ವಿಜಯಪುರ: ಕನ್ನಡ ಭಾಷೆ, ಸಂಸ್ಕೃತಿಯನ್ನು ನಾವು ಸದಾ ಉಳಿಸಿಕೊಂಡು ಹೋಗಬೇಕು. ಅದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಮ್ಮೇಳನಾಧ್ಯಕ್ಷ ಸಿದ್ದಣ್ಣ ಉತ್ನಾಳ ಹೇಳಿದ್ದಾರೆ.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನಧ್ಯಕ್ಷರಾಗಿ ಅವರು ಮಾತನಾಡಿದರು.
ವಿಜಯಪುರ ಜಿಲ್ಲೆಯಲ್ಲಿ ಅತೀ ಪ್ರಾಚೀನ ಕಾಲದಿಂದಲೂ ವಿದ್ಯಾ ಕೇಂದ್ರಗಳಾದ ಅಗ್ರಹಾರ, ಘಟಿಕಾಸ್ಥಾನ, ಬ್ರಹ್ಮಪುತ್ರಿ ಶಾಲೆಗಳಿದ್ದವು. ರಾಷ್ಟ್ರಕೂಟರ ಕಾಲದಲ್ಲಿಯೇ ಸಾಲೋಟಗಿ ಶಿಕ್ಷಣ ಕೇಂದ್ರವಾಗಿತ್ತು. ಜಗತ್ತಿಗೆ ಗಣಿತ ಶಾಸ್ತ್ರಕ್ಕೆ ಸೊನ್ನೆಯ ಪರಿಕಲ್ಪನೆ ಮಾಡಿಕೊಟ್ಟ ಕ್ರಿ.ಶ 1114ರಲ್ಲಿ ಜನಿಸಿದ ಭಾಸ್ಕರಾಚಾರ್ಯರು ವಿಜಯಪುರ ಜಿಲ್ಲೆಯ ಬಿಜ್ಜರಿಗಿಯವರೆಂದು ಹೇಳಲು ಹೆಮ್ಮೆ ಎನ್ನಿಸುತ್ತದೆ ಎಂದು ಹೇಳಿದರು.
ಸಾಹಿತ್ಯ ಲೋಕಕ್ಕೆ ವಿಜಯಪುರ ಜಿಲ್ಲೆಯ ಕೊಡುಗೆ ಅಪಾರವಾಗಿದ್ದು, ಅವರಲ್ಲಿ ನೋಡುವುದಾದರೆ ಶ್ರೀರಂಗರ ಭರಮಪ್ಪ ಭೂತ ಪತ್ತೇದಾರಿ ಕಾದಂಬರಿಯಿಂದ ಪ್ರಾರಂಭವಾದ ಕಥಾ ಸಾಹಿತ್ಯ, ಸಿಂಪಿಲಿಂಗಣ್ಣನವರ ಬೆಟ್ಟದ ಹೊಳೆ, ರಂ.ಶ್ರೀ ಮುಗಳಿಯವರ ಅನ್ನ, ಲಕ್ಕಪ್ಪ ಶಿರಹಟ್ಟಿಯವರ ಕ್ರಾಂತಿ ಗಂಗೋತ್ರಿ, ದೇವರಗೆಣ್ಣೂರ ಕುಸುಮಾಕರ, ಶಂ.ಗು ಬಿರಾದರ, ಡಾ. ಮ.ಗು. ಬಿರಾದರ, ಜೀವಣ್ಣ ಮಸಳಿ, ವಿಜಯ ಸಾಸನೂರ, ನಿರ್ಮಲಾ ಬೀಳಗಿ, ಲಕ್ಷ್ಮೀಬಾಯಿ ಬೊಮ್ಮನಹಳ್ಳಿ ಸೇರಿದಂತೆ ಹಲವಾರು ಮಹಾನ್ ಕಾದಂಬರಿಕಾರರು ಪ್ರಮುಖರಾಗಿದ್ದಾರೆ. ಇನ್ನು ಜಾನಪದ ಸಾಹಿತ್ಯದಲ್ಲಿ ಹಲಸಂಗಿ ಗೆಳೆಯರದ್ದು ಪ್ರಥಮ ಯುಗವಾದರೆ, ಡಾ. ಬಿ.ಎಸ್.ಗದ್ದಗಿಮಠ ಅವರದ್ದು ದ್ವಿತಿಯ ಯುಗ ಇವರ ಕನ್ನಡ ಜನಪದ ಗೀತೆಗಳು ಮತ್ತು ಅವರು ಸಂಗ್ರಹಿಸಿದ ಕಂಬಿ ಹಾಡುಗಳು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಂತವು. ಹಾಗೂ ಈಶ್ವರಚಂದ್ರ ಚಿಂತಾಮಣಿ ಅವರ ಗರತಿಯರ ಮನೆಯಿಂದ ಮತ್ತು ಡಾ. ಶ್ರೀರಾಮ ಇಟ್ಟನ್ನವರ, ಡಾ. ಎಂ.ಎಂ ಪಡಶೆಟ್ಟಿ ಜಾನಪದ ಅಕಾಡೆಮಿಗಾಗಿ ಸಲ್ಲಿಸಿದ ಸೇವೆ ಅಪಾರ ಎಂದು ಅವರು ಹೇಳಿದರು.
