ಮೀಸಲಾತಿಯಲ್ಲಿ ನನ್ನ ಪಾತ್ರ ದೊಡ್ಡದಿದೆ- ಹೈಕಮಾಂಡಿಗೆ ನನ್ನ ಶಕ್ತಿ ಗೊತ್ತಾಗಿದೆ- ಕೂಡಲ ಸಂಗಮ ಶ್ರೀಗಳ ಮೇಲೆ ಯಾರೂ ಒತ್ತಡ ಹಾಕಿಲ್ಲ- ಯತ್ನಾಳ

ವಿಜಯಪುರ: ಮೀಸಲಾತಿ ಆಗಬೇಕಾದರೆ ನನ್ನ ದೊಡ್ಡ ಕೊಡುಗೆ ಇದೆ.  ನಾನು ಎಲ್ಲ ಅಧಿಕಾರ ತ್ಯಾಗ ಮಾಡಿದ ಕಾರಣ ಹೈಕಮಾಂಡ್ ನನ್ನ ಜೊತೆ ಚರ್ಚಿಸಿ ನಮ್ಮ ಸಮಾಜ ಮೀಸಲಾತಿ ನೀಡಿದೆ.  ಮಾತ್ರವಲ್ಲ ಇತರ ಸಮಾಜಗಳ ಮೀಸಲಾತಿ ಪ್ರಮಾಣ ಹೆಚ್ಚಿಸಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡಿಗೆ ಬಸನಗೌಡರ ಜನಪ್ರೀಯತೆ ಗೊತ್ತಾಗಿದೆ. ಅದಕ್ಕೆ ಮೀಸಲಾತಿ ಸಿಕ್ಕಿದೆ.  ನಮಗೆಲ್ಲ ಮೀಸಲಾತಿ ನೀಡಬೇಕಾದರೆ, ಅದಕ್ಕೂ ಮೊದಲು ಎಸ್.ಸಿ.ಎಸ್.ಟಿ. ಜನಾಂಗಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದರು.  ಆ ಸಮಾಜಕ್ಕೆ ನ್ಯಾಯ ಸಿಗಲಿ ಎಂಬ ಉದ್ದೇಶದಿಂದ ಮೀಸಲಾತಿ ಹೆಚ್ಚಳ ಮಾಡಿದರು.  ನಂತರ ತಳವಾರ ಸಮಾಜಕ್ಕೆ ಎಸ್. ಟಿ. ಸ್ಥಾನ ಮಾಡಿದರು.  ಈ ಮೂಲಕ ಎಲ್ಲ ಸಮಾಜಗಳಿಗೆ ಸಾಮಾಜಿಕ ನ್ಯಾಯ ನೀಡಲಾಯಿತು ಎಂದು ತಿಳಿಸಿದರು.

ಮೀಸಲಾತಿ ನೀಡುವುದಕ್ಕೂ ಮುನ್ನ ಹೈಕಮಾಂಡ್ ನನ್ನ ಜೊತೆ ಚರ್ಚಿಸಿದೆ

ಮೀಸಲಾತಿ ನೀಡುವುದಕ್ಕೂ ಮುನ್ನ ಅಮಿತ್ ಶಾ, ಜೆ. ಪಿ. ನಡ್ಡಾ ಅವರು ನನ್ನನ್ನು ಕರೆದು ಸುಮಾರು ಎರಡೂವರೆ ಗಂಟೆಗಳ ಕಾಲ ಸಭೆ ಮಾಡಿ ಮಾತನಾಡಿದ್ದಾರೆ.  ನಮ್ಮ ಕೇಂದ್ರ ಸಚಿವರಾದ ಮನಸೂಖ ಮಾಂಡವಿಯಾ ಮತ್ತು ಧರ್ಮೇಂದ್ರ ಪ್ರಧಾನ ಅವರೂ ನನ್ನ ಜೊತೆ ಮಾತನಾಡಿದ್ದಾರೆ.  ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಿರಂತರವಾಗಿ ಪ್ರಧಾನ ಮಂತ್ರಿ ಕಚೇರಿಯಿಂದ ಸಂಪರ್ಕದಲ್ಲಿ ಇದ್ದರು.  ಪ್ರಧಾನ ಮಂತ್ರಿ ಕಚೇರಿ ಸಿಎಂ ಗೆ ಡೈರೆಕ್ಟಾಗಿ ಕರೆ ಮಾಡಿ ಈ ಸಾಮಾಜಿಕ ನ್ಯಾಯ ಕೊಡುವಂತೆ ನಿರ್ದೇಶನ ನೀಡಿತು.  ಇದರಲ್ಲಿ ಶೋಭಾ ಕರಂದ್ಲಾಜೆ ಅವರ ಬಹಳ ದೊಡ್ಡ ಪಾತ್ರವಿದೆ ಎಂದು ಅವರು ಹೇಳಿದರು.

