ಕುಡಿಯುವ ನೀರನ್ನು ಕೃಷಿ ಚಟುವಟಿಕೆಗೆ ಬಳಸದಂತೆ ಡಿಸಿ ಡಾ. ದಾನಮ್ಮನವರ ಆದೇಶ

ವಿಜಯಪುರ: ಜಿಲ್ಲೆಯ ಎಲ್ಲ ಜಲ ಮೂಲಗಳಲ್ಲಿರುವ ನೀರನ್ನು ಜನ-ಜಾನುವಾರುಗಳ ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಿಕೊಳ್ಳಬೇಕಾಗಿರುವುದರಿಂದ ಬೇರೆ ಉದ್ದೇಶಗಳಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ಕುಡಿಯುವ ನೀರು ಬಳಕೆ ಮಾಡುವುದನ್ನು ನಿಷೇಧಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಆದೇಶ ಹೊರಡಿಸಿದ್ದಾರೆ.

16.02.2023ರ ಸಭೆಯ ನಿರ್ದೇಶನದಂತೆ ಕೆಬಿಜೆಎನ್‍ಎಲ್ ಕಾಲುವೆ ಜಾಲಗಳ ಮೂಲಕ ವಾರಾಬಂದಿ ಮೂಲಕ ಹರಿಸಲಾದ ನೀರನ್ನು ಕುಡಿಯುವ ನೀರಿನ ಸಲುವಾಗಿ ಎಲ್ಲ ಜಲಮೂಲಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಕುಡಿಯುವ ನೀರನ್ನು ಕೃಷಿ ಚಟುವಟಿಕೆ ಹಾಗೂ ಬೇರೆ ಉದ್ದೇಶಗಳಿಗೆ ಬಳಸದಂತೆ ಆದೇಶಿಸಿ, ಕೆರೆ-ಶೇಖರಣಾ ಜಲಾಶಯಗಳ ಗೇಟ್‍ಗಳಿಂದ ನೀರು ಸೋರಿಕೆಯನ್ನು ತಡೆಗಟ್ಟುವ ಕುರಿತು ಅವಶ್ಯ ಕ್ರಮ ತೆಗೆದುಕೊಳ್ಳುವುದು, ರೈತರು ಕೃಷಿ ಚಟುವಟಿಕೆಗೆ ನೀರು ಬಳಸದಂತೆ ನೋಡಿಕೊಳ್ಳಬೇಕು. ವಿದ್ಯುತ್ ಮೋಟಾರ್ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವುದು ಹಾಗೂ ಕಡಿತಗೊಳಿಸಿರುವ ವಿದ್ಯುತ್ ಸಂಪರ್ಕ ಮರು ಜೋಡಣೆಯಾಗದಂತೆ ಮತ್ತು ಡಿಸೇಲ್ ಪಂಪಸೆಟ್‍ಗಳನ್ನು ಬಳಸದಂತೆ ನಿರಂತರವಾಗಿ ಬೇಸಿಗೆ ಮುಗಿಯುವರೆಗೆ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳಿಗೆ ಮತ್ತು ನಗರ ಹಾಗೂ ಪಟ್ಟಣ ಪಂಚಾಯತಿಗಳಿಗೆ ಕುಡಿಯುವ ನೀರನ್ನು ಪೂರೈಸುವ ಕುರಿತು ಯಾವುದೇ ರೀತಿಯ ವಿದ್ಯುತ್‍ನ ತೊಂದರೆಯಾಗದಂತೆ ಹೆಸ್ಕಾಂ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು. ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಹಿಸಿಕೊಟ್ಟ ಕಾರ್ಯವನ್ನು ಸರಿಯಾಗಿ ನಿರ್ವಹಿಸುತ್ತಿರುವ ಕುರಿತು ಮೇಲಾಧಿಕಾರಿಗಳು ಮೇಲಿಂದ ಮೇಲೆ ಪರಿಶೀಲಿಸಿ ಸಲಹೆ ಸೂಚನೆ ನೀಡಬೇಕು.

ಪರಸ್ಪರ ಸಹಕಾರ ಸಮನ್ವಯತೆಯಿಂದ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ತಪ್ಪಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005ರನ್ವಯ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