ಮತ್ತು ವಚನ ಸಾಹಿತ್ಯಕ್ಕೆ ವಿಜಯಪುರ ಜಿಲ್ಲೆ ಸಲ್ಲಿಸಿದ ಕೊಡುಗೆ ಅಪಾರ 12ನೇ ಶತಮಾನದ ಸಕಲ ಜೀವಾತ್ಮ ಲೇಸನ್ನೇ ಬಯಸಿದ್ದ ಯುಗಪುರುಷ ಬಸವಣ್ಣನವರೇ ವಚನ ಸಾಹಿತ್ಯದ ಮೇರು ಪರ್ವತವಾಗಿ ಜಗತ್ತಿನ ಸಾಹಿತ್ಯ ಪ್ರಪಂಚಕ್ಕೆ ವಿಜಯಪುರ ಜಿಲ್ಲೆಯನ್ನು ಗುರುತುಸಿವಂತೆ ಮಾಡಿದವರು. ದಲಿತ, ದಮನಿತ ಮಹಿಳೆಯರ ಮುಂತಾದ ತುಳಿತಕ್ಕೊಳಗಾದವರನ್ನು ಕಾಯಕದ ಮುಖಾಂತರ ಭಕ್ತಿಯ ರಸವನ್ನು ತುಂಬಿದಂತವರು ಅಣ್ಣ ಬಸವಣ್ಣನವರು. ಇವರ ಜೊತೆ ಮಡಿವಾಳ ಮಾಚಿದೇವ, ನೂಲಿ ಚಂದಯ್ಯ, ಗಂಗಾಂಬಿಕಾ, ಅಕ್ಕನಾಗಮ್ಮ, ಅಕ್ಕಮಹಾದೇವಿ, ನೀಲಾಂಬಿಕೆ, ಅಲ್ಲಮಪ್ರಭು ಸೇರಿದಂತೆ ಹಲವಾರು ವಚನಗಾರರು ನೀಡಿದಂತಹ ವಚನಸಾಹಿತ್ಯ ಸೂರ್ಯ ಚಂದ್ರ ಇರುವವರೆಗೂ ಬೆಳಗುವುದು ಶತಸಿದ್ಧ. ಇಂತಹ ವಚನ ಸಾಹಿತ್ಯವನ್ನು ಕಾಲ ಗಜಗರ್ಭದಲ್ಲಿ ನಸಿಸಿ ಹೋಗದಂತೆ ನೋಡಿಕೊಂಡು ವಚನಗಳನ್ನು ಸಂಗ್ರಹಿಸಿಟ್ಟು ವಚನ ಪಿತಾಮಹರೆಂದು ಹೆಗ್ಗಳಿಕೆಗೆ ಪಾತ್ರರಾದವರು ಫ. ಗು. ಹಳಕಟ್ಟಿಯವರು ಎಂದು ಅವರು ಹೇಳಿದರು.
