಗಳಿಗೆ ನೀರು ಒದಗಿಸಲಾಗಿದೆ. ಮೂರು ವರ್ಷಗಳಲ್ಲಿ 40 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಲಾಗಿದೆ. ಮುಂದಿನ ವರ್ಷ 25 ಲಕ್ಷ ಮನೆಗಳಿಗೆ ನೀರು ಒದಗಿಸಲಾಗುತ್ತಿದೆ ಎಂದರು. ಜಲಧಾರೆಯಲ್ಲಿ ನಗರ ಪ್ರದೇಶಗಳಲ್ಲಿ3000 ಕೋಟಿ ರೂ.ಗಳನ್ನು ಒಡಗಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಪ್ರದೇಶಗಲ್ಲಿ ನೀರು ಒದಗಿಸುವ ಚಿಂತನೆ ನಮ್ಮದು ಎಂದು ಸಿಎಂ ಹೇಳಿದರು.
ರೂ. 4000 ಕೋ. ಗಿಂತ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ
1600 ಕೋಟಿ ರೂ.ಗಳ ಮೌಲ್ಯದ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿದೆ. ಈ ಮೊದಲು 2500 ಕೋಟಿ ರೂ.ಗಳ ವೆಚ್ಚದ ಅಭಿವೃದ್ಧಿಯನ್ನು ಶಾಸಕ ನಡಹಳ್ಳಿ ಮಾಡಿದ್ದಾರೆ. ಒಂದು ಅವಧಿಯಲ್ಲಿ ನಾಲ್ಕು ಸಾವಿರ ಕೋಟಿ ರೂ. ಗಳಿಂತ ಹೆಚ್ಚು ಮೌಲ್ಯದ ಅಭಿವೃದ್ಧಿ ಮಾಡಲಾಗಿರುವುದು ಒಂದು ದಾಖಲೆ. ಉತ್ತರ ಕರ್ನಾಟಕದ, ಹಿಂದುಳಿದ ವರ್ಗಗಳ ಅಭಿವೃದ್ಧಿಯಾಗಬೇಕು. ನಂಜುಂಡಪ್ಪ ವರದಿಯಿಂದ ಹಿಡಿದು ಬಹಳಷ್ಟು ವರದಿಗಳಿವೆ. ನಂಜುಂಡಪ್ಪ ವರದಿಯ ಅನುಷ್ಠಾನ ಮಾಡಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು. ಈ ಭಾಗದಲ್ಲಿ ವಿಶೇಷವಾಗಿ ನೀರಾವರಿಗೆ ಮೂಲಭೂತ ಸೌಕರ್ಯ, ಕುಡಿಯುವ ನೀರು, ಗ್ರಾಮೀಣಾಭಿವೃದ್ಧಿಗೆ ವಿಶೇಷ ಒತ್ತು ನೀಡಿರುವ ಪರಿಣಾಮ ಇಷ್ಟು ದೊಡ್ಡ ಪ್ರಮಾಣದಲ್ಲಿ ಈ ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯವಾಗಿದೆ. ನೀರಾವರಿಗೆ ಚಿಮ್ಮನಗಿ, ಮುಳವಾಡಿ, ಗುತ್ತಿ ಬಸವಣ್ಣ, ಕೊಪ್ಪಳ ಏತ ನೀರಾವರಿ ಸೇರಿದಂತೆ ಒಟ್ಟು 9 ನೀರಾವರಿಯ ಪ್ರಕ್ರಿಯೆಗೆ ವೇಗ ನೀಡಲಾಯಿತು. ಅಂದಿನ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಈ ಪ್ರಕ್ರಿಯೆಗೆ ಶಿಫಾರಸ್ಸು ಮಾಡಿ 2009 ತಿಂಗಳಿನಲ್ಲಿ ಚಿಮ್ಮಲಗಿ ಏತನೀರಾವರಿ, ಮುಳವಾಡದ 2 ನೇ ಹಂತದ ಏತ ನೀರಾವರಿಗೆ ಅನುಮೋದನೆ ಪಡೆಯಲಾಯಿತು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಅಭಿವೃದ್ಧಿಯ ಪರ್ವ
ಎ. ಎಸ್ ಪಾಟೀಲ್ ನಡಹಳ್ಳಿಯವರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ. ಅಭಿವೃದ್ಧಿಯ ಪರ್ವ ಮುಂದುವರೆಯಲು ಅವರಿಗೆ ಬೆಂಬಲ ನೀಡಬೇಕು ಎಂದು ಅವರು ಹೇಳಿದರು.