ಅಲ್ಪಸಂಖ್ಯಾತರ ಮೀಸಲಾತಿ ಕಡಿತ ವಿಚಾರ

ಇದೇ ವೇಳೆ ಅಲ್ಪಸಂಖ್ಯಾತರ ಮೀಸಲಾತಿ ಕಡಿತ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಮೊದಲು 2ಎ, 2ಬಿ ಮತ್ತು ಪ್ರವರ್ಗ 1ರಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಲಾಗಿತ್ತು.  ಮೀಸಲಾತಿಯ ಲಾಭ ಒಂದೇ ಕೆಟಗರಿಯಲ್ಲಿ ಸಿಗಬೇಕೇ ಹೊರತು ಮೂರು ಕೆಟಗರಿಗಳಲ್ಲಿ ಅಲ್ಲ.  ದೇವೇಗೌಡ ಮುಸ್ಲಿಮರಿಗೆ ಈ ಹಿಂದೆ ಶೇ. 4 ರಷ್ಟು ಮೀಸಲಾತಿ ನೀಡಿದ್ದರು.  ಹೀಗೆ ಬೇಕಾಬಿಟ್ಟಿ ನೀಡಲು ಇದೇನು ಅವರ ಅಪ್ಪನ ಮನೆಯ ಮೀಸಲಾತಿಯಾ? ದಲಿತರಿಗೆ ಇನ್ನೂ ಶೇ. 2 ರಷ್ಟು ಮೀಸಲಾತಿ ಹೆಚ್ಚಿಸುತ್ತೇವೆ.  ಯಾರೇನು ಕಿಸಿಯುತ್ತಾರೆ? ಮುಂದಿನ ಐದು ವರ್ಷಗಳಲ್ಲಿ ನರೇಂದ್ರ ಮೋದಿಯವರು ದಲಿತರಿಗೆ ಶೇ. 21 ರಷ್ಟು ಮೀಸಲಾತಿ ಮಾಡುತ್ತಾರೆ.  ಆವಾಗ ಯಾರು ಏನು ಮಾಡುತ್ತಾರೆ? ನೋಡೋಣ ಎಂದು ಅವರು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ಸಿಗೆ ಭೀತಿ ಶುರುವಾಗಿದೆ

ಈ ರೀತಿ ಐತಿಹಾಸಿಕ ನಿರ್ಣಯವಾಗುತ್ತದೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ.  ಇದರಿಂದ ಇಡೀ ಕಾಂಗ್ರೆಸ್ ಅಲುಗಾಡಿ ಹೋಗಿದೆ.  ಥರ, ಥರ, ಥರ ನಡಗುತ್ತಿದೆ.  ಡಿ. ಕೆ. ಶಿವಕುಮಾರ ಅವರಿಗೆ ಸವಾಲು ಹಾಕುತ್ತೇನೆ.  ತಾಕತ್ತಿದ್ದರೆ ಅವರು ಇದನ್ನೇ ಹೇಳಲಿ.  ಆ ಪಕ್ಷದ ಅಭ್ಯರ್ಥಿಗಳ ಡಿಪಾಸಿಟ್ ಜಪ್ತಿಯಾಗುತ್ತದೆ.  ರಾಜ್ಯ ಸರಕಾರ ಪರಿಶಿಷ್ಠ ಜಾತಿಗೆ ಶೇ. 2, ಎಸ್. ಸಿ. ಗೆ ಶೇ. 4ರಷ್ಟು ಮೀಸಲಾತಿ ಹೆಚ್ಚಿಸಿದೆ.  ಈ ಕ್ರಮದಿಂದಾಗಿ ಸಾಮಾಜಿಕ ನ್ಯಾಯ ಸಿಕ್ಕಿದೆ.  ಇದರಿಂದ ಕಾಂಗ್ರೆಸ್ ಹತಾಶವಾಗಿದೆ.  ಈ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಅವರು ಈ ರೀತಿ ಮಾತನಾಡುತ್ತಿದ್ದಾರೆ.  ಬಿಜೆಪಿ ಧಮಕಿ ಕೊಡುವ ಸಂಸ್ಕೃತಿಯಲ್ಲಿ ಇಲ್ಲ ಎಂದು ಅವರು ಹೇಳಿದರು.