ಬಾಗಲಕೋಟದ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎನ್. ಜಿ. ಕರೂರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಗೆ 2000 ವರ್ಷಗಳಿಗಿಂತಲೂ ಮಿಗಿಲಾದ ಇತಿಹಾಸವಿದೆ. ಕನ್ನಡ ಸಾಹಿತ್ಯಕ್ಕೆ ವಿಜಯಪುರ ಕೊಡುಗೆ ಅಪಾರ. ಮತ್ತು ಫ.ಗು ಹಳಕಟ್ಟಿಯವರು ವಚನ ಸಾಹಿತ್ಯಕ್ಕೆ ಕೊಟ್ಟಂತಹ ಕೊಡುಗೆ ಮರೆಯುವಂತಿಲ್ಲ. ಈ ಜಿಲ್ಲೆಯಲ್ಲಿ ಸೂಫಿ ಸಂತರ ಸಾಹಿತ್ಯ, ವಚನ ಸಾಹಿತ್ಯ, ಶಿಶು ಕವಿ ಸಂಗಮೇಶ, ಸಾಹಿತಿ ಸಂಗು ಬಿರಾದರ ಇವರನ್ನು ಸೇರಿದಂತೆ ಇನ್ನು ಹಲವಾರು ಮಹಣಿಯರು ಈ ಭೂಮಿಯಿಂದ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಅವರೆಲ್ಲರನ್ನು ಮರೆಯಲು ಸಾಧ್ಯವೇ ಇಲ್ಲ. ಜನಪದ ಸಾಹಿತ್ಯಕ್ಕೆ ಮಧುರಚೆನ್ನ, ಸಿಂಪಿ ಲಿಂಗಣ್ಣ ಮತ್ತು ಪತ್ರಿಕೋದ್ಯಮಕ್ಕೆ ಮೋರೆ ಹನುಮಂತರಾಯ, ವಿ.ಬಿ.ನಾಯಕ, ಸೇರಿದಂತೆ ಹಲವಾರು ಪ್ರಮುಖರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಲ್ಲ ರಂಗಗಳಲ್ಲಿಯೂ ವಿಜಯಪುರ ಜಿಲ್ಲೆ ಸಮೃದ್ಧವಾಗಿದ್ದು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಶಕ್ತಿಯನ್ನು ತುಂಬಿದೆ ಎಂದು ಹೇಳಿದರು.
ಇನ್ನು ಇಂಥ ತಹ ಹಲವಾರು ಸಮ್ಮೇಳನಗಳಲ್ಲಿ ಭಾಗಿಯಾಗುತ್ತಾ ಬಂದಿದ್ದೇನೆ. ವಿಜಯಪುರ-ಬಾಗಲಕೋಟೆ ಅವಳ ಜಿಲ್ಲೆಗಳಲ್ಲಿ ಹಲವಾರು ಕನ್ನಡ ಸಮ್ಮೇಳನಗಳಲ್ಲಿ ಭಾಗಿಯಾಗಿದ್ದೇನೆ. ಆದರೆ, ವಿಜಯಪುರ ಜಿಲ್ಲೆಯ 18ನೇ ಕನ್ನಡ ಸಾಹಿತ್ಯ ಸಮ್ಮೇಳನ ನನ್ನ ಜೀವನದಲ್ಲಿ ಅತ್ಯಂತ ವಿಶೇಷವಾಗಿದ್ದು, ನನ್ನ ಬದುಕಿನಲ್ಲಿ ಮರೆಯಲಾಗದಂತಹ ಗಳಿಗೆ ಎಂದು ಹೇಳಿದರು.
ನಾಗಠಾಣ ಮತಕ್ಷೇತ್ರದ ಶಾಸಕ ದೇವನಾಂದ ಚವ್ಹಾಣ ಮಾತನಾಡಿ, ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಅವರು ಸಾಕಷ್ಟು ಶ್ರಮಪಡುವ ಮೂಲಕ ಜಿಲ್ಲೆಯಲ್ಲಿ ಸಾಹಿತ್ಯ ಲೋಕದಲ್ಲಿ ಹೊಸ ಚಿಗುರನ್ನು ಹುಟ್ಟು ಬೆಳೆಸುತ್ತಿದ್ದಾರೆ. ಅವರ ಜೊತೆಗೆ ನಾನು ಎಂದೆಂದಿಗೂ ಇರುತ್ತೇನೆ. ಈ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಿನ ಸಮಯ ಕಳೆಯಲು ಇಚ್ಛೆಯಿದ್ದರೂ ಸಹ ಚುನಾವಣಾ ಸಂದರ್ಭವಿರುವ ಕಾರಣ ನಾನು ಭಾಗಿಯಾಗಲು ಸಾಧ್ಯವಾಗುತ್ತಿಲ್ಲ ಕ್ಷಮಿಸಿ ಆದರೆ ಇಂತಹ ಕನ್ನಡಪರ ಯಾವುದೇ ಸಮಾರಂಭಗಳನ್ನು ಹಾಸಿಂಪೀರ ವಾಲೀಕಾರ್ ಅವರು ಮಾಡಿದ್ದರು ಅವರೊಂದಿಗೆ ನಾನು ತನು-ಮನ-ಧನದೊಂದಿಗೆ ಸದಾ ಜೊತೆಯಲ್ಲಿರುತ್ತೇನೆ ಎಂದು ಹೇಳಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಡಾ. ಭುವನೇಶ್ವರಿ ಮೇಲಿನಮಠ ಮಾತನಾಡಿ, ನಮ್ಮಲ್ಲಿ ಸದಾ ಕನ್ನಡಕ್ಕಾಗಿ ಏನನ್ನಾದರೂ ಮಾಡಬೇಕು. ನಮ್ಮ ಕೊಡುಗೆಯನ್ನು ಸಲ್ಲಿಸಬೇಕು ಎಂಬ ತುಡಿತ ಸದಾ ಇರಬೇಕು ಅಂದಾಗ ಮಾತ್ರ ನಾವು ನಮ್ಮ ತಾಯಿ ಭಾಷೆ ಕನ್ನಡಕ್ಕಾಗಿ ಏನ್ನನ್ನಾದರೂ ನೀಡಲು ಸಾಧ್ಯ ಎಂದು ಹೇಳಿದರು.
