ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಡದಿಂದಾಗಿ ಕಣ್ಣೀರಿಟ್ಟಿದ್ದಾರೆ- ಸಂಗಮೇಶ ಬಬಲೇಶ್ವರ

ವಿಜಯಪುರ: ಕೂಡಲಸಂಗಮ ಜಗದ್ಗುರುಗಳು ಕೆಲವರ ಒತ್ತಡ ತಾಳಲಾರದೆ ಕಣ್ಣೀರಿಟ್ಟಿದ್ದಾರೆ ಎಂದು ಅಖಿಲ ಭಾರತ ಲಿಂಗಾಯಿತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ವಕ್ತಾರ ಸಂಗಮೇಶ ಬಬಲೇಶ್ವರ ಆರೋಪಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ  ದೊರಕಿಸಿ ಕೊಡುವ ಮೂಲಕ ಸಮುದಾಯದ ಮಕ್ಕಳ ಶೈಕ್ಷಣಿಕ ಹಾಗೂ ಉದ್ಯೋಗದ ಮೀಸಲಾತಿಗಾಗಿ ಐತಿಹಾಸಿಕ ಹೋರಾಟ ಮಾಡಿದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ಕಣ್ಣೀರಿನ ಶಾಪ ಸಮುದಾಯವನ್ನು ಹಾಗೂ ಸಮುದಾಯದ ಜಗದ್ಗುರುಗಳನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡವರಿಗೆ ತಟ್ಟದೇ ಬಿಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ನಮ್ಮ ಸಮುದಾಯಕ್ಕೆ ಬೇಕಾಗಿದ್ದು 2ಎ ಮೀಸಲಾತಿ, ಇಲ್ಲವೇ ತತ್ಸಮಾನವಾದ ಸೌಲಭ್ಯಗಳೇ ಹೊರತು, 2ಡಿ ಮೀಸಲಾತಿಯಲ್ಲ.  ನಮ್ಮ ಜಗದ್ಗುರುಗಳು ಭಾವುಕರಾಗಿ ಕಣ್ಣೀರಿಡುತ್ತ ಹೋರಾಟದ ಮೊದಲ ಹೆಜ್ಜೆ ಇದು, ಹೋರಾಟ ಚುನಾವಣೆ ನಂತರ ನಿರಂತರವಾಗಿರುತ್ತದೆ, ಎನ್ನುವ ಹೇಳಿಕೆಯನ್ನು ಸ್ವಾಮೀಜಿ ಮೂಲಕ ಸ್ವಾಮೀಜಿಯವರ ಆತ್ಮಸಾಕ್ಷಿಗೆ ವಿರುದ್ಧವಾಗಿ ಕೊಡಿಸಲಾಗಿದೆ.  ನಮ್ಮ ಜಗದ್ಗುರುಗಳು ಯಾವುದೇ ಒತ್ತಡಕ್ಕೂ ಮಣಿಯಬಾರದು. ಸರಕಾರಗಳು ಬರುತ್ತವೆ ಹೋಗುತ್ತವೆ. ಪಕ್ಕದಲ್ಲಿ ಕುಳಿತು ಸ್ವಾರ್ಥಕ್ಕಾಗಿ ಸಮಾಜವನ್ನು ಗುರುಗಳನ್ನು ಬಳಸಿಕೊಳ್ಳುವವರು ಇಂದು ಇದ್ದು ನಾಳೆ ಇಲ್ಲವಾಗಬಹುದು. ಆದರೆ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಸಮುದಾಯದ ಜನರನ್ನು ಕಟ್ಟಿಕೊಂಡು ಮಾಡಿದ ಐತಿಹಾಸಿಕ ಹೋರಾಟದ ಫಲ ಇಂದಲ್ಲ ನಾಳೆ ನಮಗೆ ದೊರತೇ ದೊರೆಯುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಹೋರಾಟವನ್ನು ನಾವು ಜನಾಂದೋಲನವನ್ನಾಗಿ ರೂಪಿಸಬೇಕಾಗಿದೆ.  ಹೋರಾಟದ ಮುಂಚೂಣಿಯಲ್ಲಿದ್ದು ಮುಖ್ಯಮಂತ್ರಿಯೊಂದಿಗೆ ತಮ್ಮ ಸ್ವಂತ ಕೆಲಸಕ್ಕಾಗಿ ಕೆಲವರು ದ್ವಿಪಾತ್ರಧಾರಿಗಳಾಗಿ ಕೆಲಸ ಮಾಡಿದರು.  ಅಂಥವರ ಸ್ವಾರ್ಥದಿಂದಾಗಿ ನಮ್ಮ ಜಗದ್ಗುರುಗಳ ಹೋರಾಟ ಪೂರ್ಣ ಪ್ರಮಾಣದ ಯಶಸ್ಸನ್ನು ಪಡೆಯಲು ಸಾಧ್ಯವಾಗಲಿಲ್ಲ.  ನಮ್ಮ ಸಮುದಾಯವನ್ನು ಅತ್ಯಂತ ಕೆಟ್ಟ ರೀತಿಯಿಂದ ನಡೆಸಿಕೊಂಡು ಮುಖ್ಯಮಂತ್ರಿಗಳು ಹಾಗೂ ದ್ವಿಪಾತ್ರಧಾರಿಗಳಿಗೆ ಸಮುದಾಯದ ಜನ ತಕ್ಕ ಪಾಠ ಕಲಿಸಬೇಕು ಎನ್ನುವುದು ನಮ್ಮ ಸಮುದಾಯದ ಜನರ ಆಶಯವಾಗಿದೆ ಎಂದು ಅವರು ಹೇಳಿದ್ದಾರೆ.

