ನರೇಗಾ ಯೋಜನೆಯಡಿ ಉದ್ಯೋಗ ಒದಗಿಸಿ ಗುಳೆ ತಡೆಯಲು ಕ್ರಮ: ಸಿಇಓ ರಾಹುಲ ಸಿಂಧೆ

ವಿಜಯಪುರ: ಈ ವರ್ಷ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆ ಶೇ.60 ರಷ್ಟು ಗುರಿ ಹೊಂದಲಾಗಿದೆ ಮತ್ತು ವಿಶೇಷಚೇತನರಿಗೂ ಕೂಡ ಆದ್ಯತೆ ನೀಡಲಾಗಿದೆ. ಬೇಸಿಗೆಯ ದಿನಗಳಲ್ಲಿ ಜನರು ಬೇರೆ ಊರಿಗೆ ಕೆಲಸ ಅರಸಿ ಗುಳೆ ಹೋಗುವುದನ್ನು ತಡೆಗಟ್ಟಲು ಗ್ರಾಮ ಪಂಚಾಯಿತಿ ಮಟ್ಟದಲ್ಲೇ ನರೇಗಾ ಯೋಜನೆಯಡಿ ಉದ್ಯೋಗ ಒದಗಿಸುವಂತೆ ಅಧಿಕಾರಿಗಳಿಗೆ  ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಕೇಂದ್ರ ಸರಕಾರವು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2023-24ನೇ ಸಾಲಿನಲ್ಲಿ ಅರೆಕುಶಲ ಕಾರ್ಮಿಕರ ದಿನಗೂಲಿ ದರದಲ್ಲಿ ಪರಿಷ್ಕರಣೆ ಮಾಡಿ ಅಧಿಸೂಚನೆ ಹೊರಡಿಸಿದನ್ವಯ ರಾಜ್ಯಕ್ಕೆ ಸಂಬಂಧಿಸಿದಂತೆ ರೂ. 309 ರಿಂದ ರೂ. 316ಕ್ಕೆ ಕೂಲಿ ದರ ಹೆಚ್ಚಿಸಲಾಗಿದ್ದು, ನರೇಗಾ ಕೂಲಿಕಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮನೆ ಮನೆ ಜಾಥಾ ಮತ್ತು ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡೆಗೆ ಕಾರ್ಯಕ್ರಮದ ಮೂಲಕ ಜನರ ಬೇಡಿಕೆಯನ್ವಯ ಕಾಮಗಾರಿಗಳ ಪಟ್ಟಿ ತಯಾರಿಸಲಾಗಿದೆ.

2023-24ನೇ ಸಾಲಿನಲ್ಲಿ ವಿಶೇಷವಾಗಿ “ಜಲ ಸಂಜೀವಿನಿ” ಜಲಾನಯನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ವೈಜ್ಞಾನಿಕ ಆಧಾರದ ಮೇಲೆ ಜಿಯೋ ಸ್ಪೇಷಿಯಲ್ ತಂತ್ರಜ್ಞಾನಗಳನ್ನು ಬಳಸಿಕೊಂಡು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳನ್ನೊಳಗೊಂಡ ವಿವರವಾದ ವೈಜ್ಞಾನಿಕ ಯೋಜನಾ ವರದಿ ತಯಾರಿಕೆ ಹಾಗೂ ಕಾಮಗಾರಿಗಳ ಅನುμÁ್ಟನ ಮಾಡಲು ಕ್ರಮವಹಿಸಲಾಗುತ್ತಿದೆ. ಹಸಿರು ಸಂರಕ್ಷಣೆ, ಜಲ ಸಂರಕ್ಷಣೆ ಹಾಗೂ ಮಣ್ಣಿನ ಸಂರಕ್ಷಣೆಯೇ ಇದರ ಪರಿಕಲ್ಪನೆಯಾಗಿದೆ. ಈ ಕಾರ್ಯಕ್ರಮದಡಿ ಮೂರು ವರ್ಷಗಳ ಕ್ರಿಯಾ ಯೋಜನೆಯನ್ನು ತಯಾರಿಸಲಾಗುತ್ತಿದೆ. ದಿಣ್ಣೆಯಿಂದ ತಗ್ಗುಪ್ರದೇಶದ ಒಂದು ಕೇಂದ್ರ ಬಿಂದುವಿಗೆ ಬಂದು ಸೇರುವ ಮಳೆ ನೀರಿನ ಹರಿವಿನ ಭೂಪ್ರದೇಶವನ್ನು ಮೂರು ಹಂತಗಳಲ್ಲಿ ಅಂದರೆ ಮೇಲ ಸ್ಥರ, ಮಧ್ಯ ಸ್ಥರ ಹಾಗೂ ಕೆಳ ಸ್ಥರ ಹಂತಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮುಖ್ಯವಾಗಿ ರೈತರ ಜಮೀನುಗಳಲ್ಲಿ ಬದು, ಕೃಷಿ ಹೊಂಡ ನಿರ್ಮಾಣ, ಸಮಗ್ರ ಕೆರೆ ಅಭಿವೃದ್ಧಿ, ಚೆಕ್ ಡ್ಯಾಮ್-ನಾಲಾ ಹೂಳೆತ್ತುವುದು, ಬಸಿಗಾಲುವೆ , ಗೋಮಾಳ ಅಭಿವೃದ್ಧಿ, ಬೋರವೆಲ್ ಇಂಗುಗುಂಡಿ, ಹಂದಿ-ಕೋಳಿ ಸಾಕಾಣಿಕೆ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುವುದು. ಈ ಕುರಿತಂತೆ  ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡುವಂತೆ ರಾಹುಲ ಶಿಂಧೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