ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯ ಜಾತ್ರೆಗಳಿಗೆ ಹೆಸರುವಾಸಿ. ಇಲ್ಲಿ ನಡೆಯುವ ಆಚರಣೆಗಳು ಮತ್ತು ಸಂಪ್ರದಾಯಗಳ ಪಾಲನೆ ಒಂದಿಲ್ಲೊಂದು ವಿಶೇಷತೆಗಳಿಂದ ಕೂಡಿರುತ್ತದೆ. ದೇಶದಲ್ಲಿಯೇ ಅತೀ ಹೆಚ್ಚು ಜಾತ್ರೆಗಳು ನಡೆಯುವ ಜಿಲ್ಲೆ ಎಂದೂ ವಿಜಯಪುರ ಖ್ಯಾತಿಯಾಗಿದೆ. ಈ ಜಿಲ್ಲೆಯಲ್ಲಿ ವರ್ಷವಿಡೀ ಒಂದಿಲ್ಲೊಂದು ಊರಿನಲ್ಲಿ ಒಂದಿಲ್ಲೊಂದು ಜಾತ್ರೆ, ಆಚರಣೆ, ಸಂಪ್ರದಾಯಗಳ ಪಾಲನೆ ಸೇರಿದಂತೆ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ.
ಹೊಳೆಬಬಲಾದಿ ಸದಾಶಿವ ಮುತ್ಯಾನ ಜಾತ್ರೆ ಮದ್ಯ ನೈವೇದ್ಯ ಮತ್ತು ವರ್ಷದ ಭವಿಷ್ಯ ಹೇಳುವುದಕ್ಕೆ ಹೆಸರಾಗಿದ್ದರೆ, ಸಿಂದಗಿ ಬಿಂದಿಗೆ ಜಾತ್ರೆ, ಮುಳವಾಡ ಒನಕೆ ಜಾತ್ರೆ, ಕತ್ನಳ್ಳಿ ಯುಗಾದಿ ಜಾತ್ರೆಯಲ್ಲಿ ನಡೆಯುವ ನಾನಾ ಕಾರ್ಯಕ್ರಮಗಳು, ಕಾರ್ಣಿಕನ ನಿಖರ ಭವಿಷ್ಯ ಎಲ್ಲ ಕಡೆ ಗಮನ ಸೆಳೆದಿದೆ. ವಿಜಯಪುರ ಶ್ರೀ ಸಿದ್ಧರಾಮೇಶ್ವರನ ಜಾತ್ರೆ ರಾಜ್ಯದಲ್ಲಿ ಅತೀ ಹೆಚ್ಚು ಜಾನುವಾರುಗಳು ಸೇರುವ ಜಾತ್ರೆ ಎಂದೇ ಕ್ಯಾತಿ ಪಡೆದಿದೆ. ಅದೇ ರೀತಿ, ತಿಕೋಟಾ, ಚಾಂದಕವಟೆ ಸೇರಿದಂತೆ ಹಲವಾರು ಕಡೆ ನಡೆಯುವ ನಾನಾ ಉರುಸು ಮತ್ತು ಜಾತ್ರೆಗಳು ಜನಮನ ಸೆಳೆಯುತ್ತಿವೆ.