ಪ್ರಚಾರ ಸಮಿತಿಯಲ್ಲಿ ಹೆಸರು ಕೈಬಿಟ್ಟಿರುವ ವಿಚಾರ

ಬಿಜೆಪಿ ಪ್ರಚಾರ ಸಮಿತಿಯಲ್ಲಿ ಯತ್ನಾಳ ಹೆಸರು ಹಾಕದಿದ್ದರೂ ಬೇರೆ ಕ್ಷೇತ್ರಗಳ ಶಾಸಕರು ತಮ್ಮ ಮತಕ್ಷೇತ್ರದಲ್ಲಿ ಪ್ರಚಾರ ನಡೆಸುವಂತೆ ಯತ್ನಾಳ ಅವರನ್ನು ಕರೆಯುತ್ತಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ, ಪ್ರೀತಿಯಿಂದ ಕರೆಯುತ್ತಿದ್ದಾರೆ.  ಚಿಂತಾಜನಕವಾಗಿ ಸೋತವರೂ ಪ್ರಚಾರ ಸಮಿತಿಯಲ್ಲಿದ್ದಾರೆ.  ನಾವೆಲ್ಲ ಗೆದ್ದವರನ್ನು ಹೊರಗಿಟ್ಟಿದ್ದಾರೆ.  ಆದರೆ, ಜನರಿಗೆ ನಾನು ಬೇಕಾಗಿದ್ದೇನೆ ಎಂದು ಅವರು ಹೇಳಿದರು.

ನಾನು ಯಮಕನಮರಡಿಗೆ ಹೋಗಿದ್ದೆ.  ಅಲ್ಲಿಯ ಜನ ಬಸನಗೌಡರನ್ನು ಕರೆದುಕೊಂಡು ಬಂದರೆ ಮತ ಹಾಕುತ್ತೇವೆ ಎಂದು ಹೇಳಿದ್ದರು.  ಮೊನ್ನೆ ಸೇಡಂ ಹೋಗಿದ್ದೆ.  ಎಲ್ಲಿ ಪ್ರೀತಿಯಿಂದ ಕರೆಯುತ್ತಾರೋ ಅಲ್ಲಿಗೆ ಹೋಗುತ್ತೇನೆ.  ಬೆಳಗಾವಿ ಸಿಟಿಗೆ ಹೋಗಿದ್ದೆ.  ಬೈಲಹೋಂಗಲಗೂ ಹೋಗಿದ್ದೆ.  ಎಲ್ಲಿ ಪ್ರೀತಿಯಿಂದ ಕರೆಯುತ್ತಾರೋ ಅಲ್ಲಿಗೆ ಹೋಗುತ್ತೇನೆ ಎಂದು ಅವರು ಹೇಳಿದರು.

ಡಿ. ಕೆ. ಶಿವಕುಮಾರ ಗೂಂಡಾಗಿರಿ ಆರೋಪ ವಿಚಾರ

ಬಿಜೆಪಿ ಸ್ವಾಮೀಜಿಗಳ ಮೇಲೆ ಒತ್ತಡ ತಂದು ಮೀಸಲಾತಿಗೆ ಒಪ್ಪಿಸಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಮಾಡಿರುವ ಆರೋಪ ಕುರಿತು ಯತ್ನಾಳ ಖಾರವಾಗಿ ಪ್ರತಿಕ್ರಿಯೆ ನೀಡಿದರು.