ರೈತಪರ ಸರಕಾರ
ನಮ್ಮದು ರೈತ ಪರ ಸರ್ಕಾರ. ಕಿಸಾನ್ ಸಮ್ಮಾನ್ ಯೋಜನೆಯಡಿ 16 ಸಾವಿರ ಕೋಟಿ ವೆಚ್ಚದಲ್ಲಿ 54 ಲಕ್ಷ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ಮುಧೋಳದಲ್ಲಿ 975 ಕೋಟಿ ರೂ.ಗಳ ಅನುದಾನವನ್ನು 47 ಲಕ್ಷ ರೈತರಿಗೆ ಬಿಡುಗಡೆ ಮಾಡಲಾಗುತ್ತಿದೆ. ನಾವು ಮಾತಿಗಿಂತ ಮಾಡಿ ತೋರಿಸುತ್ತೇವೆ. ನಮ್ಮ ಕೆಲಸಗಳೇ ನಮ್ಮ ಗ್ಯಾರಂಟಿ. ಆಶ್ವಾಸನೆಗಳು ನಮ್ಮ ಗ್ಯಾರಂಟಿ ಅಲ್ಲ ಎಂದು ಅವರು ತಿಳಿಸಿದರು.
ರೈತ ವಿದ್ಯಾನಿಧಿ ಯೋಜನೆ, ರೈತಶಕ್ತಿ ಯೋಜನೆಯಡಿ 386 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ವರ್ಷ ಭೂ ಶಕ್ತಿ ಯೋಜನೆಯಡಿ ಬೀಜಗೊಬ್ಬರಕ್ಕೆ 10 ಸಾವಿರ ರೂ.ಗಳನ್ನು ನೀಡಲಾಗುವುದು. ರೈತರಿಗೆ ಜೀವ ವಿಮೆಗಾಗಿ 180 ಕೋಟಿ ಮೀಸಲಿಡಲಾಗಿದೆ. 53 ಲಕ್ಷ ಜನರಿಗೆ ಇದರ ಪ್ರಯೋಜನವಾಗಲಿದೆ. ಶೂನ್ಯ ಬಡ್ಡಿದರದಲ್ಲಿ 5 ಲಕ್ಷದವರೆಗೆ ಸಾಲದ ವ್ಯವಸ್ಥೆ,3500 ಕೋಟಿ ರೂ.ಗಳ ಆವರ್ತ ನಿಧಿಯಡಿ ಮೀಸಲಿಡಲಾಗಿದೆ. ಸಿರಿಧಾನ್ಯ ಬೆಳೆದವರಿಗೆ 1 ಹೆಕ್ಟೇರಿಗೆ 10 ಸಾವಿರ ರೂ.ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸ್ವಯಂ ಉದ್ಯೋಗ ಮಹತ್ವ
ಸ್ತ್ರೀ ಶಕ್ತಿ ಸಂಘಗಳಿಗೆ ಸ್ವಯಂ ಉದ್ಯೋಗಕ್ಕಾಗಿ 20 ಸಾವಿರ ಹಣ ಬಿಡುಗಡೆ ಮಾಡಲಾಗುತ್ತಿದೆ.