ಹೋಳಿ ಹುಣ್ಣಿಮೆಯ ದಿನ ದೇವರ ನಾಡು ಎಂದೇ ಹೆಸರಾಗಿರುವ ದೇವರ ಹಿಪ್ಪರಗಿ ತಾಲೂಕಿನ ಆಲಗೂರ ಗ್ರಾಮದಲ್ಲಿ ಪೂಜಾರಿಯೊಬ್ಬರು ಮಾಡಿರುವ ಪವಾಡ ಈಗ ಗಮನ ಸೆಳೆದಿದೆ. ಹೋಳಿ ಹುಣ್ಣಿಮೆಯ ದಿನ ಯುವಕರು ಹಿರಿಯರಾದಿಯಾಗಿ ಎಲ್ಲರೂ ಬಣ್ಣದಾಟದಲ್ಲಿ ತೊಡಗುತ್ತಾರೆ. ಈ ಸಂದರ್ಭದಲ್ಲಿ ಪರಸ್ಪರ ತರಹೇವಾರಿ ಬಣ್ಣಹಚ್ಚಿ ಸಂಗೀತದ ನೀನಾದಕ್ಕೆ ಕುಣಿದು ಕುಪ್ಪಳಿಸುತ್ತಾರೆ. ಇದೇ ರೀತಿ ಆಚರಣೆ ವೇಳೆ ಆಲಗೂರ ಗ್ರಾಮದಲ್ಲಿ ಪೂಜಾರಿ ಮಾಡಿದ ಪವಾಡ ಈಗ ಮನೆ ಮಾತಾಗಿದೆ.
ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಆಲಗೂರ ಬೀರಲಿಂಗೇಶ್ವರ ಪೂಜಾರಿ ರೇವಣಸಿದ್ಧ ಹೊಕ್ರಾಣಿ ವಿನೂತನ ಪವಾಡ ಮಾಡಿದ್ದಾರೆ. ಬಿಂದಿಗೆಯೊಂದರಲ್ಲಿ ಮೊದಲಿಗೆ ಅಕ್ಕಿಯನ್ನು ಹಾಕಿ ತುಂಬಿದ್ದಾರೆ. ನಂತರ ಅದರೊಳಗೆ ತಲ್ವಾರ್ ಹಾಕಿದ್ದಾರೆ. ನಂಬಿದ ದೇವರನ್ನು ನೆನೆದು ಆ ತಲವಾರನ್ನು ಮೇಲಕ್ಕೆ ಎತ್ತಿದ್ದಾರೆ. ಆಗ, ಅದರ ಜೊತೆ ಅಕ್ಕಿ ತುಂಬಿದ ಬಿಂದಿಗೆಯೂ ಅಂಟಿಕೊಂಡು ಮೇಲೆಕ್ಕೆ ಬಂದಿದೆ. ಈ ಸಂದರ್ಭದಲ್ಲಿ ಪೂಜಾರಿಯ ಕೌತುಕಕ್ಕೆ ಪ್ರೋತ್ಸಾಹ ನೀಡಲು ಹಲವು ಯುವಕರು ವಾದ್ಯ ಮೇಳದ ಸಂಗೀತವನ್ನು ನುಡಿಸಿದ್ದಾರೆ.
ಹೀಗೆ ಪೂಜಾರಿ ಅಕ್ಕಿ ತುಂಬಿದ ಬಿಂದಿಗೆಯಲ್ಲಿ ತಲವಾರವನ್ನು ಸಿಲುಕಿಸಿ ಮೇಲಕ್ಕೆ ಎತ್ತಿಕೊಂಡು ಬಿಂದಿಗೆ ಸಮೇತ ಬೀರಲಿಂಗೆಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.
ಪೂಜಾರಿ ರೇವಣಸಿದ್ದ ಹೊಕ್ರಾಣಿ ಮಾಡಿದ ಪವಾಡ ಕಂಡು ಅಲ್ಲಿ ನೆರೆದ ಭಕ್ತರು ಆಚ್ಚರಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಇದೆಲ್ಲವೂ ಬೀರಲಿಂಗೇಶ್ವರ ದೇವರ ಮಹಿಮೆ ಎಂದು ಸಂಸತ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ, ಆಲಗೂರ ಗ್ರಾಮದ ಬೀರಲಿಂಗೇಶ್ವರ ಪೂಜಾರಿ ರೇವಣಸಿದ್ಧ ಹೊಕ್ರಾಣಿ ಮಾಡಿರುವ ಈ ಪವಾಡ ಈಗ ಎಲ್ಲೆಡೆ ಮನೆ ಮಾತಾಗಿದೆ.