ವಿಜಯಪುರ: ಮಕ್ಕಳು ಪಾಠದ ಜೊತೆಗೆ, ಪಠ್ಯಗಳ ಹೊರತಾದ ಚಟುವಟಿಕೆಗಳಲ್ಲಿಯೂ ಪಾಲ್ಗೋಳ್ಳಬೇಕು ಎಂದು ಶೈಲಜಾ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಿಡಗುಂದಿ ತಾಲೂಕಿನ ಮುಕಾರ್ತಿಹಾಳ ಗ್ರಾಮದ ಗ್ರಾಮದ ಮಾತೋಶ್ರೀ ಶಕುಂತಲಾ ಬಾಯಿ ಬೆಳ್ಳಿ ಪಬ್ಲಿಕ್ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳಿಗೆ ಬಾಲ್ಯದಲ್ಲಿಯೇ ಗುಣಮಟ್ಟದ ಶಿಕ್ಷಣ ಕೊಡುವ ನೀಡುವ ನೆಪದಲ್ಲಿ ಅವರ ಹೆಗಲಿಗೆ ಭಾರವಾದ ಪುಸ್ತಕಗಳ ಬ್ಯಾಗನ್ನು ಹಾಕಿಸಿ ಕೇವಲ ಓದು, ಓದು ಎಂದು ಒತ್ತಡ ಹಾಕಲಾಗುತ್ತದೆ. ಇದರಿಂದ ಅನೇಕ ಮಕ್ಕಳು ಒತ್ತಡದಿಂದ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಮಗುವಿಗೆ ಓದಿನ ಜೊತೆಗೆ ಕ್ರೀಡೆ, ಯೋಗ, ಪ್ರಾಣಾಯಾಮ, ನೃತ್ತ್ಯ, ಈಜು, ಹೀಗೆ ಪಠ್ಯಗಳ ಹೊರತಾದ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಮಗುವಿನ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಮಕ್ಕಳು ಇಂಗ್ಲಿಷ್ ಮಧ್ಯಮದಲ್ಲಿ ಓದುವುದರಿಂದ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಗರದ ಮಕ್ಕಳ ಜೊತೆ ಸಮನಾಗಿ ಅವಕಾಶ ಪಡೆಯುವುದು ಸಾಧ್ಯವಾಗುತ್ತದೆ. ಈ ರೀತಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಡಾ. ಬೆಳ್ಳಿ ಯವರು ನೀಡುತ್ತಿರುವುದು ಉತ್ತಮ ಕೆಲಸವಾಗಿದೆ ಎಂದು ಅವರು ಶ್ಲಾಘಿಸಿದರು.
ಪ್ರಗತಿಪರ ರೈತ ಸಿ. ಎಂ. ಹoಡಗಿ ಮಾತನಾಡಿ, ಪಾಲಕರು ಮಕ್ಕಳಲ್ಲಿ ನೈತಿಕತೆ ಮತ್ತು ಮಾನವೀಯ ಮೌಲ್ಯ ಗಳನ್ನು ಬೆಳೆಸಬೇಕು ಎಂದು ಹೇಳಿದರು.
ಬಸವನ ಬಾಗೇವಾಡಿ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ಮಾತನಾಡಿ, ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿ, ಜೀವನದಲ್ಲಿ, ತಾನು ಹುಟ್ಟಿದ ಊರಿಗೆ, ಹೆತ್ತ ತಂದೆ ತಾಯಂದಿರಿಗೆ , ಕಲಿಸಿದ ಗುರುಗಳ ಋಣವನ್ನು ತೀರಿಸಬೇಕು. ಅದರಂತೆ ಡಾ. ಬೆಳ್ಳಿಯವರು ತಮ್ಮ ಗ್ರಾಮದಲ್ಲಿ ತಾಯಿಯ ಹೆಸರಿನಿಂದ ಶಾಲೆಯನ್ನು ತೆರೆದು, ಊರಿನ ಋಣದ ಜೊತೆಗೆ,ತಂದೆ ತಾಯಿಯವರ ಋಣವನ್ನು ತೀರಿಸಿದ್ದಾರೆ. ಇಂಥ ಗುಣವನ್ನು ಗ್ರಾಮದ ಪತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಮಾರಂಭದಲ್ಲಿ ಗೊಳಸಂಗಿ ಗ್ರಾಮದ ಮಹಾಂತೇಶ ಕಮತಗಿ, ಕೆ. ಎಲ್. ದಶವಂತ, ಮುಕಾರ್ತಿಹಾಳ ಗ್ರಾಮದ ಶಶಿದರ ಮಾಮನಿ, ಸಾಯಬಣ್ಣ ಮಸಬಿನಾಳ, ಶಿವಾನಂದ ಹೊನ್ಯಾಳ, ಶಿವಪ್ಪ ಗುಡದಿನ್ನಿ ಶಿಕ್ಷಕರಾದ ನಿವೇದಿತಾ ರೋಡಗಿ, ವಿಜಯಕುಮಾರ, ಸವಿತಾ, ಶಾಂತಾ, ಸಜ್ಜನ,ಸೇರಿದಂತೆ ಅಂಗಡಗೇರಿ, ಗೊಳಸಂಗಿ, ಬುದ್ನಿ, ವಂದಾಲ, ಹುಣಶ್ಯಾಳ, ಬೀರಲದಿನ್ನಿ, ಉಣ್ಣಿಬಾವಿ, ಹಂಗರಗಿ, ಉಪ್ಪಲದಿನ್ನಿ, ಮುಕಾರ್ತಿಹಾಳ, ಗ್ರಾಮದ ಪಾಲಕರು, ಮಕ್ಕಳು, ಗ್ರಾಮಸ್ಥರು, ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಡಾ. ರವೀಂದ್ರ ಬೆಳ್ಳಿ ಸ್ವಾಗತಿಸಿದರು. ವಿಜಯಕುಮಾರ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನೆ ಕಾರ್ಯಕ್ರಮದ ನಂತರ ಸುಮಾರು ಮೂರು ಗಂಟೆಗಳ ಕಾಲ ವಿದ್ಯಾರ್ಥಿಗಳು ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆಸಿಕೊಟ್ಟರು.