ಸ್ವಾಮಿ ವಿವೇಕಾನಂದ ಯೋಜನೆಯನ್ನು 23 ರಂದು 13 ಸಾವಿರ ಯುವಶಕ್ತಿ ಕೇಂದ್ರಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು. ಈ ಮೂಲಕ ಕಾಯಕ ಕ್ರಾಂತಿ ಮಾಡಬೇಕು. ಎಸ್.ಸಿ.ಎಸ್ .ಟಿ ಗಳಿಗೆ ಮೀಸಲಾತಿ ಹೆಚ್ವಿಸಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿದೆ. ಎಲ್ಲಾ ವರ್ಗಕ್ಕೆ ನ್ಯಾಯ ನೀಡುವ ಕೆಲಸ ಮಾಡಿದ್ದೇವೆ. ಮುದ್ದೇಬಿಹಾಳ ಮಾದರಿ ಯಾಗುವಂತೆ ಕೆಲಸ ಮಾಡಲಾಗಿದೆ ಎಂದು ಅವರು ಹೇಳಿದರು.
ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಕಟಿ ಬದ್ದ
ಈಗ ನಮ್ಮ ಸರ್ಕಾರ ಕೆರೆ ತುಂಬಿಸುವ ಯೋಜನೆಗಳನ್ನು ಸಂಪೂರ್ಣಗೊಳಿಸಲಾಗುತ್ತಿದೆ. ರೇವಣಸಿದ್ದೇಶ್ವರ ಏತ ನೀರಾವರಿಗೆ ಅಡಿಗಲ್ಲು ಹಾಕಲಾಗಿದೆ. ನಮ್ಮ ಪಾಲಿನ ನೀರನ್ನು ಸದ್ಬಳಕೆ ಮಾಡಲು ನಮ್ಮ ಸರ್ಕಾರ ಆದ್ಯತೆ ನೀಡಿದೆ.
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಈ ಬಾರಿ ಕಿತ್ತೂರು ಅಭಿವೃದ್ಧಿ ಮಂಡಳಿ ರಚನೆ ಮಾಡಲಾಗಿದೆ. ಅದಕ್ಕೆ ಅನುದಾನ ನೀಡಿ, ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಕಟಿ ಬದ್ದರಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
5 ಲಕ್ಷ ಹೆಕ್ಟೇರಿಗೆ ನೀರಾವರಿಯಾಗುವವರೆಗೂ ನಾವು ವಿಶ್ರಮಿಸುವುದಿಲ್ಲ
ವಿಜಯಪುರ ಜಿಲ್ಲೆಗೆ ಐದು ನದಿಗಳು ಹರಿದರೂ ಬರ ತಪ್ಪಲಿಲ್ಲ. ವಿಜಯಪುರ ಜಿಲ್ಲೆಯ ಎಲ್ಲಾ ಕ್ಷೇತ್ರಗಳ ನೀರಾವರಿಯಾಗುವವರೆಗೂ ಸುಮಾರು 5 ಲಕ್ಷ ಹೆಕ್ಟೇರಿಗೆ ನೀರಾವರಿಯಾಗುವವರೆಗೂ ನಾವು ವಿಶ್ರಮಿಸುವುದಿಲ್ಲ. ಮುದ್ದೇಬಿಹಾಳ ಕ್ಷೇತ್ರ ಎಲ್ಲಾ ರೀತಿಯಲ್ಲೂ ಅಭಿವೃದ್ಧಿಯಾದಂತೆ ಕರ್ನಾಟಕದ ಎಲ್ಲಾ ಕ್ಷೇತ್ರಗಳೂ ಅಭಿವೃದ್ಧಿ ಪಡಿಸಲು ಶ್ರಮವಹಿಸುತ್ತಿವೆ. ಕಳೆದ 3 ವರ್ಷಗಳಲ್ಲಿ ರೂ. 2 ಲಕ್ಷ ಕೋ. ಗಳ ಅಭಿವೃದ್ಧಿ ಮಾಡಲಾಗಿದೆ. ಇದೊಂದು ದಾಖಲೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಎ. ಎಸ್. ಪಾಟೀಲ ನಡಹಳ್ಳಿ , ಸೋಮನಗೌಡ ಪಾಟೀಲ, ರಮೇಶ್ ಬೂಸನೂರ, ಮೊದಲಾದವರು ಉಪಸ್ಥಿತರಿದ್ದರು.