ಬಿಜೆಪಿಯಲ್ಲಿ ಯಾರೂ ಗೂಂಡಾ ನಾಯಕರಿಲ್ಲ.  ಇಂಥ ಉಪಾದ್ಯಾಪಿ ಮಾಡುವವರ ಕಾಂಗ್ರೆಸ್ ನಾಯಕರು.  ಗೂಂಡಾಗಳ ಬಾಯಿಂದ ಗೂಂಡಾ ಶಬ್ದಗಳೇ ಬರುತ್ತವೆ.  ನಮ್ಮ ಆದಿಚುಂಚನಗಿರಿ ಸ್ವಾಮೀಜಿಗಳಿಗೆ ಹೆದರಿಸಲು ಸಾಧ್ಯವೇ? 2ಎ ದಲ್ಲಿ 102 ಜಾತಿಗಳಿವೆ.  ಅವರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ 2ಡಿ ಮಾಡಿದ್ದಾರೆ.  2ಡಿಯಲ್ಲಿ ಶೇ. 7 ಮೀಸಲಾತಿ ನೀಡಲಾಗಿದೆ.  ಕ್ರಿಶ್ಚಿಯನ್, ಲಿಂಗಾಯಿತರು, ಜೈನರು ಸೇರಿದಂತೆ ಎಲ್ಲರಿಗೂ ಮೀಸಲಾತಿ ನೀಡಿದ್ದಾರೆ.  3ಬಿಯಲ್ಲಿದ್ದ ಲಿಂಗಾಯಿತರು, ಮರಾಠರು, ಜೈನರು ಸೇರಿದಂತ ಎಲ್ಲರನ್ನೂ ಸೇರಿಸಿ ಶೇ. 7 ಮೀಸಲಾತಿ ನೀಡಿದ್ದಾರೆ.  ನಾವು ಬಿಜೆಪಿ ಸರಕಾರ, ಈ ರಾಜ್ಯದಲ್ಲಿರುವ ಪರಿಶಿಷ್ಠ ಜಾತಿ, ಪರಿಶಿಷ್ಠ ಜನಾಂಗಕ್ಕೆ ಮೀಸಲಾತಿ ಹೆಚ್ಚಳ ಮಾಡಿರುವುದು ಬೊಮ್ಮಾಯಿ ಸರಕಾರದ ದೊಡ್ಡ ಸಾಧನೆ.  ಅದರ ಜೊತೆ, ಎಲ್ಲ ಜನಾಂಗಗಳಿಗೆ ಮೀಸಲಾತಿ ನೀಡಲಾಗಿದೆ.  ಒಕ್ಕಲಿಗರು, ಲಿಂಗಾಯಿತರು, ತಳವಾರ ಸಮಾಜ, ಹಾಲುಮತ ಸಮಾಜವನ್ನು ಎಸ್. ಟಿ. ಸೇರಿಸುವ ಆಗ್ರಹ ಸೇರಿದಂತೆ ಎಲ್ಲ ಜನಾಂಗಗಳ ಮೀಸಲಾತಿ ಪ್ರಮಾಣ ಹೆಚ್ಚಿಸುವ ಜೊತೆಗೆ ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯದ ಬಹುದಿನಗಳ ಬೇಡಿಕೆಯನ್ನು ಮನಗಂಡು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿ ಸಾಮಾಜಿಕ ನ್ಯಾಯ ಒದಗಿಸಲು ಕಾರಣರಾಗಿದ್ದಾರೆ ಎಂದು ಅವರು ಹೇಳಿದರು.

ಪ್ರಧಾನಿ, ಅಮಿತ್ ಶಾ ನಿರ್ದೇಶನದಂತೆ ಮೀಸಲಾತಿ ಘೋಷಣೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರ್ದೇಶನದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯವನ್ನು ನೀಡಿದ್ದಾರೆ.

ಪ್ರಧಾನಿಗಳೇ ನೇರವಾಗಿ ಮುಖ್ಯಮಂತ್ರಿಗೆ ನಿರ್ದೇಶನ ನೀಡಿದರು.  ಹೈಕೋರ್ಟಿನಲ್ಲಿ ಕಾಂಗ್ರೆಸ್ಸಿನ ಎಜೆಂಟ್ ನೊಬ್ಬ 2ಸಿ, 2ಡಿ ಮಾಡದಂತೆ ಪಿಐಎಲ್ ಹಾಕಿದ್ದ.  ಅದನ್ನು ಹೈಕೋರ್ಟ್ ತಿರಸ್ಕಾರ ಮಾಡಿ ಗ್ರೀನ್ ಸಿಗ್ನಲ್ ನೀಡಿದ್ದರಿಂದ ಇದು ಸಾಧ್ಯವಾಗಿದೆ.  ನಾಳೆ ನಾವು ಇಡಬ್ಲೂಎಸ್ ಮಾಡಿದಾಗ ಬ್ರಾಹ್ಮಣರು, ವೈಶ್ಯರು ಸೇರಿದಂತೆ ಯಾರು ಯಾವುದೇ ಮೀಸಲಾತಿ ಪಡೆಯದ ಸಮುದಾಯದ ಎಲ್ಲರೂ ಇದರಲ್ಲಿ ಸೇರಲಿದ್ದಾರೆ.  ಕಾಂಗ್ರೆಸ್ ಇದರಿಂದ ಹತಾಶವಾಗಿದೆ.  ಕಾಂಗ್ರೆಸ್ ಗೆ ಸೋಲಿನ ಭೀತಿ ಕಾಣಿಸುತ್ತಿದೆ.  ಯಾರು ಗೂಂಡಾ ಮೂಲದಿಂದ ಬಂದಿದ್ದಾರೋ ಅವರ ಭಾಷೆ ಅದೇ ರೀತಿ ಇರುತ್ತದೆ ಎಂದು ಯತ್ನಾಳ ತಿಳಿಸಿದರು.

Leave a Reply

ಹೊಸ ಪೋಸ್ಟ್‌