ವಾಸ್ತವವಾಗಿ  ಮುಖ್ಯಮಂತ್ರಿ ಅವರ ಸರಕಾರ ನಮ್ಮ ಸಮುದಾಯದ ಜಗದ್ಗುರುಗಳ ಹೋರಾಟವನ್ನು ಲಘುವಾಗಿ ಪರಿಗಣಿಸಿ ತಲೆಗೆ ತುಪ್ಪ ಸವರುವ ಕೆಲಸವನ್ನು ಮುಖ್ಯಮಂತ್ರಿಗಳು ಅತ್ಯಂತ ಜಾಣತನದಿಂದ ಮಾಡಿದ್ದಾರೆ.  ನಮ್ಮ ಸಮುದಾಯ ಹಾಗೂ ಜಗದ್ಗುರುಗಳ ಮೀಸಲಾತಿ ಹೋರಾಟದ ವಿಷಯದಲ್ಲಿ ಮುಖ್ಯಮಂತ್ರಿಗಳ ಬುದ್ಧಿ ಕೆಲಸ ಮಾಡಿದೆಯೇ ಹೊರತು ಹೃದಯ ಕೆಲಸ ಮಾಡಲೇ ಇಲ್ಲ.  ತಮ್ಮ ರಾಜಕೀಯ ಜೀವನದ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಮ್ಮ ಸಮುದಾಯಕ್ಕೆ ನ್ಯಾಯ ಕಲ್ಪಿಸಿ ಕೊಡುತ್ತಾರೆ ಎನ್ನುವ ನಮ್ಮ ಭರವಸೆಯನ್ನು ಅವರು ಭರವಸೆಯಾಗಿಸಿದರೆ ಹೊರತು ನಿಜವಾಗಿಸಲಿಲ್ಲ ಎನ್ನುವ ನೋವಿನ ಕಣ್ಣೀರಿನೊಂದಿಗೆ, ತಾತ್ಕಾಲಿಕವಾಗಿ ಹೋರಾಟಕ್ಕೆ ವಿದಾಯ ಹೇಳಿ ಫ್ರೀಡಂ ಪಾರ್ಕ್ ನಿಂದ ಅತ್ಯಂತ ನೋವಿನಿಂದ ನಮ್ಮ ಜಗದ್ಗುರುಗಳು ಮರಳುವಂತಾಗಿರುವುದು ನಮ್ಮ ದುರ್ದೈವ ಎಂದು ಸಂಗಮೇಶ ಬಬಲೇಶ್ವರ ಮಾಧ್ಯಮ ಪ್ರಕಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

ಹೊಸ ಪೋಸ್ಟ್‌