ನಮ್ಮ ಮಾತೃಭಾಷೆ ನಮ್ಮ ಮನದ ಭಾಷೆ ಇದ್ದಂತೆ ಅದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು. ನಾನು ತಾಂತ್ರಿಕ ಭಾಷೆಯಲ್ಲಿ ಕನ್ನಡ ಪದಗಳ ಜೊಡಣೆ ಮಾಡಬೇಕಾದರೆ ಸಾಕಷ್ಟು ಕಷ್ಟಗಳನ್ನು ಸವಾಲುಗಳನ್ನು ಎದುರಿಸಿದ್ದೇ ಆದರೆ ಅದು ಯಶಸ್ಸು ಆದ ಮೇಲೆ ಒಂದು ಸಾರ್ಥಕ ಭಾವನೆ ನನ್ನಲ್ಲಿ ಮೂಡಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ್ ವಾಲೀಕಾರ್ ಮಾತನಾಡಿ, ನನಗೆ ಸಾಕಷ್ಟು ಸಂಕಷ್ಟಗಳು ಬರುತ್ತಾ ಇವೆ. ಯಾವ ಸಮಾರಂಭವನ್ನು ನಾವೂ ಪೂಜ್ಯರಿಲ್ಲದೇ ಮಾಡುವುದಿಲ್ಲ ಎಂದು ಚುನಾವಣೆಗೂ ಮುಂಚೆ ಹೇಳಿದ್ದೆ ಅದರಂತೆ ನಾನು ನಡೆದುಕೊಳ್ಳುವ ಮೂಲಕ ಸುಮಾರು ಇಲ್ಲಿಯವರೆಗೆ 133 ಪರಮ ಪೂಜ್ಯರನ್ನು ನಾವು ಗೌರವಿಸಿ ಅವರೊಂದಿಗೆ ಸಮಾರಂಭವನ್ನು ಮಾಡಿದ್ದೇವೆ. ಯಾರು ಏನೇ ಹೇಳಲಿ ನಾನು ಈ ಮಾತಿನಿಂದ ಹಿಂದೆ ಸರೆಯುವುದಿಲ್ಲ. ಪೂಜ್ಯರು ತಪಸ್ವಿಗಳು, ಜ್ಞಾನವಂತರು ಅವರನ್ನೊಳಗೊಂಡು ಕಾರ್ಯಕ್ರಮ ಮಾಡುವುದರಿಂದ ಜ್ಞಾನವನ್ನು ಪಸರಿಸಲು ಸಾಧ್ಯವಾಗುತ್ತದೆ ಇನ್ನು ಮುಂದೆಯೂ ಹಲವಾರು ವಿಶಿಷ್ಟ ಕಾರ್ಯಕ್ರಮಗಳನ್ನು ಕನ್ನಡ ಸಾಹಿತ್ಯ ಪರಿಷತ್ ಮೂಲಕ ಹಮ್ಮಿಕೊಳ್ಳಲಾಗುವುದು ಎಂದು ಎಂದು ಆಶಯ ನುಡಿಗಳನ್ನು ಆಡಿದರು.
ಇದೇ ಸಂದರ್ಭದಲ್ಲಿ ಸಾನಿಧ್ಯವಹಿಸಿದ್ದ ಬೆಂಗಳೂರಿನ ನಿಡುಮಾಮಿಡಿ ಮಠದ ಜಗದ್ಗುರು ಡಾ. ವೀರಭಧ್ರಚನ್ನಮಲ್ಲ ಸ್ವಾಮಿಜಿ ಹಾಗೂ ರಾಜ್ಯ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ಸುರೇಶ ಶಡಶ್ಯಾಳ ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಭಾರತಿ ಪಾಟೀಲ, ಮಹಿಳಾ ವಿಶ್ವವಿದ್ಯಾನಿಲಯದ ನಿವೃತ ಕುಲಸಚಿವ ವಿ.ವಿ ಮಾಳಗಿ, ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾಹಿತಿಗಳು ಮುಂತಾದವರು ಉಪಸ್ಥಿತರಿದ್ದರು.